Site icon Vistara News

Glanders Disease: ಬೆಂಗಳೂರಿನ ಕುದುರೆಯಲ್ಲಿ ಮಾರಕ ಗ್ಲಾಂಡರ್ಸ್ ರೋಗ ಪತ್ತೆ; ಡಿಜಿ ಹಳ್ಳಿ ನಿಷೇಧಿತ ವಲಯ, ಮನುಷ್ಯರಿಗೂ ಬರಬಹುದು!

glanders disease bangalore horse

ಬೆಂಗಳೂರು: ಬೆಂಗಳೂರಿನ ಡಿ.ಜೆ ಹಳ್ಳಿಯಲ್ಲಿರುವ (DG Halli) ಕುದುರೆಯೊಂದರಲ್ಲಿ (Horse) ಮಾರಕ ಗ್ಲಾಂಡರ್ಸ್‌ ರೋಗ (Glanders Disease) ಪತ್ತೆಯಾಗಿದೆ. ಇದೊಂದು ಸೋಂಕು (infectious) ರೋಗವಾಗಿರುವುದರಿಂದ, ಡಿ.ಜೆ.ಹಳ್ಳಿ ಸುತ್ತಮುತ್ತ `ರೋಗಪೀಡಿತ ವಲಯ’ ಎಂದು ಘೋಷಣೆ ಮಾಡಲಾಗಿದೆ.

ಬೆಂಗಳೂರು ಉತ್ತರ ತಾಲೂಕಿನ ಡಿ.ಜೆ.ಹಳ್ಳಿಯ ಖಲೀದ್ ಷರೀಫ್ ಬಿನ್ ಎ.ಜೆ ಷರೀಫ್ ಎಂಬವರ ಕುದುರೆಯಲ್ಲಿ ಈ ಸೋಂಕು ಇರುವುದು ದೃಢವಾಗಿದೆ. ಹೀಗಾಗಿ ಡಿ.ಜೆ.ಹಳ್ಳಿ ಕೇಂದ್ರ ಸ್ಥಾನದಿಂದ ಸುತ್ತಮುತ್ತಲಿನ 5 ಕಿ.ಮೀ. ವ್ಯಾಪ್ತಿಯನ್ನು ರೋಗ ಪೀಡಿತ ವಲಯ ಎಂದು ಘೋಷಣೆ ಮಾಡಲಾಗಿದೆ. 5ರಿಂದ 25 ಕಿ.ಮೀ. ಪ್ರದೇಶವನ್ನು ಜಾಗೃತ ವಲಯ ಎಂದು ಘೋಷಿಸಲಾಗಿದೆ.

ರೋಗದ ಹಿನ್ನೆಲೆಯಲ್ಲಿ ಪಶುಸಂಗೋಪನೆ ಹಾಗೂ ಹೈನುಗಾರಿಕೆ ಇಲಾಖೆಯಿಂದ ಕಟ್ಟೆಚ್ಚರ ವಹಿಸಲಾಗಿದ್ದು, ಇಲ್ಲಿ ಕುದುರೆ, ಕತ್ತೆ ಮತ್ತು ಹೇಸರಗತ್ತೆಗಳ ಚಲನವಲನಕ್ಕೆ ನಿರ್ಬಂಧ ವಿಧಿಸಲಾಗಿದೆ. ಕುದುರೆ ಹಾಗೂ ಕತ್ತೆಗಳಿಂದ ಇತರ ಪ್ರಾಣಿಗಳಿಗೂ ಸೋಂಕು ಹರಡುವ ಸಾಧ್ಯತೆ ಇರುವುದರಿಂದ, ಈ ನಿರ್ಬಂಧ ಹಾಕಲಾಗಿದೆ.

ಏನಿದು ಗ್ಲಾಂಡರ್ಸ್ ರೋಗ?

ಗ್ಲಾಂಡರ್ಸ್ ಒಂದು ಸಾಂಕ್ರಾಮಿಕ ಮತ್ತು ಮಾರಣಾಂತಿಕ ಕಾಯಿಲೆ. ಇದು ಸಾಮಾನ್ಯವಾಗಿ ಕುದುರೆಗಳು, ಕತ್ತೆಗಳು ಮತ್ತು ಹೇಸರಗತ್ತೆಗಳಿಗೆ ಬರುತ್ತದೆ. ಇದು ಬರ್ಖೋಲ್ಡೆರಿಯಾ ಮಲ್ಲಿ ಎಂಬ ಬ್ಯಾಕ್ಟೀರಿಯಂದಿಂದ ಉಂಟಾಗುತ್ತದೆ. ಇದು ಶ್ವಾಸನಾಳ ಮತ್ತು ಶ್ವಾಸಕೋಶಗಳಲ್ಲಿ ಗಂಟುಗಳು ಮತ್ತು ಹುಣ್ಣುಗಳನ್ನು ಉಂಟುಮಾಡುತ್ತದೆ. ಇದನ್ನು ಫಾರ್ಸಿ ಎಂದು ಕರೆಯಲಾಗುತ್ತದೆ. ಇದು ಉಲ್ಬಣವಾದರೆ ಸಾವು ಕೂಡ ಸಂಭವಿಸುತ್ತದೆ.

ಈ ಗ್ಲಾಂಡರ್ಸ್ ರೋಗ ಜೂನೋಟಿಕ್ ಕಾಯಿಲೆಯಾಗಿದ್ದು, ಇದು ಮನುಷ್ಯರಿಗೂ ಹರಡುವ ಸಾಧ್ಯತೆ ಇದೆ. ಸಾಮಾನ್ಯವಾಗಿ ಸೋಂಕು ಪೀಡಿತ ಪ್ರಾಣಿಯ ಸಂಪರ್ಕಕ್ಕೆ ಬರುವ ಪ್ರಾಣಿ ನಿರ್ವಾಹಕರು ಅಥವಾ ಇತರರು ಸೋಂಕಿಗೆ ತುತ್ತಾಗುವ ಅಪಾಯವಿದೆ. ನಿಯಮಿತ ತಪಾಸಣೆಯ ಮೂಲಕ ರೋಗವನ್ನು ನಿಯಂತ್ರಿಸಬಹುದಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಪ್ರಾಣಿ ನಿರ್ವಾಹಕರ ಕಡ್ಡಾಯ ತಪಾಸಣೆ

ಡಿಜೆ ಹಳ್ಳಿಯಲ್ಲಿ ಕುದುರೆಗಳಲ್ಲಿ ಗ್ಲಾಂಡರ್ಸ್ ರೋಗ ಪತ್ತೆಯಾದ ಹಿನ್ನಲೆಯಲ್ಲಿ ಜನರು ಯಾವುದೇ ರೋಗಲಕ್ಷಣಗಳನ್ನು ತೋರಿಸಿದರೆ ಮಾತ್ರ ಪರೀಕ್ಷೆಗೆ ಒಳಪಡಬೇಕು ಎಂದು ಸಚಿವಾಲಯ ಆದೇಶಿಸಿದೆ. ಆದರೂ ನಾವು ಎಲ್ಲಾ ಪ್ರಾಣಿ ಹ್ಯಾಂಡ್ಲರ್‌ಗಳನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸುತ್ತೇವೆ. ಈ ಸೋಂಕು ತಗುಲಿದರೆ ಇದು ಅವರ ಅಂಗಗಳ ಮೇಲೆ ವೇಗವಾಗಿ ಪರಿಣಾಮ ಬೀರುತ್ತದೆ ಮತ್ತು ಸಾವಿಗೆ ಕಾರಣವಾಗಬಹುದು. ಬೆಂಗಳೂರಿನಲ್ಲಿ 1,200 ಕುದುರೆಗಳಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ರೇಸ್‌ ಕುದುರೆಗಳ ಪರೀಕ್ಷೆಯ ವರದಿಯನ್ನು ಕೇಳಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: CCB Raid : ರೇಸ್‌ ಕುದುರೆಗಳ ಹಿಂದೆ ಬಿದ್ದ ಸಿಸಿಬಿ; ಟರ್ಫ್ ಕ್ಲಬ್‌ ರೇಸ್‌ ಕೋರ್ಸ್‌ ಬೇಟೆಯಲ್ಲಿ ಸಿಕ್ಕಿದ್ದು ಎಷ್ಟು?

Exit mobile version