ಬೆಂಗಳೂರು: ಅಯೋಧ್ಯೆಯ ರಾಮ ಮಂದಿರ (Ayodhya Rama Mandir) ಲೋಕಾರ್ಪಣೆ ಸಮಯದಲ್ಲಿ ರಾಜ್ಯದಲ್ಲಿ ಗೋಧ್ರಾ ಮಾದರಿಯ ಹತ್ಯಾಕಾಂಡ (Godhra type attack) ನಡೆಯಬಹುದು ಎಂಬ ಹೇಳಿಕೆ ನೀಡಿ ಭಾರಿ ವಿವಾದಕ್ಕೆ ಕಾರಣರಾದ ಕಾಂಗ್ರೆಸ್ ನಾಯಕ, ಮೇಲ್ಮನೆ ಸದಸ್ಯ ಬಿ.ಕೆ. ಹರಿಪ್ರಸಾದ್ (BK Hariprasad) ಅವರು ಇದೀಗ ಸಿಸಿಬಿ ವಿಚಾರಣೆಯ (CCB Enquiry) ಸುಳಿಗೆ ಸಿಲುಕಿದ್ದಾರೆ. ಅವರ ಹೇಳಿಕೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಸಾಕಷ್ಟು ಹಾನಿಯಾಗಿತ್ತು. ಯಾವ ಕಾಂಗ್ರೆಸ್ ನಾಯಕರೂ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿರಲಿಲ್ಲ. ಇದೀಗ ಸರ್ಕಾರ ಅವರ ವಿರುದ್ಧ ಸಿಸಿಬಿ ವಿಚಾರಣೆ ಆರಂಭಿಸುವ ಮೂಲಕ ತನ್ನದೇ ನಾಯಕನ ಮೇಲೆ ಅಸ್ತ್ರ ಬೀಸಿದೆ.
ಬಿ.ಕೆ. ಹರಿಪ್ರಸಾದ್ ಅವರು ಗೋಧ್ರಾ ಮಾದರಿಯ ದಾಳಿ ಬಗ್ಗೆ ಪ್ರಸ್ತಾಪಿಸಿದಾಗಲೇ ಇದು ಅವರು ಕಾಂಗ್ರೆಸನ್ನು ಇಕ್ಕಟ್ಟಿಗೆ ಸಿಲುಕಿಸಲು ನೀಡಿದ ಹೇಳಿಕೆ ಎಂದು ಭಾವಿಸಲಾಗಿತ್ತು. ಅದನ್ನೇ ಬಂಡವಾಳ ಮಾಡಿಕೊಂಡು ಬಿಜೆಪಿ ಸಾಕಷ್ಟು ದಾಳಿಯನ್ನೂ ನಡೆಸಿತ್ತು. ಸ್ವತಃ ಕಾಂಗ್ರೆಸೇ ಈ ರೀತಿ ದಾಳಿಗೆ ಪ್ಲ್ಯಾನ್ ಮಾಡಿದೆ, ಅಥವಾ ದಾಳಿ ಮಾಡಬಹುದು ಎಂಬ ಐಡಿಯಾವನ್ನು ಬಿತ್ತುತ್ತಿದೆ ಎಂದು ಬಿಜೆಪಿ ಹೇಳಿತ್ತು. ಅದರ ಜತೆಗೆ ಒಂದು ವೇಳೆ ಬಿ.ಕೆ. ಹರಿಪ್ರಸಾದ್ ಅವರಿಗೆ ಇಂಥ ಖಚಿತ ಮಾಹಿತಿಗಳಿದ್ದರೆ ಅದನ್ನು ಪೊಲೀಸ್ ಇಲಾಖೆಗಾದರೂ ನೀಡಲಿ ಎಂದು ಸವಾಲು ಹಾಕಿತ್ತು.
ಕಾಂಗ್ರೆಸ್ ನಾಯಕರು ಇಂಥ ಹೇಳಿಕೆಗಳಿಂದ ಪಕ್ಷಕ್ಕೆ ಡ್ಯಾಮೇಜ್ ಆಗುತ್ತದೆ ಎಂದು ಮಾತನಾಡಿಕೊಂಡಿದ್ದರು. ಬಿ.ಕೆ. ಹರಿಪ್ರಸಾದ್ ಹಿರಿಯ ನಾಯಕರು, ಅವರಿಗೆ ಈ ಬಗ್ಗೆ ಮಾಹಿತಿಗಳು ಇರಬಹುದು ಎಂದು ಕೂಡಾ ಕೆಲವರು ಆಡಿದ್ದರು. ಆದರೆ, ಈಗ ಸ್ವತಃ ಕಾಂಗ್ರೆಸ್ ಸರ್ಕಾರ ಅವರಿಂದ ಮಾಹಿತಿ ಪಡೆಯುವ ಹೆಸರಿನಲ್ಲಿ ಸಿಸಿಬಿ ವಿಚಾರಣೆಗೆ ಮುಂದಾಗಿದೆ.
ಸಿಸಿಬಿ ಕಚೇರಿಗೆ ಬರಲು ಸೂಚನೆ, ಹರಿಪ್ರಸಾದ್ ಆಕ್ರೋಶ
ರಾಜ್ಯದಲ್ಲಿ ಗೋಧ್ರಾ ಮಾದರಿ ದಾಳಿ ನಡೆಯುವ ಸಾಧ್ಯತೆ ಇದೆ ಎಂಬ ಹೇಳಿಕೆ ನೀಡಿದ್ದ ಹರಿಪ್ರಸಾದ್ ಅವರಿಗೆ ಸಿಸಿಬಿ ಕಚೇರಿಗೆ ವಿಚಾರಣೆಗೆ ಬರುವಂತೆ ಕರೆದಿದ್ದಾರೆ. ಅವರ ಹೇಳಿಕೆಯನ್ನು ಆಧರಿಸಿ ಮಾಹಿತಿ ನೀಡುವಂತೆ ಸೂಚನೆ ನೀಡಲಾಗಿದೆ.
ಹರಿಪ್ರಸಾದ್ ಅವರು ತಂಗಿರುವ ಕುಮಾರಕೃಪಾ ಗೆಸ್ಟ್‌ಹೌಸ್‌ಗೆ ಬಂದು ಪೊಲೀಸರು ಅವರನ್ನು ಆಹ್ವಾನಿಸಿದ್ದರು. ಇದರಿಂದ ಕನಲಿ ಕೆಂಡವಾದ ಬಿ.ಕೆ. ಹರಿಪ್ರಸಾದ್ ಅವರು, ʻನನಗೆ ವಿವಿಐಪಿ ಟ್ರೀಟ್ಮೆಂಟ್ ಬೇಡ, ಬೇಕಿದ್ದರೆ ಅರೆಸ್ಟ್ ಮಾಡಿʼʼ ಎಂದು ಹೇಳಿದ್ದಾರೆ. ನಾನು ಠಾಣೆಗೆ ಬರ್ತೀನಿ, ಆದರೆ, ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಬಿ.ವೈ ವಿಜಯೇಂದ್ರ ಅವರನ್ನು ಕೂಡಾ ಕರೆಸಬೇಕು ಎಂಬ ಬೇಡಿಕೆಯನ್ನು ಬಂದಿಸಿದ್ದಾರೆ.
ಇದು ಕಾಂಗ್ರೆಸ್ ಸರ್ಕಾರವಾ? ಆರೆಸ್ಸೆಸ್ ಸರ್ಕಾರವಾ?
ತಾನು ಇಷ್ಟು ಕಾಲ ಇರುವ ಕಾಂಗ್ರೆಸ್ ಸರ್ಕಾರವೇ ತನ್ನನ್ನು ಸಿಸಿಬಿ ವಿಚಾರಣೆಗೆ ಕರೆದಿರುವುದು ಹರಿಪ್ರಸಾದ್ ಅವರನ್ನು ಕೆರಳಿಸಿದೆ. ಸರ್ಕಾರದ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಹರಿಪ್ರಸಾದ್ ಅವರು, ʻʻಇದು ಕಾಂಗ್ರೆಸ್ ಸರ್ಕಾರವಾ, ಆರ್ ಎಸ್ ಎಸ್ ಸರ್ಕಾರವಾʼ ಎಂದು ಕೇಳಿದ್ದಾರೆ.
ಪೊಲೀಸ್ ಕಮಿಷನರ್ ಸೂಚನೆಯಂತೆ ನನ್ನನ್ನ ವಿಚಾರಣೆ ಮಾಡಲು ಕೆಕೆ ಗೆಸ್ಟ್ ಹೌಸ್ ಗೆ ಬಂದಿದ್ದರು. ನಾನು ಠಾಣೆಗೇ ಬರ್ತೀನಿ. ಆದರೆ ಬಿಜೆಪಿ ರಾಜ್ಯಾಧ್ಯಕ್ಷರನ್ನು ಕರೆಸಿ. ಮಂಪರು ಪರೀಕ್ಷೆ ಮಾಡಿ ಎಂದು ಹೇಳಿದ್ದೇನೆʼʼ ಎಂದರು.
ʻʻಬಿಜೆಪಿ ಸರ್ಕಾರ ಇದ್ದಾಗ ನನ್ನ ಮೇಲೆ ಕೇಸ್ ಹಾಕಿದರು. ಈಗ ಇವರು ಕೂಡಾ ನನ್ನ ಮೇಲೆ ಕೇಸ್ ಹಾಕಿದ್ದಾರೆ. ಈಗ ನನಗೆ ಇದು ಕಾಂಗ್ರೆಸ್ ಸರ್ಕಾರವಾ ಅನ್ನೋ ಅನುಮಾನ ಬರ್ತಿದೆ. ಇದು ಕಾಂಗ್ರೆಸ್ ಸರ್ಕಾರ ಅಂದುಕೊಂಡಿದ್ದೆ. ಈಗ ನನಗೆ ಅನುಮಾನ ಬರಲು ಶುರುವಾಗಿದೆ. ನನ್ನ ಪರಿಸ್ಥಿತಿಯೇ ಹೀಗೆ ಆದರೆ ಸಾಮಾನ್ಯ ಕಾರ್ಯಕರ್ತರ ಪರಿಸ್ಥಿತಿ ಏನು?ʼʼ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ: BK Hariprasad : ಗೋಧ್ರಾ ಹೇಳಿಕೆ ಸಮರ್ಥಿಸಿದ ಹರಿಪ್ರಸಾದ್; ಮಂಪರು ಪರೀಕ್ಷೆ ಸವಾಲಿಗೆ ಸಿದ್ಧ
ಹೈಕಮಾಂಡ್ ಕೂಡಾ ಅವರ ಕೈಯಲ್ಲೇ ಇದೆ!
ಈ ವಿಚಾರಗಳನ್ನು ಹೈಕಮಾಂಡ್ ಗಮನಕ್ಕೆ ತರುತ್ತಿರಾ ಎಂಬ ಪ್ರಶ್ನೆಗೆ, ಹೈಕಮಾಂಡ್ ಅವರದೇ ಕೈಯಲ್ಲಿ ಇದೆ ಎಂದು ಬಿ.ಕೆ ಹರಿಪ್ರಸಾದ್ ಅಸಹಾಯಕತೆ ವ್ಯಕ್ತಪಡಿಸಿದರು.
ʻʻನನ್ನ ಪರಿಸ್ಥಿತಿ ಈ ರೀತಿಯಾದ್ರೆ ಸಾಮಾನ್ಯ ಕಾರ್ಯಕರ್ತನ ಪರಿಸ್ಥಿತಿ ಹೇಗೆ ಅನ್ನೋ ಚಿಂತೆ ಶುರುವಾಗಿದೆ. ನಾನು ಯಾರ ಜತೆ ಸಹ ಈ ಬಗ್ಗೆ ಚರ್ಚೆ ಮಾಡಿಲ್ಲʼʼ ಎಂದರು ಹರಿಪ್ರಸಾದ್.