Site icon Vistara News

Hanuman Chalisa: ನಗರ್ತಪೇಟೆ ಹಲ್ಲೆ ಕೇಸ್‌; ರಾಜ್ಯದಲ್ಲಿ ಹೆಚ್ಚಿದ ಹಿಂದೂ ವಿರೋಧಿ ನಡೆ: ಪ್ರಲ್ಹಾದ್‌ ಜೋಶಿ ಆಕ್ರೋಶ

Neha Murder Case How can a mobile photo be leaked when accused Fayaz is in jail

ಹುಬ್ಬಳ್ಳಿ: ರಾಜ್ಯದಲ್ಲಿ ಈಗ ಹಿಂದೂ ವಿರೋಧಿ ಮತ್ತು ದೇಶ ವಿರೋಧಿ ನಡೆ ತೀವ್ರವಾಗಿದ್ದು, ಕಾಂಗ್ರೆಸ್ ಸರ್ಕಾರವೇ ಇದಕ್ಕೆಲ್ಲ ಕಾರಣ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಕಿಡಿಕಾರಿದ್ದಾರೆ. ಬೆಂಗಳೂರಿನ ನಗರ್ತಪೇಟೆಯಲ್ಲಿನ ಮೊಬೈಲ್‌ ಅಂಗಡಿಯೊಂದರಲ್ಲಿ ಹನುಮಾನ್‌ ಚಾಲೀಸಾ (Hanuman Chalisa) ಹಾಕಿದ್ದಕ್ಕೆ ಅಂಗಡಿಯಾತನ ಮೇಲೆ ಹಲ್ಲೆ (Nagarthapet assault case) ಮಾಡಿದ ಕೃತ್ಯವನ್ನು ಕಟುವಾಗಿ ಖಂಡಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರಲ್ಹಾದ್‌ ಜೋಶಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ಏಕೆ ಹೀಗೆ ಹಿಂದೂ ವಿರೋಧಿ ಕೃತ್ಯಗಳು ಘಟಿಸುತ್ತಿವೆ? ಇದಕ್ಕೆ ಕಾಂಗ್ರೆಸ್ ಸರ್ಕಾರದ ಮೃದು ಧೋರಣೆಯೇ ಕಾರಣ ಎಂದು ಖಂಡಿಸಿದರು.

ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಆಯ್ತು ಎಫ್‌ಎಸ್‌ಎಲ್ ವರದಿ ಬಂದರೂ ಕ್ರಮವಿಲ್ಲ. ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಆದರೂ ಸರ್ಕಾರ ಎಚ್ಚೆತ್ತುಕೊಂಡಿಲ್ಲ. ಈಗ ಹನುಮಾನ್ ಚಾಲೀಸಾ ಹಾಕಿದ್ದಕ್ಕೆ ಹಲ್ಲೆ ನಡೆದಿದೆ. ಅಂದರೆ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲವಾಗಿದೆ! ಎಂದು ಸಚಿವ ಜೋಶಿ ಸರ್ಕಾರದ ವಿರುದ್ಧ ಹರಿಹಾಯ್ದರು.

ದುಷ್ಕರ್ಮಿಗಳಿಗೆ ಬೆಂಬಲ

ಪಾಕಿಸ್ತಾನ ಜಿಂದಾಬಾದ್ ಮತ್ತು ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ಎಷ್ಟು ಜನರನ್ನು ಬಂಧಿಸಲಾಗಿದೆ? ಇಂಥ ಅಹಿತಕರ ಘಟನೆಗಳ ವಿರುದ್ಧ ಏನು ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂಬುದನ್ನು ರಾಜ್ಯ ಸರ್ಕಾರ ಈಗಲೂ ಬಾಯಿ ಬಿಡುತ್ತಿಲ್ಲ. ಇದರಿಂದ ದುಷ್ಕರ್ಮಿಗಳಿಗೆ ಬೆಂಬಲ ಸಿಕ್ಕಂತಾಗಿದೆ. ಸರ್ಕಾರದ ಈ ನಡೆಯನ್ನು ಅತ್ಯುಗ್ರವಾಗಿ ಖಂಡಿಸುತ್ತೇನೆ ಎಂದು ಪ್ರಲ್ಹಾದ್‌ ಜೋಶಿ ಹೇಳಿದರು.

ಸರ್ಕಾರದ ನಡೆಯೇ ಹಿಂದೂ ವಿರೋಧಿಗಳಿಗೆ ಧೈರ್ಯ

ಪಾಕಿಸ್ತಾನ ಜಿಂದಾಬಾದ್ ಘೋಷಣೆಕೋರರನ್ನು ಸಂರಕ್ಷಿಸುವ ಕೆಲಸ ಈ ಸರ್ಕಾರದಿಂದ ನಡೆಯಿತು. ರಾಜ್ಯಸಭಾ ಸದಸ್ಯ ನಾಸಿರ್ ಹುಸೇನ್ ಸಹ ಅಂದು ಮೀಡಿಯದವರಿಗೆ ಬಾಯಿಗೆ ಬಂದ ಹಾಗೆ ಬೈದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಾ ಇದನ್ನು ಸಮರ್ಥಿಸಿಕೊಂಡಿದ್ದರು. ಇದೆಲ್ಲವೂ ಈಗ ಹಿಂದೂ ವಿರೋಧಿಗಳಿಗೆ ಧೈರ್ಯ ತಂದುಕೊಟ್ಟಿದೆ ಎಂದು ಪ್ರಲ್ಹಾದ್‌ ಜೋಶಿ ಆಕ್ರೋಶ ವ್ಯಕ್ತಪಡಿಸಿದರು.

ನಾವೇನೇ ಮಾಡಿದರೂ ರಕ್ಷಣೆಗೆ ಸರ್ಕಾರವೇ ಇದೆ ಎಂಬ ಭಾವನೆ ಆರೋಪಿಗಳಲ್ಲಿದೆ. ಹೀಗಾಗಿ ಈಗ ಹನುಮಾನ್ ಚಾಲೀಸ್ ಹಾಕುವವರ ಮೇಲೆ ಹಲ್ಲೆ ಮಾಡುವ ಮಟ್ಟಕ್ಕೆ ಹಿಂದೂ ವಿರೋಧಿಗಳು ಬಲಿಷ್ಠ ಮನಸ್ಥಿತಿ ತಲುಪಿದ್ದಾರೆ. ಇದಕ್ಕೆಲ್ಲ ರಾಜ್ಯ ಸರ್ಕಾರವೇ ಪ್ರಮುಖ ಕಾರಣ ಎಂದು ಸಚಿವ ಜೋಶಿ ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಆಶ್ರಯ

ಹಿಂದೂ ವಿರೋಧಿ ನಡೆ ಅನುಸರಿಸುತ್ತಿರುವ ಕಿಡಿಗೇಡಿಗಳಿಗೆ ಕಾಂಗ್ರೆಸ್ ಸರ್ಕಾರ ಆಶ್ರಯ ಕೊಡುತ್ತಿದೆ. ಇದೇ ರೀತಿ ತುಷ್ಟೀಕರಣದ ರಾಜಕಾರಣ ಮಾಡಿದರೆ ಜನರೇ ತಕ್ಕ ಉತ್ತರ ಕೊಡಲಿದ್ದಾರೆ ಎಂದು ಸಚಿವ ಪ್ರಲ್ಹಾದ್‌ ಜೋಶಿ ಎಚ್ಚರಿಸಿದರು.

ಇದನ್ನೂ ಓದಿ: Hanuman Chalisa: ನಗರ್ತಪೇಟೆ ಹಲ್ಲೆ ಕೇಸ್‌; ತೇಜಸ್ವಿ ಸೂರ್ಯ ವಿರುದ್ಧ ಕಾಂಗ್ರೆಸ್‌ ದೂರು!

ಏನಿದು ಹಲ್ಲೆ ಪ್ರಕರಣ?

ಭಾನುವಾರ ಸಾಯಂಕಾಲ 6.15ರ ಸುಮಾರಿಗೆ ಐದು ಮಂದಿ ಬೆಂಗಳೂರಿನ ನಗರ್ತಪೇಟೆಯಲ್ಲಿನ ಮೊಬೈಲ್‌ ಅಂಗಡಿಗೆ ಬಂದಿದ್ದಾರೆ. ಅಲ್ಲಿ ಹಿಂದು ದೇವರ ಭಜನೆ ಹಾಕಿದ್ದರಿಂದ ಬಂದ್‌ ಮಾಡಲು ಹೇಳಿದ್ದಾರೆ. ಅದಕ್ಕೆ ಅಂಗಡಿಯಾತ ಮುಖೇಶ್‌, ನನ್ನ ಅಂಗಡಿ ನನ್ನ ಇಷ್ಟ ಎಂದು ವಿರೋಧ ಮಾಡಿದ್ದಾರೆ. ಇದರಿಂದ ಸಿಟ್ಟಿಗೆದ್ದ ಯುವಕರ ಗುಂಪು ಮುಖೇಶ್‌ ಮೇಲೆ ದಾಳಿ ಮಾಡಿದ್ದಾರೆ. ಮುಖೇಶ್‌ ಸಹ ಆವೇಶದಿಂದ ಪ್ರತಿದಾಳಿ ಮಾಡಿದ್ದಾರೆ. ಆದರೆ, ಆರೋಪಿಗಳು ನಾಲ್ಕೈದು ಮಂದಿ ಇದ್ದಿದ್ದರಿಂದ ಮುಖೇಶ್‌ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಈ ಎಲ್ಲ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಪ್ರಕರಣ ಸಂಬಂಧ ದೂರು ದಾಖಲಾಗಿದ್ದು, ಈವರೆಗೆ ಒಟ್ಟು ಐದು ಜನ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಇನ್ನೊಬ್ಬ ಆರೋಪಿಯನ್ನು ಬಂಧಿಸುವುದಾಗಿ ಭರವಸೆ ನೀಡಲಾಗಿದೆ.

Exit mobile version