ರಾಮನಗರ: ನಾಳೆಯಿಂದ ಬೆಂಗಳೂರಿನಿಂದ ಮೈಸೂರು ಕಡೆ ಹೋಗುವ ಮುನ್ನ ಪ್ರಯಾಣಿಕರು ಯೋಚನೆ ಮಾಡಬೇಕಿದೆ. ಏಕೆಂದರೆ ಮುಂದಿನ ನಾಲ್ಕು ದಿನ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಬೆಂಗಳೂರು-ಮೈಸೂರು ಹೆದ್ದಾರಿ ಜಲಾವೃತವಾಗುವ ಸಾಧ್ಯತೆ ಇದೆ.
ಕಳೆದು ನಾಲ್ಕು ದಿನಗಳ ಹಿಂದೆ ಭಾರಿ ಮಳೆಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರವಾಹದ ಸ್ಥಿತಿ ನಿರ್ಮಾಣವಾಗಿ ವಾಹನ ಸವಾರರು ಪರದಾಡಬೇಕಾಯಿತು. ಈಗ ಆ.4ರಿಂದ 7ರವರೆಗೆ ಧಾರಾಕಾರ ಮಳೆ ಸುರಿಯುವ ಮುನ್ಸೂಚನೆ ಇರುವುದರಿಂದ ಕಳೆದು ನಾಲ್ಕು ದಿನಗಳ ಹಿಂದೆ ಆಗಿದ್ದ ಪರಿಸ್ಥಿತಿಯೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಮರುಕಳಿಸುವ ಸಾಧ್ಯತೆ ಇದೆ. ಹೀಗಾಗಿ ಪ್ರಯಾಣಿಕರು ಇದಕ್ಕೆ ಪರ್ಯಾಯ ಮಾರ್ಗಗಳನ್ನು ಬಳಸಿಕೊಳ್ಳಬೇಕಾಗಿದೆ.
ಇದನ್ನೂ ಓದಿ | ಮೂಲ ಸೌಕರ್ಯ ಸರಿಪಡಿಸದೆ ಇದ್ದರೆ ಬೆಂಗಳೂರಿನಿಂದ ವಲಸೆ: ಐಟಿ ಕಂಪನಿಗಳಿಂದ ಸರ್ಕಾರಕ್ಕೆ ಎಚ್ಚರಿಕೆ
ಪರ್ಯಾಯ ಮಾರ್ಗ ಬಳಸಿಕೊಳ್ಳಿ
ನಾಳೆಯಿಂದ ಮುಂದಿನ ನಾಲ್ಕು ದಿನ ಭಾರಿ ಮಳೆಯಾಗುತ್ತದೆ ಎಂಬ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ. ಹೀಗಾಗಿ ಬೆಂಗಳೂರು-ಮೈಸೂರು ಹೆದ್ದಾರಿ ಜಲಾವೃತವಾಗುವ ಸಾಧ್ಯತೆ ಇರುವುದರಿಂದ ಪ್ರಯಾಣಿಕರು ಪರ್ಯಾಯ ಮಾರ್ಗ ಬಳಸಿಕೊಳ್ಳಬೇಕು ಎಂದು ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಬಾಬು ತಿಳಿಸಿದ್ದಾರೆ.
ಸದ್ಯ ನಾಲ್ಕು ದಿನಗಳಿಂದ ವರುಣನ ಆರ್ಭಟ ಕಡಿಮೆಯಾಗಿದೆ. ಆದರೆ ಮತ್ತೆ ಭಾನುವಾರದಿಂದ ಬುಧವಾರದವರೆಗೂ ಅತೀ ಹೆಚ್ಚು ಮಳೆ ಬರುವ ಸಾಧ್ಯತೆ ಇದೆ. ಹಾಗಾಗಿ ಸತತ ಎರಡು ಗಂಟೆ ಮಳೆ ಬಂದರೆ ಬದಲಿ ಮಾರ್ಗ ವ್ಯವಸ್ಥೆ ಮಾಡಲಾಗುತ್ತದೆ. ಆ ಮಾರ್ಗವಾಗಿಯೇ ವಾಹನ ಸವಾರರು ಸಂಚರಿಸಬೇಕು. ಬೆಂಗಳೂರಿನಿಂದ ಬರುವವರು ಕನಕಪುರ ಹಾಗೂ ಕುಣಿಗಲ್ ಮಾರ್ಗದ ಮೂಲಕ ಮೈಸೂರಿಗೆ ಸಂಚರಿಸಬೇಕು. ಮೈಸೂರು ಕಡೆಯಿಂದ ಬರುವವರಿಗೆ ಮೈಸೂರು ಮತ್ತು ಮಂಡ್ಯ ಎಸ್ಪಿಯಿಂದ ಮಾಹಿತಿ ಪಡೆದು ಯಾವ ರೀತಿ ಪರ್ಯಾಯ ವ್ಯವಸ್ಥೆ ಇರಲಿದೆ ಎಂಬುವ ಬಗ್ಗೆ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ | ನಿತಿನ್ ಗಡ್ಕರಿ ಅಂಗಳಕ್ಕೆ ದಶಪಥ ಫೈಟ್: ತಾವೂ ಭೇಟಿಯಾಗುವುದಾಗಿ ತಿಳಿಸಿದ ಸಚಿವ ಕೆ. ಗೋಪಾಲಯ್ಯ