ಬೆಂಗಳೂರು: ಕರ್ನಾಟಕ ಜಲ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ಕರೆ ನೀಡಲಾಗಿರುವ ಸೆಪ್ಟೆಂಬರ್ 26ರ ಬೆಂಗಳೂರು ಬಂದ್ (Sep 26 Bangalore Bandh) ಬೆನ್ನಿಗೇ ಕನ್ನಡ ಚಳವಳಿ ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್ (Vatal Nagaraj) ಅವರು ಸೆಪ್ಟೆಂಬರ್ 29ರಂದು ಅಖಿಲ ಕರ್ನಾಟಕ ಬಂದ್ಗೆ (Sep 29 Karnataka Bandh) ಕರೆ ನೀಡಿದ್ದಾರೆ. ಈ ನಡುವೆ ಸೆ. 26ರ ಬಂದ್ಗೆ ಬೆಂಬಲ ನೀಡಿದ್ದ ಹಲವು ಸಂಘಟನೆಗಳು ಈಗ ಬೆಂಬಲ ಹಿಂದೆ ಪಡೆದು ಸೆ. 29ರ ಬಂದ್ಗೆ ಬೆಂಬಲ ನೀಡಿವೆ.
ಬೆಂಗಳೂರು ಬಂದ್ ಮಾಡಬೇಕಾ? ಕರ್ನಾಟಕ ಬಂದ್ ಮಾಡಬೇಕಾ? ಯಾವಾಗ ಮಾಡಬೇಕೆಂಬ ಗೊಂದಲದಲ್ಲಿ ಸಂಘಟನೆಗಳು ಬಿದ್ದು ಬಂದ್ ಕರೆ ದಿಕ್ಕು ತಪ್ಪಿದೆ. ಒಂದು ಕಡೆ ವುಡ್ ಲ್ಯಾಂಡ್ ಹೋಟೆಲ್ ನಲ್ಲಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಸಭೆ ನಡೆದರೆ, ಮತ್ತೊಂದು ಕಡೆ ಕುರುಬೂರು ಶಾಂತ ಕುಮಾರ್ (kuruburu Shantha kumar) ಹಾಗೂ ಮುಖ್ಯಮಂತ್ರಿ ಚಂದ್ರು ನೇತೃತ್ವದಲ್ಲಿ ಫ್ರೀಡಂ ಪಾರ್ಕ್ನಲ್ಲಿ ಸಭೆ ನಡೆಯಿತು. ಕುರುಬೂರು ಶಾಂತ ಕುಮಾರ್ ಅವರು ವಾಟಾಳ್ ನಾಗರಾಜ್ ಬಳಿ ತೆರಳಿ ಸೆ. 26ರ ಬಂದ್ಗೆ ಬೆಂಬಲ ನೀಡಬೇಕು ಎಂದು ಕೋರಿದರು. ಆದರೆ, ವಾಟಾಳ್ ನಾಗರಾಜ್ ಕಡೆಯಿಂದ ಸಕಾರಾತ್ಮಕ ಪ್ರತಿಕ್ರಿಯೆ ಬರಲಿಲ್ಲ.
ಇತ್ತ ಕುರುಬೂರು ಶಾಂತ ಕುಮಾರ್ ಅವರು ಮರಳಿ ಫ್ರೀಡಂ ಪಾರ್ಕ್ಗೆ ಹೋಗಿ ಚರ್ಚೆ ಮಾಡುವ ನಡುವೆಯೇ ಇತ್ತ ವಾಟಾಳ್ ನಾಗರಾಜ್ ಅವರು ಸೆಪ್ಟೆಂಬರ್ 29ರಂದು ಅಖಿಲ ಕರ್ನಾಟಕ ಬಂದ್ಗೆ ಕರೆ ನೀಡಿದ್ದಾರೆ.
ʻʻಬಂದ್ ಕರೆ ನೀಡಲು ನೀವು ಯಾರು? ಬಂದ್ ಕರೆಯೋದು ನಾವೇ, ಬಂದ್ ಅಂದ್ರೆ ಕನ್ನಡ ಒಕ್ಕೂಟ. ಕರ್ನಾಟಕದ ಉದ್ದಗಲಕ್ಕೂ ನಮ್ಮ ಒಕ್ಕೂಟ ಇದೆ. ಇತಿಹಾಸದಲ್ಲಿ ಯಾರೂ ನಮ್ಮನ್ನು ಬಿಟ್ಟು ಬಂದ್ಗೆ ಕರೆ ನೀಡಿಲ್ಲ. ವಾಟಾಳ್ ನಾಗರಾಜ್ ಅವರು ಬಂದ್ ಗೆ ಕರೆ ಕೊಡಬಹುದು ಅಂತ ತಿಳಿದು ಅವರು ಮೊದಲು ಬಂದ್ ಘೋಷಣೆ ಮಾಡಿದ್ದಾರೆ. ಸಭೆ ಕರೆದು ಚರ್ಚೆ ಮಾಡಿ ದಿನಾಂಕ ಪ್ರಕಟ ಮಾಡಬೇಕು ಅಂತ ತೀರ್ಮಾನ ಮಾಡಿದ್ದೆವುʼʼ ಎಂದು ಹೇಳುವ ಮೂಲಕ ವಾಟಾಳ್ ನಾಗರಾಜ್ ಅವರು ಬಂದ್ ವಿಚಾರದಲ್ಲಿರುವ ಗೊಂದಲ ಮತ್ತು ಪ್ರತಿಷ್ಠಾ ಸಮರವನ್ನು ಬಿಚ್ಚಿಟ್ಟರು.
ನಮ್ಮ ದಿನಕ್ಕೆ ಶಾಂತ ಕುಮಾರ್ ಒಪ್ಪಿಲ್ಲ
ʻʻಅಖಂಡ ಕರ್ನಾಟಕ ಬಂದ್ ಕರೆದಿರೋದು ಕೇಂದ್ರ ಸರ್ಕಾರಕ್ಕೆ ತಿಳಿಯಬೇಕು. ರಾಜ್ಯ ಸರ್ಕಾರಕ್ಕೆ ತಿಳಿಯಬೇಕು. ನಮ್ಮ ಹೋರಾಟಕ್ಕೆ 1206 ಸಂಘಟನೆಗಳು ಬೆಂಬಲ ನೀಡಿವೆ. ನಾಳೆ ನಡೆಯುವ ಬಂದ್ ಸಂಬಂಧ ಕುರುಬೂರು ಶಾಂತಕುಮಾರ್ ಕುಮಾರ್ ಜೊತೆ ಮಾತನಾಡಿದ್ದೇವೆ. ಎಲ್ಲರು ಸೇರಿ ಒಂದು ಬಂದ್ ಮಾಡೋಣ ಅಂತ ಹೇಳಿದೆವು. ಸೆಪ್ಟೆಂಬರ್ 29 ಬೇಡ ಅಂದರೆ 28ಕ್ಕೆ ಮಾಡೋಣ ಅಂತ ಹೇಳಿದೆವು. ಆದ್ರೆ ಕುರುಬೂರು ಶಾಂತಕುಮಾರ್ ಒಪ್ಪಿಲ್ಲ. ನಾಳೆ ಬಂದ್ ಬೇಡ ಅಂತಾನೂ ಕೈ ಮುಗಿದು ಹೇಳಿದ್ದೇವೆ. ಅವರು ಒಪ್ಪಿಲ್ಲʼʼ ಎಂದು ವಾಟಾಳ್ ನಾಗರಾಜ್ ಹೇಳಿದರು.
ಸೆಪ್ಟೆಂಬರ್ 29ರಂದು ಅಖಂಡ ಕರ್ನಾಟಕ ಬಂದ್
ಸೆ. 29ರಂದು ಸಮಗ್ರ ಕರ್ನಾಟಕ ಬಂದ್ಗೆ ಕರೆ ನೀಡಿದ್ದೇವೆ. ಒಂದು ಜಿಲ್ಲೆಯನ್ನೂ ಬಿಡದೆ ಬಂದ್ ಆಗಲಿದೆ. ಸೆ. 29ರಂದು ರಾಜ್ಯಾದ್ಯಂತ ಬಸ್, ಸಾರಿಗೆ, ಶಾಲೆ, ಆಟೋ, ಟ್ಯಾಕ್ಸಿ ಎಲ್ಲವೂ ಬಂದ್ ಆಗಲಿದೆ ಎಂದು ವಾಟಾಳ್ ತಿಳಿಸಿದರು. ಸೆ. 29ರಂದು 11 ಗಂಟೆಗೆ ಟೌನ್ ಹಾಲ್ ನಿಂದ ಫ್ರೀಡಂ ಪಾರ್ಕ್ ಮೆರವಣಿಗೆ ನಡೆಸಿ ಸಿಎಂಗೆ ಮನವರಿಕೆ ಮಾಡಿ ಒತ್ತಾಯ ಮಾಡಲಾಗುವುದು ಎಂದು ತಿಳಿಸಿದರು.
ಹಠಬಿಡದ ಕುರುಬೂರು, ಮುಖ್ಯಮಂತ್ರಿ ಚಂದ್ರು
ಈ ನಡುವೆ, ಕುರುಬೂರು ಶಾಂತ ಕುಮಾರ್ ಮತ್ತು ಮುಖ್ಯಮಂತ್ರಿ ಚಂದ್ರು ನೇತೃತ್ವದ ಜಲ ಸಂರಕ್ಷಣಾ ಸಮಿತಿ ಬಂದ್ ವಿಚಾರದಲ್ಲಿ ಹಿಂದಡಿ ಇಡಲು ನಿರಾಕರಿಸಿವೆ. ಸೆ. 29ರ ಕರ್ನಾಟಕ ಬಂದ್ ಘೋಷಣೆಯಾದರೂ ಬೆಂಗಳೂರು ಬಂದ್ ಪರ ಭಿತ್ತಿಪತ್ರ ಬಿಡುಗಡೆಗೊಳಿಲಾಯಿತು. ಹೀಗಾಗಿ ಸೆಪ್ಟೆಂಬರ್ 26ರ ಬಂದ್ ಕೂಡಾ ಖಚಿತವಾಗಿದೆ.
ಸೆ. 26ರ ಬೆಂಗಳೂರು ಬಂದ್ಗೆ ಬೆಂಬಲ ಹಿಂದೆ ಪಡೆದ ಸಂಘಟನೆಗಳು
ಈ ನಡುವೆ, ಸೆ. 26ರ ಬಂದ್ಗೆ ನಮ್ಮ ಬೆಂಬಲವಿಲ್ಲ ಎಂದು ಓಲಾ ಉಬರ್ ಅಸೋಸಿಯೇಶನ್ ಅಧ್ಯಕ್ಷ ತನ್ವೀರ್ ಪಾಷಾ ಪ್ರಕಟಿಸಿದ್ದಾರೆ. ಸೆ. 26ರ ಬಂದ್ಗೆ ಮೊದಲು ಬೆಂಬಲ ಕೊಟ್ಟಿದ್ದ ಆದರ್ಶ್ ಆಟೋ ಯೂನಿಯನ್ ಕೂಡ ಯೂಟರ್ನ್ ಹೊಡೆದಿದೆ. ಆದರ್ಶ್ ಆಟೋ ಯೂನಿಯನ್ ಅಧ್ಯಕ್ಷ ಮಂಜುನಾಥ್ ಅವರು, ನಾವು ನಾಳಿನ ಬಂದ್ ಗೆ ಬೆಂಬಲ ಕೊಡಲ್ಲ ಅಂದಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕೂಡಾ ಸೆ. 26ರ ಬದಲು ಸೆ. 29ರ ಬಂದ್ಗೆ ಕರೆ ನೀಡಲು ಮುಂದಾಗಿದೆ.