Site icon Vistara News

Shivamogga Violence : ಶಿವಮೊಗ್ಗ ಗಲಭೆ ನಡುವೆಯೇ ವಿದೇಶಕ್ಕೆ ಹಾರಿದ ಗೃಹ ಸಚಿವ ಜಿ. ಪರಮೇಶ್ವರ್‌

G Parameshwar Foreign tour

ಬೆಂಗಳೂರು: ಶಿವಮೊಗ್ಗದಲ್ಲಿ ಕಳೆದ ಭಾನುವಾರ ಈದ್‌ ಮಿಲಾದ್‌ ಮೆರವಣಿಗೆ (Eid milad procession) ಸಂದರ್ಭದಲ್ಲಿ ನಡೆದ ದೊಡ್ಡ ಮಟ್ಟದ ಹಿಂಸಾಚಾರ (Shivamogga Violence) ಮತ್ತು ಅದರ ಪಶ್ಚಾತ್‌ ಕಂಪನಗಳ ನಡುವೆಯೇ ಗೃಹ ಸಚಿವ ಜಿ. ಪರಮೇಶ್ವರ್‌ (Home Minister G Parameshwar) ವಿದೇಶಕ್ಕೆ ಹಾರಿದ್ದಾರೆ. ಶಿವಮೊಗ್ಗದಲ್ಲಿ ನಡೆದ ಘಟನೆಗಳು ತುಂಬ ದೊಡ್ಡದೇನಲ್ಲ, ಹಿಂದೆಯೂ ಇಂಥ ಘಟನೆಗಳು ಶಿವಮೊಗ್ಗದಲ್ಲಿ ತುಂಬಾ ಸಲ ನಡೆದಿವೆ ಎಂಬ ಉಡಾಫೆ ಹೇಳಿಕೆ ನೀಡುವ ಮೂಲಕ ಬಿಜೆಪಿ ಮತ್ತು ರಾಗಿಗುಡ್ಡ ನಾಗರಿಕರ ಕೆಂಗಣ್ಣಿಗೆ ಗುರಿಯಾಗಿದ್ದ ಜಿ. ಪರಮೇಶ್ವರ್‌ ಅವರು ಈಗ ವಿದೇಶಕ್ಕೆ ಹೋಗಿದ್ದಾರೆ.

ಡಾ. ಜಿ. ಪರಮೇಶ್ವರ್‌ ಅವರು ಗುರುವಾರ ಬೆಳಗ್ಗೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿದೇಶಕ್ಕೆ ತೆರಳಿದರು. ಇದೊಂದು ಸುದೀರ್ಘ ವಿದೇಶ ಪ್ರವಾಸವಾಗಿದ್ದು, ಜಿ. ಪರಮೇಶ್ವರ್‌ ಸದ್ಯ ಮರಳಿ ಬರುವ ಸಾಧ್ಯತೆಗಳಿಲ್ಲ.

ಖಾಸಗಿ ಕಾರ್ಯಕ್ರಮ ಹಾಗೂ ವಿವಿಧ ಕನ್ನಡಪರ ಸಂಘಟನೆಗಳ ಕಾರ್ಯಕ್ರಮದಲ್ಲಿ ಭಾಗಿಯಾಗಲು ಪರಮೇಶ್ವರ್ ವಿದೇಶಕ್ಕೆ ತೆರಳಿದ್ದಾರೆ ಎನ್ನಲಾಗಿದೆ. ಗುರುವಾರ ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದೆ. ಹೀಗಾಗಿ ಅವರು ಸಿಎಂ ಸಿದ್ದರಾಮಯ್ಯ ಗಮನಕ್ಕೆ ತಂದು ವಿದೇಶಕ್ಕೆ ಹೋಗಿದ್ದಾರೆ ಎನ್ನಲಾಗಿದೆ.

ಶಿವಮೊಗ್ಗದಲ್ಲಿ ಮುಂದುವರಿದ ಸೆಕ್ಷನ್‌

ಈ ನಡುವೆ, ಶಿವಮೊಗ್ಗದಲ್ಲಿ ಐದನೇ ದಿನವಾದ ಗುರುವಾರವೂ ಆತಂಕದ ವಾತಾವರಣ ಮುಂದುವರಿದಿದೆ. ಇಲ್ಲಿನ ರಾಗಿಗುಡ್ಡ ಪ್ರದೇಶದಲ್ಲಿ ಕಳೆದ ಐದು ದಿನಗಳಿಂದಲೇ ಕರ್ಫ್ಯೂ ರೀತಿಯ ವಾತಾವರಣವಿದೆ. ಅಂದು ಈದ್‌ ಮಿಲಾದ್‌ ಮೆರವಣಿಗೆಯ ಸಂದರ್ಭದಲ್ಲಿ ದೊಡ್ಡ ಮಟ್ಟದ ಗಲಭೆ ನಡೆದಿದ್ದು, ಮನೆಗಳು, ವಾಹನಗಳ ಮೇಲೆ ದಾಳಿ ನಡೆದಿತ್ತು. ಪೊಲೀಸರ ಮೇಲೂ ದುಷ್ಕರ್ಮಿಗಳು ಅಟ್ಯಾಕ್‌ ಮಾಡಿದ್ದರು.

ಇಷ್ಟು ದೊಡ್ಡ ದೊಂಬಿ ನಡೆದರೂ, ಹಿಂದುಗಳು ಆತಂಕದಲ್ಲಿ ಬದುಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದರೂ ಗೃಹ ಸಚಿವ ಪರಮೇಶ್ವರ್‌ ಅವರು ಅಲ್ಲಿಗೆ ಹೋಗಿರಲಿಲ್ಲ. ಬದಲಾಗಿ ಬೆಂಗಳೂರಿನಿಂದಲೇ ಅದೊಂದು ದೊಡ್ಡ ಘಟನೆಯೇ ಅಲ್ಲ ಎಂಬಂತೆ ಮಾತನಾಡಿದ್ದರು. ಶಿವಮೊಗ್ಗದಲ್ಲಿ ಇಂಥ ಘಟನೆಗಳು ಆಗಾಗ ನಡೆಯುತ್ತಲೇ ಇರುತ್ತದೆ. ಈಗ ಎಲ್ಲವೂ ಶಾಂತವಾಗಿದೆ ಎಂದು ಹೇಳಿದ್ದರು.

ಗೃಹ ಸಚಿವರು ತಮ್ಮ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸದೆ ಇರುವುದು, ಭೇಟಿ ನೀಡದೆ ಇರುವುದು ಜನಾಕ್ರೋಶಕ್ಕೆ ಕಾರಣವಾಗಿತ್ತು. ಬಿಜೆಪಿ ನಾಯಕರಿಗೆ ಇದೊಂದು ಅಸ್ತ್ರವಾಗಿ ಸಿಕ್ಕಿತ್ತು. ಇದೀಗ ಅವರು ವಿದೇಶಕ್ಕೆ ಹೋಗಿರುವುದು ಪ್ರತಿಪಕ್ಷಗಳ ವಾಗ್ದಾಳಿಗೆ ಮತ್ತೊಂದು ಅಸ್ತ್ರ ಸಿಕ್ಕಂತಾಗಲಿದೆ.

ಇದನ್ನೂ ಓದಿ: Shivamogga violence : S ಗಲಭೆಯಲ್ಲಿ ಮೊದಲ ಕಲ್ಲು ಬಿದ್ದಿದ್ದು ಎಲ್ಲಿಂದ: FIRಗಳಲ್ಲಿ ಏನಿದೆ?

ಬಿಜೆಪಿ ಸತ್ಯಶೋಧನಾ ತಂಡ ಭೇಟಿ

ಗುರುವಾರ ಬಿಜೆಪಿಯ ಸತ್ಯಶೋಧನಾ ತಂಡ ಶಿವಮೊಗ್ಗದ ರಾಗಿಗುಡ್ಡ ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿ ಏನೇನು ನಡೆದಿತ್ತು ಎಂಬುದರ ಮಾಹಿತಿ ಸಂಗ್ರಹಿಸಲಿದೆ.

ಬಿಜೆಪಿ ರಾಜ್ಯಾಧ್ಯಕ್ಷರೂ ಆಗಿರುವ ಸಂಸದ ನಳಿನ್‍ಕುಮಾರ್ ಕಟೀಲ್ ನೇತೃತ್ವದ ತಂಡ ಭೇಟಿ ಬೆಳಗ್ಗೆ 11ಕ್ಕೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಗಾಯಾಳುಗಳ ಭೇಟಿ ಮಾಡಲಿದೆ. 11.30ಕ್ಕೆ ರಾಗಿಗುಡ್ಡದಲ್ಲಿ ಹಾನಿ ಪ್ರದೇಶ ವೀಕ್ಷಣೆ, ಸಂತ್ರಸ್ತರ ಭೇಟಿ ಮಾಡಲಿದ್ದು, ಮಧ್ಯಾಹ್ನ 12ಕ್ಕೆ ಬಿಜೆಪಿ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿ ನಡೆಸಲಿದೆ.

ಮಾಜಿ ಡಿಸಿಎಂಗಳಾದ ಕೆ.ಎಸ್.ಈಶ್ವರಪ್ಪ, ಡಾ. ಸಿ.ಎನ್. ಅಶ್ವತ್ಥನಾರಾಯಣ್, ಮಾಜಿ ಗೃಹಸಚಿವ ಅರಗ ಜ್ಞಾನೇಂದ್ರ, ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಚನ್ನಬಸಪ್ಪ, ಎಮ್ಮೆಲ್ಸಿಗಳಾದ ಎನ್.ರವಿಕುಮಾರ್, ಚನ್ನಬಸಪ್ಪ, ಎಸ್. ರುದ್ರೇಗೌಡ, ಡಿ.ಎಸ್. ಅರುಣ್, ಭಾರತಿ ಶೆಟ್ಟಿ ತಂಡದಲ್ಲಿದ್ದಾರೆ.

Exit mobile version