Site icon Vistara News

Gruha Lakshmi Scheme : ಮಗನನ್ನುಕಳೆದುಕೊಂಡ ತಾಯಿ ಜತೆ ಸರ್ಕಾರವಿದೆ; ಭಾವುಕ ಸಿದ್ದರಾಮಯ್ಯ

Gruha Lakshmi Scheme CM Siddaramaiah

ಬೆಂಗಳೂರು: ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರ ಉಚಿತ ಪ್ರಯಾಣಕ್ಕೆ (Free Bus Service) ಅವಕಾಶ ಕಲ್ಪಿಸಿದ ಗೃಹ ಲಕ್ಷ್ಮಿ ಯೋಜನೆಯ (Gruha Lakshmi Scheme) ಆರಂಭದಲ್ಲಿ ಮಹಿಳೆಯೊಬ್ಬರು ಮೆಟ್ಟಿಲುಗಳಿಗೆ ನಮಸ್ಕಾರ ಮಾಡಿದ ಘಟನೆಯನ್ನು ಹೃದಯಕ್ಕೆ ಹತ್ತಿರವಾಗಿಸಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಇದೀಗ ಅಂತಹುದೇ ಇನ್ನೊಂದು ಘಟನೆಯಿಂದ ಭಾವುಕರಾಗಿದ್ದಾರೆ. ಈ ಬಾರಿ ಘಟನೆ ನೋವಿನದಾದರೂ ತಮ್ಮ ಸರ್ಕಾರ ಯೋಜನೆ ಯಾವ ರೀತಿ ಜನರ ಬದುಕಿಗೆ ನೆರವಾಗಿರುವುದು ಅವರಿಗೆ ನೆಮ್ಮದಿ ತಂದಿದೆ.

ಕೆಲವು ದಿನಗಳ ಹಿಂದೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮರಕುಂಬಿ ಗ್ರಾಮದ ವಿಶ್ವನಾಥ ಗುರಕ್ಕನವರ (34) ಎಂಬವರು ಅನಾರೋಗ್ಯದಿಂದ ಮೃತಪಟ್ಟಿದ್ದರು. ಆದರೆ, ಅವರ ವಯಸ್ಸಾದ ತಾಯಿ ನೀಲವ್ವ ಅವರ ಬಳಿ ಮಗನ ಅಂತ್ಯ ಸಂಸ್ಕಾರಕ್ಕೂ ಹಣವಿರಲಿಲ್ಲ. ಸ್ಥಳೀಯ ಸ್ವಯಂಸೇವಾ ಸಂಘದ ಸದಸ್ಯರೇ ಮುಂದಾಗಿ ಅಂತ್ಯಕ್ರಿಯೆ ನಡೆಸಿದರು. ಈ ಹೊತ್ತಿನಲ್ಲಿ ಅವರು, ಕಣ್ಣೀರಿಡುತ್ತಾ, ಮಗ ಕೊನೆಯ ಕ್ಷಣದಲ್ಲಿ ಆಡಿದ್ದ ಮಾತನ್ನು ನೆನಪಿಸಿಕೊಂಡಿದ್ದರು. ನಾನಿಲ್ಲ ಎಂದು ಚಿಂತಿಸಬೇಡ, ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ರೂ. ಬರುತ್ತದೆ. ಅದರಲ್ಲಿ ಜೀವನ ನಡೆಸಬಹುದು ಎಂದು ಹೇಳಿದ್ದನ್ನು ಸ್ಮರಿಸಿದ್ದರು. ಇದನ್ನು ಆಧಾರವಾಗಿಟ್ಟುಕೊಂಡು ಸಿದ್ದರಾಮಯ್ಯ ಒಂದು ಟ್ವೀಟ್‌ ಮಾಡಿದ್ದಾರೆ.

ಶವದೆದುರು ತಾಯಿ ರೋದಿಸುವುದನ್ನು ನೋಡಿ ಎದೆ ಭಾರವಾಯಿತು

ʻʻಅನಾರೋಗ್ಯದಿಂದ ಅಕಾಲಿಕ ಮರಣಕ್ಕೆ ತುತ್ತಾದ ಈ ಬಡತಾಯಿಯ ಮಗನ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ‘ಗೃಹಲಕ್ಷ್ಮಿ ಯೋಜನೆ ದುಡ್ಡು ನಿನಗೆ ಬರುತ್ತೆ, ನಾನಿಲ್ಲ ಎಂದು ಚಿಂತಿಸಬೇಡ’ ಎಂದು ಮಗನ ಮಾತನ್ನು ನೆನಪು ಮಾಡಿಕೊಂಡು ಆತನ ಶವದೆದುರು ತಾಯಿ ರೋದಿಸುತ್ತಿರುವುದನ್ನು ನೋಡಿ ಎದೆ ಭಾರವಾಯಿತು. ಯಾವ ತಾಯಿಗೂ ಎದೆಯೆತ್ತರಕ್ಕೆ ಬೆಳೆದ ಮಗನ ಚಿತೆಗೆ ಅಗ್ನಿಸ್ಪರ್ಶ ಮಾಡುವ ಸ್ಥಿತಿ ಬಾರದಿರಲಿʼʼ ಎಂದು ಸಿದ್ದರಾಮಯ್ಯ ಟ್ವೀಟ್‌ನಲ್ಲಿ ಹೇಳಿದ್ದಾರೆ.

ಇದನ್ನೂ ಓದಿ : ಮಗನ ಕಳೆದುಕೊಂಡ ತಾಯಿ ಸಂಕಷ್ಟಕ್ಕೆ ಮಿಡಿದ ಲಕ್ಷ್ಮಿ ಹೆಬ್ಬಾಳ್ಕರ್‌; 1 ವರ್ಷದ ‘ಗೃಹಲಕ್ಷ್ಮಿ’ ಮೊತ್ತ ನೆರವು

ʻʻನಾವು ಗೃಹಲಕ್ಷ್ಮಿ ಯೋಜನೆ ಘೋಷಣೆ ಮಾಡಿದ ದಿನದಿಂದ ಇಂದಿನ ವರೆಗೆ ಕೆಲವರಿಂದ ಅಪಪ್ರಚಾರ, ಟೀಕೆ, ವ್ಯಂಗ್ಯಗಳು ವ್ಯಕ್ತವಾಗುತ್ತಲೇ ಇದೆ, ಇದಾವುದಕ್ಕೂ ನಾನು ತಲೆಕೆಡಿಸಿಕೊಂಡಿಲ್ಲ. ಕಾರಣ ಇಂತಹ ಲಕ್ಷಾಂತರ ಬಡತಾಯಂದಿರಿಗೆ ನಮ್ಮ ಯೋಜನೆ ಮೂರು ಹೊತ್ತು ನೆಮ್ಮದಿಯ ಅನ್ನ ನೀಡಿ ಬದುಕಿಗೆ ಆಧಾರವಾಗಿದೆ. ಬಡತನ, ಹಸಿವು, ಅನಾಥಭಾವ ಅನುಭವಿಸಿದವರಿಗಷ್ಟೇ ಅದರ ನೋವು, ಹತಾಶೆ ಅರಿವಾಗಲು ಸಾಧ್ಯ.
ಈ ತಾಯಿಯ ಜೊತೆ ನಮ್ಮ ಸರ್ಕಾರ ಇದೆ, ಮಗನ ಸಾವಿನ ದುಃಖದಿಂದ ಆದಷ್ಟು ಬೇಗ ಹೊರಬರಲಿ ಎಂದು ಹಾರೈಸುತ್ತೇನೆʼʼ ಎಂದು ಅವರು ಹೇಳಿದ್ದಾರೆ.

ವರ್ಷದ ಕಂತನ್ನು ಒಂದೇ ಬಾರಿ ಒದಗಿಸಿದ ಲಕ್ಷ್ಮೀ ಹೆಬ್ಬಾಳ್ಕರ್‌

ಈ ನಡುವೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರು ತಮ್ಮ ಕಚೇರಿ ಸಹಾಯಕರನ್ನು ಆ ತಾಯಿಯ ಬಳಿಗೆ ಕಳುಹಿಸಿ, ಗೃಹ ಲಕ್ಷ್ಮಿ ಯೋಜನೆಯ ಇಡೀ ವರ್ಷದ ಎಲ್ಲ ಕಂತುಗಳನ್ನು ಅಂದರೆ 24,000 ರೂ.ಗಳನ್ನು ಜತೆಯಾಗಿ ನೀಡಿದ್ದರು.

Exit mobile version