Site icon Vistara News

IKEA in Bangalore | ಬೆಂಗಳೂರಿನ ಐಕಿಯ ಮಳಿಗೆಗೆ ಮೊದಲ ದಿನವೇ ಹರಿದು ಬಂದ ಜನಸಾಗರ

ಬೆಂಗಳೂರು: ಜೂನ್‌ 22ರಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಉದ್ಘಾಟಿಸಿದ ಬೆಂಗಳೂರಿನ ಐಕಿಯ ಮಳಿಗೆಗೆ (IKEA in Bangalore) ವಾರಾಂತ್ಯದಲ್ಲಿ ಸಾವಿರಾರು ಜನರು ಭೇಟಿ ನೀಡಿ ಪೀಠೋಪಕರಗಳನ್ನು ಖರೀದಿಸಿದರು. ಭಾರಿ ಪ್ರಮಾಣದ ಜನಸಂದಣಿ, ನೂಕುನುಗ್ಗಲು ಸಾಮಾಜಿಕ ಜಾಲತಾಣದಲ್ಲಿ ಬಗೆಬಗೆಯ ಟ್ರೋಲ್‌ಗಳಿಗೆ ಕಾರಣವಾಗಿದೆ.

ಐಕಿಯದಲ್ಲಿ ಉತ್ತಮ ಗುಣಮಟ್ಟದ, ಬಾಳಿಕೆ ಬರುವ ಹಾಗೂ ಕೈಗೆಟುಕುವ ಬೆಲೆಯ ಪೀಠೋಪಕರಣಗಳಿವೆ. ಮಧ್ಯಮ ಹಾಗೂ ಕೆಳಮಧ್ಯಮವರ್ಗದ ಜನತೆಯ ಕೈಗೆ ಎಟಕುವ ಬೆಲೆಯಲ್ಲಿ ಇವು ಸಿಗುವ ಕಾರಣ ಭಾರಿ ಪ್ರಮಾಣದ ಜನ ಮೊದಲ ದಿನವೇ ಮಳಿಗೆಗೆ ಭೇಟಿ ನೀಡಿ ನೂಕುನುಗ್ಗಲಿಗೆ ಕಾರಣರಾದರು.

ನಾಗಸಂದ್ರ ಮೆಟ್ರೊ ಸ್ಟೇಷನ್ ಬಳಿ ಇರುವ ಐಕಿಯ ಮಳಿಗೆಗೆ ಭಾನುವಾರದಂದು (ಜೂನ್‌ 25) ಜನರ ಪ್ರವಾಹವೇ ಹರಿದುಬಂದಿತ್ತು. ಸುಮಾರು ಮೂರು ಗಂಟೆಗಳ ಕಾಲ ಜನರು ಮೆಟ್ರೊ ಸ್ಟೇಷನ್‌ನಲ್ಲಿ ಕಾಯುವಂತಾಯಿತು. ಭದ್ರತಾ ಸಿಬ್ಬಂದಿಗೆ ಜನಸಂದಣಿ ನಿಭಾಯಿಸುವುದೇ ಕಷ್ಟವಾಗಿತ್ತು. ಐಕಿಯ ಮಳಿಗೆಯಲ್ಲಿಯೂ ಇದೇ ಪರಿಸ್ಥಿತಿ ಎದುರಾಗಿತ್ತು.

ಅನೇಕರು ಮಳಿಗೆಗೆ ಪ್ರವೇಶ ದೊರಕದೆಯೇ ನಿರಾಸೆಗೊಂಡು ಮನಗೆ ವಾಪಸ್ಸಾಗಬೇಕಾದ ಸನ್ನಿವೇಶ ಕೂಡ ಎದುರಾಗಿತ್ತು. ಸ್ವೀಡನ್‌ ಮೂಲದ ಪೀಠೋಪರಣಗಳ ಮಳಿಗೆಯನ್ನು ಬೆಂಗಳೂರಿಗರು ಬರಮಾಡಿಕೊಂಡ ರೀತಿಯನ್ನು ಕಂಡು ಐಕಿಯ ಸಂಸ್ಥೆ ಬೆರಗಾಗಿದೆ. ಐಕಿಯ ಸಂಸ್ಥೆ ಟ್ವೀಟ್‌ ಮಾಡುವ ಮೂಲಕ ಸಂತೋಷ ಹಂಚಿಕೊಂಡಿದೆ.

“ಆತ್ಮೀಯ ಬೆಂಗಳೂರು, ನಿಮ್ಮೆಲ್ಲರ ಪ್ರೀತಿಯ ಪ್ರತಿಕ್ರಿಯೆ ಕಂಡು ನಾವು ಬೆರಗಾಗಿದ್ದೇವೆ. ಈಗ ಸದ್ಯ ಮಳಿಗೆಯಲ್ಲಿ ಮೂರು ಗಂಟೆಯ ಕಾಲ ಕಾಯುವಿಕೆಯಿದೆ. ದಯವಿಟ್ಟು ಅದನ್ನು ಗಮನದಲ್ಲಿಟ್ಟು ನೀವು ಭೇಟಿ ನೀಡುವ ಸಮಯನ್ನು ಯೋಜಿಸಿಕೊಳ್ಳಿ. ಅಲ್ಲದಿದ್ದರೆ, ಆನ್‌ಲೈನ್‌ ಮೂಲಕ ಖರೀದಿಸಿʼʼ ಎಂದು ಟ್ವೀಟ್‌ ಮಾಡಿದೆ.

ಟ್ವಿಟರ್‌ನಲ್ಲಿ ಕಂಡ ಕೆಲವು ತುಣುಕುಗಳು:

ಐಕಿಯ ಮಳಿಗೆಯಲ್ಲಿ ಜನಸಂದಣಿ. ಮನೆಯಲ್ಲಿರಿ, ಸುರಕ್ಷಿತರಾಗಿರಿ.

ಐಕಿಯ ಮಳಿಗೆಗೆ ಪ್ರವೇಶಿದಲು ಸಾಲಿನಲ್ಲಿ ಕಾಯುತ್ತಿರುವ ಜನರ ಫೋಟೋಗೆ ನೆಟ್ಟಿಗರು “ಇದು ಮಹಾರಾಷ್ಟ್ರ ದಲ್ಲಿ ಸರ್ಕಾರ ರಚಿಸಲು ಸಚಿವರ ಸಾಲಲ್ಲ. ಭಾರತಕ್ಕೆ ಪ್ರವೇಶ ಪಡೆಯಲು ಕಾಯಯುತ್ತಿರುವವರ ಸಾಲಲ್ಲ. ತಿರುಪತಿಯಲ್ಲಿ ದೇವರ ದರ್ಶನಕ್ಕೆ ಕಾಯುತ್ತಿರುವವರ ಸಾಲಲ್ಲ. ಕೋವಿಡ್‌ ಲಸಿಕೆ ಪಡೆಯಲು ಕಾಯುತ್ತಿರುವವರ ಸಾಲು ಕೂಡ ಅಲ್ಲ. ಇದು ಬೆಂಗಳೂರಿನ ಮಳಿಗೆಗೆ ಪ್ರವೇಶ ಪಡೆಯಲು ಕಾಯುತ್ತಿರುವವರ ಸಾಲುʼʼ ಎಂದು ಟ್ವೀಟ್‌ ಮಾಡಿದ್ದಾರೆ.

ಮೆಟ್ರೊ ಸ್ಟೇಷನ್‌ನಲ್ಲಿ ಜನಸಾಗರ

ಬೆಂಗಳೂರಿನಲ್ಲಿ ತನ್ನ ಮೂರನೇ ಮಳಿಗೆಯನ್ನು ಆರಂಭಿಸಿದ ಬೆನ್ನಲ್ಲೇ ಬೆಂಗಳೂರು ಜನರು ಆಗಮಿಸಿ ಪ್ರೀತಿ ತೋರಿದ್ದಕ್ಕೆ ಐಕಿಯ ಸಂಸ್ಥೆಯ ಆನಂದ ದುಪ್ಪಟ್ಟಾಗಿದೆಯಂತೆ. ನಾಗಸಂದ್ರ ಮೆಟ್ರೊ ಸ್ಟೇಷನ್‌ನಲ್ಲಿ ಸುಮಾರು 30 ಸಾವಿರ ಜನರು ಏಕಕಾಲಕ್ಕೆ ಬಂದದ್ದೂ ದಾಖಲೆಯಾಗಿದೆ. ಇದರಲ್ಲಿ ಸುಮಾರು 13,000ರಷ್ಟು ಜನರು ಐಕಿಯಗೆ ಭೇಟಿ ನಿಡಲು ಆಗಮಿಸಿದ್ದರೆಂದು ಹೇಳಲಾಗಿದೆ.

ನಾಗಸಂದ್ರ ಮೆಟ್ರೊ ಸ್ಟೇಷನ್‌ನಲ್ಲಿ ಇದೇ ಮೊದಲ ಬಾರಿಗ ಈ ಪ್ರಮಾಣದ ಜನರು ಸೇರಿದ್ದು ದಾಖಲೆಯಾಗಿದೆ. ಈ ಬಗ್ಗೆ ಟ್ವಿಟರ್‌ನಲ್ಲಿ ಅನೇಕ ಬರಹಗಳು ಹರಿದಾಡಿವೆ.

ಐಕಿಯ ಮಳಿಗೆ ಬೆಂಗಳೂರಿನ ನಾಗಸಂದ್ರ ಮೆಟ್ರೊ ಸ್ಟೇಷನ್‌ ಬಳಿಯಿದ್ದು, ಸುಮಾರು 12 ಎಕರೆಯಷ್ಟು ಜಾಗದಲ್ಲಿದೆ. ಮಳಿಗೆಯಲ್ಲಿ 7000ಕ್ಕೂ ಅಧಿಕ ಪೀಠೋಪಕರಣಗಳು ಲಭ್ಯವಿದ್ದು, 65ಕ್ಕೂ ಅಧಿಕ ರೂಮ್‌ ಡೆಕೊರ್‌ಗಳು ಇಲ್ಲಿವೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಐಕಿಯದ ಮೆಗಾ ಮಳಿಗೆಯನ್ನು ಉದ್ಘಾಟಿಸಿದ ಸಿಎಂ ಬಸವರಾಜ ಬೊಮ್ಮಾಯಿ

Exit mobile version