ಬೆಂಗಳೂರು: ಬೆಂಗಳೂರಿನ ಪ್ರಸಿದ್ಧ ದೇಗುಲದಲ್ಲಿ ಮತ್ತೊಂದು ಅವ್ಯವಹಾರ ಬೆಳಕಿಗೆ ಬಂದಿದೆ. ಗಾಳಿ ಆಂಜನೇಯ ದೇಗುಲದಲ್ಲಿ (Gali Anjaneya Temple) ಹಣ ಲಪಟಾಯಿಸಲು ಹತ್ತಾರು ತಂತ್ರ ಮಾಡಿರುವ ಆರೋಪ ಕೇಳಿ ಬಂದಿದೆ. ದೇಗುಲದ ಟ್ರಸ್ಟಿಗಳು, ಅರ್ಚಕರಿಂದ ದೇಗುಲದ ಹಣಕ್ಕೆ ಕನ್ನ ಹಾಕಲಾಗಿದೆ. ಈ ಹಿಂದೆ ಹುಂಡಿ ಎಣಿಕೆ ವೇಳೆ ಹಣ ಕಳ್ಳತನ ವಿಚಾರ ಬಯಲಾಗಿತ್ತು. ಈಗ ದೇವಸ್ಥಾನದ ಮತ್ತೊಂದು ಅನಾಚಾರ ಬೆಳಕಿಗೆ ಬಂದಿದೆ.
ಹುಂಡಿ ಹಣ ಕದಿಯುವುದಲ್ಲದೇ ಟೆಕ್ನಾಲಜಿ ಬಳಸಿ ಭಕ್ತರ ಕಾಣಿಕೆಗಳಿಗೂ ಕನ್ನ ಹಾಕುತ್ತಿದ್ದಾರೆ. QR ಕೋಡ್ ಮೂಲಕ ದೇಗುಲಕ್ಕೆ ಸೇರಬೇಕಿದ್ದ ಹಣ ಪೂಜಾರಿ ಖಾತೆಗೆ ಸೇರುತ್ತಿದೆ. ದೇಗುಲದಲ್ಲಿ ಇಟ್ಟಿರೋ QR ಕೋಡ್ ಬ್ಯಾಂಕ್ ಖಾತೆ ಅರ್ಚಕ ಶ್ರೀನಿವಾಸ್ ವೈಯಕ್ತಿಕ ಖಾತೆಗೆ ಲಿಂಕ್ ಮಾಡಲಾಗಿದೆ. ಇದರಿಂದ ಸೇವೆಗಳ ಶುಲ್ಕ, ಕಾಣಿಕೆ ರೂಪದ ಹಣ ನೇರವಾಗಿ ಪೂಜಾರಿ ಖಾತೆಗೆ ಹೋಗುತ್ತಿದೆ. ದೇಗುಲದ ಬ್ಯಾಂಕ್ ಖಾತೆ ಬದಲಿಗೆ ಅರ್ಚಕ ಶ್ರೀನಿವಾಸ ರಾಮಾನುಜ ಭಟ್ಟಾಚಾರ್ಯ ಖಾತೆಗೆ ಹಣ ಸೇರುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ದೇಗುಲದ ಭಕ್ತರಾದ ಮೋಹನ್ ಪಿ.ವಿ ಈ ಬಗ್ಗೆ ಬ್ಯಾಟರಾಯನಪುರ ಠಾಣೆಗೆ ದೂರು ನೀಡಿದ್ದಾರೆ. ಅಷ್ಟಲ್ಲದೇ ಟ್ರಸ್ಟಿಗಳು, ಪೂಜಾರಿಗಳಿಂದ ದೇಗುಲದ ಟ್ರಸ್ಟ್ ಆಸ್ತಿ ದುರುಪಯೋಗವಾಗುತ್ತಿದೆ. ದೇಗುಲದ ಚಿನ್ನಾಭರಣ, ಬೆಳ್ಳಿ ಆಭರಣಗಳು, ಹುಂಡಿ ಹಣಕೆ ದುರ್ಬಳಕೆ ಮಾಡಿಕೊಳ್ತಿದ್ದಾರೆ. ಹೀಗಾಗಿ ಆರೋಪಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ದೂರು ನೀಡಿದ್ದಾರೆ.
ಒಟ್ಟು 8 ಮಂದಿ ವಿರುದ್ಧ ಮೋಹನ್ ಪಿ. ವಿ ದೂರು ನೀಡಿದ್ದಾರೆ. ದೂರು ಆಧರಿಸಿ ಟ್ರಸ್ಟಿಗಳಾದ ಡಿ.ಎಂ.ಹನುಮಂತಪ್ಪ, ಬಿ.ಪಿ.ನಾಗರಾಜ್ @ ಅಶೋಕ್, ಬಿ.ವಿ.ಶ್ರೀನಿವಾಸ ರಾಮಾನುಜ ಭಟ್ಟಾಚಾರ್ಯ, ಎ.ಎಚ್.ಗೋಪಿನಾಥ್, ಅರ್ಚಕರಾದ ಬಿ.ಕೆ.ರಾಮನುಜ ಭಟ್ಟಾಚಾರ್ಯ, ಸುರೇಶ್, ರಾಘವೇಂದ್ರ, ಮಲ್ಲಿಕಾರ್ಜುನ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ದೂರಿನ ಸಂಬಂಧ ದೂರುದಾರ ಅಗತ್ಯ ಮಾಹಿತಿ ಒದಗಿಸಲು ಸಿದ್ದ ಎಂದಿದ್ದಾರೆ. 2 ತಿಂಗಳ ಹಿಂದೆ ಹಣ ಕಳ್ಳತನ ಸಂಬಂಧ ಎಫ್‌ಐಆರ್ ದಾಖಲಾಗಿತ್ತು. ಈಗ ಹಣ ದುರುಪಯೋಗ ಸಂಬಂಧ ಮತ್ತೊಂದು ದೂರು ದಾಖಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ