ನವದೆಹಲಿ: ರಾಜ್ಯದ ಶಾಲೆ ಕಾಲೇಜುಗಳಲ್ಲಿ ಮತ್ತೆ ಹಿಜಾಬ್‌ಗೆ (Hijab Row) ಅವಕಾಶ ನೀಡಲಾಗುವುದು ಎಂಬ ಸಿಎಂ ಸಿದ್ದರಾಮಯ್ಯ (CM Siddaramaiah) ಅವರ ಹೇಳಿಕೆ ಅತ್ಯಂತ ಬೇಜವಾಬ್ದಾರಿಯಿಂದ ಕೂಡಿದ್ದು ಮತ್ತು ದ್ವೇಷವನ್ನು ಸೃಷ್ಟಿಸುವ ಪ್ರಯತ್ನ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (BY Vijayendra) ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶನಿವಾರ ಬೆಳಗ್ಗೆ ಮಾಧ್ಯಮ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮತ್ತೆ ಹಿಜಾಬ್‌ಗೆ ಅವಕಾಶ ನೀಡುವ ಸಿದ್ದರಾಮಯ್ಯ ಹೇಳಿಕೆ ನಾಡಿನ ಪಾಲಿಗೆ ಒಂದು ದುರದೃಷ್ಟದ ಸಂಗತಿ ಎಂದರು.
ಹಿಜಾಬ್ ರಾಜಕೀಯ ಮಕ್ಕಳ ಮನಸ್ಸನ್ನು ಸಹ ಕಲುಷಿತ ಮಾಡಿದೆ. ಅವರು ಏನೇ ರಾಜಕೀಯ ಮಾಡಲಿ. ಆದರೆ, ಕನಿಷ್ಠ ಶಾಲೆಗೆ ಹೋಗೋ ಮಕ್ಕಳನ್ನು ಆದರೂ ರಾಜಕೀಯದಿಂದ ದೂರ ಇಡ್ಬೇಕಿತ್ತು ಎಂದು ಹೇಳಿದರು ವಿಜಯೇಂದ್ರ.
ʻʻಹಿಜಾಬ್ ಧರಿಸಿಕೊಂಡು ಶಾಲೆಗೆ ಹೋಗಲು ಅವಕಾಶ ಕೊಡ್ತೇವೆ ಅಂದಿದ್ದಾರೆ. ಇದೇ ಸರ್ಕಾರ ಕಲ್ಬುರ್ಗಿಯಲ್ಲಿ ಪರೀಕ್ಷೆಗೆ ಹೋಗುವ ಹೆಣ್ಮಕ್ಕಳ ತಾಳಿ, ಕಾಲುಂಗುರ ತೆಗೆಸಿದೆ. ಇದು ಯಾವ ನ್ಯಾಯʼ ಎಂದು ಅವರು ಪ್ರಶ್ನಿಸಿದರು.
ಅಲ್ಪಸಂಖ್ಯಾತರ ಇಂದಿನ ದುಸ್ಥಿತಿಗೆ ಕಾಂಗ್ರೆಸೇ ಕಾರಣ
ʻʻಮಾತು ಎತ್ತಿದ್ರೆ ಅಲ್ಪಸಂಖ್ಯಾತರ ಬಗ್ಗೆ ಮಾತಾಡ್ತಾರೆ ಸಿದ್ದರಾಮಯ್ಯ. ಸ್ವಾತಂತ್ರ್ಯ ಬಂದು ಇಷ್ಟು ವರ್ಷ ಆಗಿದೆ. ಇಷ್ಟು ವರ್ಷ ರಾಜ್ಯದಲ್ಲಿ, ದೇಶದಲ್ಲಿ ಕಾಂಗ್ರೆಸ್ ಅಧಿಕಾರ ಮಾಡಿದೆ. ಇವತ್ತಿಗೂ ಸಹ ಶೇ. 50ಕ್ಕೂ ಹೆಚ್ಚು ಅಲ್ಪಸಂಖ್ಯಾತರು ಶಿಕ್ಷಣ ವಂಚಿತರಾಗಿದ್ದಾರೆ. ಇವತ್ತು ಅವರೆಲ್ಲ ಕೆಲಸ ಇಲ್ಲದೆ ಬೇಜವಾಬ್ದಾರಿಯಿಂದ ಓಡಾಡುತ್ತಾರೆ ಇದ್ದಾರೆ ಅಂದರೆ ಅದಕ್ಕೆ ಕಾರಣ ಯಾರು? ಕಾಂಗ್ರೆಸ್ ಅಲ್ಪಸಂಖ್ಯಾತರನ್ನು ಕೇವಲ ಮತ ಬ್ಯಾಂಕ್ ಆಗಿ ಉಪಯೋಗಿಸುತ್ತಿದೆʼʼ ಎಂದು ವಿಜಯೇಂದ್ರ ಕಿಡಿ ಕಾರಿದರು.
ʻʻನಮ್ನ ಪ್ರಧಾನಿ ಅಲ್ಪಸಂಖ್ಯಾತ ಮಹಿಳೆಯರನ್ನು ಗೌರವದಿಂದ ಕಾಣಬೇಕು ಎಂಬ ಉದ್ದೇಶದಿಂದ ತ್ರಿವಳಿ ತಲಾಕ್ ಅನ್ನು ತೆಗೆದುಹಾಕುವ ಕೆಲಸ ಮಾಡಿದ್ದಾರೆ. ಆದರೆ, ನೀವು ಕಾಂಗ್ರೆಸ್‌ನವರು ಯಾವತ್ತಾದರೂ ಅಲ್ಪಸಂಖ್ಯಾತರ ಸ್ವಾಭಿಮಾನವನ್ನು ಎತ್ತಿ ಹಿಡಿಯುವ ಈ ರೀತಿಯ ಕೆಲಸ ಮಾಡಿದ್ದೀರಾʼʼ ಎಂದು ವಿಜಯೇಂದ್ರ ಪ್ರಶ್ನಿಸಿದರು.
ಇದನ್ನೂ ಓದಿ: Hijab Row: ಶೀಘ್ರದಲ್ಲೇ ಹಿಜಾಬ್ ನಿಷೇಧ ವಾಪಸ್? ಸಿದ್ದರಾಮಯ್ಯ ಮಹತ್ವದ ಘೋಷಣೆ
ಪ್ರತಿ ಬಾರಿಯೂ ಒಡೆದು ಆಳುವ ಯತ್ನ ನಡೆಸುವ ಕಾಂಗ್ರೆಸ್
ʻʻಕಾಂಗ್ರೆಸ್ ಅವತ್ತಿನಿಂದ ಇವತ್ತಿನವರೆಗೂ ಒಡೆದು ಆಳುವ ನೀತಿ ಅನುಸರಿಸುತ್ತಿದೆ. ಹಿಂದೆ ಬ್ರಿಟಿಷ್ ಅನುಸರಿಸಿದ್ದನ್ನು ಸ್ವಾತಂತ್ರ್ಯ ಬಂದ ನಂತರ ಕಾಂಗ್ರೆಸ್ ಈ ನೀತಿ ಮುಂದುವರಿಸುತ್ತಿದೆ. ಸಿದ್ದರಾಮಯ್ಯನವರು 5 ವರ್ಷಗಳ ಕಾಲ ಮುಖ್ಯಮಂತ್ರಿ ಆಗಿದ್ದರು. ಕೊನೆಯಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಅಂತ ಗೊತ್ತಾದಾಗ ವೀರಶೈವ ಲಿಂಗಾಯತ ಧರ್ಮ ಅಂತ ತಂದು ಬೆಂಕಿ ಹಚ್ಚುವ ಕೆಲಸ ಮಾಡಲಾಯಿತುʼʼ ಎಂದು ವಿಜಯೇಂದ್ರ ನೆನಪಿಸಿದರು.
ʻʻಇವತ್ತು ರಾಜ್ಯದಲ್ಲಿ ಭೀಕರ ಬರಗಾಲ ಇದೆ. ಆದರೆ, ಅದರ ಬಗ್ಗೆ ಸರ್ಕಾರಕ್ಕೆ ಯಾವ ಕಾಳಜಿಯೂ ಇಲ್ಲ. ಬೇಜವಾಬ್ದಾರಿಯಿಂದ ನಡೆದುಕೊಳ್ತಾ ಇದೆʼʼ ಎಂದು ವಿಜಯೇಂದ್ರ ವಾಗ್ದಾಳಿ ನಡೆಸಿದರು.
ʻʻಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ 20 ಸ್ಥಾನ ಗೆಲ್ಲುತ್ತೇವೆ ಎಂದು ಕಾಂಗ್ರೆಸ್ ಪಕ್ಷ ಕನಸು ಕಾಣುತ್ತಿದೆ. ಆದರೆ ಪಂಚ ರಾಜ್ಯ ಚುನಾವಣೆ ರಿಸಲ್ಟ್ ಬಂದ ಮೇಲೆ ಮೋದಿ ಗ್ಯಾರಂಟಿ ಏನು, ಅದರ ತಾಕತ್ತೇನು ಎನ್ನುವುದು ಗೊತ್ತಾಗಿದೆ. ಈ ವಿಷ್ಯ ಗೊತ್ತಾದ ಕಾರಣಕ್ಕಾಗಿಯೇ ಕಾಂಗ್ರೆಸ್ ಸಮಾಜದಲ್ಲಿ ವಿಷ ಬೀಜ ಬಿತ್ತನೆ ಮಾಡುವ ಕೆಲಸ ಮಾಡ್ತಾ ಇದೆʼʼ ಎಂದು ವಿಜಯೇಂದ್ರ ಆರೋಪಿಸಿದರು.
ಸಮವಸ್ತ್ರ ಸಂಹಿತೆ ಹಿಂದಿನಿಂದಲೂ ಜಾರಿಯಲ್ಲಿದೆ
ʻʻಶಾಲಾ ಕಾಲೇಜುಗಳಲ್ಲಿ ಸಮವಸ್ತ್ರ ಸಂಹಿತೆ ಸಿದ್ದರಾಮಯ್ಯ ಅವರು ಬಂದ್ಮೇಲೆ ಮಾಡಿದ್ದು ಅಲ್ಲ. ಈ ಹಿಂದೆಯಿಂದಲೂ ಸಹ ಇದೆ. ಮಕ್ಕಳು ಒಳ್ಳೆ ಪ್ರಜೆಗಳಾಗಬೇಕು ಎಂದಲ್ಲವೇ ಶಿಕ್ಷಣ ಕೊಡೋದು? ಯುನಿಫಾರ್ಮ್ ಕೂಡ ಅದಕ್ಕಾಗಿಯೇ ಮಾಡಿರುವುದುʼʼ ಎಂದು ಹೇಳಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು, ಕಾಂಗ್ರೆಸ್ ಪಕ್ಷಕ್ಕೆ ಯಾವಾಗ ಎಲೆಕ್ಷನ್‌ನಲ್ಲಿ ಸೋಲುತ್ತದೆ ಅಂತ ಗೊತ್ತಾಗುತ್ತೋ ಅವಾಗೆಲ್ಲ ಧರ್ಮದ, ಈ ರೀತಿಯ ವಿಚಾರ ಎಳೆದು ತರುತ್ತದೆʼʼ ಎಂದರು.
ಸರ್ಕಾರ ಇದೆಯಾ? ಸಚಿವರು ಇದ್ದಾರಾ: ವಿಜಯೇಂದ್ರ ಪ್ರಶ್ನೆ
ʻʻರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹೇಗೆ ಹಾಳಾಗಿದೆ ಅಂತ ಎಲ್ಲರಿಗೂ ಗೊತ್ತು. ಸರ್ಕಾರ ಬಂದು ಆರು ತಿಂಗಳಲ್ಲಿ ಏನೇನಾಗಿದೆ ಎನ್ನುವುದೂ ಗೊತ್ತು. ಬೆಳಗಾವಿಯ ವಂಟಮೂರಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ್ದು, ಶಾಲಾ ಮಕ್ಕಳನ್ನು ಮಲ ಗುಂಡಿಗೆ ಇಳಿಸುವುದು, ಮಕ್ಕಳ ಕೈಯಲ್ಲಿ ಶೌಚಗುಂಡಿ ಕ್ಲೀನ್ ಮಾಡಿಸುವುದು ಮೊದಲಾದ ಗಂಭೀರ ಘಟನೆಗಳನ್ನು ನೋಡಿದಾಗ ಈ ರಾಜ್ಯದಲ್ಲಿ ಸರ್ಕಾರ ಇದೆಯಾ? ಸಚಿವರು ಇದ್ದಾರಾ ಎಂಬ ಅನುಮಾನ ಬರುತ್ತಿದೆ.ʼʼ ಎಂದು ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದರು.
ʻʻಸರ್ಕಾರ ಬಂದು ಆರು ತಿಂಗಳು ಆಗಿದೆ. ಯಾವುದಾದರೂ ಒಂದು ಯೋಜನೆ ತಂದಿದ್ದಾರಾ ಇವರು. ಏನನ್ನಾದರೂ ಮಾಡಿದ್ದಾರಾ? ರೈತರಿಗೆ ಏನಾದ್ರೂ ಸಹಾಯ ಮಾಡಿದ್ದಾರಾ? ಇದನ್ನೆಲ್ಲಾ ಮಾಡೋಕೆ ಆಗದೇ ಇರೋರು ಹಿಜಾಬ್ ಬಗ್ಗೆ ಮಾತಾಡ್ತಾರೆʼʼ ಎಂದು ವಿಜಯೇಂದ್ರ ಗುಡುಗಿದರು.