Site icon Vistara News

ಆಡಳಿತದ ಎಲ್ಲ ಹಂತಗಳಲ್ಲೂ ಕನ್ನಡ ಅನುಷ್ಟಾನವಾಗಲಿ: ಬೆಂಗಳೂರು ಸಂಚಾರ ಪೊಲೀಸರಿಗೆ ನಾಗಾಭರಣ ಸೂಚನೆ

ಬೆಂಗಳೂರು: ಆಡಳಿತದ ಎಲ್ಲ ಹಂತಗಳಲ್ಲಿಯೂ ಕನ್ನಡ ಅನುಷ್ಠಾನವಾಗದಿದ್ದರೆ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಬೆಂಗಳೂರು ಸಂಚಾರಿ ಪೊಲೀಸರಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ. ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಬೆಂಗಳೂರು ಸಂಚಾರ ಪೊಲೀಸ್ ಆಯುಕ್ತರ ಕಚೇರಿಗೆ ಭೇಟಿ ನೀಡಿ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆ ನಡೆಸಲಾಯಿತು.ಎಸ್‌. ನಾಗಾಭರಣ ಎಚ್ಚರಿಕೆ ನೀಡಿದ್ದಾರೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಬೆಂಗಳೂರು ಸಂಚಾರ ಪೊಲೀಸ್ ಆಯುಕ್ತರ ಕಚೇರಿಗೆ ಭೇಟಿ ನೀಡಿ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು. ರಾಜ್ಯ ಸರ್ಕಾರದ ಭಾಷಾನೀತಿ ಪ್ರಕಾರ ಕೆಲಸ ನಿರ್ವಹಿಸಬೇಕು. ರಾಜ್ಯ ಸರ್ಕಾರದ ಕಚೇರಿಗಳು, ದ್ವಿಭಾಷಾ ಸೂತ್ರದನ್ವಯ ಕಾರ್ಯನಿರ್ವಹಿಸುವುದು ಕಡ್ಡಾಯವಾಗಿರುತ್ತದೆ. ಜಾಲತಾಣಗಳಾದ ಫೇಸ್‌ಬುಕ್, ಟ್ವಿಟರ್, ವೆಬ್‌ಸೈಟ್‌ಗಳಲ್ಲಿ ಸಂಪೂರ್ಣವಾಗಿ ಕನ್ನಡ ಭಾಷೆಯನ್ನು ಬಳಸಬೇಕು. ಕನ್ನಡ ಭಾಷಾನೀತಿಯನ್ನು ಉಲ್ಲಂಘಿಸಿದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವ ಅವಕಾಶವನ್ನು ಸರ್ಕಾರ ಪ್ರಾಧಿಕಾರಕ್ಕೆ ಕಲ್ಪಿಸಿದೆ.ಚಪ್ರಾಧಿಕಾರದ ಆಶಯವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕಿದೆ ಎಂದು ತಿಳಿಸಿದರು.

ಸಂಚಾರಿ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಡಾ.ಬಿ.ಆರ್. ರವಿಕಾಂತೇಗೌಡ ಮಾತನಾಡಿ, ನಮ್ಮ ಕಚೇರಿಯಿಂದ ಹೊರಡಿಸುವ ಸುತ್ತೋಲೆ, ಆದೇಶಗಳು, ನೋಟಿಸುಗಳು, ಅಧಿಕೃತ ಜ್ಞಾಪನ, ಅಧಿಸೂಚನೆಗಳನ್ನು ಕಡ್ಡಾಯವಾಗಿ ಕನ್ನಡದಲ್ಲಿರುತ್ತವೆ. ಕಡತಗಳಲ್ಲಿ ಬರೆಯುವ ಟಿಪ್ಪಣಿಗಳು, ಸಭಾ ನಡವಳಿಗಳು, ಪ್ರಕಟಣೆಗಳು, ನೋಟೀಸುಗಳು, ಪತ್ರ ವ್ಯವಹಾರಗಳನ್ನು ಕನ್ನಡದಲ್ಲಿಯೇ ನಡೆಸಲಾಗುತ್ತಿದೆ. ಇತರೆ ಸಂಸ್ಥೆಗಳಿಂದ ಆಂಗ್ಲ ಭಾಷೆಯಲ್ಲಿ ಪತ್ರ ಕಳುಹಿಸಿದರೂ ನಮ್ಮ ಕಚೇರಿಯಿಂದ ಕನ್ನಡದಲ್ಲಿಯೇ ಉತ್ತರಿಸಲಾಗುವುದು ಎಂದು ಪ್ರಾಧಿಕಾರದ ಅಧ್ಯಕ್ಷರಿಗೆ ಮಾಹಿತಿ ನೀಡಿದರು.

ಕನ್ನಡ ಬಾರದ ಸಿಬ್ಬಂದಿಗೆ ಕನ್ನಡ ಕಲಿಸುವ ಸಂಬಂಧ ಕಚೇರಿಗಳಲ್ಲಿ ಕನ್ನಡ ಕಲಿಕಾ ಘಟಕ ತೆರೆಯುವ ಬಗ್ಗೆ ಮಾಹಿತಿ ಇರದ ಕಾರಣ ಇತ್ತೀಚಿಗೆ ಎಸಿಪಿ ಸಂಚಾರ ಯೋಜನೆಯರವರ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿದೆ ಎಂದು ತಿಳಿಸಿದರು. ಸಂಚಾರ ಉತ್ತರ ವಿಭಾಗ ಡಿಸಿಪಿ ಅವರ ವ್ಯಾಪ್ತಿಯಲ್ಲಿ ಸ್ಥಾಪಿಸಲಾಗಿರುವ ರಸ್ತೆ ಸುರಕ್ಷತೆಯ ತರಬೇತಿ ಸಂಸ್ಥೆ ದಕ್ಷಿಣ ಭಾರತದಲ್ಲಿಯೇ ಅತಿ ದೊಡ್ಡ ಸಂಸ್ಥೆಯಾಗಿದೆ. ರಸ್ತೆ ಸಂಚಾರ ಸುರಕ್ಷತೆಯ ನಿಯಮಗಳನ್ನು ಉಲ್ಲಂಘಿಸಿದವರಿಗೆ ಕಳುಹಿಸುವ ನೋಟಿಸ್, ಮೊಬೈಲ್ ಸಂದೇಶಗಳಲ್ಲಿಯೂ ಕನ್ನಡವನ್ನು ಬಳಸಲಾಗುತ್ತಿದೆ. ಬೆಂಗಳೂರು ಸಂಚಾರ ಪೊಲೀಸ್ ಲಾಂಛನದಲ್ಲಿ ಇಂಗ್ಲಿಷ್ ಭಾಷೆಯನ್ನು ಪ್ರಥಮವಾಗಿ ಬಳಸಲಾಗುತ್ತಿತ್ತು. ಈಗ ಲಾಂಛನದಲ್ಲಿ ಕನ್ನಡಕ್ಕೆ ಪ್ರಥಮ ಆದ್ಯತೆ ನೀಡಲಾಗಿದೆ ಎಂದರು.

ನೊ ಪಾರ್ಕಿಂಗ್, ಒನ್ ವೇ ಈ ತರಹ ಸೈನ್ ಬೋರ್ಡ್‌ಗಳು ಇಂಡಿಯನ್ ರೋಡ್ ಕಾಂಗ್ರೆಸ್ ವ್ಯಾಪ್ತಿಯಲ್ಲಿ ಬರುವುದರಿಂದ ಅವುಗಳಲ್ಲಿ ಇಂಗ್ಲಿಷ್ ಭಾಷೆಯನ್ನು ಬಳಸಲಾಗಿದೆ. ಕೇಂದ್ರ ಸರ್ಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯಕ್ಕೆ ರಾಜ್ಯ ಸರ್ಕಾರ ಪತ್ರದ ಮೂಲಕ ರಸ್ತೆ ಸುರಕ್ಷತೆಗೆ ಸಂಬಂಧಿಸಿದ ಫಲಕಗಳಲ್ಲಿ ಆಯಾ ರಾಜ್ಯದ ಪ್ರಾದೇಶಿಕ ಭಾಷೆಗಳನ್ನು ಬಳಸಬೇಕೆಂದು ಒತ್ತಡ ಹೇರಬೇಕು ಎಂದರು.

ಶ್ರೀಸಾಮಾನ್ಯರೊಂದಿಗೆ ನಿರಂತರ ಸಂಪರ್ಕ ಹೊಂದಿರುವ ಸಂಚಾರ ಪೊಲೀಸ್ ಇಲಾಖೆಯವರು ಆಡಳಿತದಲ್ಲಿ ಎಲ್ಲ ಹಂತಗಳಲ್ಲಿ ಕನ್ನಡ ಅನುಷ್ಠಾನಗೊಳಿಸಿ ಜನಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ. ಇದು ಇತರೆ ಇಲಾಖೆಗಳಿಗೆ ಮಾದರಿಯಾಗಿದೆ. ಬೆಂಗಳೂರು ನಗರ ಸಂಚಾರ ಪೊಲೀಸ್ ಸಿಬ್ಬಂದಿ ಕನ್ನಡ ಅನುಷ್ಠಾನ ಮಾಡಿದ ರೀತಿಯಲ್ಲಿ ಇತರೆ ಜಿಲ್ಲೆಗಳಲ್ಲಿಯೂ ಸಂಚಾರ ವಿಭಾಗದಲ್ಲಿ ಕನ್ನಡ ಅನುಷ್ಠಾನವಾಗುವಂತೆ ಪ್ರಾಧಿಕಾರ ಎಲ್ಲ ಜಿಲ್ಲೆಗಳಲ್ಲಿರುವ ಪೊಲೀಸ್ ಅಧೀಕ್ಷಕರಿಗೆ ತಿಳಿಸಲಿದೆ ಎಂದು ಪ್ರಾಧಿಕಾರದ ಅಧ್ಯಕ್ಷರು ತಿಳಿಸಿದರು.

ಸಭೆಯಲ್ಲಿ ನಿವೃತ್ತ ಪೊಲೀಸ್‌ ಅಧಿಕಾರಿಗಳಾದ ಡಿ.ವಿ.ಗುರುಪ್ರಸಾದ್‌, ಕ.ಅ.ಪ್ರಾ.ದ ಕಾರ್ಯದರ್ಶಿಗಳಾದ ಡಾ.ಸಂತೋಷ ಹಾನಗಲ್ಲ, ಆಪ್ತ ಕಾರ್ಯದರ್ಶಿಗಳಾದ ಮಹೇಶ.ಎನ್‌ ಹಾಗೂ ಸಂಚಾರ ಪೊಲೀಸ್‌ ವಿಭಾಗದ ಅಧಿಕಾರಿಗಳು ಹಾಜರಿದ್ದರು.

ಇದನ್ನೂ ಓದಿ: ಸಾಹಿತ್ಯ ಸಮ್ಮೇಳನಕ್ಕೂ ಮುನ್ನ ನಾಡಗೀತೆಗೆ ಮುಕ್ತಿ ನೀಡಿ: ಧಾಟಿ ನಿಗದಿಗೆ ಸರ್ಕಾರವನ್ನು ಒತ್ತಾಯಿಸಿದ ಕಸಾಪ

Exit mobile version