ಬೆಂಗಳೂರು: ದೇಶದ ಪ್ರಧಾನಿಯನ್ನು ನಿಂದಿಸಿದರೆ (Insulting Prime Minister) ಅದನ್ನು ದೇಶದ್ರೋಹ (Sedition law) ಎಂದು ಪರಿಗಣಿಸಲಾಗದು ಎಂಬ ಮಹತ್ವದ ತೀರ್ಪನ್ನು ಕರ್ನಾಟಕ ಹೈಕೋರ್ಟ್ (Karnataka High court) ನೀಡಿದೆ. ಈ ರೀತಿಯ ನಿಂದನೆಗಳನ್ನು ಅವಹೇಳನಕಾರಿ ಮತ್ತು ಬೇಜವಾಬ್ದಾರಿಯ ಹೇಳಿಕೆ ಎಂದು ಪರಿಗಣಿಸಬಹುದೇ ಹೊರತು ದೇಶದ್ರೋಹ ಎನ್ನಲಾಗದು ಎಂದು ಅದು ಹೇಳಿದೆ (High court order).
ಬೀದರ್‌ನ ಶಾಲೆಯೊಂದರಲ್ಲಿ (School in Bidar) ಅಭಿನಯಿಸಲಾದ ನಾಟಕದಲ್ಲಿ ಮಕ್ಕಳು ಪ್ರಧಾನಿಗೆ ಚಪ್ಪಲಿಯಿಂದ ಹೊಡೆಯಬೇಕು ಎಂಬ ಸಂಭಾಷಣೆ ಹೇಳಿದ್ದರು. ಈ ಕಾರಣಕ್ಕಾಗಿ ಶಾಲೆಯ ವಿರುದ್ಧ ದೇಶದ್ರೋಹದ ಆರೋಪ ಹೊರಿಸಿ ದೂರು ನೀಡಲಾಗಿದೆ. ಈ ಪ್ರಕರಣದ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್‌ನ ಕಲಬುರಗಿ ಪೀಠದ ನ್ಯಾಯಮೂರ್ತಿ ಹೇಮಂತ್ ಚಂದನ್‌ಗೌಡರ್ ಅವರ ನೇತೃತ್ವದ ಪೀಠ ಶಾಲೆಯ ವಿರುದ್ಧದ ದೇಶದ್ರೋಹದ ಪ್ರಕರಣವನ್ನು ವಜಾ ಮಾಡಿದೆ. ಇದರ ಜತೆಗೇ ಎಲ್ಲ ಶಾಲೆಗಳಿಗೆ ಸಲಹೆ ರೂಪದಲ್ಲಿ ಎಚ್ಚರಿಕೆಯನ್ನೂ ನೀಡಿದೆ.
ಯಾವ ಪ್ರಕರಣವಿದು, ಏನಾಗಿತ್ತು?
ಕೇಂದ್ರ ಸರ್ಕಾರ ಪ್ರಸ್ತಾಪಿಸಿದ್ದ ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಕಾಯಿದೆಗಳ ಬಗ್ಗೆ ದೇಶದಲ್ಲಿ ಭಾರಿ ಚರ್ಚೆ, ಪ್ರತಿಭಟನೆ ನಡೆಯುತ್ತಿದ್ದ ಸಮಯವದು. ಬೀದರ್‌ನ ಶಾಹಿನ್ ಶಾಲೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಕ್ಕಳು ಇದನ್ನೇ ಆಧರಿಸಿ ಒಂದು ನಾಟಕ ಪ್ರದರ್ಶನ ಮಾಡಿದ್ದರು. 2020ರ ಜನವರಿ 21ರಂದು ಶಾಲೆಯ 4, 5 ಹಾಗೂ 6ನೇ ತರಗತಿ ವಿದ್ಯಾರ್ಥಿಗಳಿಂದ ಒಂದು ನಾಟಕ ಪ್ರದರ್ಶನ ಏರ್ಪಡಿಸಲಾಗಿತ್ತು.
ಇದರಲ್ಲಿ ಈ ಕಾನೂನು ಜಾರಿಗೆ ತರಲು ಯತ್ನಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಚಪ್ಪಲಿಯಿಂದ ಹೊಡೆಯಬೇಕು ಎನ್ನುವ ಸಂಭಾಷಣೆ ಇತ್ತು. ಜತೆಗೆ ಇದು ಜಾರಿಗೆ ಬಂದರೆ ಮುಸ್ಲಿಮರು ದೇಶ ಬಿಟ್ಟು ಹೋಗಬೇಕಾದೀತು ಎಂದು ಹೇಳಲಾಗಿತ್ತು.
ಈ ನಾಟಕ ಮತ್ತು ಅದರ ಸಂಭಾಷಣೆಯನ್ನು ಆಧರಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಪೊಲೀಸರಿಗೆ ದೂರು ನೀಡಿತ್ತು. ಪೊಲೀಸರು ಬೀದರ್‌ನ ಶಾಹೀನ್ ಶಾಲೆಯ ಆಡಳಿತ ಮಂಡಳಿ ಸದಸ್ಯರಾದ ಅಲ್ಲಾವುದ್ದೀನ್, ಅಬ್ದುಲ್ ಕಾಲೇಖ್, ಮೊಹಮ್ಮದ್ ಬಿಲಾಲ್ ಇನಾಂದಾರ್ ಹಾಗೂ ಮೊಹಮ್ಮದ್ ಮೆಹತಾಬ್ ವಿರುದ್ದ ದೇಶದ್ರೋಹ ಪ್ರಕರಣ ದಾಖಲಿಸಿದ್ದರು. ಇದೀಗ ಕೋರ್ಟ್ ಶಾಲೆಯ ವಿರುದ್ಧದ ದೇಶದ್ರೋಹ ಪ್ರಕರಣವನ್ನು ರದ್ದುಗೊಳಿಸಿದೆ. ಆದರೆ, ಕೆಲವೊಂದು ಎಚ್ಚರಿಕೆಗಳನ್ನು ನೀಡಿದೆ.
ನ್ಯಾಯಮೂರ್ತಿಗಳ ಅಭಿಪ್ರಾಯವೇನು?
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಚಪ್ಪಲಿಯಿಂದ ಹೊಡೆಯಬೇಕು ಎನ್ನಲಾದ ನಿಂದನಾತ್ಮಕ ಪದಗಳು ಅವಹೇಳನಕಾರಿ ಮಾತ್ರವಲ್ಲ, ಬೇಜವಾಬ್ದಾರಿಯುತವಾದುದು. ಸರ್ಕಾರದ ವಿರುದ್ಧ ರಚನಾತ್ಮಕ ಟೀಕೆ – ಟಿಪ್ಪಣಿಗಳನ್ನು ಮಾಡಬಹುದು. ಆದರೆ, ಸಾಂವಿಧಾನಿಕ ಹುದ್ದೆಗಳಲ್ಲಿ ಇರುವವರು ತೆಗೆದುಕೊಳ್ಳುವ ನಿರ್ಧಾರಗಳನ್ನು ನಿಂದನಾತ್ಮಕವಾಗಿ ಟೀಕಿಸುವುದು ಸರಿಯಲ್ಲ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.
ದೇಶದ್ರೋಹ ಪ್ರಕರಣ ಯಾಕೆ ಅನ್ವಯವಾಗುವುದಿಲ್ಲ?
- ಶಾಲೆಯ ವಿದ್ಯಾರ್ಥಿಗಳು ತಮ್ಮ ನಾಟಕದಲ್ಲಿ ಸರ್ಕಾರದ ವಿವಿಧ ನೀತಿ ನಿರೂಪಣೆಗಳನ್ನು ಟೀಕಿಸಿದ್ದಾರೆ ಎಂದು ವಾದಿಸಲಾಗಿತ್ತು. ಸರ್ಕಾರದ ಈ ನೀತಿಗಳಿಮದ ಮುಸ್ಲಿಮರು ದೇಶ ಬಿಟ್ಟು ಹೋಗುವಂತೆ ಮಾಡಲಾಗುತ್ತಿದೆ ಎಂದು ನಾಟಕದಲ್ಲಿ ಬಿಂಬಿಸಲಾಗಿತ್ತು.
- ಈ ವಿಚಾರವನ್ನು ಪರಿಶೀಲಿಸಿದ ನ್ಯಾಯಮೂರ್ತಿಗಳು, ಈ ನಾಟಕವು ಶಾಲೆಯ ಆವರಣದಲ್ಲಿ ನಡೆದಿದೆ. ಮಕ್ಕಳ ಬಾಯಿಯಿಂದ ಹೊರಬಿದ್ದ ಪದಗಳಿಂದ ಸಮಾಜದಲ್ಲಿ ಹಿಂಸೆ ಅಥವಾ ಅಶಾಂತಿ ಸೃಷ್ಟಿ ಆಗುವಂತೆ ಇರಲಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
- ಐಪಿಸಿ ಸೆಕ್ಷನ್ 153(ಎ)ನಲ್ಲಿ ಇರುವಂತೆ ಧಾರ್ಮಿಕ ಗುಂಪುಗಳ ನಡುವೆ ಅಸಹಿಷ್ಣುತೆ ಮೂಡಿಸುವ ಯಾವುದೇ ಕೃತ್ಯವೂ ಈ ಪ್ರಕರಣದಲ್ಲಿ ಕಂಡು ಬಂದಿಲ್ಲ.
- ಈ ಪ್ರಕರಣದ ಆರೋಪಿಯೊಬ್ಬರು ನಾಟಕದ ತುಣುಕನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿದ ಬಳಿಕವಷ್ಟೇ ಅದು ಎಲ್ಲರ ಗಮನಕ್ಕೆ ಬಂದಿತು ಎಂದು ನ್ಯಾಯಾಲಯ ಹೇಳಿದೆ.
- ಈ ನಾಟಕದ ಮೂಲಕ ಸಮಾಜದಲ್ಲಿ ಅಶಾಂತಿ, ಹಿಂಸೆ ಸೃಷ್ಟಿಸುವ ವಾತಾವರಣ ನಿರ್ಮಾಣವಾಗುತ್ತದೆ ಎಂಬ ಊಹೆಯ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗದು.
ಶಾಲೆಗಳಿಗೆ ಕೋರ್ಟ್ ಕಿವಿಮಾತು
ಇದೇ ವೇಳೆ ನ್ಯಾಯಮೂರ್ತಿ ಹೇಮಂತ್ ಚಂದನ್‌ಗೌಡರ್ ಅವರು ಶಾಲೆಗಳಿಗೂ ಕೆಲವೊಂದು ಕಿವಿಮಾತು ಹೇಳಿದ್ದಾರೆ.
- ಶಾಲೆಗಳಲ್ಲಿ ನಾಟಕ ಪ್ರದರ್ಶಿಸುವಾಗ ಅದು ಮಕ್ಕಳ ಶೈಕ್ಷಣಿಕ ಆಸಕ್ತಿಯನ್ನು ಹೆಚ್ಚಿಸುವಂತಿರಲಿ. ಕ್ರಿಯಾತ್ಮಕವಾಗಿ ಯೋಚಿಸಲು ಅನುಕೂಲವಾಗುವ ವಿಚಾರಗಳನ್ನು ಆಯ್ಕೆ ಮಾಡಿಕೊಳ್ಳಿ.
- ಪ್ರಸಕ್ತ ರಾಜಕೀಯ ವಿಷಯಗಳನ್ನೇ ಎತ್ತಿಕೊಂಡಾಗ ಅದು ಪುಟ್ಟ ಮನಸುಗಳನ್ನು ಬೇರೆ ರೀತಿಯಲ್ಲಿ ಪ್ರಚೋದಿಸುವ, ಭ್ರಷ್ಟಗೊಳಿಸುವ ಸಾಧ್ಯತೆ ಇರುತ್ತದೆ.
- ಮಕ್ಕಳಿಗೆ ಪಠ್ಯ ವಿಷಯದಲ್ಲಿ ಜ್ಞಾನ ಹೆಚ್ಚಿಸಲು ಅನುಕೂಲವಾಗುವ ಜ್ಞಾನಾಧರಿತ ಇಲ್ಲವೇ ತಂತ್ರಜ್ಞಾನ ಆಧರಿತ ವಿಚಾರಗಳನ್ನು ತಿಳಿಸುವುದು ಉತ್ತಮ.
- ಶಾಲೆಗಳು ಜ್ಞಾನದ ತೊರೆಯನ್ನು ಮಕ್ಕಳ ಕಡೆಗೆ ಹರಿಸಿ ಅವರ ಕಲ್ಯಾಣ ಮತ್ತು ಸಮಾಜದ ಅಭಿವೃದ್ಧಿಗೆ ಬಳಸಬೇಕು. ಅದು ಬಿಟ್ಟು ಮಕ್ಕಳಿಗೆ ಸರ್ಕಾರದ ನೀತಿಗಳನ್ನು ಟೀಕಿಸುವುದು, ಸಾಂವಿಧಾನಿಕ ವ್ಯಕ್ತಿ/ಸಂಸ್ಥೆಗಳನ್ನು ಅಪಮಾನಿಸುವುದನ್ನು ಕಲಿಸುವುದು ಸರಿಯಲ್ಲ.
ಇದನ್ನೂ ಓದಿ: Viral Video: ಶಿಕ್ಷಕಿಯ ನಿವೃತ್ತಿ, ಬಿಕ್ಕಿ ಬಿಕ್ಕಿ ಅತ್ತು ಬೀಳ್ಕೊಟ್ಟ ಮಕ್ಕಳು; ಶಾಲಾ ದಿನಗಳ ನೆನಪಿಸುವ ವಿಡಿಯೊ ಇದು