ಬೆಂಗಳೂರು: ಕಾಮದ ಮತ್ತೇರಿಸಿಕೊಂಡ ಯುವಕ ಮತ್ತು ಯುವತಿ ಹಾಡಹಗಲೇ ರಸ್ತೆ ಬದಿ ಕಾರು ನಿಲ್ಲಿಸಿ ರತಿ ಕ್ರೀಡೆಗೆ (Indecent Behaviour) ಶುರು ಮಾಡಿದ್ದರು. ಇದನ್ನು ಗಮನಿಸಿದ ಸಬ್ ಇನ್ಸ್‌ಪೆಕ್ಟರ್ (Reserve police Sub Inspector) ಒಬ್ಬರು ಅವರನ್ನು ಪ್ರಶ್ನಿಸಿದರು. ಆಗ ಅರೆಬಟ್ಟೆಯಲ್ಲಿದ್ದ ಯುವಕ ಪೊಲೀಸ್ ವಿರುದ್ಧ ಸಿಟ್ಟಿಗೆದ್ದಿದ್ದಲ್ಲದೆ ಎಸ್‌ಐ ಮೇಲೆಯೇ ಕಾರು ಹರಿಸಿ ಪರಾರಿಯಾಗಿದ್ದಾನೆ. ಇಂಥ ಭಯಾನಕ ಮತ್ತು ವಿಲಕ್ಷಣ ಘಟನೆ ನಡೆದಿರುವುದು ಬೆಂಗಳೂರಿನ ಜ್ಞಾನಭಾರತಿ ಠಾಣೆ (Bangalore News) ವ್ಯಾಪ್ತಿಯಲ್ಲಿ. ಪೊಲೀಸರು ಈಗ ಈ ಜೋಡಿಗಾಗಿ ಹುಡುಕುತ್ತಿದ್ದಾರೆ.
ಪಶ್ಚಿಮ ವಿಭಾಗದ ಸಶಸ್ತ್ರ ಮೀಸಲು ಪಡೆಯ ರಿಸರ್ವ್ ಸಬ್ ಇನ್ಸ್‌ಪೆಕ್ಟರ್ (ಆರ್ಎಸ್ಐ) ಮಹೇಶ್ ಅವರೇ ಯುವಕನ ಅಟಾಟೋಪದಿಂದ ಗಾಯಗೊಂಡವರು. ಅವರಿಗೆ ಈಗ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮೀಸಲು ಪೊಲೀಸ್ ಪಡೆಯಲ್ಲಿ ಎಸ್‌ಐ ಆಗಿರುವ ಮಹೇಶ್ ಅವರು ಕಳೆದ ನಾಲ್ಕು ವರ್ಷಗಳಿಂದ ಸೇವೆಯಲ್ಲಿದ್ದಾರೆ. ಅವರು ಜನವರಿ 20ರಂದು ಮಧ್ಯಾಹ್ನದ ಊಟ ಮುಗಿಸಿ 3.30ರ ಹೊತ್ತಿಗೆ ವಾಕ್ ಹೊರಟಿದ್ದರು. ಅವರು ಜ್ಞಾನಭಾರತಿ ಬಳಿಕ ಉಪಕಾರ್ ಲೇಔಟ್‌ನ ಮೂರನೇ ಮುಖ್ಯ ರಸ್ತೆ ಬಳಿ ಬರುತ್ತಿದ್ದಂತೆಯೇ ರಸ್ತೆ ಬದಿಯಲ್ಲಿ ಬಿಳಿ ಬಣ್ಣದ ಕಾರೊಂದು ನಿಂತಿತ್ತು. ಕಾರಿನಲ್ಲಿ ಏನೋ ನಡೆಯುತ್ತಿರುವುದನ್ನು ದೂರದಿಂದಲೇ ಗಮನಿಸಿದ ಮಹೇಶ್ ಅವರು ಹತ್ತಿರ ಬಂದು ನೋಡಿದಾಗ ಯುವಕ ಮತ್ತು ಯುವತಿ ಆ ಕಾರಿನೊಳಗೆ ಸರಸದಲ್ಲಿ ತೊಡಗಿರುವುದು ಕಂಡುಬಂತು. ಅವರಿಬ್ಬರೂ ಹಿಂದಿನ ಸೀಟಿನಲ್ಲಿ ಅರೆಬರೆ ದಿರಿಸಿನಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದರು ಎನ್ನಲಾಗಿದೆ.
ಇದೊಂದು ನೂರಾರು ಜನ ಓಡಾಡುವ ಜಾಗ. ಇಲ್ಲಿನ ಪಾರ್ಕ್‌ನಲ್ಲಿ ವಾಯುವಿಹಾರ ನಡೆಸುತ್ತಾರೆ. ಇಲ್ಲಿ ಇಂಥ ಕೃತ್ಯ ನಡೆಸಬಾರದು ಎಂದು ತಿಳಿಹೇಳಲು ಮುಂದಾದಾಗ ಯುವಕ ಕೂಡಲೇ ಡ್ರೆಸ್ ಸರಿ ಮಾಡಿಕೊಂಡು ಡ್ರೈವಿಂಗ್ ಸೀಟ್ ಮೇಲೆ ಜಿಗಿದಿದ್ದಾನೆ. ಮತ್ತು ಕಾರಿನ ಎದುರು ನಿಂತಿದ್ದ ಎಸ್‌ಐ ಮೇಲೆ ಕಾರು ಹರಿಸಿದ್ದಾನೆ. ಸಬ್ ಇನ್ಸ್‌ಪೆಕ್ಟರ್ ಮಹೇಶ್ ಮೇಲೆ ಏಕಾಏಕಿ ಕಾರು ಚಲಾಯಿಸಿದ್ದರಿಂದ ಆತಂಕಗೊಂಡು ಬಾನೆಟ್ ಮೇಲೆ ಹತ್ತಿದ್ದಾರೆ. ಎಷ್ಟೇ ನಿಲ್ಲಿಸುವಂತೆ ಸೂಚಿಸಿದರೂ ಕ್ಯಾರೇ ಅನ್ನದ ಚಾಲಕ ವೇಗವಾಗಿ ರಿವರ್ಸ್ ಗೇರ್ ಹಾಕಿ ಸಡನ್ ಆಗಿ ಕಾರ್ಗೆ ಬ್ರೇಕ್ ಹಾಕಿದ್ದರಿಂದ ಮಹೇಶ್ ಕೆಳಗೆ ಬಿದ್ದಿದ್ದಾರೆ. ಆಗ ಯುವಕ ಕಾರು ಚಲಾಯಿಸಿಕೊಂಡು ಹೋಗಿದ್ದಾನೆ.
ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು
ಘಟನೆಯಲ್ಲಿ ಮಹೇಶ್ ಅವರ ತಲೆ ಹಾಗೂ ದೇಹದ ಇತರ ಭಾಗಗಳಿಗೆ ಪೆಟ್ಟಾಗಿದೆ. ಅವರು ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದು, ಇದನ್ನು ಕಂಡ ಸ್ಥಳೀಯರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಯಲ್ಲಿ ಚೇತರಿಕೆ ಕಂಡುಕೊಂಡ ಮಹೇಶ್ ಅವರು ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ಎಲ್ಲ ವಿದ್ಯಮಾನಗಳು ಸಮೀಪದ ಸಿಸಿ ಟಿವಿ ಕ್ಯಾಮೆರಾಗಳಲ್ಲಿ ದಾಖಲಾಗಿವೆ. ಹಾಗಾಗಿ ಅದರಲ್ಲಿ ದಾಖಲಾಗಿರುವ ಕಾರಿನ ನೋಂದಣಿ ಸಂಖ್ಯೆ ಆಧಾರದಲ್ಲಿ ಆರೋಪಿಗಳನ್ನು ಪೊಲೀಸರು ಹುಡುಕುವ ಕೆಲಸ ನಡೆಸಿದ್ದಾರೆ.