ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಭಾನುವಾರ ರಾತ್ರಿ ಇಡೀ ಸುರಿದ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಬೆಳಗ್ಗೆ ಮಳೆಯ ಆರ್ಭಟ ಕಡಿಮೆಯಾಗಿದ್ದರೂ, (Rain news) ಮಳೆ ಸೃಷ್ಟಿಸಿರುವ ಅನಾಹುತ ನಾನಾ ಬಡಾವಣೆಗಳಲ್ಲಿ ಜನರನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಕಳೆದ ಎಂಟು ವರ್ಷಗಳಲ್ಲಿಯೇ ಈ ರೀತಿಯ ಮಳೆ ಸುರಿದಿರಲಿಲ್ಲ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
ನಗರದ ಸರ್ಜಾಪುರ ರಸ್ತೆಯ ರೈನ್ ಬೋ ಲೇಔಟ್ ಸಂಪೂರ್ಣ ಜಲವೃತವಾಗಿದೆ. ಸರ್ಜಾಪುರ ರಸ್ತೆಯ ವಿಪ್ರೊ ಕಂಪನಿಯ ಕ್ಯಾಂಪಸ್ ಸೇರಿದಂತೆ ಇಡೀ ಪ್ರದೇಶ ಜಲಾವೃತವಾಗಿದೆ. ತಗ್ಗುಪ್ರದೇಶಗಳಲ್ಲಿ ಹಲವು ಅಡಿಗಳೆತ್ತರಕ್ಕೆ ನೀರು ತುಂಬಿದ್ದು, ಜನರು ಮತ್ತು ವಾಹನ ಸಂಚಾರಕ್ಕೆ ತೀವ್ರ ಅಡಚಣೆಯಾಗಿದೆ.
ಮೆಜೆಸ್ಟಿಕ್, ಕೆ. ಅರ್. ಮಾರ್ಕೆಟ್, ವಿಧಾನಸೌಧ, ಕೆ. ಆರ್. ಸರ್ಕಲ್, ಶಾಂತಿನಗರ, ಮಹಾಲಕ್ಷ್ಮಿ ಲೇಔಟ್ ಸೇರಿದಂತೆ ಹಲವು ಕಡೆ ಬಾರಿ ಮಳೆಯಾಗಿದೆ. ಶಾಂತಿನಗರ , ಡಬಲ್ ರೋಡ್, ಕೆ.ಅರ್ ಮಾರ್ಕೆಟ್, ಬ್ರಿಗೇಡ್ ರೋಡ್ , ಹಲಸೂರು ರಸ್ತೆ, ಬನಶಂಕರಿಯಲ್ಲಿ ಮಳೆಯಿಂದ ರಸ್ತೆಗಳು ಜಲಾವೃತವಾಗಿವೆ. ರಿಚ್ಮಂಡ್ ರಸ್ತೆಯಲ್ಲಿ ಒಂದು ಅಡಿಯಷ್ಟು ನೀರು ತುಂಬಿದೆ. ಮಹಾಲಕ್ಷ್ಮಿ ಲೇಔಟ್‌ನ ಸೋಮೇಶ್ವರ ನಗರದಲ್ಲಿ ರಸ್ತೆಗೆ ಮರ ಬಿದ್ದಿದೆ. ಬೆಳ್ಳಂದೂರು ಬಳಿ ವಾಹನ ಸವಾರರು ವಾಹನಗಳನ್ನು ರಸ್ತೆಯಲ್ಲೇ ಬಿಟ್ಟು ಹೋಗುವಂತಾಯಿತು.
ರೈನ್‌ಬೊ ಲೇಔಟ್ ಪಕ್ಕದಲ್ಲಿ ಇರುವ ಲೇಔಟ್ ನಲ್ಲಿ ಸುಮಾರು 100 ಹೆಚ್ಚು ಮನೆಗಳಿಗೆ ನೀರು…ನುಗ್ಗಿದೆ. ಮನೆಗಳ ಮುಂದೆ ನಿಂತಿರುವ ವಾಹನಗಳು ಜಲವೃತವಾಗಿದೆ. ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ ಮತ್ತೆ ಮಳೆಯ ಅಬ್ಬರ ಜೋರಾಗಿದೆ. ಬೆಂಗಳೂರಿನಲ್ಲಿ ಇನ್ನೂ ಕೆಲ ದಿನ ಮಳೆಯನ್ನು ನಿರೀಕ್ಷಿಸಲಾಗಿದೆ.
ಲಹರಿ ಮ್ಯೂಸಿಕ್ ಮಾಲೀಕ ಲಹರಿ ವೇಲು ಅವರ ಮನೆಗೂ ಮಳೆ ನೀರು ನುಗ್ಗಿದೆ. ಪಾರ್ಕಿಂಗ್ ಜಾಗದಲ್ಲಿ ನೀರು ತುಂಬಿದೆ. ಡಾಲರ್ಸ್ ಕಾಲೋನಿಯಲ್ಲಿ ಲಹರಿ ವೇಲು ನಿವಾಸವಿದೆ. ಮನೆಯ ಪಾರ್ಕಿಂಗ್ ನಿಂದ ನೀರನ್ನು ಸಿಬ್ಬಂದಿ ಹೊರಹಾಕಿದರು. ನಾಲ್ಕೈದು ಅಡಿ ನೀರು ನಿಂತು ಅವಾಂತರ ಸೃಷ್ಟಿಯಾಗಿತ್ತು.