Site icon Vistara News

HSRP Number Plate ಅಪ್ಲೈ ಮಾಡುವಾಗ ಹುಷಾರ್‌; ನಕಲಿ ಲಿಂಕ್‌ಗಳಿಂದ ಮೋಸ ಹೋಗದಿರಿ!

HSRP Number Plate fake links

ಬೆಂಗಳೂರು: ಈಗ ರಾಜ್ಯದೆಲ್ಲೆಡೆ ಹಳೆಯ ವಾಹನಗಳಿಗೆ (Old Vehicles) ಅತಿ ಸುರಕ್ಷಿತ ನೋಂದಣಿ ಫಲಕ (ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್‌ ನಂಬರ್‌ ಪ್ಲೇಟ್‌ – High Security Registration Number Plate- HSRP Number plate) ಹಾಕುವ ಧಾವಂತ ಕಂಡುಬರುತ್ತಿದೆ. ‌ ರಾಜ್ಯ ಸರ್ಕಾರ ಫೆ. 17ರ ಅಂತಿಮ ಗಡುವನ್ನು ಈ ಹಿಂದೆ ವಿಧಿಸಿದ್ದರೂ ಅದನ್ನು ಮೂರು ತಿಂಗಳು ವಿಸ್ತರಿಸಲಾಗಿದೆ. ಜನರು ಈಗ HSRP ನಂಬರ್‌ ಪ್ಲೇಟ್‌ ಮಾಡುವ ಬಗ್ಗೆ ಆನ್‌ಲೈನ್‌ನಲ್ಲಿ ಹುಡುಕಾಟ ನಡೆಸುತ್ತಿದ್ದಾರೆ. ಜನರ ಈ ತುರ್ತನ್ನು ಮನಗಂಡಿರುವ ಖದೀಮರು ಈಗ ಇಲ್ಲೂ ವಂಚನೆಗೆ ಮುಂದಾಗಿದ್ದಾರೆ. ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ನೋಂದಣಿ ಮಾಡಲು ಹೋದರೆ ನಕಲಿ ನಂಬರ್‌ ಮತ್ತು ಕ್ಯೂಆರ್‌ ಕೋಡ್‌ಗೆ ಹೋಗುವಂತೆ ನಕಲಿ ಲಿಂಕ್‌ಗಳನ್ನು ಸೃಷ್ಟಿಸಿದ್ದಾರೆ. ಹೀಗಾಗಿ ರಿಜಿಸ್ಟ್ರೇಷನ್‌ ಮಾಡಿಸಿಕೊಳ್ಳುವವರು ಎಚ್ಚರಿಕೆಯಿಂದ ಇರಿ ಎಂದು ಪೊಲೀಸರು ಸೂಚಿಸಿದ್ದಾರೆ.

ಸಾರ್ವಜನಿಕರು, ಪೊಲೀಸರ ಗಮನಕ್ಕೆ ತಂದ ರಕ್ಷಿತ್‌ ಪಾಂಡೆ

ರಕ್ಷಿತ್‌ ಪಾಂಡೆ ಎಂಬವರು ಎಚ್‌.ಎಸ್‌.ಆರ್‌ಪಿ ನಂಬರ್‌ ಪ್ಲೇಟ್‌ ರಿಜಿಸ್ಟ್ರೇಷನ್‌ಗೆ ಪ್ರಯತ್ನಿಸಿದಾಗ ಅಲ್ಲಿ ಕಂಡುಬಂದ ಕ್ಯೂಆರ್‌ ಕೋಡ್‌ ಮೊಹಮ್ಮದ್‌ ಆಸಿಫ್‌ ಎಂಬಾತನಿಗೆ ಸೇರಿದ ಅಕೌಂಟ್‌ನದ್ದಾಗಿತ್ತು. ಹಾಗಾಗಿ ರಿಜಿಸ್ಟ್ರೇಷನ್‌ ವೇಳೆ ಎಚ್ಚರ ವಹಿಸಿ ಎಂದು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ ಮತ್ತು ಬೆಂಗಳೂರು ಪೊಲೀಸರಿಗೂ ಮಾಹಿತಿ ನೀಡಿದ್ದಾರೆ. ಇದನ್ನು ಪರಿಗಣಿಸಿದ ಪೊಲೀಸರು ತನಿಖೆ ಭರವಸೆ ನೀಡಿದ್ದಾರೆ ಮತ್ತು ಸಾರ್ವಜನಿಕರಿಗೂ ಕೆಲವು ಸಲಹೆಗಳನ್ನು ನೀಡಿದ್ದಾರೆ.

ರಕ್ಷಿತ್‌ ಪಾಂಡೆ ಅವರ ಪೋಸ್ಟ್‌ ಹೀಗಿದೆ.: I went online to get my hsrp plate registration and clicked on the first link. Filled in the details. The link led me to qr code and I opened to find the payee was a one named Mohd Asif@BlrCityPolice@blrcitytraffic For reference I’m attaching the qr so people don’t get scammed.

ಅಪ್ಲೈ ಮಾಡುವಾಗ ಹುಷಾರ್‌ ಎಂದ ಬೆಂಗಳೂರು ಪೊಲೀಸ್‌

ಎಚ್ಎಸ್ಆರ್‌ಪಿ ನಂಬರ್‌ ಪ್ಲೇಟ್ ರಿಜಿಸ್ಟ್ರೇಷನ್‌ ಹೆಸರಲ್ಲಿ ವಂಚನೆಗೆ ಯತ್ನ ನಡೆಯುತ್ತಿರುವುದನ್ನು ಪರಿಗಣಿಸಿದ ಪೊಲೀಸ್‌ ಇಲಾಖೆ ಈ ಬಗ್ಗೆ ಹುಷಾರಾಗಿರುವಂತೆ ಸಾರ್ವಜನಿಕರಿಗೆ ಮನವಿ ಮಾಡಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ದಕ್ಷಿಣ ವಿಭಾಗದ ಸಂಚಾರಿ ಡಿಸಿಪಿ ಶಿವಪ್ರಕಾಶ್ ದೇವರಾಜ್ ಅವರು, ಎಚ್ ಎಸ್ ಆರ್ ಪಿ ಪ್ಲೇಟ್ ರಿಜಿಸ್ಟರ್ ಸಂಬಂಧ ಸೋಷಿಯಲ್ ಮೀಡಿಯಾದಲ್ಲಿ ಫೇಕ್ ಲಿಂಕ್ ಗಳು ಶೇರ್ ಆಗ್ತಿವೆ. ಇದರ ಬಗ್ಗೆ ಸ್ವಲ್ಪ ಎಚ್ಚರ ಇರಲಿ.. ಅಧಿಕೃತ ವೆಬ್ ಸೈಟ್ ಮೂಲಕ ಮಾತ್ರ ನೀವು ಅಪ್ಲೈ ಮಾಡಿ ಎಂದು ಮನವಿ ಮಾಡಿದ್ದಾರೆ.

ಹಣ ಹಾಕಬೇಕಾದ ಲಿಂಕ್‌ ಆರ್‌ಟಿಒ ಸೈಟ್‌ನಿಂದ ಜನರೇಟ್‌ ಆಗಬೇಕು ಎಂಬುದು ನೆನಪಿನಲ್ಲಿರಲಿ, ಒಂದು ವೇಳೆ ಅದನ್ನು ಹೊರತುಪಡಿಸಿ ಬೇರೆ ಲಿಂಕ್‌ ಇದ್ದರೆ ಹಣ ಹಾಕಬೇಡಿ ಎಂದು ಸೂಚಿಸಿದ್ದಾರೆ.

ಆರ್ ಟಿ ಓ ಸೈಟ್ ನಿಂದ ಜನರೇಟ್ ಆಗಿರುವ http ಮುಂದೆ url ಇರುವ ಸೇಫ್ ಲಿಂಕ್ ಅನ್ನು ಮಾತ್ರ ಬಳಸಿ. ಒಮ್ಮೆ ವೆಬ್ ಸೈಟ್ ಸರಿಯಾಗಿದೆಯಾ ಏನು ಅಂತಾ ನೋಡಿಕೊಂಡು ಪಾವತಿಸಿ. ಏನಾದರು ಸಮಸ್ಯೆ ಇದ್ದರೆ ಕೂಡಲೆ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: HSRP Number Plate: ನೀವೇ ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಬುಕ್‌ ಮಾಡಿ; ಇಲ್ಲಿದೆ ಸರಳ ಟಿಪ್ಸ್!

ಹಾಗಿದ್ದರೆ ಅಪ್ಲೈ ಮಾಡಬೇಕಾಗಿರುವ ಸರಿಯಾದ ವೆಬ್‌ಸೈಟ್‌ ಲಿಂಕ್‌ ಯಾವುದು?

ಏನಿದು ಎಚ್ಎಸ್ಆರ್‌ಪಿ ನಂಬರ್‌ ಪ್ಲೇಟ್‌?

ಎಚ್‌ಎಸ್‌ಆರ್‌ಪಿ ಎಂದರೆ ಅತಿ ಸುರಕ್ಷಿತ ನೋಂದಣಿ ಫಲಕವಾಗಿದೆ. ಇವುಗಳನ್ನು ಅಲ್ಯೂಮಿನಿಯಂ ಲೋಹದಿಂದ ಮಾಡಿರುತ್ತಾರೆ. ಈ ಪ್ಲೇಟ್‌ನ ಮೇಲ್ಭಾಗದ ಎಡಬದಿಯಲ್ಲಿ ಅಶೋಕ ಚಕ್ರ ಮುದ್ರೆಯ 20X20 ಮಿ.ಮೀ ಅಳತೆಯ ಕ್ರೋಮಿಯಂ ಹೋಲೋಗ್ರಾಮ್‌ ಇರುತ್ತದೆ. ಇಂಗ್ಲಿಷ್ ಅಕ್ಷರಗಳು ಹಾಗೂ ನಂಬರ್‌ಗಳು ಉಬ್ಬಿಕೊಂಡಿರುವ ರೀತಿ ಅಚ್ಚಾಗಿರುತ್ತವೆ. ಈ ನಂಬರ್‌ ಪ್ಲೇಟ್‌ಗಳನ್ನು ಎರಡು ಲಾಕ್‌ ಪಿನ್‌ಗಳನ್ನು ಬಳಸಿ ಅಳವಡಿಸುತ್ತಾರೆ. ಇದರಿಂದ ಒರಿಜಿನಲ್‌ ಯಾವುದು, ನಕಲಿ ಯಾವುದು ಎಂದು ಸುಲಭವಾಗಿ ಗುರುತಿಸಬಹುದು.

ಎಚ್ಎಸ್ಆರ್‌ಪಿ ಪಡೆಯುವುದು ಹೇಗೆ?

  1. ಕರ್ನಾಟಕ ಸಾರಿಗೆ ಇಲಾಖೆ ವೆಬ್‌ಸೈಟ್‌ ಅಥವಾ ಸೊಸೈಟಿ ಆಫ್‌ ಇಂಡಿಯನ್‌ ಆಟೋಮೊಬೈಲ್‌ ಮ್ಯಾನುಫ್ಯಾಕ್ಚರರ್ಸ್‌ (ಎಸ್‌ಐಎಎಂ) ವೆಬ್‌ಸೈಟ್‌ ಭೇಟಿ ನೀಡಿ ಮತ್ತು Book HSRP ಅನ್ನು ಕ್ಲಿಕ್‌ ಮಾಡಿ.
  2. ನಿಮ್ಮ ವಾಹನ ತಯಾರಕರನ್ನು ಆಯ್ಕೆ ಮಾಡಿ.
  3. ವಾಹನದ ಮೂಲ ವಿವರಗಳನ್ನು ಭರ್ತಿ ಮಾಡಿ.
  4. HSRP ಅಳವಡಿಕೆಗಾಗಿ ನಿಮ್ಮ ಅನುಕೂಲಕ್ಕೆ ತಕ್ಕಂತೆ ಡೀಲರ್ ಸ್ಥಳವನ್ನು ಆಯ್ಕೆ ಮಾಡಿ.
  5. HSRP ಶುಲ್ಕವನ್ನು ಆನ್‌ಲೈನ್‌ನಲ್ಲಿ ಪಾವತಿಸಿ, ಶುಲ್ಕ ಪಾವತಿಯನ್ನು ನಗದು ರೂಪದಲ್ಲಿ ಮಾಡುವಂತಿಲ್ಲ.
  6. ವಾಹನ ಮಾಲೀಕರ ಮೊಬೈಲ್ ಸಂಖ್ಯೆಗೆ ಒ.ಟಿ.ಪಿ ರವಾನಿಸಲಾಗುವುದು.
  7. ನಿಮ್ಮ ಅನುಕೂಲಕ್ಕೆ ತಕ್ಕಂತಹ HSRP ಅಳವಡಿಕೆಯ ದಿನಾಂಕ ಮತ್ತು ಸಮಯವನ್ನು ಆಯ್ಕೆ ಮಾಡಿ.
  8. ನಿಮ್ಮ ವಾಹನದ ಯಾವುದೇ ತಯಾರಕ/ಡೀಲರ್ ಸಂಸ್ಥೆಗೆ ಭೇಟಿ ನೀಡಿ.
  9. ವಾಹನ ಮಾಲೀಕರ ಕಚೇರಿ ಆವರಣ / ಮನೆಯ ಸ್ಥಳದಲ್ಲಿ HSRP ಅಳವಡಿಕೆಗಾಗಿ ಆಯ್ಕೆಯನ್ನು ಹೊಂದಬಹುದು.

Exit mobile version