Site icon Vistara News

Guarantee Survey : ಗ್ಯಾರಂಟಿ ಸಮೀಕ್ಷೆಗೆ ಅಂಗನವಾಡಿ, ಆಶಾ ಕಾರ್ಯಕರ್ತೆಯರ ಬಳಕೆ; ಎಸಿ ಗಿರಾಕಿಗಳೆಲ್ಲಿ ಎಂದ HDK

Guarantee Survey HD Kumarawamy

ಬೆಂಗಳೂರು: ರಾಜ್ಯ ಸರ್ಕಾರ ಜಾರಿ ಮಾಡಿರುವ ಐದು ಗ್ಯಾರಂಟಿ ಯೋಜನೆಗಳು (Guarantee Schemes) ಮನೆಗೆ ಮನೆಗೆ ತಲುಪಿವೆಯೇ ಎನ್ನುವುದನ್ನು ಖಾತ್ರಿಪಡಿಸಲು ಸರ್ಕಾರ ಗ್ಯಾರಂಟಿಗಳ ಸಮೀಕ್ಷೆ (Guarantee Survey) ನಡೆಸುತ್ತಿದೆ. ಈ ಸಮೀಕ್ಷೆಗೆ ಅಂಗನವಾಡಿ, ಆಶಾ ಕಾರ್ಯಕರ್ತೆಯರನ್ನು ʻಗ್ಯಾರಂಟಿ ಸ್ವಯಂಸೇವಕʼರನ್ನಾಗಿ (Guarantee Volunteers) ನೇಮಕ ಮಾಡಿದೆ. ಈ ನಿಯೋಜನೆಯನ್ನು ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಕೆರಳಿಸಿದೆ. ಆದರೂ ಸರ್ಕಾರದ ಆದೇಶ ಎಂಬ ಕಾರಣಕ್ಕಾಗಿ ಅವರು ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾರೆ. ಅವರಿಗೆ ಸರ್ಕಾರ ಕೊಡುವುದು 15 ದಿನದ ಕೆಲಸಕ್ಕೆ 1000 ರೂ. ಮಾತ್ರ.

ಇದೀಗ ಮಾಜಿ ಸಿಎಂ ಎಚ್.‌ಡಿ ಕುಮಾರಸ್ವಾಮಿ (HD Kumaraswamy) ಅವರು ಗ್ಯಾರಂಟಿ ಸಮೀಕ್ಷೆಗೆ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರನ್ನು ನಿಯೋಜಿಸುವ ಸರ್ಕಾರದ ನಿರ್ಧಾರವನ್ನು ಖಂಡಿಸಿದ್ದಾರೆ. ಇದು ಸರ್ಕಾರದ ಲಜ್ಜೆಗೇಡಿತನದ ಪರಮಾವಧಿ ಎಂದು ಎಚ್.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಎಕ್ಸ್ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಅವರು, ಪಲ್ಸ್ ಪೋಲಿಯೋ ಲಸಿಕೆ ಅಭಿಯಾನಕ್ಕೆ ನಿಯೋಜಿತವಾಗಿರುವ ಅಂಗನವಾಡಿ, ಆಶಾ ಕಾರ್ಯಕರ್ತೆಯರಿಂದ ರಾಜ್ಯ ಸರಕಾರ ಮಾಡಿಸುತ್ತಿರುವ ಗ್ಯಾರಂಟಿ ಸಮೀಕ್ಷೆ ಲಜ್ಜೆಗೇಡಿತನದ ಪರಮಾವಧಿ. ಈ ಮಹಿಳೆಯರಿಗೆ ‘ಗ್ಯಾರಂಟಿ ಸ್ವಯಂ ಸೇವಕರು’ ಅಂತ ಹೆಸರು. ಹಾಗಾದರೆ, ಗ್ಯಾರಂಟಿ ಸಮೀಕ್ಷೆ ಹೆಸರಿನಲ್ಲಿ ತಮಗೆ ಬೇಕುಬೇಕಾದ ಸಂಸ್ಥೆಗಳಿಗೆ ಕೋಟಿ ಕೋಟಿ ಲೆಕ್ಕದಲ್ಲಿ ಸುರಿದ ಜನರ ತೆರಿಗೆ ಹಣ ಎಲ್ಲಿಗೆ ಹೋಯಿತು? ಎಂದು ಪ್ರಶ್ನೆ ಕೇಳಿದ್ದಾರೆ.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಏನು ಕಿಸಿಯುತ್ತಿದೆ?

ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಏನು ಕಿಸಿಯುತ್ತಿದೆ? ಎಚ್.ಎಂ.ರೇವಣ್ಣ ಅವರಿಗೆ ಸಂಪುಟದರ್ಜೆ ಕೊಟ್ಟು ರಚಿಸಲಾಗಿರುವ ‘ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ’ ಏನು ಕಿಸಿಯುತ್ತಿದೆ? ಜಿಲ್ಲೆ, ತಾಲೂಕು, ವಿಧಾನಸಭೆ ಕ್ಷೇತ್ರಗಳ ಮಟ್ಟದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗಳು ಸಮೀಕ್ಷೆ ಮಾಡುತ್ತಿಲ್ಲವೇ? ಗ್ಯಾರಂಟಿ ಅನುಷ್ಠಾನ ನಿರ್ವಹಣೆಗೆ ವಾರ್ಷಿಕ ₹16 ಕೋಟಿ ವೆಚ್ಚಿಸುತ್ತೇವೆ ಎಂದಿದ್ದಾರೆ ಸಿಎಂ. ಹಾಗಾದರೆ, ಇದಕ್ಕೆ ಹೋಗುತ್ತಿರುವ ವೇತನ, ಭತ್ಯೆಗಳೆಲ್ಲ ವ್ಯರ್ಥವೇ? ಎಂದು ಪ್ರಶ್ನಿಸಿದ್ದಾರೆ.

ಎಸಿ ರೂಂ ಗಿರಾಕಿಗಳಿಗೆ ಕೋಟಿ ಕೋಟಿ, ಕಾರ್ಯಕರ್ತರಿಗೆ ಬರೀ 1000 ರೂ.

ಅಂಗನವಾಡಿ, ಆಶಾ ಕಾರ್ಯಕರ್ತೆಯರು ಪೋಲಿಯೋ ಲಸಿಕೆ ಹಾಕುವುದರ ಜತೆಗೆ ಈ ಸುಡುಬಿಸಿಲಿನಲ್ಲಿ ಹಳ್ಳಿಗಳಲ್ಲಿ ಮನೆಮನೆಗೆ ತೆರಳಿ ಸಮೀಕ್ಷೆ ಮಾಡುತ್ತಿದ್ದಾರೆ. ಅದೂ ಒತ್ತಾಯಪೂರ್ವಕವಾಗಿ… ಹಾಗಾದರೆ, ಅವರೂ ಈ ಪ್ರಾಧಿಕಾರದ ವ್ಯಾಪ್ತಿಗೆ ಬರುತ್ತಾರೆಯೆ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. ಒಬ್ಬ ಕಾರ್ಯಕರ್ತೆಗೆ 120ರಿಂದ 150 ಮನೆ ಹಂಚಿಕೆ ಮಾಡಿದ್ದು, 10-15 ದಿನದಲ್ಲಿ ಸಮೀಕ್ಷೆ ಮುಗಿಸಬೇಕಿದೆ. ಬೆಳಗ್ಗೆ 9 ರಿಂದ ಸಂಜೆ 4ರವರೆಗೂ ಉರಿಬಿಸಿಲಿನಲ್ಲಿ ಮಾಡುವ ಈ ಕೆಲಸಕ್ಕೆ ಅವರಿಗೆ ಸಿಗುವ ಗೌರವಧನ ಕೇವಲ ₹1,000! ಅದೇ ‘ಎಸಿ ರೂಂ ಸಮೀಕ್ಷೆ ಗಿರಾಕಿ’ಗಳಿಗೆ ಕೋಟಿ ಕೋಟಿ ಹಣ ಹೋಗುತ್ತಿದೆ ಎಂದು ಅವರು ಹೇಳಿದ್ದಾರೆ..

ಪಟ್ಟು-ಮಟ್ಟು-ಒಳಗುಟ್ಟು ಕಂಪನಿ ಏನು ಮಾಡುತ್ತಿದೆ?

ಜನರ ತೆರಿಗೆ ಹಣದಿಂದಲೇ ಗ್ಯಾರಂಟಿ ಸಮಾವೇಶಗಳನ್ನು (ಇವು ಚುನಾವಣಾ ಪ್ರಚಾರ ಸಭೆಗಳು) ಸಾಲು ಸಾಲಾಗಿ ನಡೆಸುತ್ತಿರುವ ಸರಕಾರಕ್ಕೆ ಸಮೀಕ್ಷೆಗಳ ಮೂಲಕವೂ ದುಡ್ಡು ಹೊಡೆಯುವ ಹಪಾಹಪಿ! ‘ಪಟ್ಟು-ಮಟ್ಟು-ಒಳಗುಟ್ಟು’ ಕಂಪನಿ ಸೇರಿ ಅಂತಹ ಹಲವಾರು ನಿಗೂಢ ಕಂಪನಿಗಳಿಗೆ ಗ್ಯಾರಂಟಿ ಸಮೀಕ್ಷೆ ಹೆಸರಿನಲ್ಲಿಯೇ ಕೋಟಿ ಕೋಟಿಯಷ್ಟು ಜನರ ತೆರಿಗೆ ಹಣ ಸುರಿಯುತ್ತಿದೆ ಸರಕಾರ ಎಂದು ಕುಮಾರಸ್ವಾಮಿ ಅವರು ಟೀಕಾಪ್ರಹಾರ ನಡೆಸಿದ್ದಾರೆ.

ಇದನ್ನೂ ಓದಿ : ಗ್ಯಾರಂಟಿ ಬಗ್ಗೆ ಸುಳ್ಳು ಹೇಳೋದ್ಯಾಕೆ? ಸಿ.ಟಿ.ರವಿ ನಿನಗೆ ಮಾನ ಮರ್ಯಾದೆ ಇದ್ಯಾ: ಸಿದ್ದರಾಮಯ್ಯ ವಾಗ್ದಾಳಿ

ಎಲ್ಲದಕ್ಕೂ ಅವರೇ ಬೇಕು ಅಂದರೆ ಏನು ಮಾಡುತ್ತಿದ್ದಾರೆ?

ಗ್ಯಾರಂಟಿ ಸಮಾವೇಶಗಳಿಗೂ ಅಂಗನವಾಡಿ, ಆಶಾ ಕಾರ್ಯಕರ್ತೆಯರೇ ಬರಬೇಕು, ಪಲ್ಸ್ ಪೋಲಿಯೋ ಲಸಿಕೆಯನ್ನೂ ಇವರೇ ಹಾಕಬೇಕು, ಗ್ಯಾರಂಟಿ ಸಮೀಕ್ಷೆಯನ್ನೂ ನಡೆಸಬೇಕು ಹಾಗೂ ತಮ್ಮ ನಿತ್ಯದ ನಿಗದಿತ ಕರ್ತವ್ಯವನ್ನೂ ನಿಭಾಯಿಸಬೇಕು. ಹಾಗಾದರೆ, ಸರಕಾರ ತೆರಿಗೆ ಹಣ ಸುರಿದು ಮಾಡಿಸುತ್ತಿರುವ ‘ಎಸಿ ರೂಂ ಸಮೀಕ್ಷೆ’ಗಳ ಕಥೆ ಏನು? ಸಮೀಕ್ಷೆ ಕಷ್ಟ ಈ ಹೆಣ್ಣುಮಕ್ಕಳದು, ಜನರ ತೆರಿಗೆ ಹಣ ‘ಎಸಿ ರೂಂ ಗಿರಾಕಿ’ಗಳದು! ಬವಣೆ ಒಬ್ಬರದು, ಭರ್ಜರಿ ಲಾಭ ಇನ್ನೊಬ್ಬರದು! ಎಂದು ಅವರು ಆರೋಪ ಮಾಡಿದ್ದಾರೆ. ಅಂಗನವಾಡಿಗೆ ಬರುವ ಮಕ್ಕಳ ಲಾಲನೆ- ಪಾಲನೆ, ಗರ್ಭಿಣಿಯರು- ಬಾಣಂತಿಯರಿಗೆ ಊಟ, ಪ್ರತಿ ತಿಂಗಳ ಮೊದಲ & 3ನೇ ಶುಕ್ರವಾರ ಪೋಷಣ್‌ ಅಭಿಯಾನ, 3ನೇ ಶನಿವಾರ ಬಾಲವಿಕಾಸ ಸಮಿತಿ ಸಭೆಗೆ ಹಾಜರಿ; ಜತೆಗೆ ಇಲಾಖೆ ನಿಯೋಜಿಸುವ ಕೆಲಸಗಳನ್ನೂ ನಿರ್ವಹಿಸಬೇಕು. ಮಾರ್ಚ್ 3ರಿಂದ ಗ್ಯಾರಂಟಿ ಸಮೀಕ್ಷೆ ಬೇರೆ ಮಾಡಿಸುತ್ತಿದ್ದಾರೆ ಎಂದು ಹೇಳಿದ್ದಾರೆ.\

ಹಾಗಾದರೆ, ಸಿದ್ದರಾಮಯ್ಯ ಅವರ ಸರಕಾರ ಮಾಡಿಕೊಂಡಿರುವ ಇಡೀ ಗ್ಯಾರಂಟಿ ಸೆಟಪ್ ಏನು ಮಾಡುತ್ತಿದೆ? ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಬಣ್ಣಬಣ್ಣದ ಜಾಹೀರಾತು ನೀಡುವುದಕ್ಕೆ ಮಾತ್ರ ಸೀಮಿತವಾಗಿದೆಯೇ? ಜನರ ತೆರಿಗೆ ದುಡ್ಡು, ಯಲ್ಲಮನ ಜಾತ್ರೆ ಎನ್ನುವಂತಾಗಿದೆ. ಬರ, ಕುಡಿಯುವ ನೀರಿನ ಹಾಹಾಕಾರದ ನಡುವೆಯೂ ಇವರ ಗ್ಯಾರಂಟಿ ರಾಜಕೀಯಕ್ಕೆ ಬರವಿಲ್ಲ, ಪ್ರಚಾರಕ್ಕೂ ಬರವಿಲ್ಲ! ಎಂದಿದ್ದಾರೆ ಎಚ್‌.ಡಿ ಕುಮಾರಸ್ವಾಮಿ.

Exit mobile version