Site icon Vistara News

Prostitution Case: ಟೆಕ್ಕಿಯೇ ಪಿಂಪ್‌, ಟರ್ಕಿ ಮಹಿಳೆಯೇ ಕಾಲ್‌ಗರ್ಲ್‌; ಇದು ಹೈಟೆಕ್‌ ವೇಶ್ಯಾವಾಟಿಕೆ!

prostitution case

ಬೆಂಗಳೂರು: ಲಕ್ಷಾಂತರ ಸಂಬಳ ಗಳಿಸುತ್ತಿದ್ದರೂ ಇನ್ನೂ ಭಾರಿ ಮೊತ್ತದ ಹಣ ಗಳಿಸುವ ಹುಚ್ಚಿಗೆ ಬಿದ್ದ ಟೆಕ್ಕಿಯೊಬ್ಬ ಪಿಂಪ್‌ ಆಗಿದ್ದಾನೆ. ವಿದೇಶದಿಂದ ಬಂದ ಮಹಿಳೆ ಕಾಲ್‌ಗರ್ಲ್‌ ಆಗಿದ್ದಾಳೆ. ಇದು ರಾಜಧಾನಿಯಲ್ಲಿ ನಡೆಯುತ್ತಿದ್ದ ಹೈಟೆಕ್‌ ವೇಶ್ಯಾವಾಟಿಕೆಯೊಂದರ (high tech Prostitution Case) ಚಿತ್ರಣ.

ಬಿಇ ಪದವೀಧರ, ಟೆಕ್ಕಿ ಗೋವಿಂದರಾಜು ಎಂಬಾತ ಈಗ ಹೈಟೆಕ್ ವೇಶ್ಯಾವಾಟಿಕೆ ಪ್ರಕರಣದಲ್ಲಿ ಪಿಂಪ್‌ ಆಗಿ ಸಿಕ್ಕಿಬಿದ್ದು, ಈಗ ಕಂಬಿ ಎಣಿಸುತ್ತಿದ್ದಾನೆ. ಈತನಿಗೆ ಕೈ ತುಂಬಾ ಸಂಬಳ ಬರುತ್ತಿತ್ತು. ಆದರೆ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದವನು ಶೇರ್ ಮಾರ್ಕೆಟ್ ಚಟಕ್ಕೆ ಬಿದ್ದಿದ್ದ. ತಾನು ದುಡಿದ ಅಷ್ಟೂ ಹಣವನ್ನು ಶೇರುಗಳಿಗೆ ಸುರಿಯುತ್ತಿದ್ದ. ಇವೆಲ್ಲವೂ ನೀರಿನಲ್ಲಿ ಮಾಡಿದ ಹೋಮದಂತೆ ಕೈಗೆ ಬರುತ್ತಿರಲಿಲ್ಲ. ಸಾಲ ಕೂಡ ಮಾಡಿಕೊಂಡಿದ್ದ ಹಿನ್ನೆಲೆಯಲ್ಲಿ ತಿಂಗಳ ಸಂಬಳ ಸಾಲ ತೀರಿಸೋಕೆ ಸರಿ ಹೋಗ್ತಿತ್ತು.

ಈ ಸಂದರ್ಭದಲ್ಲಿ ತನ್ನ ಕಮ್ಯೂನಿಕೇಷನ್‌ಗೆ ಎಂದು ಒಂದು ಆ್ಯಪ್ ಸೃಷ್ಟಿಸಿಕೊಂಡಿದ್ದ. ಮೊದ ಮೊದಲು ಗೆಳೆಯರ ಜೊತೆ ಸಂವಹನ ಮಾಡಲು ಬಳಕೆಯಾಗ್ತಿತ್ತು. ಈ ವೇಳೆ ಮತ್ತೊಬ್ಬ ಬಿಇ ಪದವೀಧರ ವೀಝಾಕ್ ಎಂಬಾತ ಗೋವಿಂದರಾಜುವಿಗೆ ವೇಶ್ಯಾವಾಟಿಕೆಯಲ್ಲಿ ಹಣವಿದೆ, ಅದರಲ್ಲೂ ವಿದೇಶಿ ಮಹಿಳೆಯರಿಗೆ ಒಳ್ಳೆಯ ಬೆಲೆ ಇದೆ ಎಂದು ತಲೆಗೆ ತುಂಬಿಸಿದ್ದ.‌

ಟೆಕ್ಕಿ ಸೃಷ್ಟಿ ಮಾಡಿರುವ ಆ್ಯಪ್ ತುಂಬಾ ಸೆಕ್ಯೂರ್ ಆಗಿರುವ ಪ್ರೈವೇಟ್ ಆಪ್ ಆಗಿದ್ದು, ಅದರಲ್ಲಿ ತಮಗೆ ಬೇಕಾದವರನ್ನು ಮಾತ್ರ ಸೇರಿಸಿಕೊಳ್ತಿದ್ದ. ಟೆಕ್ಕಿಯಾಗಿದ್ದ ವೇಳೆ ಸಿಗದಿದ್ದ ಹಣ ಈ ಆ್ಯಪ್‌ ಮೂಲಕ ಸಿಗುತ್ತಿತ್ತು. ಹೀಗೆ ಸಂಪರ್ಕಕ್ಕೆ ಬಂದವಳೇ ಪುಲಕೇಶಿನಗರದಲ್ಲಿ ವಾಸವಾಗಿರುವ ಟರ್ಕಿ ದೇಶದ ಮಹಿಳೆ ಬಿಯೋನಾಜ್ (39).

ಈಕೆ ಟರ್ಕಿಯಿಂದ ಬಂದ ಮಹಿಳೆ. 15 ವರ್ಷದ ಹಿಂದೆ ಟೂರಿಸ್ಟ್‌ ವೀಸಾದಲ್ಲಿ ಬಂದಿದ್ದ ಟರ್ಕಿ ಮಹಿಳೆ ನಂತರ ಇಲ್ಲಿಯವನೇ ಆದ ಸೆಲ್ವ ಎಂಬಾತನನ್ನು ಮದುವೆಯಾಗಿದ್ದಳು. ಇವರಿಬ್ಬರಿಗೆ ಒಂದು ಮಗು ಕೂಡ ಇದೆ. ಪತಿ ಸೆಲ್ವನಿಗೆ ಟಿಬಿ ಕಾಯಿಲೆ ಇತ್ತು. ಬರಬರುತ್ತಾ ಕಾಯಿಲೆ ಹೆಚ್ಚಾಗುತ್ತಿದ್ದಂತೆ ಬಿಯಾನ್ಯಾಝ್ ದೂರವಾಗುವ ಸೂಚನೆ ಸಿಕ್ಕಿತ್ತು.‌ ಇದನ್ನರಿತ ಸೆಲ್ವ, ಬಿಯನ್ಯಾಝ್‌ಳ ಟರ್ಕಿ ಪಾಸ್‌ಪೋರ್ಟನ್ನು ಹರಿದು ಹಾಕಿದ್ದ. ಭಾರತದ ಪಾಸ್‌ಪೋರ್ಟ್ ಕೂಡ ಮಾಡೋದಕ್ಕೆ ಸಾಧ್ಯವಾಗಲಿಲ್ಲ. ಅದೂ ಅಲ್ಲದೆ ಮಗ ಇಲ್ಲೇ ಹುಟ್ಟಿದ ಕಾರಣ ಆತ ಈ ದೇಶದ ನಾಗರಿಕನಾಗಿದ್ದಾನೆ.

ಹೀಗಾಗಿ ಇಲ್ಲೇ ಉಳಿದ ಈಕೆ ಹೈಟೆಕ್ ವೇಶ್ಯಾವಾಟಿಕೆಗೆ ಇಳಿದಿದ್ದಳು. ಕಳೆದ 10 ವರ್ಷದಿಂದ ಈಕೆ ವೇಶ್ಯಾವಾಟಿಕೆಯಲ್ಲಿ ತೊಡಗಿರುವುದು ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಬಿಯಾನ್ಯಾಝ್‌ ಹಾಗೂ ಆಕೆಯ ಸಹಚರರಾದ ಒಡಿಶಾ ಮೂಲದ ಜಿತೇಂದ್ರ ಸಾಹೂ (43), ಪ್ರಮೋದ್ ಕುಮಾರ್ (31), ಮನೋಜ್ ದಾಸ್ (23) ಅಸ್ಸಾಂ ಮೂಲದ ಸೌಮಿತ್ರ ಚಂದ್ (26), ಮಹಾಲಕ್ಷ್ಮಿ ಲೇಔಟ್ ನಿವಾಸಿ ಪ್ರಕಾಶ್ (32), ಲಗ್ಗೆರೆಯ ವೇಶಾಕ್(22), ಪರಪ್ಪನ ಅಗ್ರಹಾರ ನಿವಾಸಿ ಗೋವಿಂದರಾಜ್ (34) ಮತ್ತು ನಂದಿನಿ ಲೇಔಟ್ ನಿವಾಸಿ ಅಕ್ಷಯ್ (32) ಎಂಬವರನ್ನು ಬಂಧಿಸಲಾಗಿದೆ. ಆರೋಪಿಗಳ ವಶದಲ್ಲಿದ್ದ 7 ವಿದೇಶಿ ಮಹಿಳೆಯರು ಸೇರಿ ಒಟ್ಟು 9 ಮಂದಿಯನ್ನು ರಕ್ಷಿಸಲಾಗಿದೆ.

ಇದನ್ನೂ ಓದಿ: Prostitution Racket: ನಿವೃತ್ತ ಪೊಲೀಸ್ ಮನೆಯಲ್ಲೇ ವೇಶ್ಯಾವಾಟಿಕೆ; 5 ಯುವತಿಯರ ರಕ್ಷಣೆ, ಇಬ್ಬರ ಬಂಧನ

Exit mobile version