ಬೆಂಗಳೂರು: ರಾಜಧಾನಿಯಲ್ಲಿ ವ್ಯಾಪಾರಿಗಳಿಂದ ಹಫ್ತಾ ವಸೂಲಿ ಮಾಡುವ ರೌಡಿಗಳ ದಂಧೆ ಅಬಾಧಿತವಾಗಿ ಮುಂದುವರಿದಿದೆ. ಕೇಳಿದಷ್ಟು ಹಫ್ತಾ ಕೊಡದಿದ್ದರೆ ಹೆಣ ಉರುಳಿಸುವುದಾಗಿ ರೌಡಿ ಬೆದರಿಕೆ ಹಾಕಿದೆ ಆಡಿಯೋ ಲಭ್ಯವಾಗಿದೆ.
ಏರಿಯಾ ರೌಡಿ ಅನಿಸಿಕೊಂಡ ಮೇಲೆ ವ್ಯಾಪಾರಿಗಳು ಇವರಿಗೆ ಹಫ್ತಾ ಕೊಡಲೇಬೇಕು. ಸೆಕ್ಯೂರಿಟಿ ಮನಿ ನೆಪದಲ್ಲಿ ಈ ವಸೂಲಿ ದಂಧೆ ನಡೆದಿದೆ. ಹೀಗೆ ಮಾರ್ಕೆಟ್‌ನಲ್ಲಿರುವ ವರ್ತಕನಿಗೆ ಧಮಕಿ ಹಾಕಿದ ರೌಡಿಶೀಟರ್ ಪೀಟರ್ ಅಲಿಯಾಸ್ ಕುಳ್ಳ ಪೀಟರ್ ಅಲಿಯಾಸ್ ಜಾನ್ ಪೀಟರ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಧಮಕಿ ಹಾಕಿದ ಆಡಿಯೋ:
ಹಫ್ತಾ ಕೊಡಲಿಲ್ಲ ಅಂದ್ರೆ ಹೆಣ ಉರುಳುಸ್ತೀನಿ, ದೂರು ಕೊಟ್ಟರೆ ಹಲವು ಕೇಸ್‌ಗಳ ನಡುವೆ ಇದೂ ಮತ್ತೊಂದು ಕೇಸ್ ಆಗುತ್ತೆ ಅಷ್ಟೇ. ಮೂರು ಲಕ್ಷ ಕೊಡಬೇಕು ಅಷ್ಟೆ ಇಲ್ಲಾಂದ್ರೆ ಕಥೆ ಮುಗೀತು. ಕೊಡ್ಲಿಲ್ಲ ಅಂದ್ರೆ ಎತ್ತಾಕೊಂಡು ಹೋಗಿ ಖರಾಬಾಗಿ ಹೊಡೀತೀನಿ, ಮಾರ್ಕೆಟ್‌ನಲ್ಲಿ ಕೇಳು ಇಲ್ಲಾಂದರೆ ಬಂದು ಹುಡುಗರಿಂದ ಚುಚ್ಚಿಸ್ತೀನಿ ಎಂದು ಈತ ಫೋನ್‌ನಲ್ಲಿ ವ್ಯಾಪಾರಿಗೆ ಬೆದರಿಸಿದ್ದ.
ಲಕ್ಷ ಲಕ್ಷ ದುಡೀತಿದೀಯ. ಐದು ಲಕ್ಷ ಕೇಳಿದೀನಿ, ಮೂರು ಲಕ್ಷಕ್ಕೆ ಸೆಟ್ಲ್‌ಮೆಂಟ್ ಮಾಡು ಎಂದು ಆವಾಜ್ ಹಾಕಿರುವ ರೌಡಿಯ ಮುಂದೆ ವ್ಯಾಪಾರವೇ ಇಲ್ಲ ಹಣ ಎಲ್ಲಿಂದ ತರಲಿ ಎಂದು ವ್ಯಾಪಾರಿ ಗೋಗರೆಯುವ ಧ್ವನಿ ಆಡಿಯೋದಲ್ಲಿದೆ. ಆದರೆ ರೌಡಿ ಕರಗಿಲ್ಲ. ಮಾಹಿತಿ ಬಂದ ಹಿನ್ನೆಲೆಯಲ್ಲಿ ರೌಡಿಯನ್ನು ಹುಡುಕಿ ಎಳೆ ತಂದಿರುವ ಸಿಸಿಬಿ ಪೊಲೀಸರು, ಬಂಧಿತನಿಂದ ಹಣ ವಸೂಲಿ ಮಾಡಲು ಇಟ್ಟುಕೊಂಡಿದ್ದ ಲಾಂಗ್ ವಶಪಡಿಸಿಕೊಂಡಿದ್ದಾರೆ.