Site icon Vistara News

ವೇಶ್ಯೆಯರ ಸಂಘಕ್ಕಾಗಿ ಮಾಡ್ತಿದ್ರು ಫ್ಲ್ಯಾಟ್‌ಗಳಲ್ಲಿ ಕಳವು, ಹಣ ಮುಟ್ಟದೆ ಚಿನ್ನವನ್ನಷ್ಟೇ ಕದ್ದೊಯ್ಯುತ್ತಿದ್ದದ್ದು ಏಕೆ?

ಈಶೈರಾಜ್ ಆರೋಪಿ

ಬೆಂಗಳೂರಿನ: ರಾಜಧಾನಿಯ ಅಪಾರ್ಟ್‌ಮೆಂಟ್‌ಗಳಲ್ಲಿ ಕಳ್ಳತನ ಮಾಡುತ್ತಿದ್ದ ಕಳ್ಳರ ಗ್ಯಾಂಗ್‌ನ ಕಿಂಗ್ ಪಿನ್ ಈಗ ಸಂಪಿಗೆಹಳ್ಳಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಅಪಾರ್ಟ್‌ಮೆಂಟ್‌ ಒಳಗೆ ಸಿನಿಮಾ ಸ್ಟೈಲ್‌ನಲ್ಲಿ ಎಂಟ್ರಿ ಕೊಟ್ಟು ಅಪಾರ್ಟ್‌ಮೆಂಟ್‌ನಲ್ಲಿ ಪೈಪ್ ಬಳಸಿ ಫ್ಲ್ಯಾಟ್‌ ಒಳಗೆ ಬರುತ್ತಿದ್ದ ಕಳ್ಳನ ಕೈಚಳಕ ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿದೆ. ಇದಲ್ಲದೆ ಕಳ್ಳನ ಬಂಧನದ ಬಳಿಕ ಈತನ ಗ್ಯಾಂಗ್‌ ಕುರಿತ ಕುತೂಹಲಕಾರಿ ಮಾಹಿತಿ ಬೆಳಕಿಗೆ ಬಂದಿವೆ.

ತಮಿಳುನಾಡು ಮೂಲದ ಈ ಕಳ್ಳರ ಗ್ಯಾಂಗ್‌ ಸದ್ಯ ಬೆಂಗಳೂರಿನ ೨೧ ಪ್ರತಿಷ್ಠಿತ ಅಪಾರ್ಟ್‌ಮೆಂಟ್‌ಗಳಲ್ಲಿ ಕಳ್ಳತನ ಮಾಡಿದೆ. ಸಂಜಯ್‌ ನಗರ ದೇವನಹಳ್ಳಿ, ಸಂಪಿಗೆಹಳ್ಳಿ, ಯಲಹಂಕ, ಅಮೃತಹಳ್ಳಿ ಹೀಗೆ 21 ಕಡೆ ಕಳ್ಳರು ತಮ್ಮ ಕೈ ಚಳಕ ತೋರಿಸಿದ್ದಾರೆ. ಕಾಂಪೌಂಡ್‌ ಹಾರಿ ಅಪಾರ್ಟ್‌ಮೆಂಟ್‌ ಒಳಗೆ ಬಂದು, ಪೈಪ್‌ಗಳ ಮೂಲಕ ಮೇಲೆ ಹತ್ತಿ ಬಳಿಕ ಸ್ಲೈಡಿಂಗ್‌ ವಿಂಡೋ ಮೂಲಕ ಮನೆಯ ಒಳಗೆ ತೆರಳುವುದು ಇವರ ಅಭ್ಯಾಸ. ಅಲ್ಲಿ ಇವರು ತಾವು ನುಗ್ಗಿದ ಮನೆಯ ಒಳಗೆ ಕಂತೆ ಕಂತೆ ಹಣ ಸಿಕ್ಕಿದ್ದರೂ ಅದನ್ನು ಮುಟ್ಟುತ್ತಿರಲಿಲ್ಲ, ಬದಲಿಗೆ ಚಿನ್ನವನ್ನಷ್ಟೇ ಪಡೆದು ಪರಾರಿಯಾಗುತ್ತಿದ್ದರು. ಹಣ, ಇನ್ನಿತರ ವಸ್ತುಗಳನ್ನು ಮುಟ್ಟಿದರೆ ಬೇಗನೆ ಸಿಕ್ಕಿ ಹಾಕಿಕೊಳ್ಳಬಹುದು ಎಂಬುದು ಇವರ ಆತಂಕವಾಗಿತ್ತು. ಇದಲ್ಲದೆ ಈ ಗ್ಯಾಂಗ್‌ ಮೊಬೈಲ್‌ ಫೋನ್‌ ಕೂಡ ಬಳಸುತ್ತಿರಲಿಲ್ಲ ಎಂದು ಬಂಧಿತ ಆರೋಪಿ ಈಶೈರಾಜ್‌ ಮಾಹಿತಿ ನೀಡಿದ್ದಾನೆ.

ಇದನ್ನೂ ಓದಿ| ಕಳ್ಳತನ ಮಾಡಲು ಬಂದಿದ್ದವ ಮಹಡಿಯಿಂದ ಬಿದ್ದು ಸಾವು

ಐಷಾರಾಮಿ ಹೋಟೆಲ್‌ಗಳಲ್ಲಿ ರೂಮ್‌ ಮಾಡಿ ದಿನ ಕಳೆಯುತ್ತಿದ್ದ ಇವರು ಕಳ್ಳತನ ಮಾಡಿ ಹಣಗಳಿಸುತ್ತಿದ್ದುದು ಏಕೆ ಗೊತ್ತೇ? ವೇಶ್ಯೆಯರನ್ನು ಕರೆಸಿಕೊಂಡು ಹಾಗೂ ಮದ್ಯ ಸೇವಿಸಿ ಮಾಜಾ ಮಾಡುವುದಷ್ಟೇ ಇವರ ದಿನಚರಿಯಾಗಿತ್ತು ಹಾಗೂ ಇದಕ್ಕಾಗಿ ಕಳ್ಳತನದ ದಾರಿ ತುಳಿದಿದ್ದರು. ಹತ್ತಾರು ಕಡೆ ಕಳ್ಳತನ ಮಾಡಿದ್ದರೂ ಕದ್ದ ಚಿನ್ನ ಮಾರಿ ಸಿಕ್ಕಿದ ದುಡ್ಡನ್ನು ಈ ರೀತಿಯಲ್ಲೇ ಖರ್ಚು ಮಾಡಿರುವುದಾಗಿ ಈಶೈರಾಜ್‌ ವಿವರಿಸಿದ್ದಾನೆ.

ಸದ್ಯ ಬಂಧನದಲ್ಲಿರುವ ಈಶೈರಾಜ್‌ನಿಂದ ಇನ್ನಷ್ಟು ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ. ಗ್ಯಾಂಗ್‌ನ ಉಳಿದ ಸದಸ್ಯರ ಸೆರೆಗಾಗಿಯೂ ಬಲೆ ಬೀಸಲಾಗಿದೆ.

ಇದನ್ನೂ ಓದಿ| ಹೋಟೆಲ್‌ನಲ್ಲಿ ಕಳ್ಳತನಕ್ಕೆ ಬಂದು ಚಿಕನ್ ಹುಡುಕಾಡಿದ, ಅದೂ ಸಿಗದೆ ವಾಪಸಾದ !

Exit mobile version