ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಮದುವೆಯಾದವರು ಬೇರೆಯವರ ಜತೆ ಅಕ್ರಮ ಸಂಬಂಧ (Illicit Relationship) ಇಟ್ಟುಕೊಳ್ಳುವ ಚಾಳಿ ವಿಪರೀತವಾಗಿದೆ. ಹೀಗಾಗಿ ಅಲ್ಲಲ್ಲಿ ಜಗಳ, ಗಲಾಟೆ, ಹೊಡೆದಾಟಗಳು ಜೋರಾಗುತ್ತಿವೆ. ಬೆಂಗೂರಿನಲ್ಲೂ (Bangalore News) ಅಂಥಹುದೇ ಒಂದು ಘಟನೆ ನಡೆದಿದೆ. ನನ್ನ ಗಂಡನೊಂದಿಗೆಅಕ್ರಮ ಸಂಬಂದ ಇಟ್ಟುಕೊಂಡಿದ್ದಿಯಾ ಎಂಬ ಆಕ್ರೋಶದಿಂದ ಮಹಿಳೆಯೊಬ್ಬರು ಗುಂಪು ಕಟ್ಟಿಕೊಂಡು ಹೋಗಿ ಯುವತಿ ಮನೆ (Attack on Home) ಮೇಲೆ ದಾಳಿ ಮಾಡಿದ್ದಾರೆ.
ಶರಣ್ ಎಂಬಾತ ಪ್ರತಿಮಾ ಎಂಬಾಕೆಯ ಜತೆಗೆ ಕಳೆದ ಮೂರು ವರ್ಷಗಳಿಂದ ಆತ್ಮೀಯವಾಗಿದ್ದ ಎನ್ನಲಾಗಿದೆ. ಇದರ ಬಗ್ಗೆ ಹಲವು ಬಾರಿ ಎಚ್ಚರಿಕೆ ನೀಡಿದ ಹೊರತಾಗಿಯೂ ಸಂಬಂಧವನ್ನು ಮುಂದುವರಿಸಿದ್ದರಿಂದ ಆಕ್ರೋಶಗೊಂಡ ಶರಣ್ ಪತ್ನಿ ಸಮಂತಾ ಗ್ಯಾಂಗ್ ಕಟ್ಟಿಕೊಂಡು ಹೋಗಿ ಪ್ರತಿಮಾಳ ಮನೆ ಮೇಲೆ ದಾಳಿ ಮಾಡಿದ್ದಾರೆ ಎಂದು ದೂರು ನೀಡಲಾಗಿದೆ.
ಕೆಂಪರಾಜು, ಶರತ್ ಮತ್ತು ಶರಣ್ ಪತ್ನಿ ಸಮಂತಾ ಅವರು ರಾತ್ರಿ 11.30ರ ಹೊತ್ತಿಗೆ ನಮ್ಮ ಮನೆಗೆ ಅಕ್ರಮ ಪ್ರವೇಶ ಮಾಡಿ ದಾಂಧಲೆ ಮಾಡಿದ್ದಾರೆ. ಹೀಗಾಗಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಯುವತಿ ಕೊತ್ತನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಪ್ರಕರಣ ಸಂಬಂಧ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.
ಪ್ರತಿಮಾ ಮನೆ ಇರುವುದು ಮಾರುತಿ ಲೇಔಟ್ ಬಿಳೇಶಿವಾಲೆ ದೊಡ್ಡಗುಬ್ಬಿ ಮುಖ್ಯ ರಸ್ತೆಯಲ್ಲಿ. ಅಲ್ಲಿಗೆ ನುಗ್ಗಿದ ಇವರು ಮನೆ ಕಿಟಕಿ ಗಾಜು, ಡೋರ್ ಹಾಗೂ ಮನೆ ಮುಂದೆ ನಿಲ್ಲಿಸಿದ್ದ ಕಾರು, ಬೈಕ್‌ಗಳ ಗಾಜು ಹೊಡೆದು ಗೂಂಡಾ ವರ್ತನೆ ತೋರಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.
ಪ್ರತಿಮಾ ಕಳೆದ ಮೂರು ವರ್ಷಗಳ ಹಿಂದೆ ಮನೆ ಕಟ್ಟಿಸಿದ್ದರು. ಆಗ ಶರಣ್ ಬಳಿ ಜಲ್ಲಿ, ಎಂ ಸ್ಯಾಂಡ್ , ಬ್ಲಾಕ್ಸ್ ಗಳನ್ನು ಖರೀದಿ ಮಾಡಿದ್ದರು. ಈ ವೇಳೆ ಅವರು ಪರಿಚಯವಾಗಿದ್ದು, ನಂತರ ಮನೆ ಕಟ್ಟುವ ವಿಚಾರಕ್ಕೆ ಆಗಾಗ ಸಲಹೆ ಪಡೆಯುತ್ತಿದ್ದುದರಿಂದ ಆತ್ಮೀಯವಾಗಿದ್ದರು. ಆದರೆ, ಈ ಸಂಬಂಧವನ್ನು ಶರಣ್ ಪತ್ನಿ ಸಮಂತಾಗೆ ಸಹಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಆಕೆ ನನ್ನ ಗಂಡನ ಜೊತೆ ಅಕ್ರಮ ಸಂಬಂದ ಇಟ್ಟುಕೊಂಡಿದ್ದಿಯಾ ಎಂದು ಹಲವು ಬಾರಿ ಜಗಳ ಮಾಡಿದ್ದರು.
ಇದರಿಂದ ಬೇಸತ್ತ ಸಮಂತಾ ಅವರು ಶರಣ್ ಜೊತೆ ಸಂಪರ್ಕವೇ ಬಿಟ್ಟಿದ್ದಳು. ಆದರೆ, ಇತ್ತೀಚೆಗೆ ಮಾಲ್ ಒಂದಕ್ಕೆ ಹೋದಾಗ ಶರಣ್ ಮತ್ತು ಪ್ರತಿಮಾ ನಡುವೆ ಮತ್ತೆ ಮುಖಾಮುಖಿಯಾಗಿತ್ತು. ಈ ಭೇಟಿಯಿಂದ ಸಮಂತಾ ಮತ್ತೆ ಕಿರಿಕಿರಿಗೆ ಒಳಗಾಗಿದ್ದರು. ಶರಣ್ ಮತ್ತು ಯುವತಿ ಕದ್ದುಮುಚ್ಚಿ ಸಂಪರ್ಕ ಹೊಂದಿದ್ದಾರೆ ಎಂದು ಸಂಶಯಿಸಿದ ಆಕೆ ತನ್ನ ಗ್ಯಾಂಗ್ ಕಟ್ಟಿಕೊಂಡು ಹೋಗಿ ಮನೆಗೆ ನುಗ್ಗಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ : Illicit relationship : ಮದುವೆಯಾಗಿ ಮಕ್ಕಳಿದ್ದರೂ ಪ್ರೇಮದ ಬಲೆಗೆ ಸಿಲುಕಿ ಇಬ್ಬರು ಪರಾರಿ
ಇದೀಗ ಪೊಲೀಸರು ಸಮಂತಾ ಮತ್ತು ಟೀಮ್ ಮೇಲೆ ಕೇಸು ದಾಖಲಿಸಿಕೊಂಡಿದ್ದಾರೆ. ಇಬ್ಬರನ್ನೂ ಕರೆದು ಮಾತುಕತೆ ನಡೆಸಲು ಮುಂದಾಗಿದ್ದಾರೆ. ಶರಣ್‌ಗೂ ಅಕ್ರಮ ಸಂಬಂಧ ಬಿಟ್ಟು ನೆಟ್ಟಗೆ ಸಂಸಾರ ಮಾಡುವಂತೆ ಸಲಹೆ ನೀಡುವ ಸಾಧ್ಯತೆಗಳಿವೆ.