Site icon Vistara News

GST | 12% ಜಿಎಸ್‌ಟಿ ಏರಿಕೆ ವಿರುದ್ಧ ಹೋಟೆಲ್‌ ಮಾಲೀಕರ ಆಕ್ರೋಶ

ಬೆಂಗಳೂರು: ಜೆಎಸ್‌ಟಿ (GST) ಏರಿಕೆಯನ್ನು ವಿರೋಧಿಸಿ ಬೆಂಗಳೂರು ನಗರದ ಹೋಟೆಲ್ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 12% ಜಿಎಸ್‌ಟಿ ಏರಿಕೆಯಾದರೆ ಇದರಿಂದ ಸಾಮಾನ್ಯ ಜನರಿಗೆ ತೊಂದರೆ ಆಗಲಿದೆ. ಹಾಗಾಗಿ ಈ ಆದೇಶವನ್ನು ಹಿಂಪಡೆಯಬೇಕು ಎಂದು ಹೋಟೆಲ್‌ ಮಾಲೀಕರು ಒತ್ತಾಯಿಸಿದ್ದಾರೆ.

12% ಜಿಎಸ್‌ಟಿ ಏರಿಕೆಯಾದ ಹಿನ್ನೆಲೆಯಲ್ಲಿ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಮಾತನಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “”ಈ ರೀತಿ ತೆರಿಗೆ ಹೆಚ್ಚಾದರೆ ಜನಸಾಮಾನ್ಯರಿಗೆ ಕಷ್ಟವಾಗುತ್ತದೆ. ಬೆಂಗಳೂರಿನಲ್ಲಿ ಅನೇಕ ಸಣ್ಣ ಮಟ್ಟದ ಹೋಟೆಲ್‌ಗಳಿವೆ. ಬಾಡಿಗೆ ನೀಡಿ ಹೋಟೆಲ್‌ಗಳನ್ನು ನಡೆಸುತ್ತಿರುವವರ ಸಂಖ್ಯೆಯೇ ಅಧಿಕವಾಗಿದೆ. ಅವುಗಳಿಂದ ಭಾರಿ ಮೊತ್ತದ ತೆರಿಗೆ ವಸೂಲಿ ಮಾಡಿದರೆ ಹೋಟೆಲ್‌ ಮಾಲೀಕರು ಪರದಾಡಬೇಕಾಗುತ್ತದೆʼʼ ಎಂದವರು ಹೇಳಿದ್ದಾರೆ.

“”ಯಾತ್ರಾ ಸ್ಥಳ ಹಾಗೂ ಸಣ್ಣ ಪಟ್ಟಣಗಳ ಹೋಟೆಲ್‌ಗಳಿಗೂ ಇದರ ಪರಿಣಾಮವಾಗಲಿದೆ. ಹೀಗಾಗಿ ಈ ಪ್ರಮಾಣದಲ್ಲಿ ಜಿಎಸ್‌ಟಿ ಏರಿಕೆ ಮಾಡುವುದು ಸರಿಯಲ್ಲ. ಜಿಎಸ್‌ಟಿ ಏರಿಕೆಯಾದರೆ ಹೋಟೆಲ್‌ನಲ್ಲಿ ತಿಂಡಿಗಳ ದರವನ್ನೂ ಏರಿಕೆ ಮಾಡಬೇಕಾಗುತ್ತದೆ. ಅಂತಿಮವಾಗಿ ಇದರ ಹೊರೆ ಗ್ರಾಹಕರ ಮೇಲೆ ಬೀಳುತ್ತದೆ. ಈ ಎಲ್ಲ ಕಾರಣಗಳಿಂದ ಜಿಎಸ್‌ಟಿ ಏರಿಕೆಯ ಆದೇಶವನ್ನು ಸರ್ಕಾರ ಹಿಂಪಡೆಯಬೇಕುʼʼ ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಒತ್ತಾಯಿಸಿದರು.

ಇದನ್ನೂ ಓದಿ: ಕೆಲವು ವಸ್ತುಗಳ ಮೇಲೆ ತೆರಿಗೆ ವಿನಾಯಿತಿ ರದ್ದುಪಡಿಸಲು ಜಿಎಸ್‌ಟಿ ಕೌನ್ಸಿಲ್‌ ಸಮ್ಮತಿ

Exit mobile version