Site icon Vistara News

Illegal Madrasa: ನೋಂದಣಿಯಾಗದೆ ಮಕ್ಕಳ ಶಿಕ್ಷಣ ನೀಡುವ ಮದರಸ, ಚರ್ಚ್‌ಗಳಿಗೆ ಬೀಳುತ್ತೆ ಬೀಗ!

lock

ಬೆಂಗಳೂರು: ನೋಂದಣಿಯಾಗದ ಮದರಸ (Illegal Madrasa), ಚರ್ಚ್ (church), ಮಠ (Mutt) ಹಾಗೂ ಎನ್‌ಜಿಒಗಳಿಗೆ (NGO) ಈಗ ಸಂಕಷ್ಟ ಎದುರಾಗಿದೆ. ನೋಂದಣಿ (registration) ಮಾಡಿಸಿಕೊಂಡಿರದೆ ಕಾರ್ಯಾಚರಿಸುತ್ತಿದ್ದರೆ ಅಂಥವರಿಗೆ ಕಾನೂನಿನ ಸಂಕಷ್ಟ (Legal action) ಎದುರಾಗಲಿದ್ದು, ಇವುಗಳಿಗೆ ಬೀಗ ಬೀಳಲಿದೆ.

ರಿಜಿಸ್ಟ್ರೇಷನ್ ಮಾಡಿಸಿಕೊಳ್ಳಲು ಏಪ್ರಿಲ್ 20ರವರೆಗೆ ಡೆಡ್‌ಲೈನ್ ಇದ್ದು, ಅದರೊಳಗೆ ನೋಂದಣಿ ಮಾಡಿಸಿಕೊಳ್ಳದಿದ್ದರೆ ಆಮೇಲೆ‌ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳಿಂದ ನೋಟೀಸ್‌ ಹೊರಟಿದೆ. ಇತ್ತೀಚೆಗೆ ಮಕ್ಕಳ ಹಕ್ಕುಗಳ ಆಯೋಗ ನಗರದಲ್ಲಿ ದಾಳಿ ನಡೆಸಿದಾಗ ಹಲವು ಅಕ್ರಮ ಮದರಸಗಳು ಕಂಡುಬಂದಿದ್ದವು. ಈ ಹಿನ್ನೆಲೆಯಲ್ಲಿ ಕ್ರಮ ತೆಗೆದುಕೊಳ್ಳಲಾಗಿದೆ.

ಮದರಸ ಹಾಗೂ ಚರ್ಚ್‌ಗಳಲ್ಲಿ ಮಕ್ಕಳನ್ನು ದಾಖಲಿಸಿಕೊಂಡು, ಪಾಲನಾ ಸಂಸ್ಥೆಗಳನ್ನು ಸರ್ಕಾರದ ನೋಂದಣಿ ಇಲ್ಲದೆ ನಡೆಸುತ್ತಿದ್ದರೆ ಮಕ್ಕಳ ಪೋಷಣೆ & ರಕ್ಷಣೆ ಕಾಯ್ದೆ 2015 ಕಲಂ 41ರ ಅನ್ವಯ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ. ಅಂಥ ಸಂಸ್ಥೆಗಳಿಗೆ ಬೀಗ ಬೀಳಲಿದ್ದು, ಅದನ್ನು ನಡೆಸುತ್ತಿರುವವ ಶಿಕ್ಷೆ ಮತ್ತು ದಂಡ ವಿಧಿಸುವ ಸಾಧ್ಯತೆಯಿದೆ. ಹೀಗಾಗಿ ಕಡ್ಡಾಯವಾಗಿ ಏಪ್ರಿಲ್ 20ರೊಳಗೆ ನೋಂದಣಿ ಮಾಡುವಂತೆ ಸೂಚನೆ ನೀಡಲಾಗಿದೆ.

ಕೇಂದ್ರ ಮಕ್ಕಳ ಹಕ್ಕುಗಳ ಆಯೋಗ ಇತ್ತೀಚೆಗೆ ನಗರಕ್ಕೆ ಭೇಟಿ ನೀಡಿದ್ದು, ನಗರದಲ್ಲಿ ನೋಂದಣಿಯಾಗದ ಮದರಸಗಳು, ಚರ್ಚ್‌ಗಳು ಕಾರ್ಯಾಚರಿಸುತ್ತಿರುವುದನ್ನು ಗುರುತಿಸಿತ್ತು. ಹಲವು ಮದರಸ, ಚರ್ಚ್, ಮಠ, ಎನ್‌ಜಿಒಗಳು ಯಾವುದೇ ಕಾಯಿದೆ ಪ್ರಕಾರ ಗುರುತಿಸಿಕೊಳ್ಳದೆ ಮಕ್ಕಳಿಗೆ ವಸತಿ, ಶಿಕ್ಷಣ ನೀಡುತ್ತಿರುವುದು ಕಂಡುಬಂದಿತ್ತು. ನಗರದಲ್ಲಿ ಅನಧಿಕೃತವಾಗಿ ಮಕ್ಕಳಿಗೆ ವಸತಿ ಕೊಟ್ಟು ಶಿಕ್ಷಣ ನೀಡುತ್ತಿರುವ ಮದರಸಗಳು ಹಾಗೂ ಚರ್ಚ್‌ಗಳ ಬಗ್ಗೆ ಮಾಹಿತಿಯನ್ನೂ ಜಿಲ್ಲಾಡಳಿತಕ್ಕೆ ಆಯೋಗ ನೀಡಿತ್ತು. ಈ ಮಾಹಿತಿಯ ಬೆನ್ನಲ್ಲೇ ನಗರ ಜಿಲ್ಲಾಧಿಕಾರಿಯಿಂದ ನೋಟೀಸ್ ನೀಡಲಾಗಿದೆ.

ನಗರದಲ್ಲಿ ಇದುವರೆಗೂ ಇಂಥ 150ಕ್ಕೂ ಅಧಿಕ ಅನಧಿಕೃತ ಕೇಂದ್ರಗಳು ಪತ್ತೆಯಾಗಿವೆ. ಇವು ತಂದೆ ತಾಯಿ ಇಲ್ಲದ ಮಕ್ಕಳಿಗೆ ವಸತಿ ಕೊಟ್ಟು ಶಿಕ್ಷಣ ನೀಡುತ್ತಿರುವ ಕೇಂದ್ರಗಳಾಗಿವೆ. ಆದರೆ ಸರ್ಕಾರದಿಂದ ಯಾವುದೇ ನೋಂದಣಿಯಾಗದೆ ಕೇಂದ್ರಗಳನ್ನು ನಡೆಸಲಾಗುತ್ತಿದೆ. ಇವುಗಳಲ್ಲಿ ಅತೀ ಹೆಚ್ಚು ಮದರಸಗಳ ಹೆಸರಲ್ಲೇ ನಡೆಯುತ್ತಿವೆ. ಈ ಬಗ್ಗೆ ಎಲ್ಲಿಯೂ ಕೂಡಾ ನೋಂದಣಿ ಮಾಡಿಲ್ಲ. ನೋಂದಣಿ ಮಾಡದ ಇಂಥ ಕೇಂದ್ರಗಳ ಬಗ್ಗೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಗಂಭೀರವಾಗಿ ಪರಿಗಣಿಸಿದೆ.

ಮುಸ್ಲಿಂ ಅನಾಥಾಶ್ರಮಕ್ಕೆ ಆಯೋಗ ದಾಳಿ

ಇತ್ತೀಚೆಗೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗದ (National Commission for Protection of Child Rights-NCPCR) ಅಧ್ಯಕ್ಷರಾಗಿರುವ ಪ್ರಿಯಾಂಕ್‌ ಕನೂಂಗೋ (Priyank Kanoongo) ಅವರು ಬೆಂಗಳೂರಿನ (Bangalore News) ಅಶ್ವತ್ಥ ನಗರದ ಅಮರಜ್ಯೋತಿ ಲೇಔಟ್‌ನಲ್ಲಿರುವ ಯತೀಂ ಖಾನಾ ನಡೆಸುತ್ತಿರುವ ಹೆಣ್ಮಕ್ಕಳ ಅನಾಥಾಶ್ರಮವೊಂದಕ್ಕೆ (Girls Orphanage) ದಾಳಿ ನಡೆಸಿದ್ದರು. ಈ ವೇಳೆ ಅವರು ಅಲ್ಲಿರುವ 20 ಹೆಣ್ಮಕ್ಕಳ ಪೈಕಿ ಕೆಲವರನ್ನು ಅಕ್ರಮವಾಗಿ ಕುವೈಟ್‌ಗೆ ಕಳ್ಳಸಾಗಣೆ (Human Trafficking) ಮಾಡಲಾಗುತ್ತಿದೆ ಎಂದು ಆರೋಪಿಸಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಅಶ್ವತ್ಥ ನಗರದಲ್ಲಿರುವ ಈ ಅನಾಥಾಶ್ರಮ ಅಕ್ರಮವಾಗಿದ್ದು, ಇಲ್ಲಿ ಸುಮಾರು 20 ಹೆಣ್ಮಕ್ಕಳನ್ನು ಕೂಡಿ ಹಾಕಲಾಗಿದೆ ಎಂದು ಅಧ್ಯಕ್ಷರು ಆರೋಪಿಸಿದ್ದರು.

ಮದರಸದಲ್ಲಿ ಸುಮಾರು 10-20 ಮಕ್ಕಳು ಇದ್ದಾರೆ. ಮಕ್ಕಳಿಗೆ ಸರಿಯಾಗಿ ಶಿಕ್ಷಣವನ್ನು ನೀಡುತ್ತಿಲ್ಲ. ಜೊತೆಗೆ ಧಾರ್ಮಿಕ‌ ಶಿಕ್ಷಣವನ್ನು ನೀಡುತ್ತಿದ್ದಾರೆ. ಅನಾಥಾಶ್ರಮ ನಡೆಸಲು ಇವರಿಗೆ ಯಾವುದೇ ಲೈಸೆನ್ಸ್‌ ಇಲ್ಲ ಎಂದು ಕನೂಂಗೋ ಆರೋಪಿಸಿದ್ದಾರೆ. ಅವರಲ್ಲಿ ಕೆಲವರು ತಂದೆ-ತಾಯಿ ಇಲ್ಲದ ಅನಾಥರಾಗಿದ್ದರೆ, ಕೆಲವರು ಯಾರೂ ರಕ್ಷಕರಿಲ್ಲದೆ ಇಲ್ಲಿಗೆ ಬಂದಿದ್ದಾರೆ. ನಾವು ಅಲ್ಲಿಗೆ ಭೇಟಿ ನೀಡಿದಾಗ ನಮಗೆ ಪೂರ್ಣ ಪ್ರಮಾಣದಲ್ಲಿ ತನಿಖೆ ಮಾಡಲು ಅವಕಾಶ ಕೊಟ್ಟಿಲ್ಲ ಎಂದಿದ್ದರು.

ಕಳೆದ ವರ್ಷ ಬಾಲಕರ ಅನಾಥಾಶ್ರಮಕ್ಕೆ ದಾಳಿ

2023ರ ನವೆಂಬರ್‌ 19ರಂದು ಕನೂಂಗೋ ಮತ್ತು ತಂಡ ಬೆಂಗಳೂರಿನ ʻದಾರುಲ್‌ ಉಲೂಂ ಸಯ್ಯದಿಯಾ ಯತೀಂ ಖಾನಾ ಎಂಬ ಬಾಲಕರ ಅನಾಥಾಶ್ರಮಕ್ಕೆ ದಾಳಿ ನಡೆಸಿತ್ತು. ಆಗ ಅಲ್ಲಿನ ಪರಿಸ್ಥಿತಿಯ ವಿಡಿಯೊ ಮಾಡಿ ಪ್ರಸರಣ ಮಾಡಿದ್ದ ಕನೂಂಗೋ ಅವರು ಇಲ್ಲಿನ ಪರಿಸ್ಥಿತಿ ತಾಲಿಬಾನ್‌ ಮಾದರಿಯಲ್ಲಿದೆ. ಮಕ್ಕಳಿಗೆ ಸರಿಯಾದ ಶಿಕ್ಷಣ ನೀಡಲಾಗುತ್ತಿಲ್ಲ. ಅವರನ್ನು ಕೂಡಿ ಹಾಕಲಾಗಿದೆ. ಅಲ್ಲಿ ಸರಿಯಾದ ವ್ಯವಸ್ಥೆಗಳಿಲ್ಲ ಎಂದು ಆರೋಪಿಸಿದ್ದರು. ಕೊನೆಗೆ ಪೊಲೀಸರು ಕನೂಂಗೋ ವಿರುದ್ಧವೇ ಅಕ್ರಮ ಪ್ರವೇಶದ ದೂರು ದಾಖಲಿಸಿಕೊಂಡಿದ್ದರು.

ಇದನ್ನೂ ಓದಿ: Girls Orphanage : ಮುಸ್ಲಿಂ ಅನಾಥಾಶ್ರಮಕ್ಕೆ ಮಕ್ಕಳ ಹಕ್ಕುಗಳ ಆಯೋಗ ದಾಳಿ; ಕುವೈಟ್‌ಗೆ ಹುಡುಗಿಯರ ಕಳ್ಳಸಾಗಣೆ?

Exit mobile version