ಬೆಂಗಳೂರು: ಕರ್ನಾಟಕ ಜಲ ಸಂರಕ್ಷಣಾ ಸಮಿತಿ ಕರೆ ನೀಡಿದ ಬೆಂಗಳೂರು ಬಂದ್ (Bangalore Bandh) ಯಶಸ್ಸಿನ ಬೆನ್ನಿಗೇ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ (Vatal Nagaraj) ನೇತೃತ್ವದ ಕನ್ನಡ ಒಕ್ಕೂಟ ಕರೆ ನೀಡಿದ ಸೆಪ್ಟೆಂಬರ್ 29ರ ಕರ್ನಾಟಕ ಬಂದ್‌ಗೆ (Karnataka Bandh) ಭರದ ಸಿದ್ಧತೆಗಳು ನಡೆಯುತ್ತಿದೆ. ಸಂಘಟಕರು ನಾನಾ ಸಂಘಟನೆಗಳ ಬೆಂಬಲವನ್ನು ಕೋರುತ್ತಿದ್ದಾರೆ. ಹಲವು ಸಂಘಟನೆಗಳು ಬಂದ್‌ಗೆ ಬೆಂಬಲ ನೀಡಿವೆ. ಆದರೆ, ಕೆಲವು ಸಂಘಟನೆಗಳು ಒಂದೇ ವಾರದಲ್ಲಿ ನಡೆಯುತ್ತಿರುವ ಎರಡನೇ ಬಂದ್ ಬೆಂಬಲ ನೀಡಲು ಹಿಂದೇಟು ಹಾಕುತ್ತಿವೆ. ಈ ನಡುವೆ ಒಂದು ವೇಳೆ ಸಿಎಂ ಸಿದ್ದರಾಮಯ್ಯ (CM Siddaramaiah) ಅವರೇನಾದರೂ ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಿದರೆ ಈಗಲೇ ಬಂದ್ ಕರೆಯನ್ನು ಹಿಂದೆ ಪಡೆಯಲು ಸಿದ್ಧ ಎಂದು ವಾಟಾಳ್ ನಾಗರಾಜ್ ಘೋಷಿಸಿದ್ದಾರೆ.
ಬಿಜೆಪಿ, ಜೆಡಿಎಸ್ ಪಕ್ಷಗಳ ಬೆಂಬಲ
ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನಡೆಯುತ್ತಿರುವ ಈ ಬಂದ್‌ಗೆ ಸಾಥ್ ನೀಡುವುದಾಗಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಘೋಷಣೆ ಮಾಡಿವೆ. ಕಾವೇರಿ ವಿಚಾರಕ್ಕಾಗಿ ವಿಧಾನಸೌಧದ ಗಾಂಧಿ ಪ್ರತಿಮೆಯ ಮುಂದೆ ಬುಧವಾರ ಜಂಟಿ ಪ್ರತಿಭಟನೆ ನಡೆಸಿದ ಪಕ್ಷಗಳು ಕರ್ನಾಟಕ ಬಂದ್‌ಗೆ ಬೆಂಬಲ ಘೋಷಿಸಿದವು.
ವಾಟಾಳ್ ನಾಗರಾಜ್ ಅವರು ಬುಧವಾರ ಫಿಲಂ ಚೇಂಬರ್ ಜೊತೆ ಸಭೆ ನಡೆಸಿದರು. ಚಿತ್ರರಂಗ ಸಂಪೂರ್ಣವಾಗಿ ಬೆಂಬಲ ನೀಡುವುದಾಗಿ ಚೇಂಬರ್ ಪ್ರಕಟಿಸಿತು.
ಹಾಗಿದ್ದರೆ ಕರ್ನಾಟಕ ಬಂದ್‌ಗೆ ಯಾರ್ಯಾರ ಬೆಂಬಲ ಇದೆ?
-ಓಲಾ,ಊಬರ್ ಯೂನಿಯನ್
-ಆದರ್ಶ ಆಟೋ ಚಾಲಕರ ಸಂಘ
-ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ
-ಕರ್ನಾಟಕ ರಾಜ್ಯ ಕಾರ್ಮಿಕರ ಜಾಗೃತಿ ವೇದಿಕೆ
-ಕರುನಾಡ ರೈತ ಸಂಘ
-ಕರವೇ ಶಿವರಾಮೇಗೌಡ ಬಣ
-ಕರವೇ ಪ್ರವೀಣ್ ಶೆಟ್ಟಿ ಬಣ
-ಲಾರಿ ಮಾಲೀಕರ ಸಂಘ
-ಕೈಗಾರಿಕೆಗಳ ಒಕ್ಕೂಟ
-ಪೀಣ್ಯ ಕೈಗಾರಿಕಾ ಸಂಘ
-ಹೋಟೆಲ್ ಮಾಲೀಕರ ಸಂಘ
ಯಾರ್ಯಾರ ಬೆಂಬಲ ಇಲ್ಲ?
-ಕರ್ನಾಟಕ ಚಾಲಕರ ಸಂಘ
-ಪೀಸ್ ಆಟೋ ಯೂನಿಯನ್
-ಕಬ್ಬು ಬೆಳೆಗಾರರ ಸಂಘ
50:50: ಇವರು ಇನ್ನೂ ತೀರ್ಮಾನ ಮಾಡಿಲ್ಲ?
-ಖಾಸಗಿ ಶಾಲಾ ಸಂಘಟನೆಗಳು
-ಏರ್ ಪೋರ್ಟ್ ಟ್ಯಾಕ್ಸಿ
–ಖಾಸಗಿ ಸಾರಿಗೆ ಸಂಘಟನೆ
ರಾಜ್ಯದಲ್ಲಿ ಬಂದ್ ದಿನ ಏನೆಲ್ಲ ಇರುತ್ತೆ. ಏನಿರುವುದಿಲ್ಲ?
ಶುಕ್ರವಾರ ನಡೆಯಲಿರುವ ಕರ್ನಾಟಕ ಬಂದ್‌ಗೆ ಸುಮಾರು 1 ಸಾವಿರಕ್ಕೂ ಹೆಚ್ಚು ಸಂಘಟನೆಗಳು ಸಾಥ್ ನೀಡಲಿವೆ ಎಂದು ಹೇಳಲಾಗಿದ್ದು, ರಾಜ್ಯ-ರಾಜ್ಯ ರಾಜಧಾನಿಯಲ್ಲಿ ಕೆಲ ಸೇವೆಗಳು ವ್ಯತ್ಯಯವಾಗಲಿವೆ
ಹಾಗಿದ್ದರೆ ಏನೆಲ್ಲ ಸೇವೆ ಇರುತ್ತದೆ?: -ಆಸ್ಪತ್ರೆ, ಮೆಡಿಕಲ್, ಆಂಬುಲೆನ್ಸ್, ಬೆಂಬಲ ನೀಡದ ಒಕ್ಕೂಟದ ಆಟೋ, ಟ್ಯಾಕ್ಸಿ
ಏನೆಲ್ಲ ಸೇವೆಗಳು ಇರುವುದಿಲ್ಲ?: ಹೋಟೆಲ್, ಸಿನಿಮಾ ಹಾಲ್, ಮಾಲ್, ಆಟೋ, ಕ್ಯಾಬ್, ಬೇಕರಿ, ಓಲಾ, ಊಬರ್
ಕುರುಬೂರು ಶಾಂತ ಕುಮಾರ್ ಟೀಮ್ ಬೆಂಬಲ ಇರುತ್ತಾ?
ಬೆಂಗಳೂರು ಬಂದ್ ಸಕ್ಸಸ್ ಖುಷಿಯಲ್ಲಿರೋ ಕರ್ನಾಟಕ ಜಲ ಸಂರಕ್ಷಣಾ ಸಮಿತಿಯ ಕುರುಬೂರು ಶಾಂತಕುಮಾರ್ ಮತ್ತು ಟೀಮ್ ಕರ್ನಾಟಕ ಬಂದ್‌ಗೆ ಬೆಂಬಲ ನೀಡಬೇಕಾ, ಬೇಡ್ವಾ ಅನ್ನೋದನ್ನ ಸಿಎಂ ಭೇಟಿ ಬಳಿಕ ನಿರ್ಧರಿಸುವುದಾಗಿ ತಿಳಿಸಿದೆ. ಸರ್ಕಾರದ ನಡೆ ನೋಡಿ ಮುಂದಿನ ತೀರ್ಮಾನ ಅನ್ನೋ ಮೂಲಕ ಸದ್ಯಕ್ಕೆ ಬೆಂಬಲ ಇಲ್ಲ ಅನ್ನೋ ಸುಳಿವು ನೀಡಿದೆ. ಬೆಂಗಳೂರು ಬಂದ್‌ಗೆ ವಾಟಾಳ್ ನಾಗರಾಜ್ ಟೀಮ್ ಬೆಂಬಲ ಕೊಟ್ಟಿರಲಿಲ್ಲ.
ಅಂದು ಏನೇನು ಘಟನಾವಳಿ ನಡೆಯಲಿದೆ?
ಯಾವ ಕಾರಣಕ್ಕೂ ಸೆಪ್ಟೆಂಬರ್ 29ರ ಬಂದ್ ವೇಳೆ ಸೆಕ್ಷನ್ 144 ಜಾರಿ ಮೂಲಕ ಪ್ರತಿಭಟನೆ ಹತ್ತಿಕ್ಕಬಾರದು ಎಂದು ಆಗ್ರಹಿಸಿರುವ ವಾಟಾಳ್ ನಾಗರಾಜ್ ಅವರು ಶುಕ್ರವಾರ ಬೆಂಗಳೂರಿನ ಟೌನ್ ಹಾಲ್ ನಿಂದ ಫ್ರೀಡಂ ಪಾರ್ಕ್ ವರೆಗೆ ರ‍್ಯಾಲಿ ನಡೆಸಲು ಪ್ಲ್ಯಾನ್ ಮಾಡಿದ್ದಾರೆ. ರಾಜ್ಯದ ವಿವಿಧೆಡೆ ಟೋಲ್, ಏರ್ ಪೋರ್ಟ್ ಬಂದ್ ಮಾಡುವುದಕ್ಕೂ ಕರೆ ನೀಡಿದ್ದಾರೆ.
ಸಿಎಂ ಮನೆಗೆ ಮುತ್ತಿಗೆ ಯತ್ನ, ವಾಟಾಳ್ ನಾಗರಾಜ್ ವಶಕ್ಕೆ
ಈ ನಡುವೆ ವಾಟಾಳ್ ನಾಗರಾಜ್ ಮತ್ತು ಇತರ ಕನ್ನಡ ಪರ ಹೋರಾಟಗಾರರು ಮುಖ್ಯಮಂತ್ರಿಗಳ ನಿವಾಸಕ್ಕೆ ದಾಳಿ ಮಾಡಲು ಮುಂದಾದರು. ಅವರನ್ನು ತಡೆದು ವಶಕ್ಕೆ ಪಡೆಯಲಾಯಿತು. ಮುತ್ತಿಗೆಯನ್ನು ವಿಫಲಗೊಳಿಸಲಾಯಿತು.