ಬೆಂಗಳೂರು: ಜನ-ಸಾಮಾನ್ಯರ ರಕ್ಷಣೆ ಮಾಡುವ ಆ ಎಎಸ್‌ಐಗೆ ಮಗಳೇ ಜೀವವಾಗಿದ್ದಳು. ಆಕೆಯ ಭವಿಷ್ಯಕ್ಕಾಗಿ ನೂರಾರು ಕನಸು ಕಂಡಿದ್ದರು. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಸಾಕಿ ಸಾಲುಹಿದ್ದ ಮಗಳು ಅಗ್ನಿ ದುರಂತದಲ್ಲಿ ತಂದೆ ಕಣ್ಣೆದುರೇ ಸುಟ್ಟು ಕರಕಲಾಗಿದ್ದಳು. ಮಗಳ ಅಗಲಿಕೆಯಿಂದ ಮನನೊಂದಿದ್ದ ಅವರು ಕೊರಗಿ ಕಂಗಲಾಗಿದ್ದರು. ಆದರೆ ಮಗಳ ಸಾವಿಗೆ ಗೌರವ ಸರ್ಮಪಿಸಬೇಕೆಂದು ಆ ಖಾಕಿ ಇಟ್ಟ ಹೆಜ್ಜೆ ಹಲವು ಮಕ್ಕಳ ಭವಿಷ್ಯಕ್ಕೆ ದಾರಿ (Inspirational Story) ದೀಪವಾಗಿದೆ.
ಪೂರ್ವ ವಿಭಾಗದ ಸೆನ್ ಪೊಲೀಸ್ ಠಾಣೆಯಲ್ಲಿ ಎಎಸ್‌ಐ ಆಗಿ ಕೆಲಸ ಮಾಡುತ್ತಿರುವ ಲೋಕೇಶಪ್ಪ ಬಡ ಮಕ್ಕಳಿಗೆ ಮಾಡಿದ ದಾನದಿಂದಲೇ ಹೆಸರು ಮಾಡಿದ್ದಾರೆ. 2019ರಲ್ಲಿ ಬೆಂಕಿ ಅವಘಡದಲ್ಲಿ ತಮ್ಮ ಮಗಳು ಹರ್ಷಾಲಿಯನ್ನು ಕಳೆದುಕೊಂಡಿದ್ದರು. ಇದರಿಂದ ಮನನೊಂದಿದ್ದ ಅವರು ಮಗಳ ಸಾವಿನ ಗೌರವಾರ್ಥವಾಗಿ ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸಹಾಯ ಮಾಡುತ್ತಿದ್ದಾರೆ.
ಕಳೆದ ಒಂದು ವರ್ಷದಿಂದ ತಮ್ಮ ಮಗಳ ಶಿಕ್ಷಣಕ್ಕೆ ಖರ್ಚಾಗುತ್ತಿದ್ದ ಹಣವನ್ನು ಬಡ ಮಕ್ಕಳ ಶಾಲಾ ಸಾಮಾಗ್ರಿಗಳಿಗೆ ಧನಸಹಾಯ ಮಾಡುತ್ತಿದ್ದಾರೆ. ಲೊಕೇಶಪ್ಪ ಪತ್ನಿ ಕೂಡ ಮಗಳನ್ನು ಕಳೆದುಕೊಂಡು ತೀವ್ರವಾಗಿ ನೊಂದಿದ್ದರು. ಹೀಗಾಗಿ ಶಿಕ್ಷಣ ಇಲಾಖೆಯ ಕೆಲಸ ಬಿಟ್ಟು , ಹರ್ಷಾಲಿ ಹೆಸರಿನಲ್ಲಿ ಎನ್‌ಜಿಒ ಶುರು ಮಾಡಿ ಅದರ ಮೂಲಕ ಬಡ ಮಕ್ಕಳಿಗೆ ಸಹಾಯ ಮಾಡುತ್ತಿದ್ದಾರೆ.
ಇದನ್ನೂ ಓದಿ: Inspirational Story: 25 ವರ್ಷಗಳ ಹಿಂದೆ ಕಸದ ತೊಟ್ಟಿಯಲ್ಲಿ ಸಿಕ್ಕ ಅಂಧ ಹೆಣ್ಣುಮಗುವಿನ ಸಾಧನೆ ನೋಡಿ!
ಇನ್ನು ಲೋಕೇಶಪ್ಪ ದಂಪತಿ ಕಳೆದ ಒಂದು ವರ್ಷದಿಂದ ಈ ಕಾರ್ಯವನ್ನು ನೆರವೇರಿಸಿಕೊಂಡು ಬರುತ್ತಿದ್ದಾರೆ. ಮೈಸೂರು 1, ಹಾಸನ 4 , ಬೆಂಗಳೂರು 1 ಶಾಲೆ ಸೇರಿ ಒಟ್ಟು ಆರು ಸರ್ಕಾರಿ ಶಾಲೆಗಳಲ್ಲಿರುವ ಬಡ ಮಕ್ಕಳನ್ನು ಗುರುತಿಸಿದ್ದಾರೆ. ಅವರ ವಿದ್ಯಾಭ್ಯಾಸಕ್ಕೆ ಬೇಕಾದ ಪರಿಕರಗಳಾದ ಪುಸ್ತಕ, ಪೆನ್ನು, ಪೆನ್ಸಿಲ್, ವಾಟರ್ ಬಾಟಲ್ ಸೇರಿದಂತೆ ಹಲವು ವಸ್ತುಗಳನ್ನ ವಿತರಣೆ ಮಾಡುತ್ತಿದ್ದಾರೆ.
ಆರು ಶಾಲೆಗಳ ಸುಮಾರು 600 ಮಕ್ಕಳ ವಿದ್ಯಾಭ್ಯಾಸಕ್ಕೆ ಧನಸಹಾಯ ಮಾಡಿದ್ದಾರೆ. ಬೆಂಗಳೂರಿನ 200 ಮಕ್ಕಳು ಸೇರಿದಂತೆ 600 ಮಕ್ಕಳಿಗೆ ಆಸರೆಯಾಗಿದ್ದಾರೆ. ಸದ್ಯ ಎಎಸ್‌ಐ ಅವರ ಕೆಲಸಕ್ಕೆ ಹಲವೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಬಡ ಮಕ್ಕಳಲ್ಲಿ ತನ್ನ ಮಗಳನ್ನ ಕಾಣುತ್ತಿರುವ ಎಎಸೈ ಲೊಕೇಶಪ್ಪ ಪ್ರತಿ ವರ್ಷವೂ ಕೂಡ ಮಗಳ ಸಾವಿನ ದಿನವನ್ನು ದಾನ ಮಾಡುವ ಮೂಲಕ ಸ್ಮರಣಾರ್ಥ ದಿನವಾಗಿ ಮಾಡಲು ನಿರ್ಧರಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ