Site icon Vistara News

Property Tax: ಆಸ್ತಿ ತೆರಿಗೆದಾರರಿಗೆ Good News ; 5% ವಿನಾಯಿತಿ ಘೋಷಿಸಿದ ಸರ್ಕಾರ

Property Tax

ಬೆಂಗಳೂರು: ಬೆಂಗಳೂರಿನಲ್ಲಿ ಆಸ್ತಿ ತೆರಿಗೆ ಕಟ್ಟುವ ತೆರಿಗೆದಾರರಿಗೆ (Property Tax Payers) ರಾಜ್ಯ ಸರ್ಕಾರ (karnataka Government) ಗುಡ್‌ ನ್ಯೂಸ್‌ ನೀಡಿದೆ. ಅದೇನೆಂದರೆ ಆಸ್ತಿ ತೆರಿಗೆಯನ್ನು ಸಮಯಕ್ಕೆ ಸರಿಯಾಗಿ ಕಟ್ಟುವವರಿಗೆ ಶೇ. 5ರ ವಿನಾಯಿತಿಯನ್ನು (5% rebate on timely Payment) ವಿಸ್ತರಿಸಿ ಪ್ರಕಟಣೆ ಹೊರಡಿಸಿದೆ. ಸಾಮಾನ್ಯವಾಗಿ ಏಪ್ರಿಲ್‌ 30ರೊಳಗೆ ವಾರ್ಷಿಕ ಆಸ್ತಿ ತೆರಿಗೆ ಪಾವತಿ ಮಾಡುವವರಿಗೆ ಶೇಕಡಾ 5ರಷ್ಟು ವಿನಾಯಿತಿ ನೀಡಲಾಗುತ್ತದೆ. ಈ ಬಾರಿ ಈ ಅವಧಿಯನ್ನು ಮೇ 1ರಿಂದ ಜುಲೈ 31ರವರೆಗೆ ವಿಸ್ತರಿಸಿದೆ. ಅಂದರೆ, ಶೇಕಡಾ ವಿನಾಯಿತಿ ನೀಡುವ ಸೌಲಭ್ಯವನ್ನು ಮೂರು ತಿಂಗಳ ಕಾಲ ವಿಸ್ತರಿಸಿದೆ (Three Months Extended).

ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಈ ಸಂಬಂಧ ಅಧಿಸೂಚನೆಯನ್ನು ಹೊರಡಿಸಿದ್ದಾರೆ. ಇದು ಮಹಾನಗರ ಪಾಲಿಕೆಯ ಆರ್ಥಿಕತೆ ಹಿತದೃಷ್ಟಿಯಿಂದ ತೆಗೆದುಕೊಂಡಿರುವ ಕ್ರಮವೆಂದು ಸರ್ಕಾರ ಹೇಳಿಕೊಂಡಿದೆ. ಆದರೆ, ಇದರಿಂದ ಆಸ್ತಿ ತೆರಿಗೆದಾರರಿಗೂ ಸಾಕಷ್ಟು ಅನುಕೂಲತೆಗಳು ಇವೆ. ಸಕಾಲದಲ್ಲಿ ಆಸ್ತಿ ತೆರಿಗೆ ಪಾವತಿಸಿದರೆ ಶೇ. 5ರಷ್ಟು ವಿನಾಯಿತಿ ದೊರೆಯಲಿದೆ.

ಏಕಗಂಟಿನಲ್ಲಿ ಪಾವತಿಸಿದರೆ ದಂಡದಲ್ಲಿ ಶೇ. 50ರಷ್ಟು ವಿನಾಯಿತಿ ಮತ್ತು ಬಡ್ಡಿ ಮನ್ನಾ

ಇದಕ್ಕೆ ಮೊದಲು ಬಿಬಿಎಂಪಿ ವ್ಯಾಪ್ತಿಯ ‌ ಆಸ್ತಿ ತೆರಿಗೆದಾರರಿಗೆ ಇನ್ನೊಂದು ಒಳ್ಳೆಯ ಗಿಫ್ಟ್‌ ನೀಡಿತ್ತು. ಒಂದು ವೇಳೆ ಯಾರಾದರೂ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದರೆ ಅದಕ್ಕೆ ವಿಧಿಸುವ ದಂಡದ ಮೊತ್ತದಲ್ಲಿ ಶೇ. 50ರಷ್ಟು ಕಡಿಮೆ ಮಾಡಿತ್ತು ಮತ್ತು ಬಡ್ಡಿಯನ್ನು ಮನ್ನಾ ಮಾಡುವುದಾಗಿ ರಾಜ್ಯಪತ್ರ ಪ್ರಕಟಿಸಿದೆ. ಇದನ್ನು ‘ಒನ್‌ ಟೈಮ್ ಸೆಟ್ಲ್‌ಮೆಂಟ್‌’ (ಓಟಿಎಸ್‌) ಯೋಜನೆ ಎಂದು ಘೋಷಿಸಿತ್ತು. ಇದು ಕೂಡಾ ಜುಲೈ 31ರವರೆಗೆ ಜಾರಿಯಲ್ಲಿ ಇರಲಿದೆ.

ಇದನ್ನೂ ಓದಿ: BBMP Property Tax Hike: ಬೆಂಗಳೂರು ಜನರಿಗೆ ಮತ್ತೊಂದು ಶಾಕ್‌; ಆಸ್ತಿ ತೆರಿಗೆ ಶೇ.6.5ರಷ್ಟು ಏರಿಕೆ, ಯಾವಾಗಿನಿಂದ ಜಾರಿ?

ಓಟಿಎಸ್‌ ಯೋಜನೆಯಿಂದ ಯಾರಿಗೆ ಅನುಕೂಲ?

ಒನ್‌ ಟೈಮ್‌ ಸೆಟ್ಲ್‌ಮೆಂಟ್‌ ಯೋಜನೆಯಿಂದ ನಗರದ ಸುಮಾರು 5.51 ಲಕ್ಷ ತೆರಿಗೆ ಬಾಕಿದಾರರು, 5- 7 ಲಕ್ಷ ತೆರಿಗೆ ವ್ಯಾಪ್ತಿಗೆ ಬಾರದವರು ಸೇರಿದಂತೆ 13- 15 ಲಕ್ಷ ಜನರಿಗೆ ಅನುಕೂಲವಾಗಲಿದೆ. ಈ ಯೋಜನೆ ಅನುಕೂಲ ಪಡೆಯುವುದಕ್ಕೆ ಜುಲೈ 31ರವರೆಗೆ ಗಡುವು ನೀಡಲಾಗಿದೆ.

ತಪ್ಪು ಮಾಹಿತಿ ನೀಡಿ ಕಡಿಮೆ ಆಸ್ತಿ ತೆರಿಗೆ ಪಾವತಿ ಮಾಡಿದ ಆಸ್ತಿ ಮಾಲೀಕರಿಗೆ ಎರಡು ಪಟ್ಟು ದಂಡ ವಿಧಿಸಲಾಗುತ್ತಿತ್ತು. ಇದೀಗ ದಂಡ ಮೊತ್ತವನ್ನು ಒಂದು ಪಟ್ಟಿಗೆ (ಶೇ.50ರಷ್ಟು) ಇಳಿಕೆ ಮಾಡಲಾಗಿದೆ. ಈ ಅಂಶವೂ ವಸತಿ ಮತ್ತು ವಾಣಿಜ್ಯ ಸೇರಿದಂತೆ ಎಲ್ಲಾ ಮಾದರಿಯ ಆಸ್ತಿ ಮಾಲೀಕರಿಗೆ ಅನ್ವಯವಾಗಲಿದೆ.

ಉಳಿದಂತೆ ಸ್ವಂತ ಉಪಯೋಗಕ್ಕೆ ಬಳಕೆ ಮಾಡುವ ಒಂದು ಸಾವಿರ ಚದರಡಿಗಿಂತ ಕಡಿಮೆ ಇರುವ ಹಾಗೂ ಕೇವಲ ನೆಲ ಮಹಡಿ ಹೊಂದಿರುವ ಟೈಲ್ಡ್ ಅಥವಾ ಶೀಟ್‌ ಚಾವಣಿ ವಸತಿ ಆಸ್ತಿಗಳಿಗೆ (ಆರ್‌ಸಿಸಿ ಅಲ್ಲದ) ಶೇ.75ರಷ್ಟು ವಿನಾಯಿತಿ ನೀಡಿ, ವಂಚಿಸಿದ ಮೊತ್ತಕ್ಕೆ ಶೇ.25ರಷ್ಟು ದಂಡ ಪಾವತಿಸುವುದಕ್ಕೆ ಸೂಚಿಸಲಾಗಿದೆ.

ಬಡವರಿಗೆ ದಂಡ ಪೂರ್ಣ ವಿನಾಯಿತಿ

ಇನ್ನು ಗುಡಿಸಲು, ಬಡವರಿಗಾಗಿ ಸರ್ಕಾರಿ ವಸತಿ ಸೌಲಭ್ಯ, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಅಥವಾ ಬಿಬಿಎಂಪಿಯಿಂದ ಕೊಳಗೇರಿ ಎಂದು ಘೋಷಿಸಿದ ಪ್ರದೇಶದಲ್ಲಿ ವಸತಿ ಆಸ್ತಿಗಳಲ್ಲಿ ಸ್ವಂತ ಉಪಯೋಗಕ್ಕೆ ಬಳಕೆ ಮಾಡುತ್ತಿರುವ 300 ಚದರಡಿಗಿಂತ ಕಡಿಮೆ ವಿಸ್ತೀರ್ಣ ಇರುವ ಮನೆಗಳಿಗೆ ದಂಡ ಮೊತ್ತವನ್ನು ಸಂಪೂರ್ಣವಾಗಿ ವಿನಾಯಿತಿ ನೀಡಲಾಗಿದೆ.ವಿಳಂಬ ಪಾವತಿಗೂ ಬಡ್ಡಿ ಮನ್ನಾ:

ಆಸ್ತಿ ತೆರಿಗೆ ವಿಳಂಬ ಪಾವತಿ ಮೇಲಿನ ಬಡ್ಡಿ, ವಂಚಿಸಿದ ತೆರಿಗೆ ಮೇಲಿನ ಬಡ್ಡಿ, ಆಸ್ತಿ ತೆರಿಗೆ ವ್ಯಾಪ್ತಿಯಿಂದ ಹೊರಗೆ ಉಳಿದ ಆಸ್ತಿಗೆ ವಿಧಿಸುವ ಬಡ್ಡಿ ಮೊತ್ತವನ್ನು ಸಂಪೂರ್ಣ ಮನ್ನಾ ಮಾಡಲಾಗಿದೆ.ಐದು ವರ್ಷಕ್ಕೆ ಮಿತಿ:

ಈ ಹಿಂದೆ ಆಸ್ತಿ ತೆರಿಗೆ ವಂಚಿಸಿದ ಪ್ರಕರಣದಲ್ಲಿ ವಿಧಿಸುವ ದಂಡ ಮತ್ತು ಬಡ್ಡಿಗೆ ಇಷ್ಟು ವರ್ಷಗಳು ಎಂಬ ಮಿತಿ ಇರಲ್ಲ. ಹೀಗಾಗಿ, ಬಿಬಿಎಂಪಿ ರಚನೆಯಾದಾಗಿನಿಂದ ವಂಚಿಸಿದ ಮೊತ್ತಕ್ಕೆ ಬಡ್ಡಿ ವಿಧಿಸಲಾಗುತ್ತಿತ್ತು. ಇದೀಗ ವಸತಿ ಹಾಗೂ ಭಾಗಶಃ ವಸತಿಯೇತರ (ಸಣ್ಣ ವ್ಯಾಪಾರಿ) ಬಳಕೆ ಮಾಡಿಕೊಂಡ ಆಸ್ತಿಗಳಿಗೆ ವಿಧಿಸುವ ಬಡ್ಡಿ ಅಥವಾ ದಂಡವನ್ನು ಗರಿಷ್ಠ 5 ವರ್ಷಕ್ಕೆ ಮಿತಿಗೊಳಿಸಲಾಗಿದೆ. ಈ ವಿನಾಯಿತಿ ಉದ್ಯಮಿಗಳು, ಕೈಗಾರಿಕೆಗಳಿಗೆ ಅನ್ವಯವಾಗುವುದಿಲ್ಲ.

Exit mobile version