Site icon Vistara News

BY Vijayendra : ಮರಳಿ ಅಧಿಕಾರಕ್ಕೆ ಬರುವವರೆಗೆ ನಿಮ್ಮ ವಿಜಯಣ್ಣ ವಿರಮಿಸಲ್ಲ: ವಿಜಯೇಂದ್ರ ಪ್ರತಿಜ್ಞೆ

BY Vijayendra in Vijayapura saval

ವಿಜಯಪುರ: ಮುಂದಿನ ಲೋಕಸಭಾ ಚುನಾವಣೆಯಲ್ಲಿ (Parliament Elections 2024) ರಾಜ್ಯದ ಎಲ್ಲ 28 ಕ್ಷೇತ್ರಗಳಲ್ಲಿ ಗೆಲ್ಲುವ ಗುರಿ ಒಂದು ಕಡೆ ಇದ್ದೇ ಇದೆ. ಅದರ ಜತೆಗೆ ರಾಜ್ಯದಲ್ಲಿ ಈ ಅಲ್ಪಾಯುಷಿ ಕಾಂಗ್ರೆಸ್‌ ಸರ್ಕಾರ (Congress Government) ಪತನಗೊಂಡು ಭರ್ಜರಿ ಬಹುಮತದೊಂದಿಗೆ ಬಿಜೆಪಿ ಸರ್ಕಾರ (BJP Government) ಅಧಿಕಾರಕ್ಕೆ ಬರುವ ವರೆಗೆ ನಿಮ್ಮ ವಿಜಯಣ್ಣ ಮನೆಯಲ್ಲಿ ಕುಳಿತುಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (BY Vijayendra) ಪ್ರತಿಜ್ಞೆ ಮಾಡಿದ್ದಾರೆ.

ವಿಜಯಪುರ ಜಿಲ್ಲಾ ಪ್ರವಾಸದಲ್ಲಿರುವ ಅವರು ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಬಳಿಕ ಜಿಲ್ಲಾ ಬಿಜೆಪಿ ಕಚೇರಿ ಬಳಿ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ʻʻನಮ್ಮ ವ್ಯತ್ಯಾಸಗಳು, ಸಣ್ಣಪುಟ್ಟ ಗೊಂದಲಗಳು ಏನೇ ಇರಲಿ, ನಾವೆಲ್ಲಾ ಒಂದಾಗಿ, ಒಗ್ಗಟ್ಟಾಗಿ ಹೋಗಬೇಕು. ಬಸನಗೌಡ ಪಾಟೀಲ್ ಯತ್ನಾಳ‌ ಆಗಿರಲಿ ಯಾರೇ ಆಗಿರಲಿ, ಪಕ್ಷದ ಹಿತದೃಷ್ಟಿ ಮುಖ್ಯ. ಪಕ್ಷದ ಮುಂದೆ ಯಾರೂ ದೊಡ್ಡವರಲ್ಲ. ಪಕ್ಷಕ್ಕೆ ಭದ್ರ ಬುನಾದಿ ಹಾಕಬೇಕುʼʼ ಎಂದು ಹೇಳುವ ಮೂಲಕ ತಮ್ಮ ಟೀಕಾಕಾರರಾದ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರಿಗೆ ಸ್ಪಷ್ಟ ಸಂದೇಶ ರವಾನಿಸಿದರು.

ʻಮುಂದಿನ ವಿಧಾನಸಭಾ ಚುನಾವಣೆಯಲ್ಲಿ ವಿಜಯಪುರ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿಯೂ ಬಿಜೆಪಿಯ ಕಮಲ ಅರಳಿಸುವ ಕೆಲಸ ನಾವು ನೀವು ಎಲ್ಲರೂ ಸೇರಿ ಮಾಡೋಣ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿಕೊಳ್ಳುತ್ತೇನೆʼʼ ಎಂದು ಹೇಳಿದ ಅವರು ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ ಎಂದು ಸ್ಪಷ್ಟಪಡಿಸಿದರು.

ʻʻಬಿಎಸ್ ಯಡಿಯೂರಪ್ಪರಿಗೆ ರಾಜಕೀಯ ಶಕ್ತಿ ನೀಡಿರೋ ವಿಜಯಪುರದಿಂದ ಹೇಳುತ್ತಿದ್ದೇನೆ.. ಯಡಿಯೂರಪ್ಪರು ಮುಖ್ಯಮಂತ್ರಿ ಇದ್ದಾಗ ಕೆಆರ್ ಪೇಟೆ, ಶಿರಾ ಕ್ಷೇತ್ರದ ಉಪಚುನಾವಣೆ ನಡೆಯಿತು. ಎರಡು ಕ್ಷೇತ್ರಗಳಲ್ಲಿ ಎಂದೂ ಬಿಜೆಪಿ ಗೆದ್ದಿರಲಿಲ್ಲ. ನಾನು ಆಗ ಬಿಜೆಪಿ ರಾಜ್ಯ ಉಪಾಧ್ಯಕ್ಷನಾಗಿದ್ದೆ. ಕೆ.ಆರ್ ಪೇಟೆ ಚುನಾವಣೆಯಲ್ಲಿ ಹಿಂದೆ ಬಿಜೆಪಿಗೆ ಠೇವಣಿ ಕೂಡಾ ಬಂದಿರಲಿಲ್ಲ. ಕಾರ್ಯಕರ್ತರ ಪರಿಶ್ರಮದಿಂದ ಕೆ ಆರ್ ಪೇಟೆ, ಶಿರಾ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಿದೆʼʼ ಎಂದು ತಮ್ಮ ಸಾಮರ್ಥ್ಯ‌ ಹೇಳಿಕೊಂಡರು.

ಇದನ್ನೂ ಓದಿ : BY Vijayendra : ಕಾಂಗ್ರೆಸ್‌ಗೆ ಮುಸ್ಲಿಮರು ಮಾತ್ರ ಕಾಣ್ಸೋದು!; ವಿಜಯಪುರದಲ್ಲಿ ವಿಜಯೇಂದ್ರ ಹವಾ

ಗೆಲ್ಲೋದು ನಾವೇ.. ಕಾಂಗ್ರೆಸ್‌ಗೆ ಸಿಕ್ಕೋದು ಹಿಡಿಶಾಪ ಅಷ್ಟೆ

ʻʻಕಾಂಗ್ರೆಸಿಗರು ಏನೇ ತಿಪ್ಪರಲಾಗ ಹಾಕಿದರೂ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಗೆಲುವಿನ ನಾಗಾಲೋಟವನ್ನು ತಡೆಯಲು ಸಾಧ್ಯವಿಲ್ಲ. ಎಲ್ಲ 28 ಕ್ಷೇತ್ರಗಳಲ್ಲೂ ಕೂಡ ಬಿಜೆಪಿ- ಜೆಡಿಎಸ್ ಒಗ್ಗಟ್ಟಾಗಿ ಗೆಲ್ಲುತ್ತೇವೆ”” ಎಂದು ವಿಶ್ವಾಸದಿಂದ ನುಡಿದ ವಿಜಯೇಂದ್ರ ಅವರು, ಮತದಾರರು ಕೇವಲ 7 ತಿಂಗಳಲ್ಲಿ ಕಾಂಗ್ರೆಸ್ಸಿನ ಸರಕಾರಕ್ಕೆ ಕುಂತಲ್ಲಿ ನಿಂತಲ್ಲಿ ಶಾಪ ಹಾಕುತ್ತಿದ್ದಾರೆ ಎಂದು ವಿವರಿಸಿದರು.

ಬರಗಾಲದ ಸಂದರ್ಭದಲ್ಲಿ ಸಂಕಷ್ಟದಲ್ಲಿ ಇರುವ ರೈತರಿಗೆ ಸ್ಪಂದಿಸಿಲ್ಲ ಎಂದು ಟೀಕಿಸಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಲ್ಪಸಂಖ್ಯಾತರಿಗೆ 10 ಸಾವಿರ ಕೋಟಿ ಕೊಡುವ ಮಾತನಾಡಿದ್ದಾರೆ ಎಂದರು. ಬಿಜೆಪಿ ಅಲ್ಪಸಂಖ್ಯಾತರ ವಿರೋಧಿಯಲ್ಲ. ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿದ್ದಾಗ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಹಣ ನೀಡಿ ಸ್ಪಂದಿಸಿತ್ತು. ಆದರೆ, ಕಾಂಗ್ರೆಸ್ ಸರಕಾರವು ರೈತರ ಸಂಕಷ್ಟಕ್ಕೆ ಸ್ಪಂದಿಸದೆ ಅಲ್ಪಸಂಖ್ಯಾತರಿಗೆ 10 ಸಾವಿರ ಕೋಟಿ ಕೊಡಲು ಮುಂದಾಗಿದೆ ಎಂದರಲ್ಲದೆ, ರೈತರಲ್ಲಿ ಬಡವರು, ಎಲ್ಲ ವರ್ಗದ, ಎಲ್ಲ ಧರ್ಮದ ಜನರಿಲ್ಲವೇ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಸರಕಾರವು ವಿಧಾನಸಭಾ ಚುನಾವಣೆ ವೇಳೆ ಅನೇಕ ಆರೋಪ ಮಾಡಿತ್ತು. ಅಲ್ಲದೆ ಗ್ಯಾರಂಟಿಗಳ ಕಲ್ಪನೆ, ಸುಳ್ಳು ಭರವಸೆಗಳ ಮೂಲಕ ಅಧಿಕಾರಕ್ಕೇರಿದೆ. 5 ರಾಜ್ಯಗಳ ಫಲಿತಾಂಶವು ಹೊರಬಂದಾಗ ಕಾಂಗ್ರೆಸ್ ಕನಸು ನುಚ್ಚು ನೂರಾಗಿದೆ. 3 ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷದ ಬೂಟಾಟಿಕೆಯ ಗ್ಯಾರಂಟಿಯನ್ನು ತಿರಸ್ಕರಿಸಿ ಮೋದಿ ಅವರ ಗ್ಯಾರಂಟಿಯನ್ನು ಪುರಸ್ಕರಿಸಿದ್ದಾರೆ ಎಂದು ವಿಶ್ಲೇಷಿಸಿದರು.

ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾದ ಬಳಿಕ ಪಕ್ಷದಲ್ಲಿ ಸಂಚಲನ ಉಂಟಾಗಿದೆ. ಯಡಿಯೂರಪ್ಪ ಅವರು ಪಕ್ಷವನ್ನು ಕಟ್ಟಿ ಬೆಳೆಸಿದವರು. ಅವರು ಈ ಭಾಗಕ್ಕೆ ಗರಿಷ್ಠ ಕೊಡುಗೆ ನೀಡಿದ್ದಾರೆ ಎಂದು ಮುಖಂಡರು ತಿಳಿಸಿದರು. ಯಡಿಯೂರಪ್ಪ ಅವರು ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡಿ, ದೇಶದ ದಕ್ಷಿಣ ಭಾರತದಲ್ಲಿ ಪ್ರಥಮ ಬಾರಿಗೆ ಸರಕಾರ ಬರಲು ಕಾರಣಕರ್ತರಾದರು ಎಂದು ರಾಜ್ಯ ಉಪಾಧ್ಯಕ್ಷ ಮುರುಗೇಶ್ ನಿರಾಣಿ ಅವರು ನೆನಪಿಸಿದರು.

ರಾಜ್ಯದ ಎಲ್ಲ 28 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವಿನ ಮೂಲಕ ಮೋದಿಜೀ ಅವರಿಗೆ ಕೊಡುಗೆ ನೀಡಲು ಬದ್ಧತೆಯನ್ನು ಮತ್ತು ಸಂಕಲ್ಪವನ್ನು ಇದೇವೇಳೆ ಮುಖಂಡರು ಮುಂದಿಟ್ಟರು. ಮುಂದಿನ ವಿಧಾನಸಭಾ ಚುನಾವಣೆಯಲ್ಲೂ 150 ಸ್ಥಾನದೊಂದಿಗೆ ಬಿಜೆಪಿ ಗದ್ದುಗೆಗೆ ಏರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಅವರು ಮಾತನಾಡಿ, ಕಾಂಗ್ರೆಸ್ ಪಕ್ಷದ ರಾಜ್ಯ ಸರಕಾರವು ಬರಗಾಲದಲ್ಲೂ ರೈತರಿಗೆ ಸ್ಪಂದಿಸುತ್ತಿಲ್ಲ. 456 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪರಿಹಾರ ಮೊತ್ತಕ್ಕಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸಚಿವರು ಹೇಳಿದ್ದು, ಇದು ಖಂಡನೀಯ ಎಂದು ತಿಳಿಸಿದರು. ಬಿಜೆಪಿ ಅಧಿಕಾರದಲ್ಲಿದ್ದಾಗ ರೈತರಿಗೆ ಕೊಟ್ಟ ನೆರವನ್ನು ಅವರು ನೆನಪಿಸಿದರು.

ವಿಜಯಪುರ ನಗರಕ್ಕೆ ಆಗಮಿಸಿದ ರಾಜ್ಯಾಧ್ಯಕ್ಷರಿಗೆ ಭವ್ಯ ಸ್ವಾಗತ ಕೋರಲಾಯಿತು. ಈ ಸಂದರ್ಭದಲ್ಲಿ ಕೇಂದ್ರದ ಮಾಜಿ ಸಚಿವ ಹಾಗೂ ಸಂಸದ ರಮೇಶ್ ಜಿಗಜಿಣಗಿ, ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಮುರುಗೇಶ್ ನಿರಾಣಿ, ಬಿಜೆಪಿ ರೈತ ಮೋರ್ಚಾ ನೂತನ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ್ ನಡಹಳ್ಳಿ, ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ, ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ್ ಕುಚಬಾಳ ಸೇರಿದಂತೆ ಪಕ್ಷದ ಮುಖಂಡರು ಉಪಸ್ಥಿತರಿದ್ದರು. ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Exit mobile version