ಬೆಂಗಳೂರು: ಚೈತ್ರ ಕುಂದಾಪುರ (Chaitra Kundapura) ವಂಚನೆ ಪ್ರಕರಣದಲ್ಲಿ ಒಡಿಶಾದಲ್ಲಿ ಸಿಕ್ಕಿಬಿದ್ದಿರುವ ಹಾಲಶ್ರೀಯನ್ನು (Halashri Swameeji) ಸಿಸಿಬಿ ಪೊಲೀಸರು (CCB Police) ನಿನ್ನೆ ಆಡುಗೋಡಿ ಟೆಕ್ನಿಕಲ್ ಸೆಲ್‌ನಲ್ಲಿ ವಿಚಾರಣೆ ನಡೆಸಿದ್ದಾರೆ. ಇಂದು ಮುಂಜಾನೆ 11 ಗಂಟೆ ಸುಮಾರಿಗೆ ಕೋರ್ಟ್‌ಗೆ ಹಾಜರುಪಡಿಸಲಿದ್ದಾರೆ.
1ನೇ ಎಸಿಎಂಎಂ ಕೋರ್ಟ್‌ಗೆ ಹಾಜರುಪಡಿಸಿ ಸಿಸಿಬಿ ಪೊಲೀಸರು ಕಸ್ಟಡಿಗೆ ಪಡೆಯಲಿದ್ದಾರೆ. ನಿನ್ನೆ ರಾತ್ರಿ ಟೆಕ್ನಿಕಲ್ ಸೆಲ್‌ನಲ್ಲಿ ನಡೆದ ವಿಚಾರಣೆಯಲ್ಲಿ ಹಾಲಶ್ರೀ ಸ್ವಾಮೀಜಿ ಸಹಕರಿಸಿಲ್ಲ. ಕೋರ್ಟ್ ಮುಂದೆ ಹಾಜರು ಪಡಿಸುವ ಮುಂಚಿತವಾಗಿ ಕೆಲ ಮಾಹಿತಿ ಪಡೆಯಲು ಸಿಸಿಬಿ ಯತ್ನಿಸಿದೆ. ಸ್ವಾಮಿ ಸೆರೆಸಿಕ್ಕಿದರೆ ದೊಡ್ಡ ದೊಡ್ಡವರ ಹೆಸರು ಹೊರಗೆ ಬರುತ್ತೆ ಎಂದು ಆರೋಪಿ ಚೈತ್ರ ಹೇಳಿದ್ದ ಹಿನ್ನೆಲೆಯಲ್ಲಿ, ಹಾಲಶ್ರೀ ಹೇಳಿಕೆಗೆ ಮಹತ್ವ ಬಂದಿದೆ.
ರಾತ್ರಿ ಊಟ ಮಾಡಲು ಸಹ ಹಿಂದೇಟು ಹಾಕಿದ್ದ ಹಾಲಶ್ರೀ ಸ್ವಾಮಿ, ಸದ್ಯ ಪೊಲೀಸರ ಯಾವ ಪ್ರಶ್ನೆಗೂ ಉತ್ತರ ನೀಡದೆ ಕಣ್ಣೀರು ಮಾತ್ರ ಹಾಕುತ್ತಿದ್ದಾನೆ ಎಂದು ಗೊತ್ತಾಗಿದೆ. ಇಂದು ಕೋರ್ಟ್ ಮುಂದೆ ಹಾಜರು ಪಡಿಸಿ ಕಸ್ಟಡಿಗೆ ಪಡೆಯುವ ಸಾಧ್ಯತೆಯಿದೆ.
ಈ ನಡುವೆ, ನಾಪತ್ತೆಯಾಗುವ ಮುನ್ನ ಹಾಲಶ್ರೀ ಮೈಸೂರಿಗೂ ಬಂದು ಹೋಗಿದ್ದುದು ಗೊತ್ತಾಗಿದೆ. ಮೈಸೂರಿನಿಂದ ಆರೋಪಿ ಚಾಮರಾಜನಗರ- ತಿರುಪತಿ ರೈಲು ಹತ್ತಿದ್ದ. ತೆಲಂಗಾಣ ಮೂಲಕ ಒಡಿಸ್ಸಾ ತಲುಪಿದ್ದ. ಮೈಸೂರಿನ ಚಲನವಲನ ಆರೋಪಿ ಬಂಧನಕ್ಕೆ ಮಹತ್ವದ ಸುಳಿವು ನೀಡಿತ್ತು. ಸಿಸಿ ಕ್ಯಾಮರಾ ದೃಶ್ಯಗಳ ಆಧಾರದ ಮೇಲೆ ಸ್ವಾಮೀಜಿ ವೇಷಭೂಷಣ ಬದಲಾಗಿರುವುದನ್ನು ಪೊಲೀಸರು ಖಚಿತಪಡಿಸಿಕೊಂಡಿದ್ದರು.
ಗೋವಿಂದ ಪೂಜಾರಿಗೆ ಬಿಜೆಪಿ ಎಂಎಲ್‌ಎ ಟಿಕೆಟ್ ನೀಡುವುದಾಗಿ ವಂಚಿಸಿದ ಪ್ರಕರಣದಲ್ಲಿ ಹಾಲವೀರಪ್ಪ ಸ್ವಾಮೀಜಿ ಮೂರನೇ ಆರೋಪಿಯಾಗಿದ್ದು, ಹೊಸಪೇಟೆ ಹಿರೇಹಡಗಲಿ ಅಭಿನವ ಹಾಲಶ್ರೀ ಮಠದ ಪೀಠಾಧ್ಯಕ್ಷನಾಗಿದ್ದಾನೆ. ಒಡಿಶಾದ ಕಟಕ್‌ನಲ್ಲಿ ಹಾಲಶ್ರೀಯನ್ನು ಸಿಸಿಬಿ ವಿಶೇಷ ತಂಡ ಬಂಧಿಸಿದೆ.
ಇದನ್ನೂ ಓದಿ: Halashri Swameeji : ಹಾಲಶ್ರೀ ಸ್ವಾಮೀಜಿ ಬೆಂಗಳೂರು ಪುರಪ್ರವೇಶ; ಚೈತ್ರಾ ಕುಂದಾಪುರ ಫುಲ್ ಖುಷ್, ಕಾಲ ಮೇಲೆ ಕಾಲು!