Site icon Vistara News

HD Kumaraswamy : ಮಿಸ್ಟರ್‌ ಶಿವಕುಮಾರ್‌ ಆಸ್ಪತ್ರೆಗೆ ಹೋಗಿ ಬರ್ತೀನಿ, ಆಮೇಲೆ ನೋಡ್ಕೊತೀನಿ!

HD Kumaraswamy DK Shivakumar11

ಬೆಂಗಳೂರು: ಮಿಸ್ಟರ್‌ ಡಿ.ಕೆ. ಶಿವಕುಮಾರ್‌ (DK Shivakumar) ನನಗೆ ಚುನಾವಣೆ ಮಾಡುವುದು ಬರುವುದಿಲ್ಲ ಎಂದುಕೊಳ್ಳಬೇಡಿ. ಫೀಲ್ಡಿಗೆ ಇಳಿದರೆ ನಿಮಗಿಂತ ಚೆನ್ನಾಗಿ ಚುನಾವಣೆ ಮಾಡಬಲ್ಲೆ. ಆಸ್ಪತ್ರೆಯಿಂದ ನಾನು ವಾಪಸ್‌ ಬರ್ತೀನಿ, ಅದುವರೆಗೂ ನಿಮ್ಮ ಆಟ ನಡೆಯಲಿ ನೋಡೋಣ ಎಂದು ಮಾಜಿ ಸಿಎಂ ಎಚ್‌.ಡಿ‌ ಕುಮಾರಸ್ವಾಮಿ (HD Kumaraswamy) ಅವರು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ನೇರವಾಗಿಯೇ ಸವಾಲು ಹಾಕಿದ್ದಾರೆ.

ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದಲ್ಲಿ (Bengaluru Rural Constituency) ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ (Congress Candidate) ಭಾರಿ ಚುನಾವಣಾ ಅಕ್ರಮ (Electoral Malpractice) ನಡೆಸುತ್ತಿದ್ದಾರೆ. ಕುಕ್ಕರ್‌ ಮತ್ತು ಹಣ ಹಂಚಿಕೆ (Cooker and Money Distribution) ಮಾಡುತ್ತಿದ್ದಾರೆ. ಇದರ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳದಿದ್ದರೆ ತಾವೇ ಕ್ರಮ ಕೈಗೊಳ್ಳಬೇಕಾದೀತು ಎಂದು ಚುನಾವಣಾ ಆಯೋಗಕ್ಕೆ (Election Commission) ಎಚ್ಚರಿಕೆ ನೀಡಲು ಕರೆದಿದ್ದ ಮಾಧ್ಯಮ ಗೋಷ್ಠಿಯಲ್ಲಿ ಡಿ.ಕೆ. ಶಿವಕುಮಾರ್‌ ಅವರಿಗೂ ಸವಾಲು ಹಾಕಿದರು.

ಒಣ ಅನುಕಂಪ ತೋರಿದ ಡಿಕೆಶಿಗೆ ತಿರುಗೇಟು

ಜೆಡಿಎಸ್‌-ಬಿಜೆಪಿ ಮೈತ್ರಿಯ ಬಗ್ಗೆ ಸೋಮವಾರ ನಮ್ಮ ಪಕ್ಷದ ಕೋರ್ ಕಮಿಟಿ ಸದಸ್ಯರು ವ್ಯಕ್ತಪಡಿಸಿದ ಭಾವನೆಗಳನ್ನಷ್ಟೇ ನಾನು ಹೇಳಿದ್ದೇನೆ. ನಮ್ಮ ಪಕ್ಷದಿಂದ 28 ಲೋಕಸಭೆ ಕ್ಷೇತ್ರಗಳಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರು ಒಟ್ಟಾಗಿ ಹೋಗಬೇಕು ಎಂದು ಹೇಳಿದ್ದೆವು. ಆ ಸಭೆಯಲ್ಲಿ ಪ್ರಮುಖವಾಗಿ ಏನೇನು ಚರ್ಚೆ ಆಗಿತ್ತು ಎಂಬುದನ್ನು ಮಾಧ್ಯಮಗಳ ಮೂಲಕ ಹೇಳಿದ್ದೇನೆ. ಅಂದ ಮಾತ್ರಕ್ಕೆ ನಮಗೆ ಬಿಜೆಪಿ ಮೇಲೆ ವಿಶ್ವಾಸ ಹೋಗಿದೆ ಅಂತ ಅಲ್ಲ. ಆರಂಭದಿಂದಲೂ ನಾವು 3 ಕ್ಷೇತ್ರಗಳನ್ನು ಕೇಳಿದ್ದೇವೆ. ಅದನ್ನು ಹೊರತುಪಡಿಸಿದರೆ ಬಿಜೆಪಿಯವರು ನಮ್ಮನ್ನು ಗೌರವಯುತವಾಗಿ ಕಂಡಿದ್ದಾರೆ. ಇದನ್ನೇ ಕಾಂಗ್ರೆಸ್‌ ಪಕ್ಷದ ಸೋಕಾಲ್ಡ್‌ ಟ್ರಬಲ್‌ ಶೂಟರ್‌, ಹಿಂದೆ ನಮ್ಮ ಮೈತ್ರಿ ಸರಕಾರವನ್ನು ತೆಗೆದಿದ್ದವರು ನಮ್ಮ ಕಾರ್ಯಕರ್ತರ ಬಗ್ಗೆ ಅನುಕಂಪದ ಮಾತನ್ನಾಡಿದ್ದಾರೆ. ಯಾವನಿಗೆ ಬೇಕು ಇವರ ಅನುಕಂಪ? ನಮ್ಮ ಕಾರ್ಯಕರ್ತರಿಗೆ ಎಲ್ಲವನ್ನೂ ಎದುರಿಸುವ ಶಕ್ತಿ ಇದೆ ಎಂದು ಡಿ.ಕೆ.ಶಿವಕುಮಾರ್‌ ಅವರನ್ನು ತರಾಟೆಗೆ ತೆಗೆದುಕೊಂಡರು.

ಇದನ್ನೂ ಓದಿ : HD Kumaraswamy : ಕಾಂಗ್ರೆಸ್‌ನಿಂದ ಕುಕ್ಕರ್‌, ಹಣ ಹಂಚಿಕೆ; ದಾಖಲೆ ಕೊಟ್ರೂ ಕ್ರಮವಿಲ್ಲ; HDK ಆಕ್ರೋಶ

ಜೆಡಿಎಸ್‌-ಬಿಜೆಪಿ ಮೈತ್ರಿಗೆ ನೀವೇ ಕಾರಣ ಎಂದ ಕುಮಾರಸ್ವಾಮಿ

ಮಿಸ್ಟರ್‌ ಡಿ.ಕೆ.ಶಿವಕುಮಾರ್‌, ಇವತ್ತು ಜೆಡಿಎಸ್‌ ಪಕ್ಷ ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳಲು ಮೂಲ ಕಾರಣವೇ ನೀವು. ನಿಮ್ಮಿಂದಲೇ ಈ ಮೈತ್ರಿ ಆಗಿದೆ. ಬೆಂಗಳೂರು ಗ್ರಾಮಾಂತರದಲ್ಲಿ ಹೊಂದಾಣಿಕೆ ಮಾಡಿಕೊಳ್ಳೋದಕ್ಕೆ ಮೂಲ ಕಾರಣವೂ ನೀವೇ. ಹಿಂದೆ ಜೆಡಿಎಸ್‌ ಕಾಂಗ್ರೆಸ್‌ ಮೈತ್ರಿ ಸರಕಾರ ರಚನೆ ಆದಾಗ ಈ ಸರಕಾರ ಐದು ವರ್ಷ ಇರಬೇಕು ಎಂದು ಹೇಳಿದ್ದಿರಿ. ಆದರೆ ಪಕ್ಕದಲ್ಲೇ ಕೂತು ಬಿಲ ಕೊರೆದಿರಿ ಎಂದು ಕುಮಾರಸ್ವಾಮಿ ಆಕ್ಷೇಪಿಸಿದರು.

ಅಧಿಕಾರವನ್ನೂ, ಆ ಸಂದರ್ಭವನ್ನು ದುರ್ಬಳಕೆ ಮಾಡಿಕೊಂಡು ನಮ್ಮ ಪಕ್ಷವನ್ನೇ ರಾಮನಗರದಲ್ಲಿ ಮುಗಿಸಲು ಷಡ್ಯಂತ್ರ ರೂಪಿಸಿದಿರಿ. ಆಗ ಮಂಡ್ಯದಲ್ಲಿ ದೋಖಾ ಮಾಡಿ ನಿಖಿಲ್‌ ಕುಮಾರಸ್ವಾಮಿಯನ್ನು ಸೋಲುವಂತೆ ಮಾಡಿದಿರಿ. ಬೆಂಗಳೂರು ಗ್ರಾಮಾಂತರದಲ್ಲಿ ನಿಮ್ಮ ಸಹೋದರನಿಗೆ ನಮ್ಮ ಕಾರ್ಯಕರ್ತರು ಇದನ್ನೇ ಮಾಡಿದ್ದಿದ್ದರೆ ಆತನೂ ಮನೆಯಲ್ಲಿ ಕೂರಬೇಕಿತ್ತು. ಮೈತ್ರಿಗೆ ನಾವು ಮೋಸ ಮಾಡಲಿಲ್ಲ ಎಂದು ನೆನಪಿಸಿದರು.

ನೀವು ನಮಗೆ ರಾಜಕೀಯವಾಗಿ ವಿಷ ಕೊಟ್ಟಿದ್ದೀರಿ!

ಬಿಜೆಪಿ ಜತೆ 20 ತಿಂಗಳು ಸರಕಾರ ಮಾಡಿದ್ದರಿಂದ ನಾನು ಪಕ್ಷವನ್ನು ಉಳಿಸಿಕೊಂಡಿದ್ದೇನೆ. ಆದರೆ ನಿಮ್ಮ ಜತೆ 14 ತಿಂಗಳ ಮೈತ್ರಿಯಲ್ಲಿ ನಾವು ಸಾಕಷ್ಟು ಕಳೆದುಕೊಂಡಿದ್ದೇನೆ. ರಾಜಕೀಯವಾಗಿ ನೀವು ವಿಷ ಹಾಕಿ ನಮ್ಮನ್ನು ಕೊಂದಿದ್ದೀರಾ. ಹಂತ ಹಂತವಾಗಿ ನಮ್ಮನ್ನು ಕುಗ್ಗಿಸಿದ್ದೀರಾ. 14 ತಿಂಗಳು ನಿಮ್ಮ ಜತೆ ಸರಕಾರ ಮಾಡಿದ್ದು ನಾನು ತೆಗೆದುಕೊಂಡ ಅತ್ಯಂತ ಕೆಟ್ಟ ನಿರ್ಧಾರ. ದೇವೇಗೌಡರ 60 ವರ್ಷಗಳ ಸುಧೀರ್ಘ ರಾಜಕಾರಣಕ್ಕೆ ಕೊಳ್ಳಿ ಇಟ್ಟಿದ್ದೀರಾ. ನನ್ನ ಜತೆ ಇದ್ದವರನ್ನು ಖರೀದಿ ಮಾಡುತ್ತಿದ್ದೀರಾ ಎಂದು ಕುಮಾರಸ್ವಾಮಿ ಅವರು ಡಿ.ಕೆ.ಶಿವಕುಮಾರ್‌ವಿರುದ್ಧ ಕಿಡಿಕಾರಿದರು.

ಬಿಜೆಪಿಯವರು ನಿಮ್ಮ ಹಾಗೆ ನನ್ನ ಕತ್ತು ಕೊಯ್ದಿಲ್ಲ

ಬಿಜೆಪಿಯಲ್ಲಿ ನನಗೆ ಗೌರವ ಕೊಟ್ಟಿದ್ದಾರೆ. ಅವರು ನಿಮ್ಮ ಹಾಗೆ ನನ್ನ ಕುತ್ತಿಗೆ ಕೊಯ್ದಿಲ್ಲ. ಬೆಂಗಳೂರು ಗ್ರಾಮಾಂತರದಲ್ಲಿ ತೋಳ್ಬಲ, ಧನಬಲ, ಅಧಿಕಾರ ಬಲದಿಂದ ಮೆರೆಯಿತ್ತಿದ್ದೀರಿ. ನನ್ನ ಪಕ್ಷದ ಶಾಸಕರನ್ನು ಸೆಳೆಯೋದಕ್ಕೆ ನೀವು ಏನೆಲ್ಲ ಮಾಡಿದ್ದಿರಿ ಎನ್ನುವುದು ಗೊತ್ತಿದೆ ನನಗೆ. ಇವತ್ತಿಗೂ ನಮ್ಮ ಶಾಸಕರನ್ನು ಸೆಳೆಯುವ ಪ್ರಯತ್ನ ಮಾಡುತ್ತಲೇ ಇದ್ದೀರಿ. ನೀವು ನಮ್ಮನ್ನು ಮುಗಿಸಲು ಹಂತ ಹಂತವಾಗಿ ಏನೆಲ್ಲಾ ಮಾಡುತ್ತಿದ್ದೀರಾ ಎನ್ನುವ ಮಾಹಿತಿ ನನಗೆ ಇದೆ. ಜನರೇ ನಿಮಗೆ ತಕ್ಕ ಶಾಸ್ತಿ ಮಾಡುವ ದಿನಗಳು ಹತ್ತಿರಕ್ಕೆ ಬಂದಿವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ನಿಮ್ಮವರನ್ನು ಚಡ್ಡಿಯಲ್ಲಿ ಕೂರಿಸಿದ್ದನ್ನು ಮರೆತಿದ್ದೀರಾ?

ಚುನಾವಣೆ ನಡೆಸುವುದು ಹೇಗೆ ಎನ್ನುವುದು ನನಗೂ ಗೊತ್ತಿದೆ ಮಿಸ್ಟರ್‌ ಡಿ.ಕೆ.ಶಿವಕುಮಾರ್. 2002ರ ಚುನಾವಣೆಯನ್ನು ನಿಮಗೆ ನೆನಪು ಮಾಡಿಕೊಡುತ್ತೇನೆ. ಮೈಸೂರು, ಶಿಡ್ಲಘಟ್ಟ, ದೇವನಹಳ್ಳಿ ಕಡೆಯಿಂದ ನೀವು ಜನರನ್ನು ಕರೆದುಕೊಂಡು ಬಂದು ಕಳ್ಳ ವೋಟು ಹಾಕಿಸಿದ್ದು ಮರೆತಿದ್ದೀರಾ? ಕಳ್ಳ ಮತ ಹಾಕಿಸಲು ಕರೆದುಕೊಂಡು ಬಂದಾಗ ರಾಜರಾಜೇಶ್ವರಿ ನಗರದ ಹೆಬ್ಬಾಗಿಲಲ್ಲಿ ನಾನು ನಿಮ್ಮವರನ್ನು ಚಡ್ಡಿಯಲ್ಲಿ ಕೂರಿಸಿದ್ದನ್ನು ಮರೆಯಬೇಡಿ.

ಚುನಾವಣೆ ನಡೆಸುವುದು ಹೇಗೆ ಎನ್ನುವುದು ನನಗೂ ಗೊತ್ತಿದೆ ಮಿಸ್ಟರ್‌ ಡಿ.ಕೆ.ಶಿವಕುಮಾರ್. 2002ರ ಚುನಾವಣೆಯನ್ನು ನಿಮಗೆ ನೆನಪು ಮಾಡಿಕೊಡುತ್ತೇನೆ. ಮೈಸೂರು, ಶಿಡ್ಲಘಟ್ಟ, ದೇವನಹಳ್ಳಿ ಕಡೆಯಿಂದ ನೀವು ಜನರನ್ನು ಕರೆದುಕೊಂಡು ಬಂದು ಕಳ್ಳ ವೋಟು ಹಾಕಿಸಿದ್ದು ಮರೆತಿದ್ದೀರಾ? ಕಳ್ಳ ಮತ ಹಾಕಿಸಲು ಕರೆದುಕೊಂಡು ಬಂದಾಗ ರಾಜರಾಜೇಶ್ವರಿ ನಗರದ ಹೆಬ್ಬಾಗಿಲಲ್ಲಿ ನಾನು ನಿಮ್ಮವರನ್ನು ಚಡ್ಡಿಯಲ್ಲಿ ಕೂರಿಸಿದ್ದನ್ನು ಮರೆಯಬೇಡಿ. ನನಗೆ ಚುನಾವಣೆ ಮಾಡುವುದು ಬರುವುದಿಲ್ಲ ಎಂದುಕೊಳ್ಳಬೇಡಿ. ಫೀಲ್ಡಿಗೆ ಇಳಿದರೆ ನಿಮಗಿಂತ ಚೆನ್ನಾಗಿ ಚುನಾವಣೆ ಮಾಡಬಲ್ಲೆ. ಆಗ ನೀವು ಅಧಿಕಾರದಲ್ಲಿ ಇದ್ದಿರಿ. ದೇವೇಗೌಡರನ್ನು ಸೋಲಿಸಲು ಪ್ತಯತ್ನ ಮಾಡಿದಿರಿ. ಆಸ್ಪತ್ರೆಯಿಂದ ನಾನು ವಾಪಸ್‌ ಬರ್ತಿನಿ, ಅದುವರೆಗೂ ನಿಮ್ಮ ಆಟ ನಡೆಯಲಿ ನೋಡೋಣ ಎಂದ ಕುಮಾರಸ್ವಾಮಿ ಅವರು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ನೇರವಾಗಿಯೇ ಟಾಂಗ್‌ ಕೊಟ್ಟರು.

ಮಾಜಿ ಸಚಿವರಾದ ಬಂಡೆಪ್ಪ ಕಾಶೆಂಪೂರ್‌, ಯುವ ಜನತಾದಳ ರಾಜ್ಯಾಧ್ಯಕ್ಷರಾದ ನಿಖಿಲ್‌ ಕುಮಾರಸ್ವಾಮಿ, ಹಿರಿಯ ಮುಖಂಡರಾದ ಗೊಟ್ಟಿಗೆರೆ ಮಂಜುನಾಥ್‌, ಎ.ಪಿ.ರಂಗನಾಥ್‌ಸೇರಿದಂತೆ ಪಕ್ಷದ ಹಲವಾರು ನಾಯಕರು ಹಾಜರಿದ್ದರು.

Exit mobile version