ಬೆಂಗಳೂರು: ಬೆಂಗಳೂರಿನ (Bangalore News) ನಗರ್ತ ಪೇಟೆಯ ಅಂಗಡಿಯಲ್ಲಿ ಹನುಮಾನ್ ಚಾಲೀಸಾ (Hanuman Chalisa) ಶ್ಲೋಕ ಹಾಕಿದ ಎಂಬ ಕಾರಣಕ್ಕಾಗಿ ಹಿಂದು ವ್ಯಾಪಾರಿಯೊಬ್ಬನ (Attack on Hindu Trader) ಮೇಲೆ ಹಲ್ಲೆ ನಡೆಸಿದ್ದಕ್ಕೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಇದು ರಾಜಕೀಯ ಸ್ವರೂಪ ಪಡೆದು ದೊಡ್ಡ ಮಟ್ಟದ ಸುದ್ದಿಯಾಗಿತ್ತು. ಬಿಜೆಪಿಯ ನಾಯಕರು ಪ್ರತಿಭಟಿಸಿದ್ದರು. ಇದೀಗ ಹನುಮಾನ್ ಚಾಲೀಸಾ ಗಲಾಟೆಗೆ ಮತ್ತೊಂದು ಟ್ವಿಸ್ಟ್ ಪಡೆದುಕೊಂಡಿದೆ. ಹಲ್ಲೆಗೊಳಗಾಗಿ ದೂರು ಕೊಟ್ಟಿದ್ದ ಮುಕೇಶ್ ವಿರುದ್ಧವೇ ಪ್ರತಿದೂರು ದಾಖಲಾಗಿದೆ. ಇದಕ್ಕೆ ಬಿಜೆಪಿ ಆಕ್ರೋಶ ಹೊರಹಾಕಿದೆ.
ಹಲ್ಲೆಗೊಳಗಾದ ಮುಖೇಶ್ ನನಗೆ ಕನ್ನಡ ಸರಿಯಾಗಿ ಬರುವುದಿಲ್ಲ, ಹೀಗಾಗಿ ಅಸಲಿ ಸಂಗತಿ ಆ ದಿನ ಹೇಳಿರಲಿಲ್ಲ ಎಂದಿದ್ದಾನೆ. ಪಿಎಸ್‌ಐ ಭಗವಂತಯ್ಯ ಅವರ ಮುಂದೆ ಮುಂದುವರಿದ ಹೇಳಿಕೆ ನೀಡಿರುವ ಮುಕೇಶ್, ಹನುಮಾನ್ ಚಾಲೀಸಾ ಹಾಕಿದಕ್ಕೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿದ್ದಾನೆ.
ಪ್ರತಿ ದೂರು
ಬಂಧಿತರ ಪೈಕಿ ಸುಲೇಮಾನ್ ತಾಯಿ ಈ ಹಿಂದೆಯೇ ದೂರು ನೀಡಿದ್ದರು. ನ್ಯಾಯಾಲಯದ ಅನುಮತಿ ಮೇರೆಗೆ ಎನ್‌ಸಿಆರ್ ಈಗ ಎಫ್‌ಐಆರ್ ಆಗಿ ಬದಲಾಗಿದೆ. ಅದರಲ್ಲಿ ಸುಲೇಮಾನ್ ತಾಯಿ ಹಲವು ಆರೋಪಗಳನ್ನು ಮಾಡಿದ್ದಾರೆ. ಆ ಪ್ರಕಾರ ಮೊಬೈಲ್ ಅಂಗಡಿಯ ಪಕ್ಕದಲ್ಲಿಯೇ ಮಸೀದಿ ಇದೆ. ರಂಜಾನ್ ಇರುವುದರಿಂದ ಮೂರು ಸಾವಿರಕ್ಕೂ ಹೆಚ್ಚಿ ಮುಸಲ್ಮಾನರು ನಮಾಜ್ ಮಾಡುತ್ತಾರೆ. ಇದನ್ನು ನನ್ನ ಮಗ ಸುಲೇಮಾನ್ ಹಾಗು ಆತನ ಸ್ನೇಹಿತರು ಕೇಳಲು ಹೋದಾಗ ಮುಕೇಶ್ ಹಲ್ಲೆ ನಡೆಸಿದ್ದಾನೆ. ಹೀಗಾಗಿ ಮುಕೇಶ್ ವಿರುದ್ಧ ಕ್ರಮ ಕೈಗೊಳ್ಳಲು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇತ್ತ ಮುಕೇಶ್ ಕೂಡ ಗಂಭೀರ ಆರೋಪ ಮಾಡಿ ಮುಂದುವರಿದ ಹೇಳಿಕೆ ನೀಡಿದ್ದಾನೆ. ಈ ಹಿಂದೆ ಮುಕೇಶ್ ಕೊಟ್ಟ ದೂರಿನ ಅನ್ವಯ ಏಳು ಜನರನ್ನು ಪೊಲೀಸರು ಬಂಧಿಸಿದ್ದರು. ಮುಂದೆ ಸುಲೇಮಾನ್ ತಾಯಿ ಝಬೀನ್ ನೀಡಿರುವ ದೂರಿನ ಅನ್ವಯವಾಗಿ ಮುಕೇಶ್ ಬಂಧನವಾಗುತ್ತಾ ಎಂಬ ಪ್ರಶ್ನೆ ಉದ್ಭವಿಸಿದೆ. ಪರಸ್ಪರ ದೂರು ಪ್ರತಿದೂರು ದಾಖಲಾಗಿರುವ ಹಿನ್ನೆಲೆಯಲ್ಲಿ ಹಲಸೂರು ಗೇಟ್ ಪೊಲೀಸರು ಯಾವ ರೀತಿ ಪ್ರಕರಣವನ್ನು ಇತ್ಯರ್ಥ ಮಾಡುತ್ತಾರೆ ಕಾದುನೋಡಬೇಕು.
ಇದನ್ನೂ ಓದಿ: Fire Accident : ಬೆಂಗಳೂರಿನ ಆರ್‌ಟಿ ನಗರದಲ್ಲಿ ಅಗ್ನಿ ಅವಘಡ; ಕಟ್ಟಡದೊಳಗೆ ಹಲವರು ಸಿಲುಕಿರುವ ಶಂಕೆ
ದುಷ್ಟರಿಗೆ ಶ್ರೀರಕ್ಷೆ – ಶಿಷ್ಟರಿಗೆ ಶಿಕ್ಷೆ ಎಂದು ಕಿಡಿ
ದುಷ್ಟರಿಗೆ ಶ್ರೀರಕ್ಷೆ ಆಗಿ ಶಿಷ್ಟರಿಗೆ ಶಿಕ್ಷೆ ನೀಡುವ ರಾಜ್ಯ ಕಾಂಗ್ರೆಸ್ ಸರ್ಕಾರವು ಈಡೇರಿಸಿರುವ ಏಕೈಕ ಗ್ಯಾರಂಟಿ ಇದು ಎಂದು ಬಿಜೆಪಿ ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದೆ. ನಗರತ್ ಪೇಟೆಯಲ್ಲಿ ಹನುಮಾನ್ ಚಾಲಿಸಾ ಹಾಕಿದ್ದಕ್ಕೆ ಮುಖೇಶ್ ಮೇಲೆ ಅಮಾನವೀಯವಾಗಿ ಹಲ್ಲೆ ಮಾಡಿದ್ದರು. ಇಂತಹ ಕಿಡಿಗೇಡಿ ಜಿಹಾದಿಗಳನ್ನು ದೂರು ನೀಡಿದರೂ ಬಂಧಿಸದ ಕಾಂಗ್ರೆಸ್ ಸರ್ಕಾರ, ಈಗ ದೂರು ನೀಡಿದ ಮುಖೇಶ್ ಅವರ ಮೇಲೆ ಎಫ್.ಐ.ಆರ್ ದಾಖಲಿಸಿದೆ.
ಸಿಎಂ ಸಿದ್ದರಾಮಯ್ಯ ಅವರೇ, ಹಿಂದೂಗಳ ಮೇಲಿನ ನಿಮ್ಮ ಸರ್ಕಾರದ ದ್ವೇಷ ತಾರಕಕ್ಕೇರಿದ ರೀತಿಯಲ್ಲಿ, ಹಿಂದೂಗಳಿಗೂ ಸಹ ನಿಮ್ಮ ಸರ್ಕಾರದ ಮೇಲೆ ಅಸಹನೆ ಹೆಚ್ಚಾಗಿದೆ. ನಿಮ್ಮ ಹಿಂದೂ ವಿರೋಧಿ ಸರ್ಕಾರಕ್ಕೆ ಸ್ವಾಭಿಮಾನಿ ಹಿಂದೂಗಳು ತಕ್ಕ ಪಾಠ ಕಲಿಸುವುದು ಖಚಿತ-ನಿಶ್ಚಿತ-ಖಂಡಿತ ಎಂದು ಆಕ್ರೋಶ ಹೊರಹಾಕಿದ್ದಾರೆ.
ಏನಿದು ಘಟನೆ?
ಮಾರ್ಚ್ 17ರ ಭಾನುವಾರ ಸಾಯಂಕಾಲ 6.15ರ ಹೊತ್ತು.. ನಗರ್ತ ಪೇಟೆಯ ಜುಮ್ಮಾ ಮಸೀದಿ ರಸ್ತೆಯಲ್ಲಿರುವ ಸಿದ್ಧಣ್ಣ ಗಲ್ಲಿಯಲ್ಲಿ ಕಾರ್ಯಾಚರಿಸುತ್ತಿರುವ ಕೃಷ್ಣ ಟೆಲಿಕಾಂ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮುಕೇಶ್ ಅವರು ಹನುಮಾನ್ ಚಾಲೀಸಾ ಹಾಕಿದ್ದರು.
ಆಗ ಅಲ್ಲಿಗೆ ಆಗಮಿಸಿದ ಸುಲೇಮಾನ್, ಷಹನವಾಜ್, ರೋಹಿತ್, ಡ್ಯಾನಿಷ್, ತರುಣ್ ಅಲಿಯಾಸ್ ದಡಿಯಾ ಮತ್ತು ಇನ್ನೊಬ್ಬ ವ್ಯಕ್ತಿ ಹಿಂದು ದೇವರ ಭಜನೆಯನ್ನು ಬಂದ್ ಮಾಡಲು ಹೇಳಿದ್ದಾರೆ. ಅಂಗಡಿಯಲ್ಲಿದ್ದ ಮುಖೇಶ್, ನನ್ನ ಅಂಗಡಿ ನನ್ನ ಇಷ್ಟ ಎಂದು ವಿರೋಧ ಮಾಡಿದ್ದಾರೆ. ಈಗ ಆಜಾನ್ ಟೈಮ್, ದೇವರ ಭಜನೆ ಹಾಕುವಂತಿಲ್ಲ ಎಂದು ಎಚ್ಚರಿಕೆ ನೀಡಿದರು. ಆದರೆ, ಮುಕೇಶ್ ಅವರ ಮಾತು ಕೇಳಿಲ್ಲ. ನಾನು ನಮ್ಮ ದೇವರ ಹಾಡು ಹಾಕಿದರೆ ನಿಮಗೇನು ತೊಂದರೆ ಎಂದು ಕೇಳಿದ್ದಾರೆ.
ಇದರಿಂದ ಸಿಟ್ಟಿಗೆದ್ದ ಯುವಕರ ಗುಂಪು ಮುಖೇಶ್ ಮೇಲೆ ದಾಳಿ ಮಾಡಿದ್ದರು. ಮುಖೇಶ್ ಸಹ ಆವೇಶದಿಂದ ಪ್ರತಿದಾಳಿ ಮಾಡಿದ್ದರು. ಆದರೆ, ಆರೋಪಿಗಳು ನಾಲ್ಕೈದು ಮಂದಿ ಇದ್ದಿದ್ದರಿಂದ ಮುಖೇಶ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದರು. ಈ ಎಲ್ಲ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ದೂರು ದಾಖಲಿಸಿಕೊಂಡಿರುವ ಪೊಲೀಸರು ಸುಲೇಮಾನ್, ಷಹನವಾಜ್, ರೋಹಿತ್, ಡ್ಯಾನಿಷ್, ತರುಣ್ ಅಲಿಯಾಸ್ ದಡಿಯಾ ಮತ್ತು ಇನ್ನೊಬ್ಬ ವ್ಯಕ್ತಿಯನ್ನು ಬಂಧಿಸಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ