Site icon Vistara News

Jetlag Party Case: ಕಾಟೇರ ಸಕ್ಸಸ್‌ ಪಾರ್ಟಿ ಎಫೆಕ್ಟ್;‌ ಜೆಟ್‌ ಲ್ಯಾಗ್‌ ರೆಸ್ಟೋ ಬಾರ್‌ ಲೈಸೆನ್ಸ್‌ ಕ್ಯಾನ್ಸಲ್‌

Jetlag resto bar licence cancelled

ಬೆಂಗಳೂರು: ದರ್ಶನ್‌ ಅವರು ಅಭಿನಯಿಸಿದ ಕಾಟೇರ ಚಿತ್ರದ (Kaatera Movie) ಸಕ್ಸಸ್‌ ಪಾರ್ಟಿ ಸಂದರ್ಭದಲ್ಲಿ ಅಬಕಾರಿ ನಿಯಮಗಳು (Excise Policy) ಮೀರಿ ಬೆಳಗ್ಗಿನ ಜಾವ ಐದು ಗಂಟೆವರೆಗೆ ಪಾರ್ಟಿ ನಡೆಸಲು (Jetlag party Cae) ಅವಕಾಶ ನೀಡಿದ್ದಲ್ಲದೆ, ಮದ್ಯ ಪೂರೈಕೆ (Alcohol Distribution) ಮಾಡಿದ ಆರೋಪ ಎದುರಿಸುತ್ತಿರುವ ಬೆಂಗಳೂರಿನ ರಾಜಾಜಿನಗರದ ರಾಜ್‌ ಕುಮಾರ್‌ ರಸ್ತೆಯಲ್ಲಿರುವ ಜೆಟ್‌ ಲ್ಯಾಗ್‌ ರೆಸ್ಟೋ ಬಾರ್‌ನ ಲೈಸೆನ್ಸ್‌ ಕ್ಯಾನ್ಸಲ್‌ (Jetlag Resto bar Licence Cancel) ಮಾಡಿ ಆದೇಶ ಹೊರಡಿಸಲಾಗಿದೆ.

ಜನವರಿ 16ರಿಂದಲೇ ಜಾರಿಗೆ ಬರುವಂತೆ ಮುಂದಿನ 25 ದಿನಗಳ ಕಾಲ ಜೆಟ್ಲಾಗ್ ರೆಸ್ಟೋಬಾರ್ ಲೈಸೆನ್ಸ್ ಕ್ಯಾನ್ಸಲ್ ಮಾಡಿ ಅಬಕಾರಿ ಇಲಾಖೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಹೀಗಾಗಿ ಇಲ್ಲಿ ಮುಂದಿನ 25 ದಿನಗಳ ಕಾಲ ಮದ್ಯ ಮಾರಾಟ ಮಾಡಲು ನಿಷೇಧ ವಿಧಿಸಲಾಗಿದೆ.

ಕಳೆದ ಮೂರು ವರ್ಷಗಳಿಂದ ಇಲ್ಲಿ ಅಸ್ತಿತ್ವದಲ್ಲಿರುವ ಜೆಟ್ಲಾಗ್ ರೆಸ್ಟೋಬಾರ್‌ನ್ನು ಜನವರಿ 3ರಂದು ಅವಧಿ ಮೀರಿ ಓಪನ್ ಮಾಡಲಾಗಿತ್ತು. ಸಿನಿಮಾ ಸಕ್ಸಸ್‌ ಹೆಸರಿನಲ್ಲಿ ಪಾರ್ಟಿ ನಡೆಸಿತ್ತು. ಅಬಕಾರಿ ನಿಯಮಗಳ ಪ್ರಕಾರ ರಾತ್ರಿ 1 ಗಂಟೆಯವರೆಗೆ ಮಾತ್ರ ಊಟ ಮತ್ತು ಮದ್ಯ ಪೂರೈಕೆಗೆ ಅವಕಾಶವಿದೆ. ಆದರೆ, ಅದನ್ನು ಮೀರಿ ಮತ್ತು ಪೊಲೀಸರ ಸಲಹೆಯನ್ನೂ ಧಿಕ್ಕರಿಸಿ ಬೆಳಗ್ಗಿನ ವರೆಗೂ ಓಪನ್‌ ಮಾಡಿಡಲಾಗಿತ್ತು.

ಈ ಹಿನ್ನೆಲೆಯಲ್ಲಿ ಸುಬ್ರಮಣ್ಯ ನಗರ ಪೊಲೀಸರು ಅಲ್ಲಿಗೆ ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದರು. ಅಬಕಾರಿ ನಿಯಮ ಉಲ್ಲಂಘನೆ ಬಗ್ಗೆಯೂ ಎಫ್ಐಆರ್ ನಲ್ಲಿ ಉಲ್ಲೇಖ ಮಾಡಿದ್ದರು. ಈ ಬಗ್ಗೆ ಮಾಹಿತಿ ಪಡೆದು ಅಬಕಾರಿ ಇಲಾಖೆ ಕ್ರಮ ಕೈಗೊಂಡಿದೆ.

ನಿಜವೆಂದರೆ ಮೂರು ಬಾರಿ ನಿಯಮ ಉಲ್ಲಂಘಿಸಿದರೆ ಲೈಸೆನ್ಸ್ ರದ್ದು ಮಾಡುವ ಕ್ರಮವಿದೆ. ಬ್ರೀಚಿಂಗ್‌ ಆಫ್ ಎಕ್ಸೈಸ್ ಲಾ ಅಡಿ ಲೈಸೆನ್ಸ್ ರದ್ದು ಮಾಡಲಾಗುತ್ತದೆ. ಜೆಟ್‌ ಲ್ಯಾಗ್‌ ವಿರುದ್ಧ ಮೊದಲ ಬಾರಿ ದೂರು ಬಂದಿರುವುದರಿಂದ ಇದೀಗ 25 ದಿನಗಳ ಕಾಲ ಲೈಸೆನ್ಸ್ ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ್ದಾರೆ ಅಬಕಾರಿ ಜಿಲ್ಲಾಧಿಕಾರಿ.

ಇದನ್ನು ಓದಿ : Jetlog Pub: ನಟ ದರ್ಶನ್‌ ಅವರೇ ಟಾರ್ಗೆಟ್‌ ಯಾಕೆ? ರಾಕ್‌ಲೈನ್‌ ವೆಂಕಟೇಶ್‌ ಕಿಡಿ

ಸ್ಟಾರ್‌ ನಟರು, ನಿರ್ದೇಶಕರು, ಇತರರಿಗೆ ನೋಟಿಸ್

‌ಅವಧಿ ಮೀರಿ ಮದ್ಯ ಪೂರೈಸಿದ ಆರೋಪ ಒಂದು ಕಡೆಯಾದರೆ ಇನ್ನೊಂದು ಕಡೆ ಅವಧಿ ಮೀರಿ ಪಾರ್ಟಿ ಮಾಡಿದ ಆರೋಪದಲ್ಲಿ ಖ್ಯಾತ ನಟ ದರ್ಶನ್ (Actor Darshan), ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ನಿರ್ದೇಶಕ ತರುಣ್ ಸುಧೀರ್, ಸಂಗೀತ ನಿರ್ದೇಶಕ ಹರಿಕೃಷ್ಣ, ನಟರಾದ ನಿನಾಸಂ ಸತೀಶ್‌, ಡಾಲಿ ಧನಂಜಯ್, ಅಭಿಷೇಕ್ ಅಂಬರೀಶ್ ಹಾಗೂ ಚಿಕ್ಕಣ್ಣ ಅವರಿಗೆ ಈಗ ಸುಬ್ರಮಣ್ಯ ನಗರ ಪೊಲೀಸರು ನೋಟಿಸ್‌ ನೀಡಿದ್ದರು. ಇದರ ಪ್ರಕಾರ ಈ ಸ್ಟಾರ್‌ಗಳು ಸುಬ್ರಹ್ಮಣ್ಯ ನಗರ ಪೊಲೀಸ್‌ ಠಾಣೆಗೆ ಭೇಟಿ ನೀಡಿ ತಮ್ಮ ಹೇಳಿಕೆ ದಾಖಲಿಸಿದ್ದಾರೆ. ಇವರ ಮೇಲಿನ ಪ್ರಕರಣ ಇಲ್ಲಿಗೇ ಮುಕ್ತಾಯವಾಗಿದೆಯೇ ? ಮುಂದೇನಾದರೂ ಕ್ರಮಗಳಿವೆಯೇ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.

Exit mobile version