Site icon Vistara News

Electoral Bond : ಚುನಾವಣಾ ಬಾಂಡ್‌ ಬಿಜೆಪಿ ಕೈಯಲ್ಲಿರುವ ಸುಲಿಗೆ ಬ್ರಹ್ಮಾಸ್ತ್ರ: ಸಿದ್ದರಾಮಯ್ಯ

Electoral Bonds CM Siddaramaiah Narendra Modi

ಬೆಂಗಳೂರು: ಚುನಾವಣಾ ಬಾಂಡ್ (Electoral Bond) ಎನ್ನುವುದು ಬಿಜೆಪಿಯ ಕೈಯಲ್ಲಿರುವ ರಾಜಕೀಯ ಸುಲಿಗೆಯ (Political extortion) ಬ್ರಹ್ಮಾಸ್ತ್ರವೇ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಪ್ರಶ್ನಿಸಿದ್ದಾರೆ. ಸುಪ್ರೀಂ ಕೋರ್ಟ್ (Supreme Court) ಉನ್ನತಾಧಿಕಾರದ ಸಮಿತಿಯನ್ನು ರಚಿಸಿ ಚುನಾವಣಾ ಬಾಂಡ್ ಹಗರಣದ ತನಿಖೆ ನಡೆಸಬೇಕು ಮತ್ತು ಅಲ್ಲಿಯ ವರೆಗೆ ಬಿಜೆಪಿಯ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಮತ್ತು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರಿಗೆ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ.

ಚುನಾವಣಾ ಬಾಂಡ್‌ಗಳನ್ನು ಸುಪ್ರೀಂಕೋರ್ಟ್‌ ಅಸಾಂವಿಧಾನಿಕ ಎಂದು ಘೋಷಿಸಿದ್ದಲ್ಲದೆ, ಯಾರ್ಯಾರು ದೇಣಿಗೆ ಕೊಟ್ಟಿದ್ದಾರೆ ಎಂಬುದನ್ನು ಬಹಿರಂಗಪಡಿಸುವಂತೆ ಎಸ್‌ಬಿಐಗೆ ಆದೇಶಿಸಿತ್ತು. ಈ ಪಟ್ಟಿಯಲ್ಲಿ ಹಲವು ಪ್ರಮುಖ ಕಂಪನಿಗಳು, ವ್ಯಕ್ತಿಗಳು ಇರುವುದು ಪತ್ತೆಯಾಗಿದೆ. ಕೇಂದ್ರ ಸರಕಾರ ಇಡಿ ಮತ್ತು ಐಟಿಗಳನ್ನು ಬಳಸಿಕೊಂಡು ಬೆದರಿಸಿ ದೇಣಿಗೆಯನ್ನು ಸಂಗ್ರಹಿಸಿದೆ ಎಂಬ ಆಪಾದನೆಗಳು ಕೇಳಿಬಂದಿದೆ. ಇದೀಗ ಸಿಎಂ ಸಿದ್ದರಾಮಯ್ಯ ಅವರು ಕೂಡಾ ಎಲೆಕ್ಟೋರಲ್‌ ಬಾಂಡ್‌ ಗಳ ಬಗ್ಗೆ ಮಾತನಾಡಿದ್ದಾರೆ. ಅವರು ಕೇಳಿರುವ ಪ್ರಶ್ನೆಗಳನ್ನು ಮುಂದೆ ಓದಿ..

ಬಾಂಡ್‌ ಸುಲಿಗೆ ಬಗ್ಗೆ ಬಿಜೆಪಿ ಯಾಕೆ ಮೌನ?

ಕರ್ನಾಟಕಕ್ಕೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಸ್ವಾಗತ. ಜಗತ್ತಿನ ಅತ್ಯಂತ ದೊಡ್ಡ ಭ್ರಷ್ಟಾಚಾರ ಹಗರಣವಾಗಿ ಹೊರಹೊಮ್ಮುತ್ತಿರುವ ಚುನಾವಣಾ ಬಾಂಡ್ ಸುಲಿಗೆ ಬಗ್ಗೆ ಭಾರತೀಯ ಜನತಾ ಪಕ್ಷ ಯಾಕೆ ಮೌನವಾಗಿದೆ? ಸ್ವಿಸ್ ಬ್ಯಾಂಕ್ ನಲ್ಲಿರುವ ಕಪ್ಪು ಹಣ ತಂದು ಜನರಿಗೆ ಹಂಚುತ್ತೇವೆ, ನೋಟ್ ಬ್ಯಾನ್ ಮಾಡಿ ಕಪ್ಪುಹಣದ ಮೂಲೋತ್ಪಾಟನೆ ಮಾಡುತ್ತೇವೆ, ನಾ ಖಾವೂಂಗಾ – ನಾ ಖಾನೆ ದೂಂಗಾ, ದೇಶದ ಸಂಪತ್ತಿಗೆಲ್ಲ ನಾನೇ ಚೌಕಿದಾರ ಎಂದೆಲ್ಲ ಹೇಳಿ ಹತ್ತು ವರ್ಷಗಳಿಂದ ಅಧಿಕಾರದಲ್ಲಿರುವ ಮೋದಿಯವರೇ ಕನಿಷ್ಠ ಚುನಾವಣಾ ಬಾಂಡ್ ಹಗರಣದ ಬಗ್ಗೆಯಾದರೂ ಉತ್ತರಿಸಿ.

ಇದನ್ನೂ ಓದಿ : Electoral Bonds: ʼಚುನಾವಣೆ ಬಾಂಡ್‌ ಕುರಿತು ಕೋರ್ಟ್‌ ತೀರ್ಪು ಬಗ್ಗೆ ಗೌರವವಿದೆ, ಆದರೆ…ʼ ಅಮಿತ್‌ ಶಾ

ಬಾಂಡ್‌ ಖರೀದಿ ಕಾನೂನುಬದ್ಧವಾಗಿದ್ದರೆ ಮಾಹಿತಿ ನೀಡಲು ಹಿಂಜರಿಕೆ ಯಾಕೆ?

ಸುಪ್ರೀಂ ಕೋರ್ಟ್ ಆದೇಶದ ಹೊರತಾಗಿಯೂ ಭಾರತೀಯ ಸ್ಟೇಟ್ ಬ್ಯಾಂಕ್ ಸಂಪೂರ್ಣ ಮಾಹಿತಿ ನೀಡಲು ಯಾಕೆ ಹಿಂಜರಿಯುತ್ತಿದೆ? ಚುನಾವಣಾ ಬಾಂಡ್ ಗಳ ಮಾರಾಟ ಮತ್ತು ಖರೀದಿ ವ್ಯವಹಾರ ಕಾನೂನುಬದ್ಧವಾಗಿ ನಡೆದಿದ್ದರೆ ಎಸ್‌ಬಿಐ ಯಾಕೆ ಮಾಹಿತಿ ಮುಚ್ಚಿಡಲು ಪ್ರಯತ್ನಿಸುತ್ತಿದೆ? ಎಸ್‌ಬಿಐ ಮೇಲೆ ಒತ್ತಡ ಹೇರುತ್ತಿರುವವರು ಯಾರು? ಪ್ರಧಾನಿ ನರೇಂದ್ರ ಮೋದಿ ಅವರೇ ದಯವಿಟ್ಟು ಉತ್ತರಿಸಿ.

ಕೇಂದ್ರ ಸರ್ಕಾರದಿಂದ ಉದ್ಯಮಿಗಳ ಬ್ಲ್ಯಾಕ್‌ಮೇಲ್‌ ನಡೆಯುತ್ತಿದೆಯಾ?

ಮಾಧ್ಯಮಗಳು ವಿಶ್ಲೇಷಿಸುತ್ತಿರುವ ಚುನಾವಣಾ ಆಯೋಗ ಪ್ರಕಟಿಸಿರುವ ಮಾಹಿತಿಯನ್ನು ನೋಡಿದರೆ ಕೇಂದ್ರ ಸರ್ಕಾರ ಉದ್ಯಮಿಗಳ ಬ್ಲಾಕ್ ಮೇಲ್ ಮಾಡುತ್ತಿರುವಂತೆ ಕಾಣುತ್ತಿದೆ. ಉದ್ಯಮಿಗಳ ಮೇಲೆ ನಡೆದಿರುವ ಐಟಿ, ಇಡಿ, ಸಿಬಿಐ ದಾಳಿಗಳ ದಿನಾಂಕ ಮತ್ತು ಆ ಉದ್ಯಮಿಗಳು ಚುನಾವಣಾ ಬಾಂಡ್ ಗಳ ಖರೀದಿ ದಿನಾಂಕಗಳನ್ನು ನೋಡಿದರೆ ಇದೊಂದು ಪಕ್ಕಾ ಬ್ಲಾಕ್ ಮೇಲ್ ಹಗರಣದಂತೆ ಕಾಣುತ್ತಿದೆ. ದೇಣಿಗೆ ವಸೂಲಿಗಾಗಿ ಕೇಂದ್ರ ಸರ್ಕಾರ ತನ್ನ ಅಧೀನದಲ್ಲಿರುವ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆಯೇ? ಚುನಾವಣಾ ಬಾಂಡ್ ಎನ್ನುವುದು ಬಿಜೆಪಿಯ ಕೈಯಲ್ಲಿರುವ ರಾಜಕೀಯ ಸುಲಿಗೆಯ ಬ್ರಹ್ಮಾಸ್ತ್ರವೇ? ಪ್ರಧಾನಿಯವರೇ ಉತ್ತರಿಸಿ.

ಭ್ರಷ್ಟ, ವಂಚಕ ಸಂಸ್ಥೆಗಳಿಂದಲೇ ಗರಿಷ್ಠ ದೇಣಿಗೆ; ಏನಿದರ ಮರ್ಮ?

ಬಯಲಾಗುತ್ತಿರುವ ಮಾಹಿತಿಗಳನ್ನು ನೋಡಿದರೆ ಚುನಾವಣಾ ಬಾಂಡ್ ಹಗರಣದಲ್ಲಿ ದೊಡ್ಡ ಸಂಖ್ಯೆಯಲ್ಲಿ ಭಾಗಿಯಾಗಿರುವವರು ಮೂಲಭೂತ ಸೌಕರ್ಯ ನಿರ್ಮಾಣದ ಎಂಜನಿಯರಿಂಗ್ ಸಂಸ್ಥೆಗಳು ಮತ್ತು ಔಷಧಿ ಉತ್ಪಾದನಾ ಕಂಪೆನಿಗಳು. ಇಂತಹ ಭ್ರಷ್ಟ, ವಂಚಕ ಸಂಸ್ಥೆಗಳು ನಿರ್ಮಾಣ ಮಾಡಿರುವ ರಸ್ತೆ, ಸೇತುವೆ, ಕಟ್ಟಡಗಳು ಎಷ್ಟು ಸುಭದ್ರ? ಇಂತಹ ಭ್ರಷ್ಟ-ವಂಚಕ ಸಂಸ್ಥೆಗಳು ತಯಾರಿಸಿದ ಔಷಧಿಗಳು ಎಷ್ಟು ಸುರಕ್ಷಿತ? ಇದಕ್ಕೆ ಉತ್ತರಿಸಬೇಕಾದವರು ನೀವಲ್ಲವೇ ಪ್ರಧಾನಿಗಳೇ?

Electoral Bonds siddaramaiah Modi

ಬಾಂಡ್‌ ಬಗ್ಗೆ ಸುಪ್ರೀಂಕೋರ್ಟ್‌ನಿಂದಲೇ ಉನ್ನತ ತನಿಖೆ ನಡೆಯಲಿ

ಸುಪ್ರೀಂಕೋರ್ಟ್ ಖುದ್ದಾಗಿ ಮುಂದೆ ನಿಂತು ಬಯಲು ಮಾಡುತ್ತಿರುವ ಚುನಾವಣಾ ಬಾಂಡ್ ಹಗರಣದ ಬಗ್ಗೆ ದೇಶದ ಪ್ರತಿಯೊಬ್ಬ ಪ್ರಜೆಯಲ್ಲಿಯೂ ಅನುಮಾನ ಹುಟ್ಟಿಕೊಂಡಿದೆ. ತಮ್ಮ ತೆರಿಗೆ ಹಣದ ದುರುಪಯೋಗ ನಡೆದಿದೆ. ಇದರಲ್ಲಿ ಕೇಂದ್ರ ಸರ್ಕಾರದ ಪಾತ್ರವಿದೆ ಎಂದು ಜನತೆ ನಂಬಿದ್ದಾರೆ. ಈ ಅನುಮಾನವನ್ನು ಹೋಗಲಾಡಿಸಲು ಸುಪ್ರೀಂ ಕೋರ್ಟ್ ಉನ್ನತಾಧಿಕಾರದ ಸಮಿತಿಯನ್ನು ರಚಿಸಿ ಚುನಾವಣಾ ಬಾಂಡ್ ಹಗರಣದ ತನಿಖೆ ನಡೆಸಬೇಕು ಮತ್ತು ಅಲ್ಲಿಯ ವರೆಗೆ ಬಿಜೆಪಿಯ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಬೇಕು ಎಂದು ನಾನು ಒತ್ತಾಯಿಸುತ್ತೇನೆ.

Exit mobile version