ಬೆಂಗಳೂರು: ಬೆಂಗಳೂರಿನಂಥ ಮಹಾನಗರದಲ್ಲಿ ಯಾರನ್ನು ನಂಬಬೇಕು, ಯಾರನ್ನು ನಂಬಬಾರದು ಎಂದು ಹೇಳುವುದೇ ಕಷ್ಟ. ಪಾಪ.. ಫುಡ್ ಡೆಲಿವರಿ ಬಾಯ್‌ಗಳು (Food Delivery Boy) ಸಕಾಲದಲ್ಲಿ ಆಹಾರ ತಲುಪಿಸಲು ತುಂಬಾ ಕಷ್ಟಪಡುತ್ತಾರೆ ಎಂದೆಲ್ಲ ಕನಿಕರ ತೋರಿದರೆ ಅವರಲ್ಲಿ ಕೆಲವರು ಕಿರಾತಕರಂತೆ ವರ್ತಿಸುವುದೂ ಇದೆ. ಬೆಂಗಳೂರಿನಲ್ಲಿ (Bangalore News) ಮಾರ್ಚ್ 17ರಂದು ಇಂಥಹುದೇ ಘಟನೆ ನಡೆದಿದೆ. ಬಿಸಿಲಿಗೆ ಬಾಯಾರಿದ್ದಾನೆ ಎಂಬ ಕಾರಣಕ್ಕೆ ನೀರು ಕೊಟ್ಟಿದ್ದಕ್ಕೆ (Delivery boy Asked for Water) ಆತ ಆ ಯುವತಿಯ ಕೈ ಹಿಡಿದೆಳೆದು (Harassment to Girl) ಲೈಂಗಿಕ ಕಿರುಕುಳ (Harassment Case) ನೀಡಿದ್ದಾನೆ.
ಈ ಘಟನೆ ನಡೆದಿರುವುದು ಬೆಂಗಳೂರಿನ ಎಇಸಿಎಸ್ ಲೇಔಟ್‌ನಲ್ಲಿ. ಅಲ್ಲಿನ ಮನೆಯೊಂದಕ್ಕೆ ಫುಡ್ ಡೆಲಿವರಿಗೆ ಬಂದಿದ್ದ ಯುವಕ ಸುಭಗನಂತೆ ವರ್ತಿಸಿ ಕೊನೆಗೆ ತನ್ನ ನಿಜ ಬುದ್ಧಿ ಬಯಲು ಮಾಡಿದ್ದಾನೆ. 30 ವರ್ಷದ ಯುವತಿಯ ಕೈ ಹಿಡಿದು ಎಳೆದು ಕಿರುಕುಳ ನೀಡಿದ್ದಾನೆ. ಈ ವಿಕೃತ ಫುಡ್ ಡೆಲಿವರಿ ಬಾಯ್ ಹೆಸರು ಆಕಾಶ್ ಬಿ.
ಇದನ್ನೂ ಓದಿ : POCSO Case: ನಾಲ್ಕು ವರ್ಷದ ಬಾಲಕಿ ಮೇಲೆ ದೌರ್ಜನ್ಯ; ಶಿರಸಿಯಲ್ಲಿ ಯುವಕನ ಬಂಧನ
ಆಗಿದ್ದೇನು?
ಎಇಸಿಎಸ್ ಲೇಔಟ್‌ನಲ್ಲಿ ವಾಸಿಸುತ್ತಿರುವ ಯುವತಿಯೊಬ್ಬರು ಮಾರ್ಚ್ 17ರಂದು ಸಂಜೆ ಫುಡ್ ಡೆಲಿವರಿಗೆ ಆರ್ಡರ್ ಮಾಡಿದ್ದಾರೆ. ಸಂಜೆ 6.30ರ ಹೊತ್ತಿಗೆ ಆಕಾಶ್ ಬಿ ಎಂಬಾತ ಫುಡ್ ಡೆಲಿವರಿಗೆ ಬಂದಿದ್ದ. ಯುವತಿ ಬಾಗಿಲು ತೆರೆದು ಫುಡ್ ರಿಸೀವ್ ಮಾಡಿದ್ದರು. ಹಾಗೆ ಪೊಟ್ಟಣ ಕೊಡುತ್ತಿದ್ದಂತೆಯೇ ಈ ಯುವಕ ʻತುಂಬ ಅರ್ಜೆಂಟಾಗಿದೆ. ಒಮ್ಮೆ ನಿಮ್ಮ ವಾಶ್ ರೂಂ ಉಪಯೋಗಿಸಬಹುದಾ ಎಂದು ಕೇಳಿದ್ದಾನೆ. ಬದುಕಿನ ಕಷ್ಟಗಳು, ಫುಡ್ ಡೆಲಿವರಿ ಬಾಯ್‌ಗಳು ಎದುರಿಸುತ್ತಿರುವ ಸಮಸ್ಯೆ ಗಳನ್ನು ಕೇ:ಳಿ ತಿಳಿದುಕೊಂಡಿದ್ದ ಆಕೆ ಒಳಗೆ ಬಂದು ವಾಶ್ ರೂಮ್ ಬಳಸಲು ಅನುವು ಮಾಡಿಕೊಟ್ಟಿದ್ದರು.
ವಾಶ್ ರೂಂ ಉಪಯೋಗಿಸಿದ ಬೆನ್ನಿಗೇ ಹೊರಗೆ ಬಂದ ಯುವಕ ನೀರು ಕೊಡಬಹುದಾ ಎಂದು ಕೇಳಿದ್ದಾನೆ. ಯುವತಿ ಅದಕ್ಕೂ ಒಪ್ಪಿದ್ದಾರೆ. ಆದರೆ, ಯುವತಿ ನೀರು ತರಲು ಹೋದಾಗ ಯುವಕ ಆಕೆಯ ಹಿಂದೆ ಹೋಗಿ ಕೈಹಿಡಿದು ಎಳೆದು ದುರ್ವರ್ತನೆ ತೋರಿದ್ದಾನೆ. ಆಕೆ ಕೂಡಲೇ ಬೊಬ್ಬೆ ಹೊಡೆದು, ಆತನ ಕೆನ್ನೆಗೆ ಬಾರಿಸಿ ತಪ್ಪಿಸಿಕೊಂಡಿದ್ದಾಳೆ.
ಬಳಿಕ ಆತನ ವಿರುದ್ಧ ಯುವತಿ ಎಚ್ಎಎಲ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 354 a ಅಡಿ ಎಫ್ ಐ ಆರ್ ದಾಖಲಿಸಿಕೊಂಡಿದ್ದಾರೆ.
ಡೆಲಿವರಿ ಬಾಯ್‌ಗಳ ಅವಾಂತರ ಇದೇ ಮೊದಲಲ್ಲ
ನಿಜವೆಂದರೆ ಡೆಲಿವರಿ ಬಾಯ್‌ಗಳು ಈ ರೀತಿ ಕೆಟ್ಟದಾಗಿ ನಡೆದುಕೊಳ್ಳುವುದು ಇದು ಮೊದಲೇನಲ್ಲ. ವರ್ಷದ ಹಿಂದೆ ಡೆಲಿವರಿ ಬಾಯ್ ಒಬ್ಬ ತಾನು ಫುಡ್ ಡೆಲಿವರಿ ಮಾಡಿದ್ದ ಮನೆಯ ಯುವತಿಗೆ ರಾತ್ರಿ ಅಶ್ಲೀಲ ಮೆಸೇಜ್ ಮಾಡಿ ಕಿರುಕುಳ ನೀಡಿದ್ದ.
ತಾನು ಫುಡ್ ರವಾನೆ ಮಾಡಿದ ಯುವತಿಯ ನಂಬರ್ ಇಟ್ಟುಕೊಂಡ ಯುವ ರಾತ್ರಿ ವೇಳೆ ಫ್ರೆಂಡ್‌ಷಿಪ್ ಹೆಸರಿನಲ್ಲಿ ಮೆಸೇಜ್ ಮಾಡಲು ಶುರು ಮಾಡಿದ್ದಾನೆ. ಬಳಿಕ ಅಶ್ಲೀಲವಾಗಿ ಮಾತನಾಡಲು ಆರಂಭಿಸಿದ್ದ. ಕೊನೆಗೆ ಯುವತಿ ಪೊಲೀಸರಿಗೆ ದೂರು ನೀಡಿ ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಾಡಲಾಗಿತ್ತು. ಯುವತಿ ತನ್ನ ಪರಿಚಿತರೊಬ್ಬರಿಗೆ ವಿಷಯ ತಿಳಿಸಿದಾಗ ಅವರು ಪೊಲೀಸ್ ಕಮಿಷನರ್ ಅವರನ್ನು ಟ್ಯಾಗ್ ಮಾಡಿ ದೂರು ನೀಡಿದ್ದರು.
ಯಾರನ್ನೂ ಮನೆಯೊಳಗೆ ಬಿಟ್ಟುಕೊಳ್ಳಬೇಡಿ
- ಯಾವ ಕಾರಣಕ್ಕೂ ಡೆಲಿವರಿ ಬಾಯ್‌ಗಳು ಸೇರಿದಂತೆ ಅಪರಿಚಿತರನ್ನು ಮನೆಯೊಳಗೆ ಸೇರಿಸಿಕೊಳ್ಳಬೇಡಿ. ಯಾವ ಕರುಣೆಯನ್ನೂ ತೋರಿಸಬೇಡಿ.
- ನೀರು ಬೇಕು ಎಂದೇನಾದರೂ ಕೇಳಿದರೆ ಹೊರಗಡೆಯೇ ನಿಲ್ಲಿಸಿ, ಬಾಗಿಲು ಹಾಕಿಕೊಂಡು ಬಳಿಕ ಹೊರಗಡೆಯೇ ನೀರು ಕೊಡಿ.
- ಫುಡ್ ಡೆಲಿವರಿ ಬಾಯ್‌ಗಳಿಗೆ ಸ್ಥಳೀಯವಾಗಿರುವ ಶೌಚಾಲಯ ವ್ಯವಸ್ಥೆಯ ಮಾಹಿತಿ ಇರುತ್ತದೆ. ಹೀಗಾಗಿ ಯಾರದೋ ಮನೆಯೊಳಗೆ ಹೋಗುವ ಅವಶ್ಯಕತೆ ಇರುವುದಿಲ್ಲ.
- ಕೆಲವೊಂದು ಸಂದರ್ಭದಲ್ಲಿ ಫುಡ್‌ಗಳನ್ನು ಕೈಯಾರೆ ಸ್ವೀಕರಿಸಬೇಕಾದ ಅವಶ್ಯಕತೆಯೂ ಇರುವುದಿಲ್ಲ. ನಿರ್ದಿಷ್ಟವಾದ ಜಾಗದಲ್ಲಿ ಇಟ್ಟು ಹೋಗಿ, ಇಲ್ಲವೇ ಸೆಕ್ಯೂರಿಟಿಯವರ ಕೈಯಲ್ಲಿ ಕೊಟ್ಟು ಹೋಗಿ ಎಂದು ಹೇಳಿದರೂ ನಡೆಯುತ್ತದೆ.
- ಒಂದು ವೇಳೆ ಫುಡ್ ಡೆಲಿವರಿ ತೆಗೆದುಕೊಳ್ಳುವಾಗ ಮನಸಿನಲ್ಲಿ ಆತಂಕವಿದ್ದರೆ ಕೇವಲ ಬಾಗಿಲಿನಲ್ಲೇ ತೆಗೆದುಕೊಳ್ಳಬೇಕು ಎಂದೇನಿಲ್ಲ. ಹೊರಗಡೆ ವಿಶಾಲ ಜಾಗದಲ್ಲಿ ತೆಗೆದುಕೊಳ್ಳಬಹುದು.