Site icon Vistara News

ವಿನಯ ಸಾಮರಸ್ಯ | ಅಸ್ಪೃಶ್ಯತೆ ನಿವಾರಣೆಗೆ ಬೃಹತ್‌ ಸಮಾವೇಶದ ಮೂಲಕ ಚಾಲನೆ; ಪರಿಶಿಷ್ಟೇತರರೇ ಟಾರ್ಗೆಟ್‌

Vinaya samarsaya scheme to eradicate untouchability will be launched in december

ಬೆಂಗಳೂರು: ಸಮಾಜದಲ್ಲಿ ಜಾತಿ ಭೇದ, ಅಸ್ಪೃಶ್ಯತೆಯನ್ನು ತೊಲಗಿಸಲು ರೂಪಿಸಲಾಗಿರುವ ವಿನಯ ಸಾಮರಸ್ಯ ಯೋಜನೆಗೆ ಬೃಹತ್‌ ಸಮಾವೇಶದ ಮೂಲಕ ಚಾಲನೆ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ.

ಡಿಸೆಂಬರ್ ನಲ್ಲಿ ಬೃಹತ್‌ ಸಮಾವೇಶವನ್ನು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ನಿರ್ಧಾರ ಮಾಡಿದೆ.

ಅನಾರೋಗ್ಯದಿಂದ ಶಸ್ತ್ರಚಿಕಿತ್ಸೆಗೆ ಒಳಗಾಗಿ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಮಾಜ ಕಲ್ಯಾಣ ಸಚಿವ ಸಚಿವ ಕೋಟ ಶ್ರೀನಿವಾಸ ಪೂಜಾರಿ, ವಿನಯ ಸಾಮರಸ್ಯ ಯೋಜನೆಗೆ ಚಾಲನಾ ಸಮಾವೇಶ ಕುರಿತು ಇಲಾಖೆ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ಮೂಲಕ ಗುರುವಾರ ಸಭೆ ನಡೆಸಿದರು.

ಅಸ್ಪೃಶ್ಯತೆ ನಿವಾರಣೆಗಾಗಿ ಇಲಾಖೆಯಿಂದ ರೂಪಿಸಿರುವ ವಿನೂತನ ವಿನಯ ಸಾಮರಸ್ಯ ಯೋಜನೆಗೆ ವಿದ್ಯುಕ್ತವಾಗಿ ಚಾಲನೆ ನೀಡಬೇಕಿದೆ. ಡಿಸೆಂಬರ್ ಎರಡನೇ ವಾರದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲು ಸಿದ್ಧತೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಅಸ್ಪೃಶ್ಯತೆಯಂತಹ ಅನಿಷ್ಠ ಪದ್ಧತಿಯನ್ನು ಅನುಭವಿಸುವವರಿಗಿಂತ ಅನುಸರಿಸುವವರಿಗೆ ಜಾಗೃತಿ ಮೂಡಿಸಬೇಕಿದೆ. ಈ ಹಿನ್ನೆಲೆಯಲ್ಲಿ ಪರಿಶಿಷ್ಟೇತರ ಸಮುದಾಯಗಳ ಧುರೀಣರು, ಮಠಾಧಿಪತಿಗಳು, ಧಾರ್ಮಿಕ ಮುಖಂಡರನ್ನು ಸಮಾವೇಶಕ್ಕೆ ಆಹ್ವಾನಿಸಬೇಕು. ಈ ಮೂಲಕ ಸಮಾಜದಲ್ಲಿನ ಅಸ್ಪೃಶ್ಯತೆ ನಿವಾರಣೆಯ ಜಾಗೃತಿ ಸಮಾವೇಶ ಅರ್ಥಪೂರ್ಣವಾಗಿ ಯಶಸ್ವಿಯಾಗಬೇಕು ಎಂದರು.

ಬೆಂಗಳೂರು ಅಥವಾ ಕೊಪ್ಪಳದಲ್ಲಿ ಸಮಾವೇಶ ಹಮ್ಮಿಕೊಳ್ಳುವ ಬಗ್ಗೆ ಸದ್ಯದಲ್ಲೆ ಸ್ಥಳ ಹಾಗೂ ದಿನಾಂಕ ಅಂತಿಮಗೊಳಿಸಲಾಗುವುದು. ಬೃಹತ್ ಸಮಾವೇಶದಲ್ಲಿ ಮುಖ್ಯಮಂತ್ರಿಯವರು ವಿನಯ ಸಾಮರಸ್ಯ ಯೋಜನೆಗೆ ವಿದ್ಯುಕ್ತವಾಗಿ ಚಾಲನೆ ನೀಡಲಿದ್ದಾರೆ ಎಂದರು.

ಬರುವ ದಿನಗಳಲ್ಲಿ ಪ್ರತಿ ಗ್ರಾಮ ಪಂಚಾಯ್ತಿ ಹಂತದಲ್ಲೂ ಈ ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತರಬೇಕಿದ್ದು ಇಲಾಖೆಯ ಅಧಿಕಾರಿಗಳು ಕಾರ್ಯಕ್ರಮ ಅನುಷ್ಠಾನಕ್ಕೆ ಸಿದ್ಧತೆ ಮಾಡಿಕೊಳ್ಳಬೇಕು. ಹಾಗೂ ಚಾಲನಾ ಸಮಾವೇಶ ಅರ್ಥಪೂರ್ಣ ಕಾರ್ಯಕ್ರಮವಾಗಿಸುವ ಮೂಲಕ ಯಶಸ್ವಿಗೊಳಿಸಲು ಶ್ರಮಿಸಬೇಕೆಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದರು.

ವಿನಯ ಸಾಮರಸ್ಯದ ಹಿನ್ನೆಲೆ

2021 ಸೆಪ್ಟೆಂಬರ್ ನಲ್ಲಿ ಕೊಪ್ಪಳ ಜಿಲ್ಲೆ ಮಿಯಾಪುರದಲ್ಲಿ ದಲಿತ ಸಮುದಾಯದ ನಾಲ್ಕು ವರ್ಷದ ಬಾಲಕ ವಿನಯ್ ಮಾರುತಿ ದೇವಸ್ಥಾನ ಪ್ರವೇಶಿಸಿದ್ದರಿಂದ ಗ್ರಾಮದ ಸವರ್ಣಿಯರು ಬಾಲಕನ ಪೋಷಕರಿಗೆ 25 ಸಾವಿರ ರೂ. ದಂಡ ವಿಧಿಸಿ ಊರಿಂದ ಭಹಿಷ್ಕರಿಸಿದ್ದ ಪ್ರಕರಣ ಬೆಳಕಿಗೆ ಬಂದಿತ್ತು. ಸುದ್ದಿ ತಿಳಿದ ಜಿಲ್ಲಾಡಳಿತ ಹಾಗೂ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಿದ್ದರು. ಅಲ್ಲದೆ ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ವಿನಯ್ ಹೆಸರಿನಲ್ಲಿ ಅಸ್ಪೃಶ್ಯತೆ ನಿವಾರಣೆಯ ವಿನಯ ಸಾಮರಸ್ಯ ಯೋಜನೆಯನ್ನು ಸರ್ಕಾರ ಘೋಷಿಸಲಾಗಿತ್ತು.

ಇದನ್ನೂ ಓದಿ | Viral News | ಅನಾರೋಗ್ಯದ ನಡುವೆಯೂ ಕೆಲಸ ಮಾಡಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ; ಫೋಟೊ ವೈರಲ್‌

Exit mobile version