Site icon Vistara News

Web Series : ವೆಬ್‌ ಸೀರಿಸ್‌ ನೋಡಿ ಜ್ಯೋತಿಷಿ ಮಗನ ಕಿಡ್ನಾಪ್‌; ಹಣಕ್ಕೆ ಬೇಡಿಕೆ ಇಟ್ಟವ ಮೂರೇ ಗಂಟೆಯಲ್ಲಿ ಸಿಕ್ಕಿಬಿದ್ದ!

Kidnap case

ಬೆಂಗಳೂರು: ಆತನಿಗಿನ್ನೂ ವಯಸ್ಸಿತ್ತು. ಜೀವನದಲ್ಲಿ ಏನಾದರೂ ಸಾಧನೆ ಮಾಡ್ಬೇಕು ಎಂದು ಬೆಂಗಳೂರಿಗೆ ಬಂದಿದ್ದ. ದುಡ್ಡು ಮಾಡ್ಬೇಕು ಎಂದು ಆತ ಆಯ್ಕೆ ಮಾಡಿಕೊಂಡಿದ್ದು ಅಡ್ಡ ದಾರಿಯನ್ನು. ವೆಬ್‌ ಸೀರಿಸ್‌ (Web series) ನೋಡುತ್ತಿದ್ದ ಆತ ಅದೇ ಮಾದರಿಯಲ್ಲಿ ಅಪಹರಣಕ್ಕೆ ಮುಂದಾದ. ಅಪಹರಣವನ್ನೂ (Kidnap case) ಮಾಡಿದ. ಅಪಹರಣ ಮಾಡಿದ ವ್ಯಕ್ತಿಯ ಅಪ್ಪನಿಗೆ ಫೋನ್‌ ಕೂಡಾ ಮಾಡಿದ. ಆದರೆ, ಕೆಲವೇ ಗಂಟೆಗಳಲ್ಲಿ ಸಿಕ್ಕಿಬಿದ್ದ.

ಇದು ತುಮಕೂರಿನಿಂದ ಬಂದು ಬೆಂಗಳೂರಿನಲ್ಲಿ ಏನಾದರೂ ಮಾಡಬೇಕು ಎಂದು ಹೊರಟ ಅರ್ಜುನ್‌ ಎಂಬ ಯುವಕನ ಸ್ಟೋರಿ. ಆತ ಅಪಹರಣ ಮಾಡಿದ್ದು ಖ್ಯಾತ ಜ್ಯೋತಿಷಿಯೊಬ್ಬರ ಮಗನನ್ನು. ಆದರೆ, ಅಪಹರಣದ ವಿಚಾರದಲ್ಲಿ ಹೆಚ್ಚಿನ ಅನುಭವ ಇಲ್ಲದೆ ಅವನು ಕೇವಲ ಮೂರೇ ಗಂಟೆಯಲ್ಲಿ ಸಿಕ್ಕಿಬಿದ್ದ!

ತುಮಕೂರಿನ ಅರ್ಜುನ್‌ಗೆ ಹೇಗಾದರೂ ದೊಡ್ಡ ಹೆಸರು ಮಾಡಬೇಕು, ದುಡ್ಡು ಮಾಡಬೇಕು ಅಂತ ಆಸೆ. ಬೆಂಗಳೂರಿಗೆ ಬಂದು ಪಿಜಿಯೊಂದರಲ್ಲಿ ಉಳಿದುಕೊಂಡು ಕೆಲಸ ಹುಡುಕ್ತಿದ್ದ.. ಆದರೆ ಖಾಲಿ ಕೂತಿದ್ದವನ ತಲೆಗೆ ಹೊಳೆದಿದ್ದು ಕೆಟ್ಟ ಯೋಚನೆ!

ಕೆಲಸವಿಲ್ಲದಿದ್ದ ಸಂಧರ್ಭದಲ್ಲಿ ಒಟಿಟಿಯಲ್ಲಿ ಬರುವ ವೆಬ್ ಸೀರಿಸ್ ನೋಡುತ್ತಿದ್ದ ಅರ್ಜುನ್‌ ಸಿನಿಮಾ ರೀತಿಯಲ್ಲೇ ಕಿಡ್ನಾಪ್ ಮಾಡಿ ಬೇಗ ಹಣ ಗಳಿಸುವ ಪ್ಲಾನ್ ಮಾಡಿದ್ದ. ಆಗ ಈತನ ಕಣ್ಣಿಗೆ ಬಿದ್ದಿದ್ದೇ ಜೋತಿಷಿಯೊಬ್ಬರ ಮಗ!

ಮಣಿವಾಸನ್ ಎಂಬ ಜೋತಿಷಿ ಮಗನನ್ನು ಒಂದು ತಿಂಗಳ ಕಾಲ ವಾಚ್ ಮಾಡಿದ್ದಾನೆ ಅರ್ಜುನ್‌. ಬೊಲೆರೋದಲ್ಲಿ ನೀಟ್ ಕೋಚಿಂಗ್‌ಗೆ ಹೋಗುತ್ತಿದ್ದ ಜಯಸೂರ್ಯನ ಓಡಾಟದ ಟೈಮಿಂಗ್ ತಿಳಿದುಕೊಂಡಿದ್ದ ಆರೋಪಿ ಕಳೆದ ಆಗಸ್ಟ್‌ ನಾಲ್ಕರಂದು ತನ್ನ ಪ್ಲ್ಯಾನ್‌ ಎಕ್ಸಿಕ್ಯೂಷನ್‌ಗೆ ಕಾದು ಕುಳಿತ.

ಇದನ್ನೂ ಓದಿ: Murder Case : ಅವನಿಗೆ ಕೊಲೆ ಮಾಡಿದ್ದೇ ನೆನಪಿಲ್ಲ, ಕಾರಣ ಮೊದಲೇ ಗೊತ್ತಿಲ್ಲ! ಕಲ್ಲಿನೊಂದಿಗೆ ಠಾಣೆಗೆ ಬಂದವನ ಡೆಡ್ಲಿ ಕತೆ!

ಜಯಸೂರ್ಯ ಕೋಚಿಂಗ್ ಮುಗಿಸಿಕೊಂಡು ಮನೆಗೆ ಹೋಗುವಾಗ ಡ್ರಾಪ್ ಕೇಳಿದ ಅರ್ಜುನ್‌. ತಿಲಕನಗರ ಕಡೆ ನನ್ನನ್ನು ಬಿಡಿ ಎಂದು ರಿಕ್ವೆಸ್ಟ್ ಮಾಡಿದ್ದ.. ಡ್ರಾಪ್ ತಾನೇ ಎಂದು ಯೋಚಿಸಿದ ಜಯಸೂರ್ಯ ಅರ್ಜುನನನ್ನು ಕಾರಿಗೆ ಹತ್ತಿಸಿಕೊಂಡಿದ್ದ.

ಆದರೆ, ಕಾರು ಸ್ವಲ್ಪ ಮುಂದೆ ಹೋಗುತ್ತಿದ್ದಂತೆಯೇ ಜಯಸೂರ್ಯನಿಗೆ ಶಾಕ್‌ ಕಾದಿತ್ತು. ಏಕಾಏಕಿ ಗನ್ ತಲೆಗೆ ಇಟ್ಟಿದ್ದ ಅರ್ಜುನ್ ಪೋಷಕರಿಗೆ ಕಾಲ್ ಮಾಡಿಸಿ ಐದು ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದ. ವಿಡಿಯೊ ಕಾಲ್‌ ಮೂಲಕವೇ ಮಣಿವಾಸನ್‌ ಅವರಿಗೆ ಕಾಲ್‌ ಮಾಡಲಾಗಿತ್ತು.

ಕರೆ ಸ್ವೀಕರಿಸಿದ ಜ್ಯೋತಿಷಿ ಮಣಿವಾಸನ್‌ ಅವರು ಕೂಡಲೇ ಎಚ್ ಎಸ್ ಆರ್ ಲೇಔಟ್ ಠಾಣೆಗೆ ದೂರು ನೀಡಿದ್ದರು. ವಿಡಿಯೊ ಕಾಲ್‌, ಕಾರಿನ ಓಡಾಟದ ರೂಟ್‌ ಮತ್ತು ಜಯಸೂರ್ಯನ ಮೊಬೈಲ್‌ ಟ್ರ್ಯಾಕ್‌ ಮಾಡಿದ ಪೊಲೀಸರು ಕೇವಲ ಮೂರು ಗಂಟೆಯಲ್ಲಿ ಅರ್ಜುನ್‌ನನ್ನು ಬಂಧಿಸಿದ್ದಾರೆ. ತನಿಖೆ ವೇಳೆ ಆರೋಪಿ ಡೂಪ್ಲಿಕೇಟ್ ಗನ್ ಬಳಸಿ ಬೆದರಿಕೆ ಹಾಕಿರುವುದು ಗೊತ್ತಾಗಿದೆ.. ಸದ್ಯ ಆರೋಪಿಯನ್ನ ಬಂಧಿಸಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Exit mobile version