ಬೆಂಗಳೂರು/ಆನೇಕಲ್: ರಾಹುಕಾಲದಲ್ಲಿ ಅಂಗಡಿ ತೆಗೆದರೆ ಒಳ್ಳೆಯದಲ್ಲ, ರಾಹು ಬರುವ ಮೊದಲೇ ವ್ಯಾಪಾರ ಶುರು ಮಾಡಿಬಿಡೋಣ ಎಂದು ಹೊರಟ ವ್ಯಾಪಾರಿ ಬರೊಬ್ಬರಿ 1.6 ಕೋಟಿ ರೂ. ಕಳೆದುಕೊಂಡಿದ್ದಾನೆ.
ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯ ಮೈಲಸಂದ್ರ ಗ್ರಾಮದಲ್ಲಿ, ಚಿನ್ನದ ಅಂಗಡಿ ಮಾಲೀಕನಿಗೆ ಗನ್ ತೋರಿಸಿ ಮೂಟೆಗಟ್ಟಲೆ ಬೆಳ್ಳಿ ಆಭರಣವನ್ನು ದರೋಡೆಕೋರರು ಹೊತ್ತೊಯ್ದಿದ್ದಾರೆ.
ಇದನ್ನೂ ಓದಿ | ಕಳ್ಳತನ ಮಾಡಲು ಬಂದಿದ್ದವ ಮಹಡಿಯಿಂದ ಬಿದ್ದು ಸಾವು
ರಾಮ್‌ದೇವ್ ಬ್ಯಾಂಕರ್ಸ್ ಆ್ಯಂಡ್ ಜ್ಯುವೆಲರ್ಸ್ ಚಿನ್ನದ ಅಂಗಡಿಯ ಮಾಲೀಕ ರಾಮ್ ದೇವ್ ಪಾರಸ್. ವ್ಯಾಪಾರ ನಡೆಸುವ ಮುನ್ನ ರಾಹುಕಾಲ ನೋಡುವ ವ್ಯಕ್ತಿ. ಸೋಮವಾರ ಅಂಗಡಿ ತೆಗೆಯಬೇಕಿತ್ತು, ಅವತ್ತು ಬೆಳಗ್ಗೆ 7.30ರಿಂದ 9.00ರವರೆಗೆ ರಾಹುಕಾಲ.
ರಾಹುಕಾಲ ಕಳೆದ ನಂತರ ಅಂಗಡಿ ತೆಗೆದರೆ ತಡವಾಗುತ್ತದೆ, ರಾಹುಕಾಲ ಆರಂಭ ಆಗುವುದಕ್ಕೂ ಮೊದಲೇ ಅಂಗಡಿ ತೆಗೆಯೋಣ ಎಂದು ಬಂದಿದ್ದಾರೆ. ಬೆಳಗ್ಗೆ ಆರು ಗಂಟೆಗೇ ಅಂಗಡಿ ತೆಗೆದು ಇನ್ನೇನು ವ್ಯಾಪಾರ ಆರಂಭಿಸಬೇಕು ಎನ್ನುತ್ತಿರುವಾಗ ಇವರ ಗ್ರಹಚಾರ ಕೆಟ್ಟಿತ್ತು ಎನ್ನಿಸುತ್ತದೆ, ಅಂಗಡಿಗೆ ಬಂದ ಇಬ್ಬರು ಆಸಾಮಿಗಳು ಬೆಳ್ಳಿಯ ವಸ್ತುವನ್ನು ತೋರಿಸುವಂತೆ ಕೇಳಿದ್ದಾರೆ.
ಬೆಳ್ಳಿ ವಸ್ತುಗಳನ್ನು ತೋರಿಸಲು ಪಾರಸ್ ಮುಂದಾಗಿದ್ದಾರೆ. ಏಕಾಏಕಿ ಗನ್ ತೋರಿಸಿದ ವ್ಯಕ್ತಿಗಳು, ಅಂಗಡಿಯ ಲಾಕರ್ ಇರುವ ಕಡೆಗೆ ಕರೆದೊಯ್ಯುವಂತೆ ಹೇಳಿದ್ದಾರೆ. ನಂತರ ಪಾರಸ್ ಬಾಯಿ ಹಾಗೂ ಕೈಕಾಲುಗಳಿಗೆ ಟೇಪ್ ಮೂಲಕ ಸುತ್ತಿದ್ದಾರೆ.
ಅಂಗಡಿಯಲ್ಲಿದ್ದ ಸುಮಾರು 1 ಕೋಟಿ 60 ಲಕ್ಷಕ್ಕೂ ಅಧಿಕ ಮೌಲ್ಯದ 3.5 ಕೆಜಿ ಆಭರಣವನ್ನು ಕದ್ದು ಪರಾರಿಯಾಗಿದ್ದಾರೆ. ಚಿನ್ನಾಭರಣ ಕದ್ದು ಪರಾರಿಯಾಗುವಾಗ, ಅಂಗಡಿಯಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮರಾದ ಡಿವಿಆರ್ ಅನ್ನೂ ಹೊತ್ತೊಯ್ದಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ.
ಇದನ್ನೂ ಓದಿ | ಹೋಟೆಲ್‌ನಲ್ಲಿ ಕಳ್ಳತನಕ್ಕೆ ಬಂದು ಚಿಕನ್ ಹುಡುಕಾಡಿದ, ಅದೂ ಸಿಗದೆ ವಾಪಸಾದ !