Site icon Vistara News

Janardhan Reddy | ಹೊಸ ಪಕ್ಷ ಕಟ್ಟಿದ ಜನಾರ್ದನ ರೆಡ್ಡಿ; ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪನೆ ಘೋಷಣೆ

ಬೆಂಗಳೂರು: ವಿಧಾನಸಭೆ ಚುನಾವಣೆಗೂ ಮುನ್ನ ಮಾಜಿ ಸಚಿವ ಜನಾರ್ದನ ರೆಡ್ಡಿ ಮಹತ್ವದ ಹೆಜ್ಜೆ ಇರಿಸಿದ್ದು, ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪನೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.

ತಮ್ಮ ರಾಜಕೀಯ ಭವಿಷ್ಯದ ಕುರಿತು ಮಾಹಿತಿ ನೀಡುವ ಸಲುವಾಗಿ ಬ್ರೂಕ್‌ಫೀಲ್ಡ್‌ ಲೇಔಟ್‌ನಲ್ಲಿರುವ ʼಪಾರಿಜಾತʼ ನಿಲಯದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಜನಾರ್ದನ ರೆಡ್ಡಿ ಮಾತನಾಡಿದರು.

ತಮ್ಮ ಬೆನ್ನಹಿಂದೆ ಜಗಜ್ಯೋತಿ ಬಸವೇಶ್ವರರ ಬೃಹತ್‌ ಪ್ರತಿಮೆ ಹಾಗೂ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಸಣ್ಣ ಪ್ರತಿಮೆಯನ್ನು ಇರಿಸಿಕೊಂಡು ಸುದ್ದಿಗೋಷ್ಠಿ ನಡೆಸಿದ ಜನಾರ್ದನ ರೆಡ್ಡಿ, ಕರ್ನಾಟಕ ರಾಜ್ಯದಲ್ಲಿ ಅಣ್ಣ ಬಸವಣ್ಣ, ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂದು ಹೇಳಿದರು. ಅವರ ಆಶಯದಂತೆಯೇ ಹೊಸ ಪಕ್ಷ ಕಟ್ಟುತ್ತಿದ್ದೇನೆ.

ಜನರ ಆಶೀರ್ವಾದ ನನಗೆ ಸಿಗುತ್ತದೆ. ಮುಂದೊಂದು ದಿನ ಇಡೀ ರಾಜ್ಯ ಕಲ್ಯಾಣ ರಾಜ್ಯವಾಗಿ ಪ್ರಗತಿ ಕಾಣುತ್ತದೆ. ಎಲ್ಲರೂ ನನ್ನ ಪ್ರಾಮಾಣಿಕ ಪ್ರಯತ್ನಕ್ಕೆ ಬೆಂಬಲ ನೀಡಿ ಎಂದರು.

ತಮ್ಮ ಜತೆಗೆ ಆಗಮಿಸುವಂತೆ ಸ್ನೇಹಿತರನ್ನು ಆಹ್ವಾನಿಸಿದ್ದೀರ ಎಂಬ ಪ್ರಶ್ನೆಗೆ ಉತ್ತರಿಸಿ, ನಮ್ಮ ಜತೆಗಿನ ಸ್ನೇಹವನ್ನು ಇದಕ್ಕೆ ದುರುಪಯೋಗಪಡಿಸಿಕೊಳ್ಳುವುದಿಲ್ಲ. ಎಲ್ಲರಿಗೂ ಅವರದ್ದೇ ಅಭಿಪ್ರಾಯಗಳಿರುತ್ತವೆ ಎಂದರು.

ತಮ್ಮ ಪತ್ನಿಯೂ ಪಕ್ಷದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಎಲ್ಲ ಕಡೆಯೂ ಬಹಿರಂಗವಾಗಿ ಪಕ್ಷಕ್ಕೆ ಪ್ರಚಾರ ನಡೆಸಲಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

ಯಡಿಯೂರಪ್ಪ ಅವರನ್ನು ಪಕ್ಷದಲ್ಲಿ ಕಡೆಗಣಿಸಲಾಗಿದೆಯೇ ಎಂಬ ಪ್ರಶ್ನೆಗೆ, ಅಧಿಕಾರವನ್ನು ಕಿತ್ತುಕೊಂಡ ಕೂಡಲೆ ಜನ್ರ ಪ್ರೀತಿಯನ್ನು ಕಿತ್ತುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ ಎಂದರು. ಈ ಹಿಂದೆ ಪಕ್ಷದಲ್ಲಿ ಬೇಸರವಾದಾಗ ಯಡಿಯೂರಪ್ಪ ಅವರು ಕರೆ ಮಡಿ ಸಮಾಧಾನ ಹೇಳಿದ್ದರು. ಈಗ ಪಕ್ಷ ಸ್ಥಾಪನೆ ಮಾಡುವ ಸಮಯದಲ್ಲಿ ಯಾರನ್ನೂ ಸಂಪರ್ಕ ಮಾಡಿಲ್ಲ ಎಂದರು.

ಮುಂದಿನ 10-15 ದಿನದಲ್ಲಿ ಪಕ್ಷದ ಲಾಂಚನ, ಧ್ವಜ ಹಾಗೂ ಕಚೇರಿಯನ್ನು ಅನಾವರಣ ಮಾಡಲಾಗುತ್ತದೆ. ಕೆಲ ಅಭ್ಯರ್ಥಿಗಳನ್ನೂ ಘೋಷಣೆ ಮಾಡಲಾಗುತ್ತದೆ ಎಂದರು.

ಇದನ್ನೂ ಓದಿ | Janardhan Reddy | ಹೊಸ ಪಕ್ಷ ಕಟ್ಟಿದ ಜನಾರ್ದನ ರೆಡ್ಡಿ; ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪನೆ ಘೋಷಣೆ

Exit mobile version