ಬೆಂಗಳೂರು: ರಾಜಧಾನಿಯ ಹಲವು ಕಂಪನಿಗಳಿಗೆ ಬುಧವಾರ ಮುಂಜಾನೆಯೇ ಐಟಿ ಶಾಕ್ (Income Tax raid) ಎದುರಾಗಿದೆ. ಬೆಂಗಳೂರಿನ 10ಕ್ಕೂ ಹೆಚ್ಚು ಖಾಸಗಿ ಕಂಪನಿಗಳ (Private Companies) ಮೇಲೆ ಐಟಿ ಅಧಿಕಾರಿಗಳು (IT officials) ದಾಳಿ ನಡೆಸಿದ್ದಾರೆ. ಆದಾಯ ತೆರಿಗೆ ತಪ್ಪು ಮಾಹಿತಿ, ಸುಳ್ಳು ಮಾಹಿತಿ (Income tax evasion) ನೀಡಿದ ಹಿನ್ನೆಲೆಯಲ್ಲಿ ಈ ದಾಳಿ (IT Raid) ನಡೆದಿದೆ.
ನಗರದ ಸರ್ ಸಿ.ವಿ. ರಾಮನ್ ನಗರ, ಬಾಗಮನೆ ಟೆಕ್ ಪಾರ್ಕ್, ಹುಳಿಮಾವು ಮೊದಲಾದ ಕಡೆಗಳಲ್ಲಿ ದಾಳಿ ನಡೆದಿದೆ. ಸುಮಾರು 10ಕ್ಕೂ ಹೆಚ್ಚು ಐಟಿ ಅಧಿಕಾರಿಗಳ ತಂಡ ಏಕಕಾಲದಲ್ಲಿ ನಾನಾ ಕಡೆ ದಾಳಿ ಮಾಡಿದೆ.
ಹುಳಿಮಾವು ಸಮೀಪದ ಆಪಸ್ ಅಪಾರ್ಟ್ಮೆಂಟ್ ಮೇಲೆ ದಾಳಿ ಮಾಡಿರುವ ಐಟಿ ಟೀಂ ಅಲ್ಲಿ ತಪಾಸಣೆಯನ್ನು ನಡೆಸುತ್ತಿದೆ. ಅಲ್ಲದೆ ಹಲವು ಕಡೆಗಳಲ್ಲಿ ದಾಳಿ ನಡೆದಿರುವ ಮಾಹಿತಿ ಇದೆ.
ಆದಾಯ ತೆರಿಗೆ ಪಾವತಿಯಲ್ಲಿ ಕೆಲವು ಕಂಪನಿಗಳು ವಂಚನೆ ಮಾಡುತ್ತಿವೆ ಎಂಬುದನ್ನು ಕಂಡುಕೊಂಡಿರುವ ಅಧಿಕಾರಿಗಳು ಕಂಪನಿಯ ದಾಖಲೆ, ಕಡತಗಳ ಪರಿಶೀಲನೆಗಾಗಿ ಈ ದಾಳಿ ನಡೆಸಿವೆ. ತಂಡಗಳು ಕಂಪನಿಗಳ ಕಚೇರಿಯಲ್ಲಿರುವ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿವುದಾಗಿ ತಿಳಿದು ಬಂದಿದೆ.
ಹಲವಾರು ಖಾಸಗಿ ಕಂಪನಿಗಳು ಆದಾಯ ತೆರಿಗೆ ವಂಚನೆ ಮಾಡುವುದಕ್ಕಾಗಿ ಎರಡು ರೀತಿಯ ದಾಖಲೆ ನಿರ್ವಹಣೆ ಮಾಡುತ್ತಿರುವುದನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕಂಡುಕೊಂಡಿದ್ದರು. ಇದು ವಂಚನೆಯ ಪರಿಧಿಗೆ ಬರುತ್ತಿದ್ದು, ತೆರಿಗೆ ತಪ್ಪಿಸುವ ಹುನ್ನಾರವನ್ನು ಬಯಲು ಮಾಡಲು ಈ ದಾಳಿ ನಡೆದಿದೆ ಎಂದು ಹೇಳಲಾಗಿದೆ. ದೊಡ್ಡ ದೊಡ್ಡ ಕಂಪನಿಗಳು ಕೂಡಾ ಈ ವಂಚನೆಯಲ್ಲಿ ಭಾಗಿಯಾಗಿವೆ ಎನ್ನಲಾಗಿದೆ.
ಸದ್ಯಕ್ಕೆ ದಾಳಿಯ ಮಾಹಿತಿ ಮಾತ್ರ ಲಭ್ಯವಾಗಿದ್ದು, ಹೆಚ್ಚಿನ ಮಾಹಿತಿಯನ್ನು ಅಧಿಕಾರಿಗಳೇ ನೀಡಬೇಕಾಗಿದೆ.
ಇದನ್ನೂ ಓದಿ: Ajit Rai : ಭ್ರಷ್ಟ ಅಜಿತ್ ರೈ ಲಕ್ಸುರಿ ಬದುಕು; ಚಪ್ಪಲಿ, ಮೊಬೈಲ್, ಆಟದ ಸಾಮಾನಿಗೇ ಲಕ್ಷ ಲಕ್ಷ ರೇಟು!
ಬೆಂಗಳೂರಿನಲ್ಲಿ ಇ.ಡಿ ದಾಳಿ: 62 ಕೋಟಿ ರೂ. ಮೌಲ್ಯದ ಸರ್ಕಾರಿ ಭೂಮಿ ಜಪ್ತಿ
ಈ ನಡುವೆ ಮಂಗಳವಾರ ಬೆಂಗಳೂರಿನಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿ 62.05 ಕೋಟಿ ಮೌಲ್ಯದ ಸರ್ಕಾರಿ ಭೂಮಿ ಜಪ್ತಿ ಮಾಡಿಕೊಂಡಿದ್ದರು.
ಬೆಂಗಳೂರಿನ ಇಂದಿರಾನಗರದಲ್ಲಿರುವ 62.05 ಕೋಟಿ ಮೌಲ್ಯದ ಆಕ್ರಮಿತ ಸರ್ಕಾರಿ ಆಸ್ತಿಯನ್ನು ಜಪ್ತಿ ಮಾಡಲಾಗಿದೆ. ಇದರ ಜತೆಗೆ 2.63 ಕೋಟಿ ಮೌಲ್ಯದ ಫಿಕ್ಸ್‌ಡ್ ಡೆಪಾಸಿಟ್‌ನ್ನು ಕೂಡಾ ವಶಕ್ಕೆ ಪಡೆಯಲಾಗಿದೆ.
2002ರಲ್ಲಿ ಚಿತ್ರಾ ಪೂರ್ಣಿಮಾ ಮತ್ತು ಇತರರ ಮೇಲೆ ದಾಖಲಾಗಿದ್ದ ಬೇನಾಮಿ ಆಸ್ತಿ ದೂರಿನ ತನಿಖೆ ನಡೆಸಿದ ಇ.ಡಿ. ಈ ಕ್ರಮವನ್ನು ಕೈಗೊಂಡಿದೆ. ಆರೋಪಿಗಳು ಮೋಸದಿಂದ ಸರ್ಕಾರಿ ಭೂಮಿ ಒತ್ತುವರಿ ಮಾಡಿದ್ದಾರೆ ಎಂದು ದೂರು ನೀಡಲಾಗಿತ್ತು. ಇದೀಗ ಪ್ರಕರಣ ಸಂಬಂಧ ಎಲ್ಲಾ ಚರಾಸ್ಥಿ ಮತ್ತು ಸ್ಥಿರಾಸ್ತಿ ಜಪ್ತಿ ಮಾಡಲಾಗಿದೆ.