Site icon Vistara News

ಆಕೆಗೆ ಮಗುವಿಗಿಂತಲೂ‌ ಹುಚ್ಚು ಪ್ರಿಯಕರನೇ ಹೆಚ್ಚಾದ; ತಾಯಿಯಿಂದ ತಂದೆ ಕೈಗೆ ಮಗುವನ್ನು ನೀಡಿದ್ದನ್ನು ಸಮರ್ಥಿಸಿದ ಹೈಕೋರ್ಟ್

Family court order to tej pratap to provide separate house to Aishwarya Rai

ಬೆಂಗಳೂರು: ಅವರಿಬ್ಬರೂ ಮದುವೆಯಾಗಿ ಒಂದು ಮಗುವಿತ್ತು. ವೈವಾಹಿಕ ಸಂಬಂಧದಲ್ಲಿ ಬಿರುಕು ಮೂಡಿ ದೂರಾಗಿದ್ದರು. ಈ ಹಂತದಲ್ಲಿ ಕೌಟುಂಬಿಕ ನ್ಯಾಯಾಲಯ ಮಗುವಿನ ಉಸ್ತುವಾರಿಯನ್ನು ತಂದೆಯ ಕೈಗೆ ಒಪ್ಪಿಸಿತ್ತು. ಆದರೆ, ಅದನ್ನು ಆಕೆ ಹೈಕೋರ್ಟ್‌ನಲ್ಲಿ ಪ್ರಶ್ನೆ ಮಾಡಿದ್ದರು. ಈಗ ಹೈಕೋರ್ಟ್‌ ಕೂಡಾ ಮಗು ತಂದೆಯ ಕೈಯಲ್ಲಿದ್ದರೇ ಒಳ್ಳೆಯದು ಎಂದು ಹೇಳಿದೆ. ಇದಕ್ಕೆ ಅದು ನೀಡಿರುವ ಸಮರ್ಥನೆ ಹೀಗಿದೆ: ಈ ತಾಯಿಗೆ ತನ್ನ ಪ್ರಿಯಕರನ ಜೊತೆಗಿನ ಅಕ್ರಮ ಸಂಬಂಧವೇ ದೊಡ್ಡದು, ಮಗುವಿನ ಬಗ್ಗೆ ಲಕ್ಷ್ಯವಿಲ್ಲ. ಈ ವರ್ತನೆಯನ್ನು ಪರಿಗಣಿಸಿ ಮಗು ತಂದೆಯ ಕೈಲಿರುವುದೇ ಒಳ್ಳೆಯದು.

ಮಗುವನ್ನು ನನ್ನ ಕಸ್ಟಡಿಗೆ ಕೊಡಬೇಕು ಎಂಬ ತಾಯಿಯ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಅಲೋಕ್‌ ಅರಾಧೆ ಮತ್ತು ಎಸ್‌ ವಿಶ್ವಜಿತ್‌ ಶೆಟ್ಟಿ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು. ಒಂದು ಹಂತದಲ್ಲಿ ಮಗುವಿನ ಕಸ್ಟಡಿಯನ್ನು ತಾಯಿಗೆ ನೀಡಲಾಗಿತ್ತು. ಆದರೆ, ಆಕೆ ಮಗುವನ್ನು ತನ್ನ ತಾಯಿ ಮನೆಯಲ್ಲಿ ಬಿಟ್ಟು ಪ್ರಿಯಕರನ ಅಕ್ರಮ ಸಂಬಂಧದಲ್ಲಿದ್ದರು. ಪ್ರಿಯಕರನ ಜೊತೆ ಬಾಡಿಗೆ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದರು ಎಂಬುದನ್ನು ಹೈಕೋರ್ಟ್‌ ಪರಿಗಣಿಸಿದೆ.

“ಬೇರೆ ವ್ಯಕ್ತಿಯೊಂದಿಗಿನ ಸಂಬಂಧದ ವಿಚಾರವನ್ನು ಮಗುವಿನ ಕಲ್ಯಾಣದೊಂದಿಗೆ ತುಲನೆ ಮಾಡಿ ಪರಿಗಣಿಸಿದಾಗ ಆಕೆಯು ತನ್ನ ಅಕ್ರಮ ಸಂಬಂಧಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಿದ್ದು, ಮಗುವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಮದುವೆಯಾದ ಮನೆಯನ್ನು ತೊರೆದ ಬಳಿಕ ಆಕೆಯು ಮಗುವನ್ನು ಚಂಡೀಗಢದ ಪಂಚಕುಲದಲ್ಲಿರುವ ಆಕೆಯ ಪೋಷಕರ ವಶಕ್ಕೆ ನೀಡಿ, ತಾನು ಬೆಂಗಳೂರಿನಲ್ಲಿ ಜೀವನ ಮುಂದುವರಿಸಿದ್ದರು. ದಾಖಲೆಗಳನ್ನು ಗಮನಿಸಿದರೆ ಆಕೆ ನಿರಂತರವಾಗಿ ತನ್ನ ಪ್ರಿಯಕರನ ಜೊತೆ ಒಡನಾಟದಲ್ಲಿದ್ದಾರೆ ಎಂಬುದನ್ನು ತೋರಿಸುತ್ತದೆ. ಹೀಗಾಗಿ, ಆಕೆಯು ಮಗುವಿನ ಕಲ್ಯಾಣ ಮತ್ತು ಹಿತಾಸಕ್ತಿಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಪ್ರತೀಕಾರಕ್ಕಾಗಿ ಆಕೆಯು ಮಗುವನ್ನು ತಂದೆಯಿಂದ ಕಿತ್ತುಕೊಂಡಿದ್ದಾರೆ” ಎಂದು ಆದೇಶದಲ್ಲಿ ಹೇಳಲಾಗಿದೆ.

ಯಾಕೆ ತಂದೆಯೇ ಒಳ್ಳೆಯದು?

“ಆಕೆ ಸಂಬಂಧಕ್ಕೆ ಯಾವುದೇ ರೀತಿಯ ಗೌರವ ಮತ್ತು ಮನ್ನಣೆ ನೀಡಿಲ್ಲ. ಸಣ್ಣ ವಿಚಾರಕ್ಕೆ ಕಲಹ ನಡೆಸುವ ಅಭ್ಯಾಸ ಬೆಳೆಸಿಕೊಂಡಿದ್ದರು. ಅತ್ತೆ-ಮಾವ ಜೊತೆಗೂ ಅವರು ನೆಲೆಸಲು ಬಯಸಿರಲಿಲ್ಲ. ಆದ್ದರಿಂದ, ಅವರು ಮನೆಯಿಂದ ಹೊರಹೋಗುವಂತೆ ಮಾಡಿದ್ದರು. ಆ ವರ್ತನೆಯೂ ನಡುವೆಯೂ, ಆಕೆ ಗರ್ಭಿಣಿಯಾಗಿದ್ದಾಗ ಅತ್ತೆ-ಮಾವ ಮನೆಗೆ ಬಂದಿದ್ದರು. ಈ ಸಂದರ್ಭದಲ್ಲಿ ಆಕೆಗೆ ಆರೈಕೆ ಮಾಡಿದ್ದಲ್ಲದೇ, ಮಗುವಿನ ಆರೈಕೆ ಮಾಡಿದ್ದರು. ಇದೆಲ್ಲದರ ಮಧ್ಯೆಯೂ ಆಕೆ ಜಗಳ ತೆಗೆದಿದ್ದು, ಅವರನ್ನು ಮನೆಯಿಂದ ಹೊರಹಾಕಿದ್ದರು” ಎಂದು ವಿವರಿಸಲಾಗಿದೆ.

“ನ್ಯಾಯಾಲಯವು ಕೇವಲ ಮಗುವಿನ ಬಾಂಧವ್ಯ ಮತ್ತು ಸೌಕರ್ಯವನ್ನಲ್ಲದೇ ಮಗುವಿನ ಯೋಗಕ್ಷೇಮ ಮತ್ತು ಭವಿಷ್ಯದ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಪ್ರಸ್ತುತ ಬೆಳೆಯುತ್ತಿರುವ ಪರಿಸರವನ್ನು ಸಹ ಪರಿಗಣಿಸಬೇಕು. ಹಣಕಾಸಿನ ಭದ್ರತೆಯ ಜೊತೆಗೆ, ಮಗುವಿಗೆ ಪ್ರೀತಿ ಮತ್ತು ವಾತ್ಸಲ್ಯದ ಅಗತ್ಯವಿರುವಾಗ ಪೋಷಕರು ಲಭ್ಯವಿದ್ದರೆ ಮತ್ತು ಯಾರ ಆರೈಕೆ ಮತ್ತು ರಕ್ಷಣೆಯ ಅಡಿಯಲ್ಲಿ ಮಗುವಿಗೆ ಉತ್ತಮ ಭವಿಷ್ಯವಿದೆ ಎಂಬುದನ್ನು ಸಹ ಪರಿಗಣಿಸಬೇಕಾಗುತ್ತದೆ” ಎಂದು ನ್ಯಾಯಾಲಯ ಹೇಳಿದೆ.

ಇದನ್ನೂ ಓದಿ : Madras High court : ಮುಸ್ಲಿಂ ಮಹಿಳೆಯರು ವಿಚ್ಛೇದನ ಪಡೆಯುವುದಕ್ಕೆ ಫ್ಯಾಮಿಲಿ ಕೋರ್ಟ್‌ಗೇ ಬರಬೇಕು; ಮದ್ರಾಸ್‌ ಹೈಕೋರ್ಟ್‌

Exit mobile version