Site icon Vistara News

Hanuman Chalisa: ನಗರ್ತಪೇಟೆ ಉದ್ವಿಗ್ನ; ಜೈಶ್ರೀರಾಮ್‌ ಕೂಗಿದ ಹಿಂದು ಕಾರ್ಯಕರ್ತರು, ಶೋಭಾ ಕರಂದ್ಲಾಜೆ ಪೊಲೀಸ್‌ ವಶಕ್ಕೆ

Nagarthpet protest by BJP

ಬೆಂಗಳೂರು: ನಗರ್ತಪೇಟೆಯಲ್ಲಿನ ಮೊಬೈಲ್‌ ಅಂಗಡಿಯೊಂದರಲ್ಲಿ ಹನುಮಾನ್‌ ಚಾಲೀಸಾ (Hanuman Chalisa) ಹಾಕಿದ್ದಕ್ಕೆ ಅಂಗಡಿಯಾತನ ಮೇಲೆ ಹಲ್ಲೆ (assault case) ನಡೆಸಿದ ಪ್ರಕರಣ ಈಗ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಹಲ್ಲೆಗೊಳಗಾದ ವ್ಯಕ್ತಿ ಬೆಂಬಲಕ್ಕೆ ಬಿಜೆಪಿ ಹಾಗೂ ಹಿಂದುಪರ ಸಂಘಟನೆಗಳ ಕಾರ್ಯಕರ್ತರು ನಿಂತಿದ್ದಾರೆ. ಸಂಸದ ತೇಜಸ್ವಿ ಸೂರ್ಯ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ಹಲವರು ಸರ್ಕಾರದ ವಿರುದ್ಧ ಪ್ರತಿಭಟನೆಗೆ ಸಜ್ಜಾಗಿದ್ದಾರೆ. ಈ ಸಂಬಂಧ ನಗರ್ತಪೇಟೆಯ ಅಂಗಡಿ ಮುಂದಿನಿಂದಲೇ ಜೈ ಶ್ರೀರಾಮ್‌ ಘೋಷಣೆ ಹಾಗೂ ಹನುಮಾನ್‌ ಚಾಲೀಸಾ ಪಠಣೆಗೆ ಮುಂದಾಗಲಾಗಿತ್ತು. ಆದರೆ, ಇದಕ್ಕೆ ಅವಕಾಶ ಕೊಡದ ಪೊಲೀಸರು, ಪ್ರತಿಭಟನೆಗೆ ಬರುತ್ತಿದ್ದ ಕಾರ್ಯಕರ್ತರನ್ನು ಒಬ್ಬೊಬ್ಬರನ್ನಾಗಿಯೇ ಬಂಧಿಸುತ್ತಿದ್ದಾರೆ. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಶೋಭಾ ಕರಂದ್ಲಾಜೆ ಅವರನ್ನೂ ವಶಕ್ಕೆ ಪಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಈಗ ಘಟನಾ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಪ್ರತಿಭಟನೆ ಕಾವು ಜೋರಾಗುತ್ತಿದಂತೆ ಹೆಚ್ಚಿನ ಭದ್ರತೆಯನ್ನು ಒದಗಿಸಲಾಗುತ್ತಿದೆ. ಸ್ಥಳಕ್ಕೆ ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡಲಾಗುತ್ತಿದೆ. ಆದರೆ, ನಗರ್ತಪೇಟೆಗೆ ತಂಡೋಪ ತಂಡವಾಗಿ ಹಿಂದುಪರ ಸಂಘಟನೆಗಳ ಕಾರ್ಯಕರ್ತರು ಹರಿದು ಬರುತ್ತಲೇ ಇದ್ದಾರೆ. ಜೈ ಶ್ರೀರಾಮ್‌ ಘೋಷಣೆಯನ್ನು ಮೊಳಗಿಸುತ್ತಲೇ ಇದ್ದಾರೆ. ಹೀಗಾಗಿ ಅಲ್ಲಿ ಪ್ರತಿಭಟನೆ ಕಾವು ಜೋರಾಗಿಯೇ ಇದೆ.

Hanuman Chalisa Nagarthapet tense Shobha Karandlaje and Hindu activists are detained and Suresh kumar visit place

ಸಾವಿರಾರು ಸಂಖ್ಯೆಯಲ್ಲಿ ಸೇರಿದ ಹಿಂದು ಕಾರ್ಯಕರ್ತರು

ಒಂದು ಕಡೆ ಪೊಲೀಸರು ಪ್ರತಿಭಟನಾ ನಿರತರನ್ನು ಬಂಧಿಸುತ್ತಿದ್ದರೆ ಮತ್ತೊಂದು ಕಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಮತ್ತಷ್ಟು ಜನ ಬರುತ್ತಲೇ ಇರುವುದು ಪೊಲೀಸರನ್ನು ಹೈರಾಣಾಗಿಸಿದೆ. ಸ್ಥಳದಲ್ಲಿ ಜೈಶ್ರೀರಾಮ್‌ ಘೋಷಣೆ ಮೊಳಗುತ್ತಿದೆ. ಅಲ್ಲದೆ, “ಬೇಕೇ ಬೇಕು ನ್ಯಾಯ ಬೇಕು ಅಂತ ಘೋಷಣೆ ಕೂಗಲಾಗುತ್ತಿದೆ. ಹೀಗಾಗಿ ಪ್ರತಿಭಟನೆಯನ್ನು ಹತ್ತಿಕ್ಕಲಾಗುತ್ತಿದ್ದರೂ ಮತ್ತೆ ಪ್ರತಿಭಟನೆಯನ್ನು ಪ್ರಾರಂಭಿಸಲಾಗಿದೆ.

Hanuman Chalisa Nagarthapet tense Shobha Karandlaje and Hindu activists are detained and Suresh kumar visit place

ರಾಜ್ಯ ಸರ್ಕಾರದ ವಿರುದ್ಧ ಕಿಡಿ

ಈ ವೇಳೆ ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಡೆಯಲಿದೆ. ಹಿಂದುಗಳಿಗೆ ಈಗಿನ ಸರ್ಕಾರ ಅನ್ಯಾಯ ಮಾಡುತ್ತಲೇ ಬರುತ್ತಿದೆ ಎಂದು ಕಿಡಿಕಾರಿದ್ದಾರೆ. ಇದೇ ವೇಳೆ ಸ್ಥಳದಲ್ಲಿ ಹನುಮ ಧ್ವಜವನ್ನು ಹಾರಿಸಲಾಗಿದೆ. ಹನುಮಧ್ವಜ ಹಾರಿಸುತ್ತಿದ್ದಂತೆ ಹಿಂದು ಕಾರ್ಯಕರ್ತರು ಜೋರಾಗಿ ಶಿಳ್ಳೆ, ಚಪ್ಪಾಳೆ ಹೊಡೆದು ಜೈ ಶ್ರೀರಾಮ್ ಘೋಷಣೆ ಕೂಗಿದ್ದಾರೆ.

Hanuman Chalisa Nagarthapet tense Shobha Karandlaje and Hindu activists are detained and Suresh kumar visit place

ಅಂಗಡಿಗಳು ಬಂದ್!‌

ಪ್ರತಿಭಟನಾ ಸ್ಥಳಕ್ಕೆ ನೂರಾರು ಜನರ ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಆಗಮಿಸುತ್ತಲೇ ಇದ್ದಾರೆ. ಹೀಗಾಗಿ ಸ್ಥಳದಲ್ಲಿ ಬಿಗುವಿನ ವಾತಾವರಣ ಮುಂದುವರಿದಿದೆ. ಹೀಗಾಗಿ ಘಟನಾ ಸ್ಥಳದ ಸುತ್ತಲಿನ ಎಲ್ಲ ಅಂಗಡಿಗಳನ್ನು ಬಂದ್ ಮಾಡಲಾಗಿದೆ. ಪ್ರತಿಭಟನಾಕಾರರು ಸ್ಥಳದಲ್ಲೇ ಕುಳಿತು ಜೈಶ್ರೀರಾಮ್‌ ಭಜನೆಯನ್ನು ಮಾಡುತ್ತಿದ್ದಾರೆ. ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಅವರ ಪರವೂ ಘೋಷಣೆಗಳು ಮೊಳಗಿವೆ. “ಮೋದಿ.. ಮೋದಿ” ಎಂದು ಘೋಷಣೆ ಕೂಗಿದ್ದಾರೆ. ಈ ವೇಳೆ ಕೆಲವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆಗ ಪೊಲೀಸರ ಜತೆಗೆ ತಳ್ಳಾಟ ನೂಕಾಟ ನಡೆದಿದೆ. ಪ್ರತಿಭಟನಾ ನಿರತರನ್ನು ವಶಕ್ಕೆ ಪಡೆಯುತ್ತಿರುವ ಪೊಲೀಸರು ಗೂಡ್ಸ್‌ ವಾಹನದಲ್ಲಿ ತುಂಬಿಕೊಂಡು ಹೋಗುತ್ತಿದ್ದಾರೆ.

ಹಿಂದು ನಾವೆಲ್ಲ ಒಂದು ಘೋಷಣೆ

ಹಿಂದು ಪರ ಸಂಘಟನೆಗಳು, ಹಿಂದು ವ್ಯಾಪಾರಸ್ಥರು ಸ್ಥಳದಲ್ಲಿ ಭಾರಿ ಸಂಖ್ಯೆಯಲ್ಲಿ ಸೇರಿದ್ದಾರೆ. ಎಲ್ಲರೂ ಜೈ ಶ್ರೀರಾಮ್ ಘೋಷಣೆಯನ್ನು ಕೂಗುತ್ತಿದ್ದಾರೆ. “ಹಿಂದು ನಾವೆಲ್ಲ ಒಂದು” ಎಂದು ಘೋಷಣೆಗಳನ್ನು ಕೂಗಿದ್ದಾರೆ.

Hanuman Chalisa Nagarthapet tense Shobha Karandlaje and Hindu activists are detained and Suresh kumar visit place

ರಾಜ್ಯ ಸರ್ಕಾರದ ವಿರುದ್ಧ ಸುರೇಶ್‌ ಕುಮಾರ್‌ ಕಿಡಿ

ಘಟನಾ ಸ್ಥಳಕ್ಕೆ ಶಾಸಕ ಸುರೇಶ್‌ ಕುಮಾರ್‌ ಭೇಟಿ ನೀಡಿದ್ದು, ಪೊಲೀಸರ ಕ್ರಮವನ್ನು ಖಂಡಿಸಿದ್ದಾರೆ. ಅಸಹನೆ ಅನ್ನೋದು ಈ ಮಟ್ಟಕ್ಕೆ ಹೋಗಬಾರದು. ಒಟ್ಟಾರೆಯಾಗಿ ಸಮಾಜದ ಶಾಂತಿ ಕದಡಿದಂತಾಗಿದೆ. ಇದೊಂದು ನೆಪವೆಂಬಂತೆ ನಮಗೆ ಅನ್ನಿಸುತ್ತಿದೆ. ಈ ಕೆಲಸವನ್ನು ಉದ್ದೇಶಪೂರ್ವಕವಾಗಿ ಮಾಡಿದಂತಿದೆ. ಹಲ್ಲೆ ಮಾಡಿದವರಿಗೆ ಸೂಕ್ತ ಶಿಕ್ಷೆ ಆಗಬೇಕು. ಆ ಸಮಯದಲ್ಲಿ ಆತನ ರಕ್ಷಣೆಗೂ ಯಾರೂ ಇರಲಿಲ್ಲ. ಎಲ್ಲ ಸಮುದಾಯದವರು ಈ ವಿಷಯವಾಗಿ ಮುಂದೆ ಬರಬೇಕು. ಈ ರೀತಿಯಾಗಿ ನಡೆಯುತ್ತಿರುವ ಸರಣಿ ಪ್ರಕರಣಗಳ ಬಗ್ಗೆ ಪೊಲೀಸ್ ಇಲಾಖೆಯವರು ಹೆಚ್ಚು ಕಾರ್ಯಪ್ರವೃತ್ತರಾಗಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ: ಹನುಮಾನ್‌ ಚಾಲೀಸಾ ಹಾಕಿದ್ದಕ್ಕೆ ಹಲ್ಲೆ ಕೇಸ್‌; ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ವಿಜಯೇಂದ್ರ ಆಗ್ರಹ

ಏನಿದು ಹಲ್ಲೆ ಪ್ರಕರಣ?

ಭಾನುವಾರ ಸಾಯಂಕಾಲ 6.15ರ ಸುಮಾರಿಗೆ ಐದು ಮಂದಿ ನಗರ್ತಪೇಟೆಯಲ್ಲಿನ ಮೊಬೈಲ್‌ ಅಂಗಡಿಗೆ ಬಂದಿದ್ದಾರೆ. ಅಲ್ಲಿ ಹಿಂದು ದೇವರ ಭಜನೆ ಹಾಕಿದ್ದರಿಂದ ಬಂದ್‌ ಮಾಡಲು ಹೇಳಿದ್ದಾರೆ. ಅದಕ್ಕೆ ಅಂಗಡಿಯಾತ ಮುಖೇಶ್‌, ನನ್ನ ಅಂಗಡಿ ನನ್ನ ಇಷ್ಟ ಎಂದು ವಿರೋಧ ಮಾಡಿದ್ದಾರೆ. ಇದರಿಂದ ಸಿಟ್ಟಿಗೆದ್ದ ಯುವಕರ ಗುಂಪು ಮುಖೇಶ್‌ ಮೇಲೆ ದಾಳಿ ಮಾಡಿದ್ದಾರೆ. ಮುಖೇಶ್‌ ಸಹ ಆವೇಶದಿಂದ ಪ್ರತಿದಾಳಿ ಮಾಡಿದ್ದಾರೆ. ಆದರೆ, ಆರೋಪಿಗಳು ನಾಲ್ಕೈದು ಮಂದಿ ಇದ್ದಿದ್ದರಿಂದ ಮುಖೇಶ್‌ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಈ ಎಲ್ಲ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಪ್ರಕರಣ ಸಂಬಂಧ ದೂರು ದಾಖಲಾಗಿದ್ದು, ಈವರೆಗೆ ಒಟ್ಟು ಐದು ಜನ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

Exit mobile version