ಬೆಂಗಳೂರು: ಸಾಮಾಜಿಕ ಜಾಲತಾಣಗಳನ್ನು ಬಳಸಿ ಪರಿಚಯ ಮಾಡಿಕೊಂಡು ʻಹನಿಟ್ರ್ಯಾಪ್ʼ ಮಾಡುವುದು ಹೆಚ್ಚಾಗುತ್ತಿದೆ. ಇದೀಗ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹನಿಟ್ರ್ಯಾಪ್ ಮಾಡಿ ನಂತರ ಸಿಬಿಐ ಹೆಸರಿನಲ್ಲಿ ಲಕ್ಷಾಂತರ ರೂ. ವಸೂಲಿ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಫೇಸ್‌ಬುಕ್‌ನಲ್ಲಿ ಪರಿಚಯವಾಗಿದ್ದ ಯುವತಿ ಜತೆ ಚಾಟ್ ಮಾಡಿದ್ದ ಯುವಕ ಖದೀಮರ ಬಲೆಗೆ ಬಿದ್ದು ಹಣ ಕಳೆದುಕೊಂಡಿದ್ದಾನೆ. ಬೆಂಗಳೂರಿನ ಈ ಯುವಕ ಫೇಸ್‌ಬುಕ್‌ನಲ್ಲಿ ಪರಿಚಯವಾದ ಯುವತಿಯೊಂದಿಗೆ ವಿಡಿಯೊ ಕಾಲ್ ಮೂಲಕ ಚಾಟಿಂಗ್ ನಡೆಸುತ್ತಿದ್ದ. ವಿಡಿಯೋ ಕಾಲಿಂಗ್‌ನಲ್ಲಿ ಇಬ್ಬರೂ ಬೆತ್ತಲಾಗಿ ಮಾತುಕತೆ ನಡೆಸುತ್ತಿದ್ದರು. ಆದರೆ, ಯುವಕ ನಗ್ನ ವಿಡಿಯೋವನ್ನು ರೆಕಾರ್ಡ್ ಮಾಡಿಕೊಳ್ಳಲಾಗಿತ್ತು. ನಂತರ ಇದೇ ವಿಡಿಯೊವನ್ನು ಇಟ್ಟುಕೊಂಡು ಖದೀಮರು ಯುವಕನಿಗೆ ಬೆದರಿಕೆ ಹಾಕಲು ಆರಂಭಿಸಿದರು. ಹಣಕ್ಕೆ ಬೇಡಿಕೆಯಿಟ್ಟರು. ಆದರೆ ಯುವಕ ಹಣ ನೀಡಲು ಹಿಂದೇಟು ಹಾಕಿದ್ದಾನೆ. ಯುವಕ ಹಣ ನೀಡದಿದ್ದಾಗ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪಿಗಳಿಂದ ಬೆದರಿಕೆ ಕರೆ ಯುವಕನಿಗೆ ಬಂದಿತ್ತು.
ಇದನ್ನೂ ಓದಿ | ನಕಲಿ ಸಿಮ್ ಬಳಸಿ ಬೆದರಿಕೆ, ಹನಿಟ್ರ್ಯಾಪ್ ಮಾಡುತ್ತಿದ್ದವರು ಪೊಲೀಸ್ ಬಲೆಗೆ
ʻಈ ಪ್ರಕರಣ ಸಿಬಿಐಗೆ ಹೋಗಿದೆ. ಎಫ್ಐಆರ್ ದಾಖಲಾಗಿದೆʼ ಎಂದು ಖದೀಮರು ಯುವಕನಿಗೆ ಬೆದರಿಕೆ ಒಡ್ಡಿದ್ದಾರೆ. ಬೇರಾವುದೋ ಎಫ್ಐಆರ್‌ನ ಹೆಸರು ಎಡಿಟ್ ಮಾಡಿ ಅದನ್ನು ಯುವಕನಿಗೆ ಕಳಿಸಿ ಬೆದರಿಕೆ ಹಾಕಿ ಯುವಕನಿಂದ 5 ಲಕ್ಷ ಹಣ ವಸೂಲಿ ಮಾಡಿದ್ದಾರೆ. ಇದಲ್ಲದೆ ಸಿಬಿಐ ಅಧಿಕಾರಿಗಳು ನಿಮ್ಮ ಮನೆಗೆ ಬರುತ್ತಾರೆ ಎಂದು ಆರೋಪಿಗಳು ಯುವಕನಿಗೆ ಬೆದರಿಸಿದ್ದಾರೆ.
ಹಣ ಕಳೆದುಕೊಂಡಿದ್ದಲ್ಲದೆ ಖದೀಮರ ಮುಂದುವರಿದ ಬೆದರಿಕೆಯಿಂದ ಚಿಂತಿತನಾದ ಯುವಕ ಬೆಂಗಳೂರು ಆಗ್ನೇಯ ವಿಭಾಗದ ಸಿಇಎನ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ | ಪಾಕ್ ಮಹಿಳೆಯ ಜಾಲದಲ್ಲಿ ಭಾರತೀಯ ಸೈನಿಕ; ಹನಿಟ್ರ್ಯಾಪ್ ಆದವನೀಗ ಜೈಲಿನಲ್ಲಿ