- ಬೆಂಗಳೂರು ಏರ್ಪೋರ್ಟ್ ಮೂಲಕ ಸಿರಿಯಾಕ್ಕೆ ಪ್ರಯಾಣ
- ಬೆಂಗಳೂರಿನಲ್ಲೇ ರೂಪಾಯಿ-ಡಾಲರ್ ಪರಿವರ್ತನೆ
- ವಾಟ್ಸ್ ಆಪ್ ಗ್ರೂಪ್ ಮೂಲಕ ಹಣ ಸಂಗ್ರಹ
- ಎನ್‌ಐಎ ಚಾರ್ಜ್ಶೀಟ್ನಲ್ಲಿ ಐಸಿಸ್ ಚಟುವಟಿಕೆಗಳ ಸ್ಫೋಟಕ ವಿವರ
ಬೆಂಗಳೂರು: ಸಿರಿಯಾ ಮೂಲದ ಕುಖ್ಯಾತ ಭಯೋತ್ಪಾದಕ ಸಂಘಟನೆಯಾಗಿರುವ ಐಸಿಸ್‌ಗೆ ಯುವಕರನ್ನು ಸೇರಿಸುವ ಉಗ್ರರ ಜಾಲ ಬೆಂಗಳೂರಿನಲ್ಲಿ ಸಕ್ರಿಯವಾಗಿದೆ ಎಂಬ ಸ್ಫೋಟಕ ಸಂಗತಿಯನ್ನು ರಾಷ್ಟ್ರೀಯ ಭದ್ರತಾ ಸಂಸ್ಥೆಯ (ಎನ್‌ಐಎ) ತನಿಖೆ ಪತ್ತೆಹಚ್ಚಿದೆ.
ಎನ್‌ಐಎ ಸಿದ್ಧಪಡಿಸಿರುವ ಚಾರ್ಜ್‌ಶೀಟ್ ಪ್ರಕಾರ, ಐಸಿಸ್‌ಗೆ ಸೇರ್ಪಡೆಯಾಗಲು ಬಯಸುವ ಯುವಕರಿಗೆ ಬೆಂಗಳೂರು ವಿಮಾನ ನಿಲ್ದಾಣದ ಮೂಲಕ ಸಿರಿಯಾಕ್ಕೆ ತೆರಳಲು ಅಗತ್ಯವಿರುವ ಎಲ್ಲ ಪ್ರಕ್ರಿಯೆಗಳನ್ನು ಬೆಂಗಳೂರಿನಲ್ಲಿ ಉಗ್ರರ ಜಾಲ ಮಾಡುತ್ತಿತ್ತು. ಪೊಲೀಸರು ಮತ್ತು ತನಿಖಾ ಸಂಸ್ಥೆಗಳ ಕಣ್ತಪ್ಪಿಸಲು ನಾನಾ ತಂತ್ರಗಳನ್ನು, ತಂತ್ರಜ್ಞಾನಗಳನ್ನು ಉಗ್ರರು ದುರ್ಬಳಕೆ ಮಾಡುತ್ತಿದ್ದರು. ಇವೆಲ್ಲದಕ್ಕೂ ಕುರಾನ್ ಸರ್ಕಲ್ ಗ್ರೂಪ್ ಎಂಬ ವಾಟ್ಸ್ ಆಪ್ ಗ್ರೂಪ್ ಸಹಕರಿಸುತ್ತಿತ್ತು. ಈ ವಾಟ್ಸ್ ಆಪ್ ಗ್ರೂಪ್ ಮೂಲಕ ಹಲವರನ್ನು ಸಂಪರ್ಕಿಸಿ ಹಣ ಸಂಗ್ರಹಿಸಲಾಗುತ್ತಿತ್ತು. ಹೀಗೆ ಕಲೆ ಹಾಕಿದ ಹಣವನ್ನು ಬೆಂಗಳೂರಿನಲ್ಲೇ ಡಾಲರ್ ಆಗಿ ಪರಿವರ್ತಿಸಿ ಭಯೋತ್ಪಾದಕ ಚಟುವಟಿಕೆಗೆ ಬಳಸಲಾಗುತ್ತಿತ್ತು.
ಎನ್‌ಐಎ ಆರೋಪಪಟ್ಟಿಯ ಪ್ರಕಾರ, ಬೆಂಗಳೂರಿನ ಕಮರ್ಶಿಯಲ್ ಸ್ಟ್ರೀಟ್‌ನಲ್ಲಿ ರೂಪಾಯಿಯನ್ನು ಡಾಲರ್ ಆಗಿ ಪರಿವರ್ತಿಸಲಾಗುತ್ತಿತ್ತು. ವೀಸಾ ಮತ್ತು ಪಾಸ್ ಪೋರ್ಟ್ ಪ್ರಕ್ರಿಯೆ ಇಲ್ಲೇ ನಡೆಯುತ್ತಿತ್ತು. ಮತಾಂತರವಾದ ಯುವಕರ ಬ್ರೈನ್‌ವಾಶ್ ಮಾಡಿ ಸಿರಿಯಾಕ್ಕೆ ಕಳುಹಿಸಲಾಗುತ್ತಿತ್ತು. ಜೊಹೈಬ್ ಮನ್ನಾ ಮತ್ತು ಅಬ್ದುಲ್ ಖಾದೀರ್ ಎಂಬುವರು ಈ ದುಷ್ಕೃತ್ಯಗಳ ರೂವಾರಿಗಳಾಗಿದ್ದರು.
ಭದ್ರತಾ ಮತ್ತು ತನಿಖಾ ಸಂಸ್ಥೆಗಳ ಬಲೆಗೆ ಬೀಳದಿರಲು ಸೆಕ್ಯೂರ್ಡ್ ಆಪ್‌ಗಳಾದ ಶ್ಯೂರ್‌ಸ್ಪಾಟ್ ಮತ್ತು ಥ್ರೀಮಾ ಎಂಬ ಮೊಬೈಲ್ ಅಪ್ಲಿಕೇಷನ್‌ಗಳ ಮೂಲಕ ಪರಸ್ಪರ ಸಂಪರ್ಕಿಸುತ್ತಿದ್ದರು. ಮಾತುಕತೆ ನಡೆಸುತ್ತಿದ್ದರು. ಈ ಎಲ್ಲ ಅಂಶಗಳ ಬಗ್ಗೆ ಎನ್‌ಐಎ ತನ್ನ ತನಿಖೆಯನ್ನು ಚುರುಕುಗೊಳಿಸಿದೆ.
ಮಹಮ್ಮದ್ ಸಜ್ಜದ್ ಎಂಬಾತ 2013ರಲ್ಲಿ ಸಿರಿಯಾಕ್ಕೆ ತೆರಳಿ ಐಸಿಸ್ ಸೇರುವ ಸಲುವಾಗಿ ಬೆಂಗಳೂರಿಗೆ ಬಂದಿದ್ದ. ಆರೋಪಿ ಮಹಮ್ಮದ್ ತಕ್ವೀರ್ ಮಹಮೂದ್, ಜೊಹೈಬ್ ಮನ್ನಾನನ್ನು ಕೂಡ ತನ್ನ ಮನೆಗೆ ಆಹ್ವಾನಿಸಿದ್ದ. ಆಗ ಮಹಮ್ಮದ್ ಸಜ್ಜದ್, ಐಸಿಸ್ ಸೇರಲು ಬಯಸಿರುವುದಾಗಿ ತಿಳಿಸಿದ್ದ. ಜೊಹೈಬ್ ಮನ್ನಾನ ಮನೆಯಲ್ಲೂ ಮಹಮ್ಮದ್ ಸಜ್ಜದ್ 2-3 ದಿನ ತಂಗಿದ್ದ. ಮಹಮ್ಮದ್ ಸಜ್ಜದ್ ಸಿರಿಯಾಕ್ಕೆ ತೆರಳುವ ವೇಳೆ ವಿಮಾನ ನಿಲ್ದಾಣಕ್ಕೆ ಆತನ ಜತೆಗೆ ಜೊಹೈಬ್ ಮನ್ನಾ, ಕುರಾನ್ ಸರ್ಕಲ್‌ನ ಇತರ ಸದಸ್ಯರು ಬಂದಿದ್ದರು.
ಡಾಕ್ಟರ್‌ಗಳಾದ ಅಫ್ರೋಜ್ ಅಹ್ಮದ್ ಮತ್ತು ಅಬ್ದುಲ್ ರೆಹಮಾನ್ ಎಂಬುವರನ್ನು ಸಿರಿಯಾಕ್ಕೆ ಕಳಿಸಲು ನಿಧಿಯನ್ನು ಸಂಗ್ರಹಿಸಲಾಗಿತ್ತು. ಬೆಂಗಳೂರಿನ ಕಮರ್ಶಿಯಲ್ ಸ್ಟ್ರೀಟ್‌ನಲ್ಲೇ ರೂಪಾಯಿಗಳನ್ನು ಡಾಲರಿಗೆ ಪರಿವರ್ತಿಸಲಾಗಿತ್ತು. ಹೀಗೆ ಬೆಂಗಳೂರಿನಲ್ಲಿ ಐಸಿಸ್ ಉಗ್ರರ ಜಾಲ ಸಕ್ರಿಯವಾಗಿರುವುದನ್ನು ಎನ್‌ಐಎ ಪತ್ತೆಹಚ್ಚಿದೆ.