Site icon Vistara News

Honey Trap: ಸುಂದರಿ ಅಂತ ಒಳಗೆ ಹೋದರೆ ʼಕತ್ನಾʼ ಖಚಿತ! ಬಾಂಬೆ ಮಾಡೆಲ್‌ ಬಳಸಿ ಹನಿಟ್ರ್ಯಾಪ್

honey trap JP nagar

ಬೆಂಗಳೂರು: ಬಾಂಬೆಯ ಮಾಡೆಲ್‌ ಒಬ್ಬಾಕೆಯನ್ನು ಬಳಸಿಕೊಂಡು ಬೆಂಗಳೂರಿನಲ್ಲಿ ಹನಿಟ್ರ್ಯಾಪ್ (Honey Trap) ನಡೆಸುತ್ತಿದ್ದ ಜಾಲವೊಂದಕ್ಕೆ ಖೆಡ್ಡಾಕ್ಕೆ ಕೆಡವಲಾಗಿದೆ. ಇವರ ಜಾಲ ಕಾರ್ಯಾಚರಿಸುತ್ತಿದ್ದ ರೀತಿ ವಿಶಿಷ್ಟವಾಗಿದೆ.

ಓರ್ವ ಯುವತಿ ಸೇರಿ ಐವರ ಖತರ್ನಾಕ್ ಗ್ಯಾಂಗ್‌ನಿಂದ ಈ ಕೃತ್ಯ ನಡೆಯುತ್ತಿತ್ತು. ಈ ಹೈಟೆಕ್ ಹನಿಟ್ರ್ಯಾಪ್ (honey trap case) ಜಾಲವನ್ನು ಭೇದಿಸಿರುವ ಪುಟ್ಟೇನಹಳ್ಳಿ ಪೊಲೀಸರು (bangalore police) ಮೂವರನ್ನು ಬಂಧಿಸಿದ್ದಾರೆ. ಇನ್ನಿಬ್ಬರು ಪರಾರಿಯಾಗಿದ್ದಾರೆ. ಶರಣ ಪ್ರಕಾಶ ಬಳಿಗೇರ, ಅಬ್ದುಲ್ ಖಾದರ್, ಯಾಸಿನ್ ಬಂಧಿತರು, ನದೀಮ್ ಮತ್ತು ಯುವತಿ ನೇಹಾ ಅಲಿಯಾಸ್‌ ಮೆಹರ್ ನಾಪತ್ತೆಯಾಗಿದ್ದಾರೆ.

20 ವರ್ಷದ ಯುವಕರಿಂದ ಹಿಡಿದು 50 ವರ್ಷದ ವ್ಯಕ್ತಿಗಳು ಇವರ ಟಾರ್ಗೆಟ್ ಆಗಿದ್ದರು. ಯುವತಿ ನೇಹಾ @ ಮೆಹರ್ ಟೆಲಿಗ್ರಾಮ್ ಮೂಲಕ ಕೆಲವರನ್ನು ಸಂಪರ್ಕ ಮಾಡುತ್ತಿದ್ದಳು. ಅವರನ್ನು ಪ್ರಚೋದಿಸಿ ಲೈಂಗಿಕ ಕ್ರಿಯೆಗೆ ಎಂದು ಮನೆಯೊಂದಕ್ಕೆ ಕರೆಸಿಕೊಳ್ಳುತ್ತಿದ್ದಳು. ಜೆಪಿ ನಗರ ಐದನೇ ಹಂತದಲ್ಲಿರುವ ಈ ಮನೆಗೆ ಬರುತ್ತಿದ್ದ ಚಪಲಚಿತ್ತರು ಮನೆ ಬೆಲ್ ಮಾಡುತ್ತಿದ್ದಂತೆ ಈ ಸುಂದರಿ ಬಿಕಿನಿಯಲ್ಲಿ ಸ್ವಾಗತ ಕೋರುತ್ತಿದ್ದಳು. ಹಗ್ ಮಾಡಿ ವೆಲ್‌ಕಮ್ ಮಾಡುತ್ತಿದ್ದಳು.

ಇವರ ರಂಗಿನಾಟದ ಹಸಿ ಬಿಸಿ ದೃಶ್ಯಗಳನ್ನು ಸಿಸಿಟಿವಿ ಸೆರೆ ಹಿಡಿಯುತ್ತಿತ್ತು. ಅತಿಥಿ ಮನೆಯೊಳಗೆ ಎಂಟ್ರಿಯಾಗಿ ಮೂರೇ ನಿಮಿಷಕ್ಕೆ ವಿಲನ್‌ಗಳು ಎಂಟ್ರಿ ಆಗುತ್ತಿದ್ದರು. ಯುವತಿ ಜೊತೆಗೆ ಇರುವ ವಿಡಿಯೋ ಮೊಬೈಲ್‌ನಲ್ಲಿ ಸೆರೆ ಹಿಡಿಯುತ್ತಿದ್ದರು. ಸಂತ್ರಸ್ತನ ಬಳಿ ಇರುವ ಮೊಬೈಲ್ ಕಸಿದುಕೊಂಡು, ಅದರಲ್ಲಿರುವ ನಂಬರ್‌ಗಳನ್ನು ನೋಟ್ ಮಾಡಿಕೊಳ್ಳುತ್ತಿದ್ದರು. ನಂತರ ಹಣಕ್ಕೆ ಡಿಮ್ಯಾಂಡ್‌ ಮಾಡಿ, ಹಣ ಕೊಡದಿದ್ದರೆ ವಿಡಿಯೋವನ್ನು ಸ್ನೇಹಿತರು, ಸಂಬಂಧಿಕರು, ಕುಟುಂಬಸ್ಥರಿಗೆ ಕಳಿಸುವುದಾಗಿ ಬೆದರಿಕೆ ಒಡ್ಡುತ್ತಿದ್ದರು.

ಜತೆಗೆ, ಈ ಯುವತಿ ಮುಸ್ಲಿಂ, ಆಕೆಯನ್ನು ಮದುವೆ ಆಗಬೇಕು ಎಂದು ಡ್ರಾಮಾ ಸೃಷ್ಟಿಸುತ್ತಿದ್ದರು. ಮದುವೆ ಆಗಬೇಕಾದರೆ ʼಕತ್ನಾʼ ಮಾಡಿಸಬೇಕು, ಮುಸ್ಲಿಂ ಆಗಿ ಕನ್ವರ್ಟ್ ಆಗಬೇಕು ಎಂದು ಧಮಕಿ ಹಾಕುತ್ತಿದ್ದರು. ಸಂತ್ರಸ್ತರು ಇದರಿಂದ ಬೆಚ್ಚಿಬಿದ್ದು ಅವರು ಕೇಳಿದಷ್ಟು ಹಣ ನೀಡಿ ಪಾರಾಗಲು ಮುಂದಾಗುತ್ತಿದ್ದರು. ಹೀಗೆ ನೊಂದ ವ್ಯಕ್ತಿಯೊಬ್ಬರು ಪುಟ್ಟೇನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅದರ ಹಿನ್ನೆಲೆಯಲ್ಲಿ ಮೂವರನ್ನು ಬಂಧಿಸಲಾಗಿದೆ.

ಇದೇ ರೀತಿ 12ಕ್ಕೂ ಹೆಚ್ಚು ಜನರಿಗೆ ಈ ಖತರ್‌ನಾಕ್‌ ಗ್ಯಾಂಗು ಹನಿಟ್ರ್ಯಾಪ್ ಮಾಡಿರುವುದು ಬೆಳಕಿಗೆ ಬಂದಿದೆ. ಸುಮಾರು 30 ಲಕ್ಷ ರೂ.ಗೂ ಹೆಚ್ಚಿನ ಹಣ ವಸೂಲಿ ಮಾಡಿಕೊಂಡಿದ್ದಾರೆ. ಯುವತಿ ಬಾಂಬೆ ಮೂಲದ ಮಾಡೆಲ್‌ ಎಂದು ತೋರಿಸಲಾಗುತ್ತಿದ್ದು, ನೈಜ ಚೆಹರೆ ಪತ್ತೆ ಮಾಡಲಾಗುತ್ತಿದೆ.

ಇದನ್ನೂ ಓದಿ: Honey Trap: ಕಿರುತೆರೆ ನಟಿಯ ‘ಹನಿಟ್ರ್ಯಾಪ್‌’ನಲ್ಲಿ 75ರ ವೃದ್ಧ ವಿಲವಿಲ, 11 ಲಕ್ಷ ರೂ. ಸುಲಿಗೆ!

Exit mobile version