Site icon Vistara News

Helmet Issue : ಹೆಲ್ಮೆಟ್‌ ಹಾಕದ್ದನ್ನು ಪ್ರಶ್ನಿಸಿದ ಪೊಲೀಸಪ್ಪನ ಕೈ ಕಚ್ಚಿದ ಭೂಪ!

Helmet Issue

ಬೆಂಗಳೂರು: ದ್ವಿ‌ಚಕ್ರ ವಾಹನ ಸವಾರರು ಹೆಲ್ಮೆಟ್‌ ಹಾಕದಿದ್ದರೆ (Helmet Issue) ಪೊಲೀಸರು ತಡೆಯುವುದು, ಬೆನ್ನಟ್ಟುವುದು ಮೊದಲಾದ ಘಟನೆಗಳು ಈಗಲೂ ನಡೆಯುತ್ತಿವೆ. ಆದರೆ, ಹೀಗೆ ತಡೆದು ನಿಲ್ಲಿಸಿದಾಗ ದಂಡ ಕಟ್ಟಿಸಿಕೊಳ್ಳುವುದು ಮಾತ್ರವಲ್ಲ, ಇರೋ ಬರೋ ದಾಖಲೆಗಳನ್ನೆಲ್ಲ ಕೇಳುತ್ತಾರೆ. ಹೀಗಾಗಿ ಕೆಲವರು ತಪ್ಪಿಸಿಕೊಳ್ಳಲು ಯತ್ನಿಸುತ್ತಾರೆ. ಬೆಂಗಳೂರಿನಲ್ಲಿ ಹೀಗೆ ಸ್ಕೂಟರ್‌ ಸವಾರರೊಬ್ಬರನ್ನು ಪೊಲೀಸರು ತಡೆದು ನಿಲ್ಲಿಸಿದಾಗ (police stop Scooter rider) ಆತ ಪೊಲೀಸರ ಕೈಗೇ ಕಚ್ಚಿದ್ದಾನೆ (Scooter rider bites finger).

ಬೆಂಗಳೂರಿನ (Bangalore News) ವಿಲ್ಸನ್‌ ಗಾರ್ಡನ್‌ನ ಹತ್ತನೇ ಕ್ರಾಸ್‌ನಲ್ಲಿ ಈ ಘಟನೆ ನಡೆದಿದೆ. ಹೆಲ್ಮೆಟ್ ಹಾಕದೆ ಇದ್ದಿದ್ದನ್ನು ಪ್ರಶ್ನಿಸಿದ್ದಕ್ಕೆ ಸಂಚಾರಿ ಪೊಲೀಸರ ಕೈ ಕಚ್ಚಿದ್ದಾನೆ ಒಬ್ಬ ಬೈಕ್‌ ಸವಾರ. ಸೋಮವಾರ ಮಧ್ಯಾಹ್ನ ಈ ಘಟನೆ ನಡೆದಿದೆ.

ಸ್ಕೂಟರ್‌ನಲ್ಲಿ ಹೆಲ್ಮೆಟ್‌ ಹಾಕದೆ ಹೋಗುತ್ತಿದ್ದ ಯುವಕನನ್ನು ವಿಲ್ಸನ್‌ ಗಾರ್ಡನ್‌ ಸಂಚಾರಿ ಪೊಲೀಸರು ತಡೆ ಹಿಡಿದರು. ತಡೆ ಹಿಡಿದು ಸ್ಕೂಟರ್‌ ಕೀ ಕಿತ್ತುಕೊಂಡರು. ಇದರಿಂದ ಯುವಕ ಸಿಟ್ಟಿಗೆದ್ದಿದ್ದಾನೆ. ಆಸ್ಪತ್ರೆಗೆ ಹೋಗುತ್ತಿದ್ದೇನೆ, ಅರ್ಜಂಟ್‌ ಇದೆ ಎಂದು ಹೇಳಿದ್ದಾನೆ. ಕೀ ಕೊಡಿ ಎಂದಿದ್ದಾನೆ.

ಪೊಲೀಸನನ್ನೇ ತಳ್ಳಿದ ಆತನನ್ನು ಪೊಲೀಸರು ಕೈಯಲ್ಲಿ ಹಿಡಿದುಕೊಂಡಿದ್ದಾರೆ. ಆಗ ಆತ ಕೈ ಬಿಡಿಸಿಕೊಳ್ಳುವ ಪ್ರಯತ್ನದಲ್ಲಿ ಪೊಲೀಸಪ್ಪನ ಕೈಯನ್ನೇ ಕಚ್ಚಿದ್ದಾನೆ. ಬಳಿಕ ಬಂದು ಸ್ಕೂಟರ್‌ನಲ್ಲಿ ಕುಳಿತಿದ್ದಾನೆ. ಈ ಎಲ್ಲ ವಿದ್ಯಮಾನಗಳನ್ನು ಮೊಬೈಲ್‌ನಲ್ಲಿ ಯಾರೋ ಒಬ್ಬರು ಸೆರೆ ಹಿಡಿದಿದ್ದಾರೆ.

ಮೊಬೈಲ್‌ನಲ್ಲಿ ರೆಕಾರ್ಡ್‌ ಆಗಿದೆ ಎಂದಾಗ ವೈರಲ್‌ ಆಗಲಿ ಬಿಡಿ, ನಾನು ಆಸ್ಪತ್ರೆಗೆ ಅರ್ಜಂಟಾಗಿ ಹೋಗಬೇಕಿತ್ತು. ಹೋಗಲು ಬಿಡದೆ ಪೊಲೀಸರು ತಡೆ ಹಿಡಿದಿದ್ದಾರೆ, ಅದಕ್ಕೆ ಕಚ್ಚಿದ್ದೇನೆ ಎಂದು ಹೇಳಿದ್ದಾನೆ. ಸಂಚಾರಿ ಪೊಲೀಸರು ಕೂಡಲೇ ಹೊಯ್ಸಳ ಸಿಬ್ಬಂದಿ ಕರೆಸಿ ಬೈಕ್ ಸವಾರನನ್ನು ವಶಕ್ಕೆ ಪಡೆದಿದ್ದಾರೆ. ಸಂಚಾರಿ ಪೊಲೀಸರಿಂದ ಆರೋಪಿ ವಿರುದ್ಧ ದೂರು ದಾಖಲಾಗಿದೆ.

ಇದನ್ನೂ ಓದಿ : Bengaluru News : 6 ವರ್ಷ ಮೇಲ್ಪಟ್ಟ ಮಕ್ಕಳಿಗೂ ಹೆಲ್ಮೆಟ್‌ ಕಡ್ಡಾಯ; ತ್ರಿಬಲ್‌ ರೈಡಿಂಗ್‌ಗೆ ಬ್ರೇಕ್‌!

ಮಕ್ಕಳಿಗೂ ಹೆಲ್ಮೆಟ್‌ ಕಡ್ಡಾಯವಾ? ಹಾಕದಿದ್ದರೆ ದಂಡ ಖಚಿತವಾ? : ಏನಂತಾರೆ ಪೊಲೀಸರು?

ಬೆಂಗಳೂರು: ರಾಜಧಾನಿಯಲ್ಲಿ 6 ವರ್ಷ ಮೇಲ್ಪಟ್ಟ ಮಕ್ಕಳಿಗೂ ಹೆಲ್ಮೆಟ್ ಕಡ್ಡಾಯ. ಇಲ್ಲದಿದ್ದರೆ ಪೊಲೀಸರು ದಂಡ ಹಾಕುತ್ತಾರೆ ಎಂಬ ಸುದ್ದಿಯೊಂದು ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿದೆ. ಇದಕ್ಕೆ ಸಂಬಂಧಿಸಿ ಸಂಚಾರಿ ವಿಭಾಗದ ಜಂಟಿ ಆಯುಕ್ತ ಎಂ. ಎನ್. ಅನುಚೇತ್ ಸ್ಪಷ್ಟನೆ ನೀಡಿದ್ದಾರೆ.

6 ವರ್ಷ ಮೇಲ್ಪಟ್ಟ ಸವಾರ, ಹಿಂಬದಿ ಸವಾರ ಹೆಲ್ಮೆಟ್ ಧರಿಸಬೇಕು ಎಂಬ ನಿಯಮ ಹಿಂದಿನಿಂದಲೂ ಇದೆ. ಈ ನಿಯಮ ಹೊಸದಲ್ಲ. ಆದರೆ, ಸದ್ಯಕ್ಕೆ ಹೆಲ್ಮೆಟ್‌ ಧರಿಸದವರಿಗೆ ದಂಡ ಹಾಕಲಾಗುತ್ತಿಲ್ಲ ಎಂದಿದ್ದಾರೆ.

“6 ವರ್ಷ ಮೇಲ್ಪಟ್ಟ ಎಲ್ಲರೂ ಹೆಲ್ಮೆಟ್ (ಸವಾರ & ಹಿಂಬಂದಿ ಸವಾರ) ಧರಿಸಬೇಕು ಎಂಬ ನಿಯಮವಿದೆ. ಈ ನಿಯಮ ಹೊಸದೇನಲ್ಲ. ಆದರೆ ಈ ಸಂಬಂಧ ಸಂಚಾರಿ ಪೊಲೀಸರು ಶಾಲೆಗಳ ಬಳಿ ವಿಶೇಷ ಕಾರ್ಯಾಚರಣೆ ನಡೆಸುವ ಯಾವುದೇ ಚಿಂತನೆ ಇಲ್ಲ” ಎಂದು ಎಂ. ಎನ್. ಅನುಚೇತ್ ಸ್ಪಷ್ಟಪಡಿಸಿದ್ದಾರೆ.

ಸಂಚಾರಿ ಪೊಲೀಸರು ಲೈಸೆನ್ಸ್ ಇಲ್ಲದ ವ್ಯಕ್ತಿಗಳು ಮತ್ತು ಅಪ್ರಾಪ್ತ ವಯಸ್ಸಿನ ಮಕ್ಕಳು ವಾಹನ ಚಾಲನೆ ಮಾಡುವುದು ಮೋಟಾರು ವಾಹನ ಕಾಯ್ದೆ ಅಡಿಯಲ್ಲಿ ಅಪರಾಧವಾಗಿರುತ್ತದೆ ಎಂದು ಜನರಲ್ಲಿ ಅರಿವು ಮೂಡಿಸುತ್ತಿದ್ದಾರೆ. ವಾಹನ ಚಾಲನೆ ಹಾಗೂ ವಿಲ್ಹೀಂಗ್ ಮತ್ತು ರೇಸಿಂಗ್ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತಿದ್ದಾರೆ. ಶಾಲಾ-ಕಾಲೇಜು ಮತ್ತು ನಗರ ಹೊರವಲಯ, ಇತರ ಪ್ರಮುಖ ಸ್ಥಳಗಳಲ್ಲಿ ಇಂತಹ ಅಪರಾಧ ಹಾಗೂ ವಾಹನ ಪರಿಶೀಲನೆ ಮಾಡುವ ಬಗ್ಗೆ ವಿಶೇಷ ಕಾರ್ಯಾಚರಣೆ ಮಾಡಲಾಗುತ್ತದೆ. ಪೋಷಕರು ತಮ್ಮ ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಮೋಟಾರು ವಾಹನಗಳನ್ನು ಚಾಲನೆ ಮಾಡಲು ನೀಡಿದಲ್ಲಿ ಅಂತಹ ವಾಹನಗಳನ್ನು ಜಪ್ತಿ ಮಾಡಿ ಕ್ರಮ ಕೈಗೊಳ್ಳಲಾಗುತ್ತದೆ. ಅಲ್ಲದೇ ಪೋಷಕರ ವಿರುದ್ಧ ಕಲಂ 5(1) ಆಧಾರ 180 ಐ.ಎಂ.ವಿ ಕಾಯ್ದೆ ಅಡಿ (ರೂ. 25,000 ದಂಡ ಮತ್ತು 3 ವರ್ಷಗಳ ಜೈಲುವಾಸ ಶಿಕ್ಷೆ) ಹಾಗೂ ಇತರ ಸೂಕ್ತ ಕಾನೂನಿನ ಅಡಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

Exit mobile version