Site icon Vistara News

Basavaraj Bommai Birthday Special : ಬೆರಳ ತುದಿಯಲ್ಲೇ ಕಾನೂನು, ನೀರಾವರಿ, ಗಡಿ ಮಾಹಿತಿ ಹೊಂದಿದ ಗಣಿ ಬೊಮ್ಮಾಯಿ

I am very grateful to J P Nadda Says Basavaraj Bommai

ಬೆಂಗಳೂರು: ಕರ್ನಾಟಕ ರಾಜ್ಯದ ಭೌಗೋಳಿಕತೆಯ ಕಾರಣಕ್ಕೆ ಸುತ್ತಮುತ್ತಲಿನ ಎಲ್ಲ ರಾಜ್ಯಗಳ ಜತೆಗೆ ನೀರಿನ ಹಂಚಿಕೆ ನಡೆದಿದೆ. ನೆರೆ ರಾಜ್ಯಗಳಾದ ಮಹಾರಾಷ್ಟ್ರ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಗೋವಾ ಜತೆಗೆ ನೀರಿನ ಹಂಚಿಕೆ, ಬೇಡಿಕೆ ಅನೇಕ ದಶಕಗಳಿಂದ ನಡೆಯುತ್ತಿದೆ. ಇವುಗಳಲ್ಲಿ ಅನೇಕ ಯೋಜನೆಗಳು ವಿವಾದಗಳೂ ಆಗಿವೆ.

ಅದೇ ರೀತಿ ಆಡಳಿತ ನಡೆಸುವಾಗ ಅನೇಕ ಸಂದರ್ಭದಲ್ಲಿ ಕಾನೂನು ವ್ಯಾಜ್ಯಗಳು ಎದುರಾಗುತ್ತವೆ. ಇದರ ಜತೆಗೆ ಮುಖ್ಯವಾಗಿ ಮಹಾರಾಷ್ಟ್ರ ಜತೆಗೆ ಗಡಿ ವಿವಾದ ಆಗಾಗ ತಲೆಯೆತ್ತುತ್ತಿರುತ್ತದೆ. ಇಂಥ ಕಗ್ಗಂಟಿನ ನಡುವೆ ಸಿಎಂ ಬಸವರಾಜ ಬೊಮ್ಮಾಯಿ ಅವರ ತಿಳುವಳಿಕೆ, ಜ್ಞಾನ ಹಾಗೂ ಅಧ್ಯಯನ ಕರ್ನಾಟಕದ ಉಪಯೋಗಕ್ಕೆ ಬರುತ್ತಿದೆ.

ನೀರಾವರಿ ಯೋಜನೆಗಳಲ್ಲಿ ಹಾಗೂ ನೀರಾವರಿ ವಿಷಯಗಳಲ್ಲಿ ಆಳವಾದ ಜ್ಞಾನ ಹೊಂದಿರುವ ಬೊಮ್ಮಾಯಿ, ತಾವು ಪ್ರತಿನಿಧಿಸುವ ಹಾವೇರಿ ಜಿಲ್ಲೆಯ ಶಿಗ್ಗಾಂವ್‌ನಲ್ಲಿ ಭಾರತದಲ್ಲೇ ಮೊದಲ ಶೇ.೧೦೦ ಕೊಳವೆ ನೀರಾವರಿ ಯೋಜನೆಯನ್ನು ಜಾರಿಗೆ ತಂದಿದ್ದರು.

ನೀರಾವರಿ ವಿಚಾರದಲ್ಲಿ ಬೊಮ್ಮಾಯಿ ಅವರ ಮಾತಿನಲ್ಲಿ ಸ್ಪಷ್ಟತೆ ಇರುತ್ತದೆ. “ನೀರಾವರಿ ವಿಚಾರದಲ್ಲಿ ಕರ್ನಾಟಕ ಮಧ್ಯಸ್ಥರದ ರಾಜ್ಯವಾಗಿದೆ. ಹೀಗಾಗಿ ನಮ್ಮ ಮೇಲಿರುವ ಮತ್ತು ಕೆಳಗಿರುವ ರಾಜ್ಯಗಳು ಆಗಾಗ ಜಲವಿವಾದ ತಗಾದೆ ತೆಗೆಯುತ್ತವೆ” ಎಂದು ಸಮಸ್ಯೆಯ ಮೂಲವನ್ನು ಬೊಮ್ಮಾಯಿ ವಿವರಿಸುತ್ತಾರೆ.

“ಕೃಷ್ಣಾ ನದಿಗೆ ಸಂಬಂಧಪಟ್ಟಂತೆ ಮೊದಲನೇ ಆದೇಶ ಬಚಾವತ್ ಆದೇಶ, ಎರಡನೇ ಅದೇಶ ಬ್ರಿಜೇಶ್ ಮಿಶ್ರಾ ಆದೇಶ. ಇವೆರಡೂ ಆದೇಶಗಳ ಅಧಿಸೂಚನೆಯಾಗಬೇಕಿದ್ದು, ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದೆ. ಅದರ ಜತೆಗೆ ಮಹದಾಯಿ ನದಿಯ ಆದೇಶ ಬಂದರೂ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಮೂರು ರಾಜ್ಯಗಳು ಹಂಚಿಕೆಯಾಗಿರುವ ನೀರಿನ ಬಗ್ಗೆ ತಕರಾರು ತೆಗೆದಿರುವುದರಿಂದ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದೆ” ಎಂದು ಕಾನೂನಿನ ಅತ್ಯಂತ ಸೂಕ್ಷ್ಮ ಸಂಗತಿಗಳನ್ನು ವಿವರಿಸಬಲ್ಲವರು ಬೊಮ್ಮಾಯಿ.

ಉತ್ತರ ಕರ್ನಾಟಕ ಮಾತ್ರವಲ್ಲ, ದಕ್ಷಿಣದ, ವಿಶೇಷವಾಗಿ ಕಾವೇರಿ ವಿಚಾರದಲ್ಲೂ ಅವರದ್ದು ಆಳವಾದ ಅಧ್ಯಯನವಿದೆ. ಸುಪ್ರೀಂಕೋರ್ಟ್‌ನಲ್ಲಿ ಕರ್ನಾಟಕದ ನೀರಾವರಿ ವಿಚಾರದಲ್ಲಿ ಪ್ರಕರಣಗಳ ವಿಚಾರಣೆ ನಡೆಯುತ್ತಿರುವಾಗ ಸ್ವತಃ ವಕೀಲರೇ ಬೊಮ್ಮಾಯಿ ಅವರನ್ನು ಸಂಪರ್ಕಿಸುತ್ತಿದ್ದರು. ನೀರಾವರಿ ಪ್ರದೇಶಗಳಲ್ಲಿನ ವಾಸ್ತವ ಸಂಗತಿಗಳು, ಕಾನೂನು ತೊಡಕುಗಳ ಮಾಹಿತಿಯನ್ನು ಪಡೆದು ನಂತರ ನ್ಯಾಯಾಲಯದಲ್ಲಿ ರಾಜ್ಯದ ಪರ ವಾದ ಮಾಡುತ್ತಿದ್ದರು. ಆ ಬಳಿಕ ಗೃಹ ಸಚಿವರಾಗಿ ಅವರು ಕಾನೂನು ಮತ್ತು ಶಿಸ್ತಿನ ಕುರಿತೂ ಅಪಾರ ಹಿಡಿತ ಹೊಂದಿದರು.

ಗಡಿ ವಿವಾದ
ಭಾಷಾವಾರು ರಾಜ್ಯಗಳ ರಚನೆಯಾಗಿ ಅದು ಅಂತಿಮವಾಗಿದ್ದರೂ ಮಹಾರಾಷ್ಟ್ರ ರಾಜಕಾರಣಿಗಳು ಹಾಗೂ ಪಕ್ಷಗಳು ಆಗಿಂದಾಗ್ಗೆ ಕಾಲು ಕೆರೆದು ಜಗಳ ತೆಗೆಯುತ್ತಿರುತ್ತವೆ. ಇತ್ತೀಚೆಗಷ್ಟೆ ಮಹಾರಾಷ್ಟ್ರ ಗಡಿ ವಿವಾದ ಮತ್ತೆ ತಲೆಯೆತ್ತಿ, ರಾಜಕೀಯ ಸಂದಗ್ಧ ಸ್ಥಿತಿಯೂ ಸೃಷ್ಟಿಯಾಗಿತ್ತು.

ಮುಖ್ಯವಾಗಿ ಎರಡೂ ರಾಜ್ಯದಲ್ಲಿ ಹಾಗೂ ಕೇಂದ್ರದಲ್ಲೂ ಬಿಜೆಪಿ ಆಡಳಿತದಲ್ಲಿರುವಾಗ ಒತ್ತಡ ಹೆಚ್ಚಾಗಿತ್ತು. ಈ ವಿವಾದವನ್ನು ಒಂದೆಡೆ ಗೃಹ ಸಚಿವ ಅಮಿತ್‌ ಶಾ ಅವರ ಜತೆಗೂಡಿ ತಣ್ಣಗಾಗಿಸಲು ಪ್ರಯತ್ನಿಸಿದರೆ ಮತ್ತೊಂದೆಡೆ ಮುಕುಲ್‌ ರೋಹಟಗಿ ನೇತೃತ್ವದಲ್ಲಿ ಅನುಭವಿ ವಕೀಲರ ತಂಡ ರಚಿಸಿ ಸಮರ್ಥ ವಾದ ಮಂಡನೆಗೆ ಭೂಮಿಕೆ ಸಿದ್ಧಪಡಿಸಿದರು. ಅತ್ತ ಕರ್ನಾಟಕಕ್ಕೆ ಸೇರಬೇಕು ಎಂದು ಅನೇಖ ವರ್ಷಗಳಿಂದ ಪ್ರಯತ್ನಿಸುತ್ತಿರುವ ಗ್ರಾಮ ಪಂಚಾಯತಿ ವಿಚಾರಗಳನ್ನೂ ಪ್ರಸ್ತಾಪಿಸಿ ರಾಜಕೀಯವಾಗಿ ಮಹಾರಾಷ್ಟ್ರಕ್ಕೆ ಪ್ರತ್ಯುತ್ತರ ನೀಡಿದರು.

ಇದನ್ನೂ ಓದಿ : Basavaraj Bommai Birthday: ಸಿಎಂ ಬಸವರಾಜ ಬೊಮ್ಮಾಯಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ

ಕಾನೂನು ಪರಿಣತಿ

ಆಡಳಿತದಲ್ಲಿ ವಿವಿಧ ಕಾನೂನು ವ್ಯಾಜ್ಯಗಳು ಎದುರಾಗುತ್ತವೆ. ವಕೀಲರ ತಂಡಕ್ಕೆ ಸೂಕ್ತ ಮಾರ್ಗದರ್ಶನ ನೀಡದಿದ್ದರೆ ಪ್ರಕರಣಗಳಲ್ಲಿ ಸೋಲಾಗಿ ಯೋಜನೆಗಳು, ನೀತಿಗಳಿಗೆ ಹಿನ್ನಡೆ ಆಗುತ್ತವೆ. ಎಸ್‌ಸಿಎಸ್‌ಟಿ ಮೀಸಲಾತಿ ಕುರಿತಂತೆ ನ್ಯ. ಸದಾಶಿವ ಆಯೋಗದ ವರದಿಯನ್ನು ಜಾರಿ ಮಾಡಲು ಎಲ್ಲ ಕಾನೂನು ಪ್ರಕ್ರಿಯೆ ಮೂಲಕ ಸರ್ಕಾರ ಸಾಗುತ್ತಿದೆ. ಮೀಸಲಾತಿಯನ್ನು ಹೆಚ್ಚಿಸಿದ ನಂತರ ಅದು ಮತ್ತೆ ಕಾನೂನು ವ್ಯಾಜ್ಯದಲ್ಲಿ ಸೋಲುಂಟಾಗಬಾರದು ಎಂದು, ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಸೇರ್ಪಡೆ ಮಾಡಲು ಪ್ರಯತ್ನ ನಡೆಸುತ್ತಿದ್ದಾರೆ.

ಇಂಜಿನಿಯರಿಂಗ್‌ ಪದವೀಧರರಾಗಿದ್ದರೂ ಆಸಕ್ತಿಯಿಂದಾಗಿ ಪಡೆದುಕೊಂಡ ಅಗಾಧ ಕಾನೂನು ಜ್ಞಾನವನ್ನು ಆಡಳಿತದಲ್ಲಿ ಬಳಕೆ ಮಾಡುತ್ತಿದ್ದಾರೆ.

Exit mobile version