Site icon Vistara News

Hit and Run Case : ಬೆಂಗಳೂರಿನಲ್ಲಿ ಹಿಟ್‌ ಆ್ಯಂಡ್ ರನ್‌; ಶ್ರೀರಂಗಪಟ್ಟಣಕ್ಕೆ ಹೊರಟಿದ್ದ ಮಹಿಳೆ ಮೃತ್ಯು

Hit and Run Case Bangalore Asharani

ಬೆಂಗಳೂರು: ಬೆಂಗಳೂರಿನಲ್ಲಿ ಬೆಳಗ್ಗೆ ಬೆಳಗ್ಗೆ ಹಿಟ್​ ಆ್ಯಂಡ್​ ರನ್ (Hit and Run Case)​ ಮಹಿಳೆಯೊಬ್ಬರು (Woman death) ಬಲಿಯಾಗಿದ್ದಾರೆ. ಮಹಾಲಕ್ಷ್ಮೀ ಲೇಔಟ್ ಮೆಟ್ರೋ ನಿಲ್ದಾಣ ಬಳಿ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು 62 ವರ್ಷದ ಆಶಾರಾಣಿ ಎಂಬವರು ಮೃತಪಟ್ಟಿದ್ದಾರೆ. ಅಪರಿಚಿತ ವಾಹನ ಡಿಕ್ಕಿ ಹೊಡೆದು ಪರಾರಿಯಾಗಿದ್ದು, ಮಹಿಳೆಯನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ಪ್ರಾಣಬಿಟ್ಟಿದ್ದಾರೆ.

ಆಶಾರಾಣಿ ಅವರು ಬೆಂಗಳೂರಿನ (Bangalore News) ಮಹಾಲಕ್ಷ್ಮಿ ಲೇಔಟ್‌ನ ನಿವಾಸಿಯಾಗಿದ್ದು, ಅವರು ಶ್ರೀರಂಗಪಟ್ಟಣಕ್ಕೆ ಹೋಗಲು ಬೆಳಗಿನ‌ ಜಾವ 5:40ರ ಸುಮಾರಿಗೆ ಮನೆ ಬಿಟ್ಟು ಮಹಾಲಕ್ಷ್ಮಿ ಲೇಔಟ್ ಬಸ್ ನಿಲ್ದಾಣಕ್ಕೆ ಬರುತ್ತಿದ್ದರು ಎನ್ನಲಾಗಿದೆ. ಈ ವೇಳೆ ಯಾವುದೋ ವಾಹನ ಅವರಿಗೆ ಡಿಕ್ಕಿ ಹೊಡೆದು ಪರಾರಿಯಾಗಿದೆ.

ನಸುಕಿನ ವೇಳೆ ಬೆಳಕು ಕಡಿಮೆ ಇದ್ದ ಕಾರಣ ಯಾವ ವಾಹನ ಡಿಕ್ಕಿ ಹೊಡೆದಿದೆ ಎಂಬುದು ಪತ್ತೆಯಾಗಿಲ್ಲ. ಇದೀಗ ಪೊಲೀಸರು ಆ ಭಾಗದಲ್ಲಿ ಆ ಹೊತ್ತಿನ ಸಿಸಿ ಟಿವಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಿದ್ದಾರೆ. ಹಿಟ್‌ ಎಂಡ್‌ ರನ್‌ ಮಾಡಿ ಹೋದ ವಾಹನವನ್ನು ಪತ್ತೆ ಹಚ್ಚಲು ಯತ್ನಿಸುತ್ತಿದ್ದಾರೆ.

ಬೆಂಗಳೂರಿನಲ್ಲಿ ಕಳೆದ ಕೆಲವು ಸಮಯದಿಂದ ಹಿಟ್‌ ಅಂಡ್‌ ರನ್‌ ಪ್ರಕರಣಗಳು ಹೆಚ್ಚಾಗುತ್ತಿವೆ. ಅದರಲ್ಲೂ ರಾತ್ರಿಯ ಹೊತ್ತು ಮತ್ತು ಮುಂಜಾನೆ ವಾಹನಗಳು ಅತಿವೇಗವಾಗಿ ಮತ್ತು ವಿವೇಚನೆ ಇಲ್ಲದೆ ಸಾಗಿ ಜೀವವನ್ನು ಬಲಿ ಪಡೆಯುತ್ತಿವೆ.

ಇದನ್ನೂ ಓದಿ: Murder Case : ಮಾಟ ಮಂತ್ರಕ್ಕೆ ಹೆಂಡ್ತಿ ಸಾಯದ್ದಕ್ಕೆ ಸುಪಾರಿ ಕೊಟ್ಟು ಕೊಂದ

ಮಚ್ಚಿನಿಂದ ಕೊಚ್ಚಿ ಅತಿಥಿ ಶಿಕ್ಷಕನ ಕೊಲೆ

ತುಮಕೂರು: ಅತಿಥಿ ಶಿಕ್ಷಕರೊಬ್ಬರನ್ನು ದುಷ್ಕರ್ಮಿಗಳು ಮಚ್ಚಿನಿಂದ ಕೊಚ್ಚಿ ಕೊಲೆ (Guest teacher Murder) ಮಾಡಿದ ಭೀಕರ ಘಟನೆ (Murder Case) ಕುಣಿಗಲ್ ತಾಲೂಕಿನ (Tumkur News) ಕುಳ್ಳನಂಜಯ್ಯನಪಾಳ್ಯದಲ್ಲಿ ನಡೆದಿದೆ. ಮೋದೂರು ಶಾಲೆಯಲ್ಲಿ ಅತಿಥಿ ಶಿಕ್ಷಕನಾಗಿದ್ದ ಮರಿಯಪ್ಪ (47) ಅವರೇ ಕೊಲೆಯಾದವರು.

ಮೋದೂರು ಶಾಲೆಯಲ್ಲಿ ಶಿಕ್ಷಕರಾಗಿದ್ದು ಜನಾನುರಾಗಿಯಾಗಿದ್ದ ಮರಿಯಪ್ಪ ಅವರ ಶವ ಕುಳ್ಳನಂಜಯ್ಯನ ಪಾಳ್ಯದ ಜಮೀನೊಂದರಲ್ಲಿ ಶನಿವಾರ ಮುಂಜಾನೆ ಪತ್ತೆಯಾಗಿದ್ದು ತಲ್ಲಣದ ಅಲೆಗಳನ್ನು ಸೃಷ್ಟಿಸಿದೆ. ದುಷ್ಕರ್ಮಿಗಳು ಅವರನ್ನು ಜಮೀನಿನ ಮಧ್ಯ ಭಾಗದಲ್ಲಿ ಕೊಲೆ ಮಾಡಿ ಎಸೆದು ಹೋಗಿದ್ದಾರೆ. ಅವರ ತಲೆ ಮತ್ತು ಭುಜದ ಭಾಗಕ್ಕೆ ಮಚ್ಚಿನಿಂದ ಕಡಿಯಲಾಗಿದೆ. ಹಲವಾರು ಬಾರಿ ತಲೆಯನ್ನು ಕೊಚ್ಚಿದಂತೆ ಕಾಣುತ್ತಿದ್ದು, ಭಯಾನಕ ಪರಿಸ್ಥಿತಿ ನಿರ್ಮಾಣವಾಗಿದೆ.

ಒಂದಷ್ಟು ಜನ ಜಮೀನಿಗೆ ಬಂದು ಜತೆಯಾಗಿ ಕುಳಿತು ಬಳಿಕ ಕೊಲೆ ಮಾಡಿದಂತೆ ಕಾಣುತ್ತಿದೆ. ಯಾಕೆಂದರೆ ಕೊಲೆ ನಡೆದ ಜಾಗದಲ್ಲಿ ಮಾತ್ರ ರಕ್ತ ಹರಿದಿದೆ. ಮರಿಯಪ್ಪ ಅವರು ಸ್ವಲ್ಪ ಮಟ್ಟಿಗೆ ತಪ್ಪಿಸಿಕೊಳ್ಳಲು ಪ್ರಯತ್ನ ಮಾಡಿದಂತೆ ಕಾಣುತ್ತಿದೆಯಾದರೂ ಎದ್ದು ನಿಲ್ಲುವಷ್ಟಕ್ಕೆ ಅವಕಾಶ ಸಿಕ್ಕಿಲ್ಲ ಎಂಬಂತೆ ಕಾಣುತ್ತಿದೆ.

ಸದ್ಯದ ಮಟ್ಟಿಗೆ ಕೊಲೆಗೆ ಕಾರಣ ತಿಳಿದು ಬಂದಿಲ್ಲ. ಬೆಳಗ್ಗೆ ಶವ ಪತ್ತೆಯಾಗುತ್ತಿದ್ದಂತೆಯೇ ಸಾವಿರಾರು ಮಂದಿ ಜಮೀನಿನ ಸುತ್ತ ನೆರೆದಿದ್ದಾರೆ. ಅವರ ಗೆಳೆಯರು ಮತ್ತು ಯಾರ ಜತೆ ದ್ವೇಷವಿತ್ತು, ಅವರ ವೈಯಕ್ತಿಕ ನಡವಳಿಕೆಗಳ ವಿಚಾರದಲ್ಲಿ ಜನ ಚರ್ಚೆ ಮಾಡುತ್ತಿದ್ದಾರೆ. ಕುಣಿಗಲ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಶ್ವಾನದಳವನ್ನು ಕೂಡಾ ಕರೆಸಲಾಗಿದೆ. ಈ ಕೊಲೆ ಪ್ರಕರಣವನ್ನು ಬೇಧಿಸಲು ಸಾಧ್ಯವಿದೆ ಎಂಬ ನಂಬುಗೆಯನ್ನು ಜನರು ವ್ಯಕ್ತಪಡಿಸಿದ್ದಾರೆ.

Exit mobile version