Site icon Vistara News

HD Kumaraswamy : ಅವನಿಗೆ ಭಾಷೆ ಬರುತ್ತಾ? ; ಡಿ.ಕೆ. ಶಿವಕುಮಾರ್‌ ವಿರುದ್ಧ ಕುಮಾರಸ್ವಾಮಿ ಆಕ್ರೋಶ

DK Shivakumar and HD Kumaraswamy

ಬೆಂಗಳೂರು: ʻಅವನಿಗೆ ಕನ್ನಡ ಭಾಷೆ ಗೊತ್ತಾ? ನಾನು ಹೇಳಿದ್ದು ಜೆಡಿಎಸ್‌ ಸರ್ಕಾರ (JDS Government) ಅಸ್ತಿತ್ವಕ್ಕೆ ಬಂದರೆ ಸರ್ಕಾರ ಪಂಚರತ್ನ ಕಾರ್ಯಕ್ರಮ (Pancharatna Programme) ಜಾರಿ ಮಾಡುತ್ತದೆ. ಜಾರಿ ಮಾಡದೆ ಇದ್ದರೆ ಪಕ್ಷ ವಿಸರ್ಜನೆ (Party Dissolution) ಮಾಡ್ತೀನಿ, ರಾಜಕೀಯ ನಿವೃತ್ತಿ (Political retirement) ಪಡೆಯುತ್ತೇನೆ ಅಂತ ಹೇಳಿದ್ದೀನಿ. ಸರ್ಕಾರ ಬಂತಾ? ನಾನು ಹೇಳಿದ್ದನ್ನು ಅರ್ಥ ಮಾಡಿಕೊಳ್ಳುವಷ್ಟೂ ಭಾಷೆ ಬರಲ್ವಾ?ʼʼ ಎಂದು ಡಿ.ಕೆ. ಶಿವಕುಮಾರ್‌ (DK Shivakumar) ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಚ್‌.ಡಿ ಕುಮಾರಸ್ವಾಮಿ (HD Kumaraswamy).

“ಪೂಜನೀಯ ದೇವೇಗೌಡರೇ, ನಿಮ್ಮ ಸುಪುತ್ರರು ಪದೇಪದೆ ಜೆಡಿಎಸ್ ವಿಸರ್ಜನೆ ಮಾಡುತ್ತೇನೆ, ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಹೇಳಿದರೆ ಪಕ್ಷದ ನಾಯಕರು, ಕಾರ್ಯಕರ್ತರು ಎಲ್ಲಿ ಹೋಗಬೇಕು? ನಿಮ್ಮ ಸುಪುತ್ರರು ದಿನಬೆಳಗಾದರೆ ಸಿದ್ಧಾಂತ ಬದಲಿಸುತ್ತಾರೆ, ಯಾರ ಜೊತೆ ಬೇಕಾದರೂ ಸಂಬಂಧ ಬೆಳೆಸುತ್ತಾರೆ. ಆದರೆ ಸಿದ್ಧಾಂತ ನಂಬಿರುವ ಕಾರ್ಯಕರ್ತರು ಏನಾಗಬೇಕು?” ಎಂದು ಕೆಪಿಸಿಸಿ ಅದ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಜೆಡಿಎಸ್ ವರಿಷ್ಠ ದೇವೇಗೌಡರನ್ನು ಪ್ರಶ್ನಿಸಿದ್ದಕ್ಕೆ ಪ್ರತಿಯಾಗಿ ಕುಮಾರಸ್ವಾಮಿ ಸಿಟ್ಟಿಗೆದ್ದಿದ್ದಾರೆ.

ಕುಮಾರಸ್ವಾಮಿ ಅವರು ಜೆಡಿಎಸ್ ಪಕ್ಷ ವಿಸರ್ಜನೆ ಮಾಡುತ್ತೇನೆ ಎಂದು ಹೇಳಿದ್ದರು ಎಂಬ ಡಿ.ಕೆ. ಶಿವಕುಮಾರ್‌ ಆರೋಪಕ್ಕೆ ಉತ್ತರಿಸಿದ ಅವರು, ʻʻಅವನಿಗೆ ಕನ್ನಡ ಭಾಷೆ ಗೊತ್ತಾ? ನಾನು ಏನು ಹೇಳಿದ್ದೆ ಕಳೆದ ಚುನಾವಣೆಯಲ್ಲಿ? ಪಂಚರತ್ನ ಯೋಜನೆಗಳನ್ನು ಜಾರಿ ಮಾಡಲು ಒಂದು ಅವಧಿ ಅಧಿಕಾರ ನೀಡಿ. ಅಧಿಕಾರ ನೀಡಿದ ಸಂದರ್ಭದಲ್ಲಿ ಪಂಚರತ್ನ ಯೋಜನೆ ಜಾರಿ ಮಾಡದೆ ಇದ್ದರೆ ಪಕ್ಷ ವಿಸರ್ಜನೆ ಮಾಡಿ ರಾಜಕೀಯ ನಿವೃತ್ತಿ ಆಗ್ತೀನಿ ಅಂತ ಹೇಳಿದ್ದೆ. ಸಂಪೂರ್ಣ ಬಹುಮತ ಕೊಟ್ರಾ ಜನ?ʼʼ ಎಂದು ಕೇಳಿದರು.

ʻʻಪಂಚರತ್ನ ಕಾರ್ಯಕ್ರಮ ಜಾರಿ ಮಾಡದೆ ಇದ್ರೆ ಪಕ್ಷ ವಿಸರ್ಜನೆ ಮಾಡ್ತೀನಿ ಅಂತ ಹೇಳಿದ್ದೀನಿ. ಚುನಾವಣೆ ಮುಗಿದ ಮೇಲೆ ಪಕ್ಷ ವಿಸರ್ಜನೆ ಮಾಡ್ತೀನಿ ಅಂತ ಹೇಳಿದ್ದೀನಾ. ಭಾಷೆ ಮೊದಲು ತಿಳಿದುಕೊಳ್ಳೋಕೆ ಹೇಳಿʼʼ ಎಂದು ಎಚ್‌ಡಿಕೆ ಗರಂ ಆದರು.

ನಾನು ಯಾರಿಗೂ ಹೆದರಲ್ಲ ಎಂಬ ಡಿ.ಕೆ. ಶಿವಕುಮಾರ್‌ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ʻʻಅವರನ್ನು ಹೆದರಿಸಲು ಆಗುತ್ತಾ…? ಅವರ ಬಗ್ಗೆ ಜನರಿಗೆ ಗೊತ್ತಿಲ್ವಾ..? ಅವರು ಯಾರಿಗೆ ಹೆದರುತ್ತಾರೆ..? ಯಾವ ಜಾಗಕ್ಕೆ ಬೇಲಿ ಹಾಕ್ತಾರೆ ಗೊತ್ತು ನಮಗೆ..?ʼʼ ಎಂದು ಲೇವಡಿ ಮಾಡಿದರು.

ಇದನ್ನೂ ಓ಼ದಿ: DK Shivakumar : ಪೂಜನೀಯ ದೇವೇಗೌಡರೇ ನಿಮ್ಮ ಮಗನ್‌ ಕಥೆ ಏನು? ; ಮಿಸ್ಟರ್‌ ಡಿಕೆ‌ ಶಿವಕುಮಾರ್ ಹೇಳಿಕೆಗೆ ಕೌಂಟರ್!

ಜಮೀರ್‌, ಇಬ್ರಾಹಿಂ, ಖಾಕಿ ಚಡ್ಡಿ ಬಗ್ಗೆ ಕುಮಾರಸ್ವಾಮಿ ಹೇಳಿದ್ದೇನು?

  1. ಈಗ ನನ್ನಲ್ಲಿ ಯಾವುದನ್ನೂ ಕೇಳಬೇಡಿ. ಪಾರ್ಲಿಮೆಂಟ್ ಚುನಾವಣೆ ಮುಗಿದ ಮೇಲೆ ಇದು ಎಲ್ಲದಕ್ಕೂ ಉತ್ತರ ಕೊಡ್ತೀನಿ
  2. ಸಂಕ್ರಾಂತಿ ನಂತರ ಕಾಂಗ್ರೆಸ್ ಸರ್ಕಾರ ಪತನ ಆಗುತ್ತೆ ಎಂಬ ಮಾಹಿತಿ ಸಿ.ಪಿ. ಯೋಗೇಶ್ವರ್‌ಗೆ ಇರಬಹುದು.
  3. ಸಿ ಎಂ ಇಬ್ರಾಹಿಂ ಅವರನ್ನು ‌ನಾವು ಕಾಂಗ್ರೆಸ್‌ನಿಂದ ಕರೆದುಕೊಂಡು ಹೋಗಿಲ್ಲ. ಅವರೇ ಪಕ್ಷಕ್ಕೆ ಬಂದರು, ಅಧ್ಯಕ್ಷ ಸ್ಥಾನ ಕೊಟ್ಟಿದ್ದೇವೆ.
  4. ನಿಮ್ಮ ತರಾನೇ ಅವನು (ಇಬ್ರಾಹಿಂ) ನಮ್ಮ ಮನೆ ಬಾಗಿಲಿಗೆ ಬಂದಿದ್ದ. ಮನೆಗೆ ಬಂದೋರನ್ನು ಬರಬೇಡ ಅನ್ನೋಕಾಗುತ್ತಾ?
  5. ಜಮೀರ್‌ ಅಹಮದ್‌ ಖಾನ್‌ ಅವರ ಹೇಳಿಕೆಗೆ ನಾನು ಯಾಕ್ ರಿಯಾಕ್ಷನ್ ನೀಡಲಿ..? ಕೊಚ್ಚೆ ಮೇಲೆ ಕಲ್ಲು ಹಾಕಿ ಯಾಕೆ ನನಗೆ ಕೆಸರು ಬಿಳುವ ಹಾಗೆ ಮಾಡ್ಕೋಬೇಕು.
  6. ನಾನು ಖಾಕಿ ಚಡ್ಡಿ ಹಾಕಿದ್ದೆನೋ ಅಥವಾ ಬೇರೆ ಹಾಕ್ತೇವೋ ಅವರಿಗ್ಯಾಕೆ? ಸಚಿವ ಆಗಿದ್ದಾರೆ ಮೊದಲು ಸರ್ಕಾರದ ಕೆಲಸ ಮಾಡೋದಕ್ಕೆ ಹೇಳಿ.
  7. ಸಿದ್ದರಾಮಯ್ಯ ಖಾಕಿ ಚಡ್ಡಿ ಹಾಕಿದ್ದನ್ನು ಅವರ ಪಾರ್ಟಿ ನಾಯಕರೇ ಹೇಳಿದ್ದಾರೆ. ನಾನು ಯಾವ ಬಟ್ಟೆ ಹಾಕಿದ್ದೀನಿ ಅವರಿಗೆ ಯಾಕೆ ಚಿಂತೆ?

Exit mobile version