ಬೆಂಗಳೂರು: ನಿನ್ನೆಯ ಲೋಕಾಯುಕ್ತ ದಾಳಿಯ (Lokayukta Raid) ಬೆನ್ನಲ್ಲೇ ಇಂದು ಮುಂಜಾನೆ ನಗರದ ವಿವಿಧ ಕಡೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು (IT Raid) ದಾಳಿ ನಡೆಸಿದ್ದಾರೆ.
ಮಂಗಳವಾರ ಬೆಳ್ಳಂಬೆಳಗ್ಗೆ ಬೆಂಗಳೂರಿನಲ್ಲಿ ಐಟಿ ದಾಳಿಯಾಗಿದೆ. ಬೆಂಗಳೂರಿನ ಮಾಗಡಿ ರಸ್ತೆ, ಆಡುಗೋಡಿ ಸೇರಿದಂತೆ ಹಲವೆಡೆ ಉದ್ಯಮಿಗಳ ಮನೆ ಹಾಗೂ ಕಚೇರಿಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ತೆರಿಗೆ ವಂಚನೆ ಆರೋಪ ಹಿನ್ನೆಲೆಯಲ್ಲಿ ಐಟಿ ಅಧಿಕಾರಿಗಳು ದಾಳಿ ಮಾಡಿದ್ದು, ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ.
ಇಂದು ಬೆಳಿಗ್ಗೆ 7 ಗಂಟೆಗೆ ಎರಡು ಇನೋವಾ ಕಾರುಗಳಲ್ಲಿ ಬಂದಿರುವ ಆರು ಅಧಿಕಾರಿಗಳು ಮಾಗಡಿ ರಸ್ತೆಯಲ್ಲಿರುವ ಉದ್ಯಮಿ ಪುನೀತ್ ಬೊರಾ ಎನ್ನುವವರ ETA ಗಾರ್ಡನ್ ಅಪಾರ್ಟ್ಮೆಂಟ್‌ನಲ್ಲಿರುವ ಫ್ಲ್ಯಾಟ್ ಮೇಲೆ ದಾಳಿ ಮಾಡಿದ್ದು, ದಾಖಲೆ ಪತ್ರಗಳನ್ನು ಪರಿಶೀಲಿಸುತ್ತಿದ್ದಾರೆ.
ನಿನ್ನೆಯಷ್ಟೇ ಬೆಂಗಳೂರಿನಲ್ಲಿ ಒಟ್ಟು 11 ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿಯಾಗಿತ್ತು. ಅಲ್ಲದೇ ಮೊನ್ನೆ ಬೆಂಗಳೂರಿನ ವಿವಿದೆಡೆ ಡ್ರೈಫ್ರೂಟ್ ವ್ಯಾಪಾರಿಗಳ ಮನೆ ಹಾಗೂ ಅಂಗಡಿಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಭೂ ಮಾಪನ ಇಲಾಖೆಯಲ್ಲಿ ಭ್ರಷ್ಟಾಚಾರದ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಇಲಾಖೆಯ ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿನ ಒಟ್ಟು 11 ಕಚೇರಿಗಳ ಮೇಲೆ ನಿನ್ನೆ ಲೋಕಾಯುಕ್ತ ಅಧಿಕಾರಿಗಳು (Lokayukta Raid) ದಾಳಿ ನಡೆಸಿ, ದಾಖಲೆಗಳನ್ನು ಪರಿಶೀಲಿಸಿದ್ದರು. ಸರ್ವೆಗಳಿಗೆ ಸಂಬಂಧಿಸಿದ ಕಡತಗಳ ವಿಲೇವಾರಿಯಲ್ಲಿನ ಅಕ್ರಮ, ಹಣಕ್ಕೆ ಬೇಡಿಕೆ ಬಗ್ಗೆ ದೂರುಗಳ ಹಿನ್ನೆಲೆಯಲ್ಲಿ ಭೂದಾಖಲೆ ನಿರ್ದೇಶಕರ ಕಚೇರಿ (ಡಿಡಿಎಲ್‌ಆರ್) ಮತ್ತು ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ (ಎಡಿಎಲ್‌ಆರ್)ಗಳಲ್ಲಿ ಲೋಕಾಯುಕ್ತ ಕಾರ್ಯಾಚರಣೆ ಕೈಗೊಂಡಿತ್ತು.
ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಡಿಜಿಟಲ್ ಪಾವತಿಯೇತರ ದೊಡ್ಡ ಪ್ರಮಾಣದ ಹಣ ಕೈ ಬದಲಿಸಿರುವುದರ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳಿಂದ ಈ ದಾಳಿಗಳು ನಡೆದಿವೆ ಎನ್ನಲಾಗಿದೆ. ಅಧಿಕಾರಿಗಳಿಗೆ ಗುತ್ತಿಗೆದಾರರು ಸಾಕಷ್ಟು ಅಕ್ರಮ ಹಣ ನೀಡಿರುವುದು ಪತ್ತೆಯಾಗಿದೆ. ಆಭರಣ ಹಾಗೂ ಡ್ರೈಫ್ರೂಟ್ಸ್ ವ್ಯಾಪಾರಿಗಳಲ್ಲಿ ಅನೇಕ ಮಂದಿ ತೆರಿಗೆರಹಿತ ಹಣದ ವಹಿವಾಟು ನಡೆಸುತ್ತಿರುವುದೂ ಕಂಡುಬಂದಿದೆ.
ಇದನ್ನೂ ಓದಿ: Lokayukta Raid: ಬೆಂಗಳೂರಿನ 11 ಕಡೆ ಲೋಕಾಯುಕ್ತ ದಾಳಿ; ಭೂ ಮಾಪನ ಇಲಾಖೆ ಕಚೇರಿಗಳಲ್ಲಿ ಶೋಧ