Site icon Vistara News

Industrial City: ಹೊಸೂರಿನಲ್ಲಿ ಟಾಟಾ ಗ್ರೂಪ್‌ನಿಂದ ಇಂಡಸ್ಟ್ರಿಯಲ್‌ ಸಿಟಿ ನಿರ್ಮಾಣಕ್ಕೆ ಸಿದ್ಧತೆ; ಬೆಂಗಳೂರಿನ ಐಟಿ ಸಿಟಿ ಪಟ್ಟಕ್ಕೆ ಕುತ್ತು?

Industrial City

ಬೆಂಗಳೂರು: ಐಟಿ ಸಿಟಿ ಎನ್ನುವ ಹೆಗ್ಗಳಿಕೆಯನ್ನು ಬೆಂಗಳೂರು ಕಳೆದುಕೊಳ್ಳುತ್ತಾ? ಸದ್ಯ ಹೀಗೊಂದು ಚರ್ಚೆ ಸೋಷಿಯಲ್‌ ಮೀಡಿಯಾದಲ್ಲಿ ಆರಂಭವಾಗಿದೆ. ಐಟಿ ಕಂಪನಿಗಳನ್ನು ನೆರೆಯ ತಮಿಳುನಾಡು ಸೆಳೆದುಕೊಳ್ಳುತ್ತಿರುವುದೇ ಈ ಆತಂಕಕ್ಕೆ ಕಾರಣ. ತಮಿಳುನಾಡಿನ ಹೊಸೂರಿನಲ್ಲಿ (Hosur) ಈಗಾಗಲೇ ಏರ್‌ಪೋರ್ಟ್ ನಿರ್ಮಾಣದ ಘೋಷಣೆಯಾಗಿದೆ. ಇದರ ಬೆನ್ನಲೆ ಟಾಟಾ ಗ್ರೂಪ್ ಹೊಸೂರಿನಲ್ಲಿ ಇಂಡಸ್ಟ್ರಿಯಲ್‌ ಸಿಟಿ (ಕೈಗಾರಿಕಾ ನಗರ) ನಿರ್ಮಾಣಕ್ಕೆ ಸಿದ್ಧತೆ ನಡೆಸಿದೆ. ಈ ಎಲ್ಲ ಬೆಳವಣಿಗೆ ಬೆಂಗಳೂರಿನ ಐಟಿ ಸಿಟಿ ಪಟ್ಟಕ್ಕೆ ಕುತ್ತು ತರಲಿದೆ ಎನ್ನಲಾಗಿದೆ (Industrial City).

ಜಾರ್ಖಂಡ್‌ನ ಜಮ್ಶೆಡ್ಪುರ್ ಮಾದರಿಯಲ್ಲಿ ಹೊಸೂರಿನಲ್ಲಿ ಕೈಗಾರಿಕಾ ನಗರಿ ಸ್ಥಾಪನೆಗೆ ಟಾಟಾ ಗ್ರೂಪ್‌ ತಯಾರಿ ನಡೆಸಿರುವುದು ರಾಜ್ಯದ ಐಟಿ ಕಂಪನಿಗಳಿಗೆ ಕಳವಳ ಉಂಟು ಮಾಡಿದೆ. ಬೆಂಗಳೂರಿನಿಂದ ಕೇವಲ 40 ಕಿ.ಮೀ. ದೂರದಲ್ಲಿರುವ ಹೊಸೂರಿನಲ್ಲಿ ಟಾಟಾ ಕಂಪನಿಯಿಂದ ಇಂಡಸ್ಟ್ರಿಯಲ್‌ ಸಿಟಿ ನಿರ್ಮಾಣವಾದರೆ ಉದ್ಯಮಗಳು ಅತ್ತ ವಲಸೆ ಹೋಗುವ ಆತಂಕ ಎದುರಾಗಿದೆ. ಈ ಮೂಲಕ ರಾಜ್ಯದಲ್ಲಿ ಹೂಡಿಕೆ ಮಾಡುವವರನ್ನು ಸೆಳೆಯುತ್ತಿರುವ ತಮಿಳುನಾಡು ಬೆಂಗಳೂರಿಗೆ ಟಕ್ಕರ್ ನೀಡಲು ತಯಾರಿ ನಡೆಸಿದೆ. ಸದ್ಯ ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಟ್ರೆಂಡಿಂಗ್‌ನಲ್ಲಿದೆ.

ಐಟಿ ನೌಕರರಿಗೆ ದಿನಕ್ಕೆ 14 ಗಂಟೆ ಕೆಲಸದ ಪ್ರಸ್ತಾವ

ಕಾನೂನುಬದ್ಧವಾಗಿಯೇ ಕೆಲಸದ ಸಮಯವನ್ನು 14 ಗಂಟೆಗೆ ವಿಸ್ತರಿಸಬೇಕು ಎನ್ನುವ ಐಟಿ ಕಂಪನಿಗಳ ಪ್ರಸ್ತಾವನೆಯನ್ನು ಪರಿಗಣಿಸಿ 1961ರ ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳ ಕಾಯಿದೆಗೆ ತಿದ್ದುಪಡಿ ತರಲು ಕರ್ನಾಟಕ ಸರ್ಕಾರ ಚಿಂತನೆ ನಡೆಸಿದ್ದು ಇತ್ತೀಚೆಗೆ ಭಾರೀ ಸದ್ದು ಮಾಡಿತ್ತು. ಐಟಿ ಉದ್ಯೋಗಿಗಳು ಪ್ರತಿಭಟನೆಯನ್ನೂ ನಡೆಸಿದ್ದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ಪ್ರಸ್ತಾಪಕ್ಕೆ ಕರ್ನಾಟಕ ರಾಜ್ಯ ಐಟಿ, ಐಟಿ ಆಧಾರಿತ ಸೇವೆಗಳ ಉದ್ಯೋಗಿಗಳ ಒಕ್ಕೂಟವು (KITU) ಭಾರಿ ವಿರೋಧ ವ್ಯಕ್ತಪಡಿಸಿದೆ. “ಐಟಿ ಉದ್ಯೋಗಿಗಳ ಕೆಲಸವನ್ನು ನಾಲ್ಕು ಗಂಟೆ ಹೆಚ್ಚಿಸುವುದರಿಂದ ನೌಕರರ ಖಾಸಗಿ ಹಾಗೂ ವೃತ್ತಿ ಜೀವನದ ಮೇಲೆ ಭಾರಿ ಪರಿಣಾಮ ಬೀರಲಿದೆ. ಉದ್ಯೋಗಿಗಳು ವೃತ್ತಿ ಮಾಡುವ ಬದಲು ಮಷೀನ್‌ಗಳಾಗಿ ಬದಲಾಗುತ್ತಾರೆ. ಅವರ ಆರೋಗ್ಯದ ಮೇಲೂ ನಕಾರಾತ್ಮಕ ಪರಿಣಾಮ ಬೀರಲಿದೆ. ಹಾಗಾಗಿ, ರಾಜ್ಯ ಸರ್ಕಾರವು ಪ್ರಸ್ತಾಪವನ್ನು ಪರಿಷ್ಕರಿಸಬೇಕು” ಎಂದು ಒಕ್ಕೂಟ ಆಗ್ರಹಿಸಿದೆ.

ಸಾಮಾಜಿಕ ಜಾಲತಾಣಗಳಲ್ಲೂ ಈ ಕುರಿತು ವಿರೋಧ ವ್ಯಕ್ತವಾಗುತ್ತಿದೆ. ಐಟಿ ಕ್ಷೇತ್ರಗಳಲ್ಲಿ ಕೆಲಸ ಮಾಡುವವರು ಈಗಾಗಲೇ ಒತ್ತಡ, ಬಿಪಿ, ಶುಗರ್‌ ಸೇರಿ ಹಲವು ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಈಗ 14 ಗಂಟೆಗೆ ನೌಕರರ ಕೆಲಸದ ಅವಧಿಯನ್ನು ಹೆಚ್ಚಿಸಿದರೆ ನೌಕರರು ಹಣಕ್ಕಿಂತ ಹೆಚ್ಚು ಕಾಯಿಲೆಗಳನ್ನು ಗಳಿಸುತ್ತಾರೆ ಎಂಬುದಾಗಿ ಜನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಾಯ್ದೆ ಪ್ರಕಾರ ಈಗ ಐಟಿ ಉದ್ಯೋಗಿಗಳ ಕೆಲಸದ ಅವಧಿಯು 10 ಗಂಟೆ ಆಗಿದೆ.

ಈ ಎಲ್ಲ ಬೆಳವಣಿಗೆಗಳು ಬೆಂಗಳೂರಿಗೆ ಇದ್ದ ಐಟಿ ಹಬ್ ಪಟ್ಟಕ್ಕೆ ಪೆಟ್ಟು ನೀಡಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ಮಾಡಲಾಗುತ್ತಿದೆ. ಐಟಿ ಉದ್ಯೋಗಿಗಳು ದೇಶದ ಇತರ ಭಾಗಗಳಾದ ಹೈದರಾಬಾದ್, ಪುಣೆ ಮತ್ತು ಗುರುಗ್ರಾಮ್‌ ಕಡೆಗೆ ಮುಖ ಮಾಡಲಿದ್ದಾರೆ. ಅಹಮದಾಬಾದ್ ಕೂಡ ಈಗ ಐಟಿ ಹಬ್ ಆಗಿ ವಿಕಸನಗೊಳ್ಳುತ್ತಿದೆ ಎನ್ನುವುದಕ್ಕೂ ಪೂರಕ ಮಾಹಿತಿಗಳಿವೆ. ಒಟ್ಟಿನಲ್ಲಿ ಸರ್ಕಾರದ 14 ಗಂಟೆ ಕೆಲಸದ ನಿಯಮ, ಕನ್ನಡಿಗರಿಗೆ ಮೀಸಲಾತಿ, ಇದೀಗ ಹೊಸೂರಿನಲ್ಲಿ ಇಂಡಸ್ಟ್ರಿಯಲ್‌ ಸಿಟಿ ನಿರ್ಮಾಣ ಆತಂಕಕ್ಕೆ ದೂಡಿರುವುದು ಸುಳ್ಳಲ್ಲ.

ಇದನ್ನೂ ಓದಿ: IT Employees: ಕರ್ನಾಟಕದ ಐಟಿ ಉದ್ಯೋಗಿಗಳೇ, ದಿನಕ್ಕೆ 14 ಗಂಟೆ ಕೆಲಸ ಮಾಡಲು ಸಜ್ಜಾಗಿ; ರಾಜ್ಯ ಸರ್ಕಾರದ ನಿರ್ಧಾರ ಹೀಗಿದೆ

Exit mobile version