Site icon Vistara News

Basavaraja Bommai : ನೋಡ್ತಾ ಇರಿ.. ಅಮೆರಿಕದವರು ಭಾರತದ ವೀಸಾಗೆ ಕಾಯೋ ಕಾಲ ಬರುತ್ತೆ ಎಂದ ಬೊಮ್ಮಾಯಿ

Basavaraja Bommai

ಬೆಂಗಳೂರು: ಈಗ ಅಮೆರಿಕ ವೀಸಾ (American Visa) ಪಡೆಯುವುದು ಕಷ್ಟವಾಗಿದೆ. ಈಗ ಭಾರತ ಹೇಗೆ ಬೆಳೆಯುತ್ತಿದೆ ಎಂದರೆ ಭವಿಷ್ಯದಲ್ಲಿ ಭಾರತದ (Future India) ವೀಸಾಗಾಗಿ (Indian Visa) ಅಮೆರಿಕನ್ನರು ಕಾಯುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) ಹೇಳಿದ್ದಾರೆ. ಬೆಂಗಳೂರಿನಲ್ಲಿ ಎಥಿರಿಯಲ್ ಮೆಷಿನ್ಸ್ (Ethirial Machines) ಕಾರ್ಖಾನೆಯ ನೂತನ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂಶೋಧನೆ ಹಾಗೂ ಕೈಗಾರಿಕಾ ಕ್ಷೇತ್ರದಲ್ಲಿ ನಮ್ಮ ಯುವಕರ ಸಾಧನೆ ಹೆಮ್ಮೆ ಪಡುವಂತೆ ಮಾಡಿದೆ ಎಂದರು.

ಕಾಲ ಬದಲಾಗುತ್ತದೆ ಅಂತ ಹೇಳುತ್ತಾರೆ‌. ಕಾಲ ಬದಲಾಗುವುದನ್ನು ಅನುಭವಿಸಲು ಬಹಳ ಕಡಿಮೆ ಅವಕಾಶ ಸಿಗುತ್ತದೆ. ಪ್ರತಿಯೊಬ್ಬರಿಗೂ ಯುಎಸ್ ಗೆ ಹೋಗಬೇಕೆಂಬ ಬಯಕೆ ಇರುತ್ತದೆ. ಯುಎಸ್ ವಿಸಾ ಸಿಗುವುದು ಸುಲಭದ ವಿಷಯವಲ್ಲ. ಆದರೆ, ಭವಿಷ್ಯದಲ್ಲಿ ಯುಸ್ ಜನರು ಭಾರತೀಯ ವೀಸಾಗಾಗಿ ಕಾಯುವ ಕಾಲ ಬರುತ್ತದೆ ಎಂದು ಬೊಮ್ಮಾಯಿ ಹೇಳಿದರು.

Basavaraja Bommai : ಟಾಟಾ ಮೋಟರ್ಸ್‌ ರೀತಿ ಬೆಳೆಯಲಿದೆ ಎಥಿರಿಯಲ್‌ ಮೆಷಿನ್ಸ್

ಎಥಿರಿಯಲ್‌ ಮೆಷಿನ್ಸ್‌ ಕಾರ್ಖಾನೆ ದೊಡ್ಡ ರೀತಿಯ ಸಾಧನೆ ಮಾಡಿ. ಎಥಿರಿಯಲ್ ಕಂಪನಿ ಭಾರತದಲ್ಲಿಯೇ ಉತ್ಪಾದನೆ ಆರಂಭಿಸಿರುವುದರಿಂದ ಅಮೆರಿಕದವರು ಇಲ್ಲಿ ಬಂಡವಾಳ ಹೂಡಿಕೆ ಮಾಡಿದ್ದಾರೆ‌. ಇದೇ ಅಮೃತ ಕಾಲ ಭಾರತ, ಭವಿಷ್ಯದ ಭಾರತ ಎಂದು ಹೇಳಿದರು.

ಬಹಳ ಜನರು ಸಾಕಷ್ಟು ಕನಸು, ಕಲ್ಪನೆಗಳನ್ನು ಹೊಂದಿರುತ್ತಾರೆ ಆದರೆ, ಎಲ್ಲರೂ ಅದನ್ನು ಸಾಧಿಸಲು ಆಗುವುದಿಲ್ಲ. ಈ ಯುವಕರು ಸಾಧನೆ ಮಾಡಿ ತೋರಿಸಿದ್ದಾರೆ. ನಾನು ಟಾಟಾ ಮೋಟರ್ಸ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದೆ, ಅವರು ಮರ್ಸಡೀಸ್ ಬೆಂಜ್ ಕಾರ್ ಜೊತೆಗಿನ ಒಪ್ಪಂದ ಮುಗಿದ ತಕ್ಷಣ ತಮ್ಮದೇ ಸ್ವಂತ ಬಿಡಿ ಭಾಗಗಳನ್ನು ಬಳಸಿ ಕಾರು ಉತ್ಪಾದನೆ ಮಾಡಲು ಆರಂಭಿಸಿದರು ಎಂದು ತಮ್ಮ ವೃತ್ತಿ ಬದುಕನ್ನು ನೆನಪಿಸಿಕೊಂಡರು. ಎಥಿರಿಯಲ್ ಸಂಸ್ಥೆ ಕೂಡ ಟಾಟಾ ಮೋಟರ್ಸ್ ರೀತಿ ಬೆಳೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು ಬಸವರಾಜ ಬೊಮ್ಮಾಯಿ.

ಇದನ್ನೂ ಓದಿ : Basavaraja Bommai : ಮಹಾದಾಯಿ ಯೋಜನೆಗೆ ಗೋಡೆ ಕಟ್ಟಿದ್ದೇ ಕಾಂಗ್ರೆಸ್‌; ಬೊಮ್ಮಾಯಿ ಆರೋಪ

ಅದೃಷ್ಟಕ್ಕಿಂತಲೂ ಪರಿಶ್ರಮದ ಮೇಲೆ ನಂಬಿಕೆ ಇಡಬೇಕು

ನಾವು ಕಾಯಕವೇ ಕೈಲಾಸ ಎಂದು ಹೇಳುತ್ತೇವೆ. ಆದರೆ, ನಾವು ಅದನ್ನು ಪಾಲಿಸುವುದಿಲ್ಲ. ವಿದೇಶಿಗರು ವಾಸ್ತವಿಕತೆಯಲ್ಲಿ ನಂಬಿಕೆ ಇಟ್ಟು ಕೆಲಸ ಮಾಡುತ್ತಾರೆ. ನಾವು ಲಕ್ ನಂಬುತ್ತೇವೆ. ಆದರೆ, ಲಕ್ ಎನ್ನುವುದು ನಮ್ಮ ಕಠಿಣ ಶ್ರಮದ ಮುಂಚೆ ದೊರೆಯುವ ಬೋನಸ್ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಯುವಕರೇ ನಮ್ಮ ದೇಶದ ಭವಿಷ್ಯ. ದೇಶದ ಭವಿಷ್ಯ ಶಾಲೆ, ಕಾಲೇಜಿನಲ್ಲಿ ಓದುತ್ತಿರುವ ಮಕ್ಕಳು, ದುಡಿಯುವ ಯುವಕರಲ್ಲಿದೆ. ಜಗತ್ತಿನಲ್ಲಿ ಅಭಿವೃದ್ಧಿ ಪರ್ವ ತುತ್ತ ತುದಿಯಲ್ಲಿದ್ದು, ಭಾರತದಲ್ಲಿ ಈಗ ಅಭಿವೃದ್ಧಿ ಪಥ ಆರಂಭವಾಗಿದೆ. ಭಾರತದಲ್ಲಿ ಸಂಶೋಧನಾ ವಲಯದಲ್ಲಿ ಸಾಕಷ್ಟು ಅವಕಾಶಗಳು ತೆರೆದುಕೊಳ್ಳುತ್ತಿವೆ. ಭವಿಷ್ಯ ಭಾರತದ್ದಾಗಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತರಾದ ಗುಂಜನ್ ಕೃಷ್ಣ, ಎಥಿರಿಯಲ್ ಮೆಷಿನ್ಸ್‌ ಕಾರ್ಖಾನೆ ಮುಖ್ಯಸ್ಥ ಕೌಶಿಕ್ ಮುದ್ದಾ ಹಾಜರಿದ್ದರು

Exit mobile version