ಬೆಂಗಳೂರು: ಮಹಾ ನಗರಗಳಲ್ಲಿ ಟ್ರಾಫಿಕ್ ರಗಳೆ ತಪ್ಪಿದ್ದಲ್ಲ ಎಂಬಂತಾಗಿದೆ. ಬೆಂಗಳೂರಿನ ಸಂಚಾರ ದಟ್ಟಣೆ ಲೋಕ ವಿಖ್ಯಾತ. ಈ ಸನ್ನಿವೇಶದಲ್ಲಿ ಹೆಲಿಕಾಪ್ಟರ್ ಮೂಲಕ ನಗರದಲ್ಲಿ ಹಾರಾಟ ನಡೆಸಲು ಸಾಧ್ಯವೇ? ಇದಕ್ಕೆ ಉತ್ತರವೆಂಬಂತೆ, ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಎಚ್‌ಎಎಲ್‌ಗೆ ಹೆಲಿಕಾಪ್ಟರ್ ಸೇವೆ (Helicopter) ಶೀಘ್ರದಲ್ಲಿಯೇ ಆರಂಭವಾಗಲಿದೆ. ಇದರಲ್ಲಿ 3,250 ರೂ. ಟಿಕೆಟ್ ದರ ಕೊಟ್ಟು ನೀವು ಏರ್‌ಪೋರ್ಟ್‌ನಿಂದ ಎಚ್‌ಎಎಲ್‌ಗೆ ಹೆಲಿಕಾಪ್ಟರ್‌ನಲ್ಲಿ ಸಂಚರಿಸಬಹುದು.
ಫ್ಲೈ ಬ್ಲೇಡ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (Fly Blade India Private Ltd) ತನ್ನ ಹೆಲಿಕಾಪ್ಟರ್ ಸೇವೆಯನ್ನು ನವೆಂಬರ್ ವೇಳೆಗೆ ಆರಂಭಿಸಲು ಕಾರ್ಯಪ್ರವೃತ್ತವಾಗಿದೆ. ಮೊದಲಿಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಎಚ್‌ಎಎಲ್ ನಡುವೆ ಹೆಲಿಕಾಪ್ಟರ್ ಸೇವೆ ಆರಂಭಿಸಲಿರುವ ಕಂಪನಿ, ಬಳಿಕ ವೈಟ್ ಫೀಲ್ಡ್ ಮತ್ತು ಎಲೆಕ್ಟ್ರಾನಿಕ್ ಸಿಟಿ ನಡುವೆ ಸೇವೆಯನ್ನು ವಿಸ್ತರಿಸಲಿದೆ. ಬಳಿಕ ಮತ್ತಷ್ಟು ಮಾರ್ಗಗಳಿಗೆ ವಿಸ್ತರಿಸಲು ಉದ್ದೇಶಿಸಿದೆ.
ಏರ್‌ಬಸ್ ಕಂಪನಿಯಿಂದ ಹೆಲಿಕಾಪ್ಟರ್ ಅನ್ನು ಖರೀದಿಸಲು ಫ್ಲೈ ಬ್ಲೇಡ್ ಇಂಡಿಯಾ ಉದ್ದೇಶಿಸಿದೆ. ಒಂದು ಹೆಲಿಕಾಪ್ಟರ್‌ನಲ್ಲಿ ಐದು ಅಥವಾ ಆರು ಮಂದಿ ಪ್ರಯಾಣಿಸಬಹುದು.
ಬೆಂಗಳೂರಿನಿಂದ ಗುವಾಹಟಿ, ಅಗರ್ತಲಾಗೆ ಆಕಾಸ ಏರ್: ಆಕಾಸ ಏರ್ ಬೆಂಗಳೂರಿನಿಂದ ಗುವಾಹಟಿ ಮತ್ತು ಅಗರ್ತಲಾಗೆ ತನ್ನ ವಿಮಾನ ಹಾರಾಟವನ್ನು ಅಕ್ಟೋಬರ್ 21ರಿಂದ ಆರಂಭಿಸಲಿದೆ. ಇದರಿಂದ ಬೆಂಗಳೂರು-ಅಗರ್ತಲಾ ನಡುವೆ ನೇರ ವಿಮಾನಯಾನ ಸಾಧ್ಯವಾಗಲಿದೆ ಎಂದು ಸಂಸ್ಥೆ ತಿಳಿಸಿದೆ. ಆಗಸ್ಟ್ 7ರಿಂದ ಆಕಾಸ ಏರ್‌ಲೈನ್ ದೇಶಿ ಮಾರ್ಗಗಳಲ್ಲಿ ವಿಮಾನಯಾನ ಆರಂಭಿಸಿತ್ತು.